ಕಳೆದ ಬೇಸಿಗೆಯಲ್ಲಿ ನೀರಿನ ಬಿಕ್ಕಟ್ಟು ಬೆಂಗಳೂರು ನಗರವು ಪರದಾಡುವಂತೆ ಮಾಡಿತ್ತು. ಈಗ, ಈ ವರ್ಷದ ಬೇಸಿಕೆ ಎದುರಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಬಿಕ್ಕಟ್ಟು ಎದುರಾಗದಂತೆ ಎಚ್ಚರಿಕೆ ಹವಿಸಲು, ಕುಡಿಯುವ ನೀರಿನ ವ್ಯರ್ಥ ಬಳಕೆಯನ್ನು ತಡೆಯಲು ಜಲಮಂಡಳಿ ಮುಂದಾಗಿದೆ. ಕುಡಿಯುವ ನೀರನ್ನು ವ್ಯರ್ಥ ಮಾಡುವವರಿಗೆ ದಂಡ ವಿಧಿಸುವುದಾಗಿ ಘೊಷಿಸಿದೆ.
ಕಾರು ತೊಳೆಯುವುದು, ತೋಟಗಾರಿಕೆ ಸೇರಿದಂತೆ ಇತರ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸಿದರೆ 5,000 ರೂ. ದಂಡ ವಿಧಿಸಲಾಗುವುದು ಎಂದು ಜಲ ಮಂಡಳಿ ತಿಳಿಸಿದೆ. ಪದೇ-ಪದೇ ತಪ್ಪು ಮಾಡಿದರೆ, ಹೆಚ್ಚುವರಿ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಜಲಮಂಡಳಿ, “ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಹನ ತೊಳೆಯುವುದು, ತೋಟಗಾರಿಕೆ, ನಿರ್ಮಾಣ, ಅಲಂಕಾರಿಕ ಉದ್ಯಾನ, ಮನರಂಜನಾ ಉದ್ದೇಶಗಳು, ರಸ್ತೆ ನಿರ್ಮಾಣ, ಶುಚಿತ್ವ ಕೆಲಸಗಳು ಹಾಗೂ ಸಿನೆಮಾ ಹಾಲ್‌ಗಳು ಮತ್ತು ಮಾಲ್‌ಗಳಲ್ಲಿ ಇತರ ಯಾವುದೇ ಉದ್ದೇಶಕ್ಕೆ ಕುಡಿಯುವ ನೀರನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ” ಎಂದು ಹೇಳಿದೆ.
“ನಿಯಮವನ್ನು ಉಲ್ಲಂಘಿಸುವವರಿಗೆ ಜಲಮಂಡಳಿ ಕಾಯ್ದೆಯ ಸೆಕ್ಷನ್ 109ರ ಅಡಿಯಲ್ಲಿ 5,000 ರೂ. ದಂಡ ವಿಧಿಸಲಾಗುವುದು. ಪುನರಾವರ್ತಿತ ಅಪರಾಧಗಳಿಗೆ 5,000 ರೂ. ಜೊತೆಗೆ ಹೆಚ್ಚುವರಿಯಾಗಿ ದಿನಕ್ಕೆ 500 ರೂ. ದಂಡ ವಿಧಿಸಲಾಗುವುದು. ನಿಯಮವನ್ನು ಉಲ್ಲಂಘಿಸುವುದು ಕಂಡುಬಂದರೆ ನಿವಾಸಿಗಳು ಕಾಲ್‌ಸೆಂಟರ್ ಸಂಖ್ಯೆ 1916ಕ್ಕೆ ಕರೆಮಾಡುವಂತೆ” ಎಂದು ಜಲಮಂಡಳಿ ಕೋರಿದೆ.
ತಾಪಮಾನ ಏರಿಕೆ ಮತ್ತು ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಈಗಾಗಲೇ ಗಮನಾರ್ಹವಾಗಿ ಕುಸಿದಿವೆ. ಹೀಗಾಗಿ, ಮುಂಬರುವ ತಿಂಗಳುಗಳಲ್ಲಿ ನೀರಿನ ಕೊರತೆಯ ಸಾಧ್ಯತೆಯ ಬಗ್ಗೆ ಎಚ್ಚರಿಸಿವೆ ತಜ್ಞರು ಎಚ್ಚರಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಕಳೆದ ವರ್ಷ, ಸರಿಯಾಗಿ ಮಳೆಯಾಗದ ಪರಿಣಾಮ ಬೇಸಿಗೆಯಲ್ಲಿ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಾಗಿತ್ತು. ಬೆಂಗಳೂರಿನ 14,000 ಬೋರ್‌ವೆಲ್‌ಗಳು ಒಣಗಿ ಹೋಗಿದ್ದವು. ದಿನಕ್ಕೆ 300-500 ದಶಲಕ್ಷ ಲೀಟರ್ ನೀರಿನ ಕೊರತೆಯನ್ನು ಎದುರಿಸಿತ್ತು.