ಕಳೆದ ಬಾರಿಯ 15ನೇ ಚಲನಚಿತ್ರೋತ್ಸವ ಸದಸ್ಯರುಗಳಿಲ್ಲದೇ ಆಗಿತ್ತು. ಈ ಬಾರಿ 16ನೇ ಚಿತ್ರೋತ್ಸವ ಆರಂಭಕ್ಕೂ ಮೊದಲು ಸದಸ್ಯರ ನೇಮಕವಾಗಿದೆ. ಆದರೂ ಅವರನ್ನು ತೊಡಗಿಸಿಕೊಳ್ಳುವ ಕಾರ್ಯದಲ್ಲಿ ಅಧ್ಯಕ್ಷರು ಏಕೆ ಆಸಕ್ತಿ ವಹಿಸುತ್ತಿಲ್ಲ?
ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ರಾಜ್ಯ ಸರ್ಕಾರ ಏಳು ಮಂದಿ ಸದಸ್ಯರ ನೇಮಕ ಮಾಡಿದೆ. ಆದೇಶ ಹೊರಡಿಸಿ ನಾಲ್ಕು ದಿನಗಳು ಕಳೆದರೂ ಅವರಿಗೆ ಇನ್ನೂ ಅಧಿಕಾರ ಕೊಟ್ಟಿಲ್ಲ ಏಕೆ ಎನ್ನುವುದು ಪ್ರಶ್ನೆಯಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಖಾತೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರ ಅಧೀನದಲ್ಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯು ವಾರ್ತಾ ಇಲಾಖೆಯ ಉಸ್ತುವಾರಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಚಿತ್ರರಂಗವನ್ನು ಬಲ್ಲ ಜೊತೆಗೆ ಅಕಾಡೆಮಿಯ ಕ್ರಿಯಾತ್ಮಕತೆಗೆ ಕೆಲಸ ಮಾಡುವ ಶಕ್ತಿ ಇರುವ ಸದಸ್ಯರ ನೇಮಕವೂ ಆಗಿದೆ.
ಪತ್ರಕರ್ತರಾದ ಸಾವಿತ್ರಿ ಮಜುಂದಾರ್, ಚಿದಾನಂದ ಪಟೇಲ್, ದೇಶಾದ್ರಿ ಹೊಸ್ಮನೆ, ಸಿನೆಮಾ ಕಲಾವಿದೆ ನಿಖಿತಾ ಸ್ವಾಮಿ, ಸಿನೆ ಪ್ರಚಾರಕ ವೆಂಕಟೇಶ್, ಚಿತ್ರೋದ್ಯಮಿ ವಿಷ್ಣು ಕುಮಾರ್, ಸಿನೆಮಾ ತಂತ್ರಜ್ಞ ಐವಾನ್ ಡಿಸಿಲ್ವಾ ಅವರ ನೇಮಕಾತಿ ಆದೇಶ ಫೆಬ್ರವರಿ 15, 2025ರಂದೇ ಸಚಿವಾಲಯದಿಂದ ಆಗಿದೆ. ಆ ದಿನವೇ ಮಾಧ್ಯಮಗಳಲ್ಲಿ ಪ್ರಕಟಣೆಯೂ ಆಗಿದೆ.
ರಾಜ್ಯ ಸರ್ಕಾರವೇ ನಡೆಸುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1, 2025ರಿಂದ ಆರಂಭವಾಗುತ್ತಿದೆ. ದಿನಗಣನೆ ಅಲ್ಲ ಕ್ಷಣಗಣನೆ ಆರಂಭವಾಗಿದೆ. ಅಕಾಡೆಮಿಯ ಎಲ್ಲರೂ ಸಮರೋಪಾದಿಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಇಂಥ ಹೊತ್ತಿನಲ್ಲಿ ನೇಮಕ ಆದವರನ್ನು ತುರ್ತಾಗಿ ಕರೆಸಿಕೊಂಡು ಕೆಲಸದ ಹಂಚಿಕೆಗಳನ್ನು ಮಾಡಬೇಕಿತ್ತು.

ಈ ಕಾರ್ಯ ಮಾಡುವ ಜವಾಬ್ದಾರಿ ವಾರ್ತಾ ಇಲಾಖೆಯ ಆಯುಕ್ತರು ಮತ್ತು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರ ಮೇಲಿದೆ. ಆದರೂ ಅವರು ಸದಸ್ಯರನ್ನು ಅಕಾಡೆಮಿ ಕಚೇರಿಗೆ ಕರೆಸಿಕೊಂಡು ಅಧಿಕಾರ ನೀಡುವ ಪ್ರಕ್ರಿಯೆ ಆರಂಭಿಸಿಲ್ಲ
ಸರ್ಕಾರದ ನೇಮಕಾತಿ ಆದರೂ ಅಕಾಡೆಮಿ ಕಚೇರಿಗೆ ಕರೆಸಿಕೊಂಡು ಸಂಬಂಧಿಸಿದ ದಾಖಲಾತಿ ಪುಸ್ತಕಗಳಲ್ಲಿ ಸಹಿ ಮಾಡಿಸಿಕೊಳ್ಳಬೇಕಾಗುತ್ತದೆ. ಸದಸ್ಯರು ಅಧಿಕಾರ ವಹಿಸಿಕೊಂಡ ದಿನಾಂಕವನ್ನು ನಮೂದು ಮಾಡಿಕೊಳ್ಳಬೇಕಾಗುತ್ತದೆ. ಅಕಾಡೆಮಿಯ ಕೆಲಸ ಕಾರ್ಯಗಳ ಬಗ್ಗೆ ಸದಸ್ಯರಿಗೆ ಗೊತ್ತಿದ್ದರೂ ಔಪಚಾರಿಕವಾಗಿ ವಿವರಿಸಬೇಕಾಗುತ್ತದೆ. ಫಿಲ್ಮ್ ಫೆಸ್ಟಿವಲ್ ಕೆಲಸಗಳ ಹೊರೆಯೇ ಇರುವುದರಿಂದ ತಕ್ಷಣವೇ ಇದರ ಬೇರೆ ಬೇರೆ ಕೆಲಸಗಳ ಉಸ್ತುವಾರಿಯನ್ನು ಸದಸ್ಯರಿಗೆ ಹಂಚಿಕೆ ಮಾಡಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ ಎಂಬುದು ಸದಸ್ಯರ ನೇಮಕ ನಾಮ್ ಕಾ ವಾಸ್ತೆಯೇ ಎಂದು ಪ್ರಶ್ನಿಸುವಂತೆ ಮಾಡಿದೆ.
ಇದನ್ನೂ ಓದಿ ಕರ್ನಾಟಕ ಫಿಲ್ಮ್ ಅಕಾಡೆಮಿ | ಮೂಲ ಉದ್ದೇಶ ಮರೆತಿದೆಯೇ ಅಥವಾ ಉದ್ದೇಶಗಳೇ ಇಲ್ಲವೇ ? -ಭಾಗ 1
ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ರಾಜ್ಯ ಸರ್ಕಾರ ಸಾಧು ಕೋಕಿಲಾ ಅವರನ್ನು 2024ರ ಫೆಬ್ರವರಿಯಲ್ಲಿ ನೇಮಕ ಮಾಡಿತ್ತು. ಕಳೆದ ಬಾರಿಯ 15ನೇ ಚಲನಚಿತ್ರೋತ್ಸವ ಸದಸ್ಯರುಗಳಿಲ್ಲದೇ ಆಗಿತ್ತು. ಈ ಬಾರಿ 16ನೇ ಚಿತ್ರೋತ್ಸವ ಆರಂಭಕ್ಕೂ ಮೊದಲು ಸದಸ್ಯರ ನೇಮಕವಾಗಿದೆ. ಆದರೂ ಅವರನ್ನು ತೊಡಗಿಸಿಕೊಳ್ಳುವ ಕಾರ್ಯದಲ್ಲಿ ಅಧ್ಯಕ್ಷರು ಏಕೆ ಆಸಕ್ತಿ ವಹಿಸುತ್ತಿಲ್ಲ?

ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ