ಧರ್ಮದ ಹೆಸರಿನಲ್ಲಿ, ಮಂಜುನಾಥನ ಹೆಸರಿನಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿ ಅದರ ಮೂಲಕ ಬಡ್ಡಿ ವ್ಯವಹಾರ ನಡಿಸಿ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಲಾಗುತ್ತಿದೆ. ದೇವರ ಹೆಸರಿನಲ್ಲಿ ಭಯೋತ್ಪಾದಕ ಸಂಘಟನೆಗಳು ಲೂಟಿ ಮಾಡುತ್ತಾ
ಮನುಷ್ಯತ್ವ ಇಲ್ಲದಂತೆ ಸಾಲವನ್ನು ವಸೂಲಾತಿ ಮಾಡುತ್ತಿದ್ದಾರೆ ಮತ್ತು ದೇವರ ಹೆಸರಿನಲ್ಲಿ ಭಯ ಹುಟ್ಟಿಸಿ ಸಾಲ ವಸೂಲಾತಿ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತು ಮತ್ತು ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಜಯನ್ ಮಲ್ಪೆಯರು ಹೇಳಿದರು.

ಅವರು ಇಂದು ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಭಾದಿತ ಜನತೆಯ ನೆರವಿಗಾಗಿ ಆಗ್ರಹಿಸಿ, ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವ ಸೇನೆ ಜಂಟಿಯಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಕೃತ ಬ್ಯಾಂಕುಗಳು ಇತ್ತೀಚಿನ ವರ್ಷಗಳಲ್ಲಿ ಬಡವರಿಗೆ, ಮಾಧ್ಯಮ ವರ್ಗದ ಜನರಿಗೆ ಸಾಲ ನೀಡುವುದನ್ನು ಕೈಬಿಟ್ಟ ಹಿನ್ನಲೆಯಲ್ಲಿ ಮೈಕ್ರೋ ಫೈನಾನ್ಸ್ ಅಥವಾ ಕಿರು ಸಾಲ ನೀಡುವ ಸಂಸ್ಥೆಗಳು ಭರ್ಜರಿಯಾಗಿ ನಾಯಿಕೊಡೆಯಂತೆ ತಲೆ ಎತ್ತುತ್ತಿದೆ, ಬ್ಯಾಂಕುಗಳಂತೆ ತಿಂಗಳುಗಟ್ಟಲೆ ಅಲೆದಾಡದೆ ಸುಲಭವಾಗಿ ಸಾಲ ನೀಡಿದರೆ ಜನಸಾಮಾನ್ಯರಿಗೆ ಅದೇ ಖುಷಿ. ಸಾಲದ ಮೇಲೆ ಬಡ್ಡಿ ಎಷ್ಟು ಹಾಕಿದ್ದಾರೆ ಎಂದು ಲೆಕ್ಕಹಾಕಲು ಹೋಗುವುದೇ ಇಲ್ಲ. ಆದರೆ ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲಕ್ಕೆ ವಿಪರೀತ ಬಡ್ಡಿ ಹಾಕುವುದು ಮಾತ್ರವಲ್ಲದೆ ವಸೂಲಿಗೆ ಇಲ್ಲಸಲ್ಲದ ಕ್ರಮಗಳನ್ನು ಮಾಡುತ್ತಿವೆ. ಇದರಿಂದಾಗಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಹೇಳಿದರು.

ಸರ್ಕಾರದ ಯೋಜನೆಗಳು ಕೇವಲ ಯೋಜನೆಗಾಗಿಯೇ ಉಳಿದಿದೆ. ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ ಮತ್ತು ಕೈ ಕಟ್ಟಿ ಕೂರುತ್ತದೆ ನಿಜವಾಗಿ ಇಲ್ಲಿಯವರೆಗೆ ಸರ್ಕಾರದ ಯೋಜನೆಗಳು ಸರಿಯಾಗಿ ಕಾರ್ಯರೂಪಕ್ಕೆ ಬಂದಿದ್ದರೆ ಬಡವರೆಲ್ಲರೂ ಟಾಟಾ ಬಿರ್ಲ ಆಗಬೇಕಿತ್ತು, ಈ ದೇಶದ ಆರ್ಥಿಕ ಮಟ್ಟವನ್ನು ಸರಿದೂಗಿಸಲು ಸರ್ವರಿಗೂ ಸಮಪಾಲು ಬರಬೇಕು ಎಂದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅಂದೇ ಹೇಳಿದ್ದರೂ ಆದರೆ ಇಂದಿಗೂ ಬಡವರ ಶ್ರೀಮಂತರ ನಡುವಿನ ಅಂತರವನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಪಿಐಎಂ ಪಕ್ಷದ ರಾಜ್ಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ,ಜಿಲ್ಲಾ ಮುಖಂಡರಾದ ಚಂದ್ರಶೇಖರ, ಋಣಮುಕ್ತ ಹೋರಾಟ ಸಮಿತಿಯ ಸಂಚಾಲಕರಾದ ಮಮತಾ ನಾಯಕ್ ಮಾತನಾಡಿದರು. ಸಭೆಯಲ್ಲಿ ಸಿಪಿಐಎಮ್ ನ ಕೆ.ಶಂಕರ್, ಎಚ್ ನರಸಿಂಹ, ಶಶಿಧರ ಗೊಲ್ಲ, ಕವಿರಾಜ್. ಎಸ್,ಉಮೇಶ್ ಕುಂದರ್, ಸರೋಜ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಗಣೇಶ್ ನೆರ್ಗಿ,ಕ್ರಷ್ಣ ಶ್ರೀ ಯಾನ್, ಸಂಧ್ಯಾ, ದಲಿತ ಹಕ್ಕುಗಳ ಸಮಿತಿ ಸಂಚಾಲಕರಾದ ಸಂಜೀವ ಬಳ್ಕೂರು, ಸಿಐಟಿಯು ಮುಖಂಡರಾದ ನಳಿನಿ, ದಯಾನಂದ, ಮುರಳಿ, ವೆಂಕಟೇಶ ಕೋಣಿ, ಸೈಯಾದ್ ಅಲಿ, ರಮೇಶ್, ರಾಮ ಕಾರ್ಕಡ, ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ ಉಪಸ್ಥಿತರಿದ್ದರು.
