ಕೈಕೊಟ್ಟ ಬೆಳೆ ಮತ್ತು ಸಾಲದ ಹೊರೆಯಿಂದಾಗಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಜನವರಿ 28ರಂದು ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಸುವ ಮುನ್ನವೇ ಮತ್ತೆ ಇಬ್ಬರು ರೈತರು ಸಾವಿಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ.
ಭಾಲ್ಕಿ ತಾಲ್ಲೂಕಿನ ಆನಂದವಾಡಿ ಗ್ರಾಮದ ರೈತ ಸುಧಾಕರ ವೈಜಿನಾಥ ಘೋಡೆ (36) ಸಾಲಬಾಧೆ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಫೆ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೇಸಾಯಕ್ಕಾಗಿ ಭಾತಂಬ್ರಾ ಗ್ರಾಮದ ಪಿಕೆಪಿಎಸ್‌ನಲ್ಲಿ ₹50 ಸಾವಿರ ಸೇರಿದಂತೆ ಖಾಸಗಿ ಮೂಲದಿಂದ ಕೈಸಾಲ ಪಡೆದಿದ್ದರು. ಸರಿಯಾಗಿ ಬೆಳೆ ಬಾರದ ಕಾರಣ ಸಾಲ ಹೇಗೆ ತೀರಿಸಬೇಕು ಎಂದು ಚಿಂತೆಗೀಡಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ತಾಯಿ ಕುಂದನಾ ದೂರು ನೀಡಿದ್ದಾರೆ. ಈ ಕುರಿತು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಲಸೂರ ಸಮಿಪದ ಬೆಟಬಾಲಕುಂದ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ 38 ವರ್ಷದ ರೈತ ಪಂಡರಿ ದಿಗಂಬರಾವ್ ಎಂಬುವರರು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹1 ಲಕ್ಷ ಹಾಗೂ ಖಾಸಗಿ ಮೂಲಗಳಿಂದ ಸಾಲ ಪಡೆದಿದ್ದರು. ನಿರೀಕ್ಷೆಯಿಂದ ಜಮೀನು ಬೆಳೆಯಲಿಲ್ಲ. ಹೀಗಾಗಿ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತ : ಓರ್ವ ವ್ಯಕ್ತಿ ಸಾವು
ಈ ಬಗ್ಗೆ ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.