ಕಾನೂನು ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೋಲಾರದ ಬಸವಶ್ರೀ ಕಾನೂನು ವಿಶ್ವವಿದ್ಯಾಲಯದ ಉಪ ಪ್ರಾಂಶುಪಾಲ ಸೇರಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜನವರಿ 22ರಂದು ಕಾನೂನು ಪದವಿ ಪರೀಕ್ಷೆ ನಡೆಯಬೇಕಿತ್ತು. ಆದರೆ, ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆಯ ಚಿತ್ರಗಳು ವಾಟ್ಸ್‌ಆ್ಯಪ್, ಟೆಲಿಗ್ರಾಂನಲ್ಲಿ ಹರಿದಾಡಿದ್ದವು. ಹೀಗಾಗಿ, ಪರೀಕ್ಷೆಯನ್ನು ಮುಂದೂಡಲಾಗಿತ್ತು. ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೋಲಾರದ ಬಸವಶ್ರೀ ಕಾನೂನು ವಿಶ್ವವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ನಾಗರಾಜ್, ವಿದ್ಯಾರ್ಥಿಗಳಾದ ವರೂಣ್ ಮತ್ತು ಜಗದೀಶ್ ಬಂಧಿತರು.
ಉಪ ಪ್ರಾಂಶುಪಾಲ ಡಾ. ನಾಗರಾಜ್ ಅವರೇ ಪ್ರಶ್ನೆಪತ್ರಿಕೆಯ ಸೀಲ್ಡ್ ಕವರ್‌ಅನ್ನು ತೆರೆದು, ಪ್ರಶ್ನೆಪತ್ರಿಕೆಗಳ ಫೋಟೋ ತೆಗೆದುಕೊಂಡಿದ್ದಾರೆ. ಅವುಗಳನ್ನು ಕಾಲೇಜಿನ ವಿದ್ಯಾರ್ಥಿ ತನ್ನ ಮೊಬೈಲ್‌ಗೆ ಕಳಿಸಿಕೊಂಡಿದ್ದಾನೆ. ಆ ನಂತರ ಅವುಗಳನ್ನು ಜಗದೀಶ್‌ಗೆ ಕಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ವರುಣ್ ಮತ್ತು ಜಗದೀಶ್ ಇಬ್ಬರೂ ಸೇರಿಕೊಂಡು ಹಣ ಪಡೆದು ಹಲವರಿಗೆ ಪ್ರಶ್ನೆಪತ್ರಿಕೆಗಳ ಚಿತ್ರಗಳನ್ನು ಮಾರಾಟ ಮಾಡಿದ್ದಾರೆ. ವಾಟ್ಸ್‌ಆ್ಯಪ್ ಮೂಲಕ ಹಣ ಕೊಟ್ಟವರಿಗೆ ಹಂಚಿಕೊಂಡಿದ್ದಾರೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ.