ನಗರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಹೇಳಿದರು.
ರಾಂಪೂರು ಬಳಿ 10 ಎಕರೆ ವ್ಯಾಪ್ತಿಯಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಲು ಮತ್ತು ಗುರುತ್ವಾಕರ್ಷಣೆ (ಗ್ರಾವಿಟಿ) ಮೂಲಕ ಕೆರೆ ತುಂಬಿಸಲು ಕ್ರಮವಹಿಸಲಾಗುವುದು ಎಂದರು. ಸಚಿವರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ಅವರೊಂದಿಗೆ ರಾಂಪೂರು ಕೆರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
“ನಗರದಲ್ಲಿ ಜನಸಂಖ್ಯೆಗನುಗುಣವಾಗಿ ಅಗತ್ಯಕ್ಕೆ ತಕ್ಕಂತೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ರಾಂಪೂರು ಕೆರೆ ಅಭಿವೃದ್ಧಿಯಾಗುವುದರಿಂದ ಮಂತ್ರಾಲಯ ರಸ್ತೆ, ಆಶಾಪುರ ರಸ್ತೆ ಸೇರಿದಂತೆ ಕೆರೆ ವ್ಯಾಪ್ತಿಗೆ ಬರುವ 13 ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಬಹುದು. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆರೆ ಅಭಿವೃದ್ಧಿಗಾಗಿ 30 ಕೋಟಿ ರೂ. ಅನುದಾನವಿದ್ದು, ಆರ್‌ಡಿಎದಿಂದ 5 ಕೋಟಿ ರೂಗಳನ್ನು ಕೆರೆ ಅಭಿವೃದ್ಧಿಗೆ ಬಳಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಕೆರೆ ಅಭಿವೃದ್ಧಿಗೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಬೇಕು” ಎಂದು ಸೂಚಿಸಿದರು.
“ರಾಂಪೂರು ಕೆರೆ ಮಾತ್ರವಲ್ಲದೇ ದೇವಸುಗೂರಿನ ಜಾಕವೆಲ್ ಬಳಿ ಮತ್ತಷ್ಟು ಭೂಮಿ ಸ್ವಾಧೀನಪಡಿಸಿಕೊಂಡು ಕೆರೆ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು. ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ವಿದ್ಯುತ್ ಇಲ್ಲವೆಂದು ಸರಬರಾಜು ಮಾಡದೇ ಸುಮ್ಮನೇ ಕುಳಿತುಕೊಳ್ಳುವುದಲ್ಲ. ಕುಡಿಯುವ ನೀರಿನ ಪೂರೈಕೆಯಲ್ಲಿ ಬೇಜವಾಬ್ದಾರಿತನ ಸರಿಯಲ್ಲ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಹಂಚಿಕೆಯಾಗಿರುವ ನಿವೇಶನಗಳಿಗೆ ಭೂಮಿ ಮಂಜೂರು ಮಾಡಲು ಡಿಸಿಗೆ ಮನವಿ
“ವಿದ್ಯುತ್ ಪೂರೈಕೆಯಿದ್ದರೂ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲಾಗುತ್ತಿಲ್ಲ ಎನ್ನುವ ದೂರುಗಳು ಸ್ವೀಕಾರವಾಗಿರುವ ಹಿನ್ನೆಲೆ ಅಧಿಕಾರಿಗಳು ಬೇಜವಾಬ್ದಾರಿಯನ್ನು ಬದಿಗೊತ್ತಿ ಜನರಿಗೆ ನೀರು ಪೂರೈಸಬೇಕು. ನಗರದಲ್ಲಿ 18 ನೀರಿನ ಟ್ಯಾಂಕ್ ನಿರ್ಮಿಸಿ ನೀರಿಲ್ಲದೇ ಸುಮ್ಮನೇ ಬಿಡಲಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ. ಮೊದಲು ಇದನ್ನು ಸರಿಪಡಿಸಿ” ಎಂದು ತಾಕೀತು ಮಾಡಿದರು.
