ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ಒಂಬತ್ತು ವಿವಿಗಳನ್ನು ಮುಚ್ಚುವ ಬಗ್ಗೆ ಸಂಪುಟ ಉಪ ಸಮಿತಿ ತೀರ್ಮಾನಿಸಿರುವುದು ಆತಂಕಕಾರಿ ನಡೆಯಾಗಿದೆ. ರಾಜ್ಯ ಸರಕಾರ ಹಾವೇರಿ ವಿವಿ ಮುಚ್ಚುವ ತೀರ್ಮಾನ ರದ್ದೂಗೊಳಿಸಲು ಎಸ್ಎಫ್ಐ, ಡಿವೈಎಫ್ಐ ಸಂಘಟನೆಗಳು ಆಗ್ರಹಿಸಿವೆ.
ಹಾವೇರಿ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಡಿವೈಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡವರಾಜ್ ಪೂಜಾರ ಮಾತನಾಡಿದರು.
“ಎರಡು ವರ್ಷಗಳು ಯಾವುದೇ ಅನುದಾನವಿಲ್ಲದೆ ಸಂಕಷ್ಟಮಯ ಪರಿಸ್ಥಿತಿಯಲ್ಲಿಯೂ ಕೂಡ ಹಾವೇರಿ ವಿಶ್ವ ವಿದ್ಯಾಲಯವು ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಲ್ಲದೆ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುನ್ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ಪೂರ್ಣಕಾಲಿಕ ಉಪನ್ಯಾಸಕರು, ಬೋದಕೇತರ ಸಿಬ್ಬಂದಿ ನೇಮಕ, ಅನುದಾನ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಬೇಕಿತ್ತು” ಎಂದರು.
“ವಿಶ್ವ ವಿದ್ಯಾಲಯಗಳನ್ನು ಬಲಿಷ್ಠಪಡಿಸುವ ಬದಲು ವಿ ವಿಗಳನ್ನು ಮುಚ್ಚುವ ತೀರ್ಮಾನವು ಹಾವೇರಿ ಜಿಲ್ಲೆಯ ಬಡ ಹಾಗೂ ಮದ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ವಂಚಿಸುವುದಾಗಿದೆ. ಹಾಗಾಗಿ ಸಂಪುಟ ಸಮಿತಿ ತೆಗೆದುಕೊಂಡಿರುವ ನಿರ್ಧಾರವನ್ನು ಯಾವುದೇ ಕಾರಣ ನೀಡದೇ ಕೂಡಲೇ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
“ಜಿಲ್ಲೆಯ ಜನರ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾವೇರಿ ವಿವಿ ಮುಚ್ಚದಂತೆ ಜಿಲ್ಲೆಯ ಎಲ್ಲ ಶಾಸಕರು ಮೌನವಹಿಸದೇ ಕೂಡಲೇ ಈ ವಿಷಯದಲ್ಲಿ ಮಧ್ಯೆಪ್ರವೇಶಿಸಿ ಸಂಪುಟ ಉಪಸಮಿತಿಯ ತೀರ್ಮಾನ ಹಿಂಪಡೆಯಲು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಬೇಕೆಂದು ಆಗ್ರಹಿಸಿವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಸ್ವೀಕಾರ: ಯಾರು ಈ ಜ್ಞಾನೇಶ್ ಕುಮಾರ್?
“ಹಾವೇರಿ ಜಿಲ್ಲೆಗೆ ವಿಶ್ವವಿದ್ಯಾಲಯ ಅತ್ಯವಶ್ಯವಾಗಿದ್ದು ಈ ಬಗ್ಗೆ ಸಂಪುಟ ಸಮಿತಿಯ ತೀರ್ಮಾನವನ್ನು ಹಿಂಪಡೆಯಬೇಕು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿಶ್ವವಿದ್ಯಾಲಯ ಬೆಳವಣಿಗೆ ಹೊಂದಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿಶ್ವ ವಿದ್ಯಾಲಯದ ಉಳಿವಿಗಾಗಿ ತೀವ್ರತೆರನಾದ ಪ್ರತಿಭಟನೆ ನಡೆಸಲು ಮುಂದಾಗುವುದಾಗಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಎಚ್ಚರಿಕೆ ನೀಡಿದರು.
