ಯತಿ ನರಸಿಂಹಾನಂದರ ಅವಹೇಳನಕಾರಿ ಭಾಷಣ ಕುರಿತು ಎಕ್ಸ್‌ನಲ್ಲಿಯ ಪೋಸ್ಟ್‌ಗಾಗಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ ಆಲ್ಟ್‌ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಝುಬೈರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಅಲಹಾಬಾದ್ ಹೈಕೋರ್ಟ್ ಯಾವುದೇ ವಿಷಯದಲ್ಲಿ ಸರ್ಕಾರವನ್ನು ಟೀಕಿಸಬಹುದು, ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ, ಒಂದು ಸಂಸ್ಥೆಯಾಗಿ ನ್ಯಾಯಾಂಗವೂ ಟೀಕೆಗೆ ಹೊರತಾಗಿಲ್ಲ ಎಂದು ಹೇಳಿದೆ.
ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರಕಾರದ ಪರ ವಾದವನ್ನು ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮನೀಶ್ ಗೋಯಲ್ ಅವರು ಸರಕಾರವನ್ನು ಟೀಕಿಸುವುದು ಮತ್ತು ಸರಕಾರದ ನಿರ್ಧಾರಗಳನ್ನು ಟೀಕಿಸುವುದರ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಲು ಪ್ರಯತ್ನಿಸಿದಾಗ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಯೋಗೇಂದ್ರ ಕುಮಾರ ಅವರ ಪೀಠವು ಈ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಐಪಿಸಿಯ ಕಲಂ 124ಎ(ದೇಶದ್ರೋಹ) ಭಿನ್ನಾಭಿಪ್ರಾಯವನ್ನು ಹತ್ತಿಕ್ಕಿದ್ದರಿಂದ ಸಂಸತ್ತು ತನ್ನ ವಿವೇಚನೆಯಿಂದ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್)ಯಲ್ಲಿ ಅದರ ಬದಲಿಗೆ ಕಲಂ 152(ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯ)ನ್ನು ಸೇರ್ಪಡೆಗೊಳಿಸಿದೆ ಎಂದೂ ಪೀಠವು ಮೌಖಿಕವಾಗಿ ಅಭಿಪ್ರಾಯಪಟ್ಟಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!
ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಮುಖ್ಯ ಅರ್ಚಕ ಯತಿ ನರಸಿಂಹಾನಂದರ ‘ಅವಹೇಳನಕರ’ ಭಾಷಣವನ್ನು ಒಳಗೊಂಡಿರುವ ತನ್ನ ಎಕ್ಸ್ ಪೋಸ್ಟ್‌ಗಳು ತನ್ನ ವೃತ್ತಿಪರ ಬದ್ಧತೆಯ ಭಾಗವಾಗಿದ್ದು, ಪೋಲಿಸ್ ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುವುದು ಅವುಗಳ ಉದ್ದೇಶವಾಗಿತ್ತು ಎಂದು ಝುಬೈರ್ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.
ಬಿಜೆಪಿ ನಾಯಕಿ ಹಾಗೂ ಯತಿ ನರಸಿಂಹಾನಂದ ಸರಸ್ವತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಸಲ್ಲಿಸಿದ ದೂರಿನ ಮೇರೆಗೆ ಅಕ್ಟೋಬರ್ 2024ರಲ್ಲಿ ಗಾಜಿಯಾಬಾದ್ ಪೋಲಿಸರು ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದ ಆರೋಪದಲ್ಲಿ ಝುಬೈರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
