ಹುಂಜಗಳು ಮುಂಜಾನೆ ಸುಮಾರು 3 ಗಂಟೆಗೆ ಕೂಗಿ ನಿದ್ರೆಗೆ ತೊಂದರೆ ಮಾಡುತ್ತಿದೆ ಎಂದು ಆರೋಪಿಸಿ ಕೇರಳದಲ್ಲಿ ಕೋಳಿ ಸಾಕಾಣಿಕೆ ಕೇಂದ್ರದ ವಿರುದ್ದವೇ ಪ್ರಕರಣ ದಾಖಲಿಸಿರುವ ಘಟನೆ ಕೇರಳದ ಆಡೂರು ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಮುಂಜಾನೆ 3 ಗಂಟೆ ಗಾಢ ನಿದ್ದೆಯ ಸಮಯ. ಆದರೆ ಆ ಸಮಯದಲ್ಲೇ ಕೋಳಿ ಸಾಕಾಣೆ ಕೇಂದ್ರದಲ್ಲಿರುವ ಹುಂಜಗಳು ಕೂಗುತ್ತಿದ್ದು, ಇದು ಸ್ಥಳೀಯ ನಿವಾಸಿಗಳ ನಿದ್ದೆಗೆ ತೊಂದರೆ ಉಂಟು ಮಾಡಿದೆ ಎಂದು ಹೇಳಲಾಗಿದೆ. ಕೊನೆಗೆ ಈ ವಿಚಾರದಲ್ಲಿ ದೂರು ದಾಖಲಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಇದನ್ನು ಓದಿದ್ದೀರಾ? ಬಿಸಿಲಿನ ಜಳಕ್ಕೆ ಕೋಳಿಗಳ ಸಾವು; ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
ಸ್ಥಳೀಯ ನಿವಾಸಿಗಳ ಆರೋಪವನ್ನು ಪರಿಶೀಲಿಸಿದ ಅಡೂರು ಆರ್‌ಡಿಒ ಬಿ ರಾಧಾಕೃಷ್ಣನ್ ಅವರು ಈ ಆರೋಪ ನಿಜ ಎಂದು ತಿಳಿಸಿದ್ದಾರೆ. ಹುಂಜಗಳು ಮುಂಜಾನೆ 3 ಗಂಟೆಗೆ ಕೂಗಲು ಆರಂಭಿಸುತ್ತವೆ. ಇದರಿಂದಾಗಿ ಸ್ಥಳೀಯರ ನಿದ್ದೆಗೆ ತೊಂದರೆಯಾಗುತ್ತಿದೆ ಎಂಬುದು ಖಚಿತವಾದ ಬಳಿಕ ಆರ್‌ಡಿಒ ಕೋಳಿ ಸಾಕಾಣೆ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸುವಂತೆ ಆದೇಶಿಸಿದ್ದಾರೆ. ಆರ್‌ಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಹುಂಜ ಮುಂಜಾನೆ ಕೂಗುವುದರಿಂದ ಎಲ್ಲರಿಗೂ ನಿದ್ದೆಗೆ ತೊಂದರೆಯಾಗುತ್ತಿದೆ. ಅದರಲ್ಲೂ ವೃದ್ಧರಿಗೆ ಅಧಿಕ ಸಮಸ್ಯೆಯಾಗುತ್ತಿದೆ ಎಂಬುದು ಸ್ಥಳೀಯ ನಿವಾಸಿ ರಾಧಾಕೃಷ್ಣ ಕುರೂಪ್ ಆರೋಪವಾಗಿದೆ.
ಈ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆ ಮಾಡುವ ನೆರೆಮನೆಯ ಅನಿಲ್ ಎಂಬವರ ವಿರುದ್ಧ ದೂರು ಕೂಡಾ ದಾಖಲಿಸಿದ್ದಾರೆ. ಇನ್ನು ಕೋಳಿ ಸಾಕಾಣಿಕೆ ಕೇಂದ್ರವನ್ನು 14 ದಿನಗಳ ಒಳಗಾಗಿ ಸ್ಥಳಾಂತರಿಸುವಂತೆ ತಿಳಿಸಲಾಗಿದೆ.
