- ಉಳ್ಳಾಲ ಕರ್ನಾಟಕದಲ್ಲೇ ಅತ್ಯಂತ ಅಪಾಯದಲ್ಲಿರುವ ಕಡಲ ತೀರ
- ಮುಂಗಾರು ಪ್ರವೇಶದ ಸಮಯದಲ್ಲೇ ಚಂಡಮಾರುತದಿಂದ ಕಡಲ್ಕೊರೆತ
ಕರಾವಳಿ ಭಾಗದಲ್ಲಿ ಕಡಲ ಅಲೆಗಳ ಭೋರ್ಗರೆತ ಜೋರಾಗಿದ್ದು, ದೈತ್ಯಗಾತ್ರದ ಅಲೆಗಳು ಕಾಣಿಸಲಾರಂಭಿಸಿವೆ. ಈ ಹಿನ್ನೆಲೆ ಕಡಲ್ಕೊರೆತ ಕಾಣಿಸಿಕೊಂಡಿದೆ. ಕೆಲವು ಮನೆಗಳು ಕುಸಿದಿವೆ.
ಪ್ರತಿ ಮಳೆಗಾಲದಲ್ಲೂ ಕಡಲ್ಕೊರೆತ ಸಾಮಾನ್ಯ. ಆದರೆ, ಈ ಬಾರಿ ಮುಂಗಾರು ಪ್ರವೇಶದ ಸಮಯದಲ್ಲೇ ಚಂಡಮಾರುತ ಇದ್ದ ಕಾರಣ ಬೇಗನೇ ಕಡಲ್ಕೊರೆತ ಕಾಣಿಸಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಬೀಚ್‌ನಲ್ಲಿರುವ ಅಂಗಡಿ, ಮಳಿಗೆಗಳತ್ತಲೂ ನೀರು ನುಗ್ಗುತ್ತಿತ್ತು. ಕಡಲತೀರಕ್ಕೆ ಬಂದ ಪ್ರವಾಸಿಗರು ಸುರಕ್ಷತೆ ಹಿನ್ನೆಲೆಯಲ್ಲಿ ಮರಳುತ್ತಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿದರೂ ಕೆಲವರು ಸಮುದ್ರಕ್ಕಿಳಿಯುತ್ತಿರುವುದು ಕಂಡುಬಂದಿದೆ.
ಮೀನುಗಾರಿಕೆಗಾಗಿ ಮತ್ತು ಪ್ರವಾಸಿಗರು ಮೋಜಿಗಾಗಿ ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬೀಚ್‌ಗಳಲ್ಲಿ ಆಳ ಅರಿಯದ ಪ್ರವಾಸಿಗರು ಸಮುದ್ರದ ಪಕ್ಕ ಬಂದು ನಿಲ್ಲುತ್ತಿರುವುದು ಕಂಡುಬರುತ್ತಿದೆ.
ಮಂಗಳೂರಿನ ಪಣಂಬೂರು, ಉಳ್ಳಾಲ, ಸೋಮೇಶ್ವರ, ಬಟ್ಟಪ್ಪಾಡಿಗಳಲ್ಲಿ ಭಾನುವಾರವೇ ಕಡಲಂಚಿನಲ್ಲಿರುವ ಮನೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಉಡುಪಿ ಜಿಲ್ಲೆ ಮಲ್ಪೆ ಬೀಚಿನಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ಬೀಚ್‌ನ ಸುಮಾರು 1 ಕಿ.ಮೀನಷ್ಟು ಉದ್ದಕ್ಕೂ ಸುರಕ್ಷತಾ ಬಲೆ ಹಾಗೂ ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ.
ಮಂಗಳೂರು ಶಾಸಕ, ಸ್ಪೀಕರ್ ಯು ಟಿ ಖಾದರ್ ಮತ್ತು ಅಧಿಕಾರಿಗಳ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭಾನುವಾರ ಉಚ್ಚಿಲ ಹಾಗೂ ಬಟಪಾಡಿಯಲ್ಲಿ ಕಡಲ್ಕೊರೆತಕ್ಕೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
“ಪ್ರತಿ ಬಾರಿ ಕಡಲ್ಕೊರೆತವಾದಾಗಲೂ ಶಾಶ್ವತ ತಡೆಗೋಡೆ ನಿರ್ಮಾಣದ ವಿಚಾರ ಮುನ್ನಲೆಗೆ ಬರುತ್ತದೆ. ಆದರೆ, ಅದು ಹಾಗೆಯೇ ಕಡಲಿನ ಪಾಲಾಗುತ್ತದೆ. ಈಗಾಗಲೇ ಸುಮಾರು ₹400 ಕೋಟಿ ಕರಾವಳಿಯ ಮೂರು ಜಿಲ್ಲೆಗಳ ಕಡಲ್ಕೊರೆತ ಪರಿಹಾರಕ್ಕಾಗಿ ಆಯಾ ಕಾಲಕ್ಕೆ ಘೋಷಣೆಯಾಗಿದ್ದವು. ಆದರೆ, ಅವುಗಳು ಮರಳದಿಬ್ಬ, ಕಲ್ಲು ಕಟ್ಟುವುದಂಥ ಕೆಲಸಗಳಿಗೆ ಮುಗಿದವೇ ವಿನಃ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ” ಎಂಬುದು ಸ್ಥಳೀಯರ ಅಸಮಾಧಾನವಾಗಿದೆ.
ಈ ಸುದ್ದಿ ಓದಿದ್ದೀರಾ? ಬತ್ತಿದ ತುಂಗಭದ್ರಾ: ಮೀನುಗಾರಿಕೆ ಭರಾಟೆಯಲ್ಲೂ ಮೀನುಗಾರರ ಬದುಕು ದುಸ್ತರ
ಕರ್ನಾಟಕದ 152.73 ಕಿ.ಮೀ. ತೀರವನ್ನು ಸಮುದ್ರ ಕೊರೆತ ವಲಯಗಳೆಂದು ಬಹಳ ಹಿಂದೆಯೇ ಗುರುತಿಸಲಾಗಿತ್ತು. ಸಮುದ್ರದ ಅಂಚಿನವರೆಗೂ ನಗರಗಳು ಬೆಳೆದಿರುವ ಪರಿಣಾಮ ಸಾಮಾನ್ಯವಾಗಿ ಉತ್ತರ ಕನ್ನಡ ಕರಾವಳಿಗಿಂತ ಅವಿಭಜಿತ ದಕ್ಷಿಣ ಕನ್ನಡ ಕರಾವಳಿಯಲ್ಲೇ ಕಡಲ್ಕೊರೆತ ಪರಿಣಾಮ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೀಗಾಗಿಯೇ ಕಡಲ್ಕೊರೆತ ಮತ್ತು ತಡೆಗೋಡೆ ಕಾಮಗಾರಿಗಳು ಇಲ್ಲಿ ನಿರಂತರವಾಗಿ ಗೋಚರಿಸುತ್ತವೆ.
ಉಳ್ಳಾಲವನ್ನು ಕರ್ನಾಟಕದಲ್ಲೇ ಅತ್ಯಂತ ಅಪಾಯದಲ್ಲಿರುವ ತೀರ ಎಂದು ಕೇಂದ್ರ ಜಲ ನಿಗಮ ಗುರುತಿಸಿತ್ತು. ಇದೀಗ ಕಳೆದ ಎರಡು ದಿನಗಳಿಂದ ಉಳ್ಳಾಲ ಭಾಗದಲ್ಲಿ ಕಡಲಿನ ಭೋರ್ಗರೆತ, ಭೂಕೊರೆತ ಎರಡೂ ಕಾಣಿಸಿಕೊಂಡಿವೆ.