ಕಡೆಂಗೋಡ್ಲು ಶಂಕರಭಟ್ಟ ಅವರ ಕತೆ | ಅದ್ದಿಟ್ಟು

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಸಂಜೆಯಾಗುತ್ತಾ ಬಂದಿತ್ತು. ನೆಳಲು, ಅಂಗಳದ ತುಳಸಿಕಟ್ಟೆಯ ಗಡಿಯನ್ನೂ ದಾಟಿ ಮುಂದೆ ಒತ್ತಿದ್ದಿತು. ಇದೀಗ ಹಳ್ಳಿಯ ಹೆಂಗುಸರಿಗೆ ಹೊತ್ತು ಮೀರಿತೆಂದು ತೋರಿಸುವ ಗುರುತು. ಕತ್ತಲಾಗುವುದಕ್ಕೆ ಮೂರೋ ನಾಲ್ಕೋ ಗಳಿಗೆಗಳು ಮಾತ್ರ ಇರಬಹುದು.

ಮಹಾದೇವ ಶಾಸ್ತ್ರಿಗಳ ಮನೆಯೊಳಗೆ ಇದುವರೆಗೆ ತುಂಬ ಜನರು. ಜನರು ಮತ್ತಾರೂ ಅಲ್ಲ; ಆ ದಿನ ನಡೆದಿದ್ದ ಅವರ ತಂದೆಯ ಶ್ರಾದ್ಧಕ್ಕೆ ಬಂದಿದ್ದ ಪುರೋಹಿತ ಬಂಧುವರ್ಗದವರು. ಮಧ್ಯಾಹ್ನ ಎರಡು ಗಂಟೆಗೆ ತಾನೇ ಎಲ್ಲರ ಭೋಜನವು ಮುಗಿದುದು. ಏನೋ ಒಂದು ದೊಡ್ಡ ಶಕ್ತಿ ಸಾಹಸದ ಮಹಾಕೃತ್ಯವನ್ನು ಮಾಡಿ ಬಳಲಿ ಬೆಂಡಾದವರು ನೆಲದ ಮೇಲೆ ದೊಪ್ಪನೆ ಬಿದ್ದು ವಿಶ್ರಾಂತಿ ಪಡೆವಂತೆ, ಊಟಮಾಡಿದ ಜನರೆಲ್ಲ ಹೊಟ್ಟೆ ಬೀಗಿಹೋದುದರಿಂದ, ಜಂಬುಖಾನಗಳ ಮೇಲೋ ಚಾಪೆಗಳ ಮೇಲೋ ನೆಲದ ಮೇಲೆ ಮಲಗಿದ್ದರು; ನಿದ್ದೆ ಹೋಗಿದ್ದರು. ಬಂಧುಗಳ ಮನೆಗೆ ಬಿಡುವಿದ್ದು ಹೋಗುವವರ ಪಾಡು ಒಂದು ರೀತಿ; ದಿನನಿತ್ಯ ಅನೇಕ ಶಿಷ್ಯ ವರ್ಗದವರಲ್ಲಿ ಆಗುವ ಶುಭಾಶುಭ ಕೃತ್ಯಗಳನ್ನು ಆಗಮಾಡಿಸುವ ಹೊಣೆಗಾರಿಕೆಯನ್ನು ಹೊತ್ತ ಪುರೋಹಿತರ ಪಾಡು ಬೇರೆ. ಅವರಿಗೆ ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ನಿಲ್ಲಲು ಸಾಧ್ಯವಿಲ್ಲ. ಒಬ್ಬ ಶಿಷ್ಯನ ಮನೆಯಲ್ಲಿ ಒಂದು ಕೆಲಸವನ್ನು ಮಧ್ಯಾಹ್ನಕ್ಕೆ ತೀರಿಸಿದರೆ ರಾತ್ರಿಗೆ ಇನ್ನೊಬ್ಬನಲ್ಲಿಗೆ ಸಾಗಿ ಇನ್ನೊಂದು ಕೆಲಸಕ್ಕೆ ಕೈಕೊಡಬೇಕು. ಇಂತಿಂತಹ ಬಂದರದಲ್ಲಿ ಇಂತಿಷ್ಟೆ ಸಮಯ ನಿಲ್ಲುವುದೆಂಬ ನಿಯಮಕ್ಕೆ ಒಳಪಟ್ಟು ಲಂಗರು ಹೊಡೆವ ತೆಗೆವ ಹಡಗಿನ ಸಂಚಾರದಂತೆ ಅವರ ಸಂಚಾರ. ಚುಕ್ಕಾಣಿ ತಿರುಗಿಸುವ ಕೆಲಸ ಹೆಚ್ಚು. ಮಹಾದೇವ ಶಾಸ್ತ್ರಿಗಳ ಪುರೋಹಿತ ಮುಖ್ಯ ಪ್ರಾಣಾಚಾರ್ಯರು ಆಗತಾನೆ ಆಕಳಿಕೆಯನ್ನೂ ಮಾತನ್ನೂ ಒಟ್ಟಿಗೆ ಬೆರೆಸಿ ಯಜಮಾನರನ್ನು ಬೀಳ್ಕೊಂಡು, ತಮ್ಮ ಅಕ್ಕಿಕಾಯಿ ಸರಕಿನ ಗಂಟನ್ನು ಭುಜಕ್ಕೆ ಬಿಗಿದು, ಕೈಯಲ್ಲೊಂದು ಕೋಲನ್ನು ಹಿಡಿದುಕೊಂಡು ಹೊರಟೇಬಿಟ್ಟರು.

ಆಚಾರ್ಯರಿಗೂ ಶಾಸ್ತ್ರಿಗಳಿಗೂ ಏನೋ ಒಂದು ಸಂಬಂಧ. ಮೊದಲಾಗಿ ಗುರುಶಿಷ್ಯ ಸಂಬಂಧವೇ ಸಾಕು ವ್ಯಕ್ತಿಗಳ ಸ್ನೇಹದ ಎರಕಕ್ಕೆ! ಆಚಾರ್ಯರ ಕುಲದವರೇ ಅನಾದಿಯಿಂದಲೂ ಶಾಸ್ತ್ರಿಗಳ ಮನೆತನದ ಪುರೋಹಿತರು. ಇದರೊಂದಿಗೆ ಒಂದೆರಡು ತಲೆ ಹಿಂದೆ ಆಗಿದ್ದ ರಕ್ತಸಂಬಂಧವೊಂದು. ಹೀಗಾಗಿ ಮುಖ್ಯಪ್ರಾಣಾಚಾರ್ಯರು ಶಾಸ್ತ್ರಿಗಳ ತಂದೆಯ ಶ್ರಾದ್ಧಕ್ಕೆ ಬಂದಾಗ ತಮ್ಮ ಕುಟುಂಬಿನಿ ಪಾರ್ವತಿ ಅಮ್ಮನವರನ್ನೂ ಬೆನ್ನಹಿಂದೆಯೇ ಕರೆದುಕೊಂಡು ಬಂದಿದ್ದರು. ಬಂಧುಗೃಹಕ್ಕೆ ಬಂದ ದಿನವೆ ಹೆಂಡತಿ ಎಂಬ ಪ್ರಾಣಿಯನ್ನು ಹೊಡೆದುಕೊಂಡು ಮರಳಿ ಹೋಗುವುದು ನ್ಯಾಯವೇ? ನ್ಯಾಯವನ್ನು ತಿಳಿದ ಯಾರೂ ಈ ಮಾತಿಗೆ ಒಪ್ಪಲಾರರು. ಪುರೋಹಿತರು ಪಾರ್ವತಿ ಅಮ್ಮನನ್ನು ಅಲ್ಲಿಯೇ ಬಿಟ್ಟು ಇನ್ನು ಹತ್ತೆಂಟು ದಿವಸಗಳಲ್ಲಿ ಆಗಲಿರುವ ಯಾವುದೋ ಒಂದು ಪೂಜೆಗೆ ಬಂದವರು ಕರೆದುಕೊಂಡು ಹೋಗುವುದಾಗಿ ಮಾತುಕೊಟ್ಟು ತಮ್ಮ ದಾರಿಯನ್ನು ಹಿಡಿದರು.

Advertisements

ಪಾರ್ವತಿಯಮ್ಮನೋ! ಆಕೆ ಪಾಪ! ಪುರಾಣವಸ್ತು. ತನ್ನ ಹೆಸರಿನಷ್ಟೆ ಪರಿಶುದ್ದೆ! ಗಂಡನ ಛಾಯೆ, ಹೊಸ ದಿನದ ಹೊಸ ಸೋಗನ್ನು ಅರಿತವಳಲ್ಲ. ಮೋರೆಯ ಉದ್ದಗಲಕ್ಕೂ ತುಂಬ ಕುಂಕುಮದ ಬೊಟ್ಟು, ಕಿವಿತುಂಬ ಆಭರಣ. ಕೈತುಂಬ ಗಾಜಿನ ಬಳೆಗಳು. ಇವುಗಳ ಮಧ್ಯಕ್ಕೆ ಒಂದೆರಡು, ಊರ ಸೊನೆಗಾರನೆ ತಯಾರಿಸಿದ, ಒಳಗೆ ಟೊಳ್ಳಾಗಿದ್ದರೂ ಅರಗಿನಿಂದ ಹೊಟ್ಟೆತುಂಬಿದ ಎರಡೆರಡು ಗಚ್ಚಿನ ಬಳೆಗಳು- ಇಷ್ಟೆ ಆಕೆಯ ಆಭರಣಗಳು, ಮುಖ್ಯಪ್ರಾಣಾಚಾರ್ಯರ ಶಿಷ್ಯವರ್ಗವು ಸ್ವಲ್ಪ ದೊಡ್ಡದೆನ್ನಬೇಕು. ಆದುದರಿಂದ ವರ್ಷಕ್ಕೆ ಹತ್ತೆಂಟಾದರೂ ಸೀರೆಗಳು ದಾನವಾಗಿ ದೊರೆಯುತ್ತಿದ್ದವು. ಪಾರ್ವತಿ ಅಮ್ಮನ ವಸ್ತ್ರಸಂಪತ್ತಿಗೆ ಕಡಿಮೆಯಾದರೂ ಏನು? ದಾನ ಕೊಡುವ ಸೀರೆಗಳು ಹೆಚ್ಚಾಗಿ ಕೆಲಗಾಲವಾದರೂ ‘ಸರ್ವಿಸು’ ಮಾಡಿದವುಗಳಾಗಿರುತ್ತವೆ. ದಾತೃವಿನ ಕೈಬಿಟ್ಟೊಡನೆ ನಡುನಡುವೆ ಬಿಚ್ಚಿ ಉದ್ದದಲ್ಲಿಯೂ ಅಗಲದಲ್ಲಿಯೂ ಹೆಚ್ಚುತ್ತವೆ. ಆದರೇನಪ್ಪ! ವರ್ಷಕ್ಕೆ ಹತ್ತು ಸೀರೆಗಳಿಂದ ಸುಮಾರು ತಿಂಗಳಿಗೆ ಒಂದು ಸೀರೆಯಾಯಿತು. ಆಚಾರ್ಯರ ಕೈಹಿಡಿದ ಸರಳ ಸ್ವಭಾವದ ಪಾರ್ವತಿ ಅಮ್ಮನಿಗೆ ಯಾವುದರಲ್ಲಿಯೂ ಕೊರತೆಯಿರಲಿಲ್ಲ.

ಪಾರ್ವತಿ ಅಮ್ಮನ (ಅಲ್ಲ, ಅವಳ ರೂಢಿಯ ಹೆಸರು ಪಾರ್ತಮ್ಮನೆಂದು. ಶಾಸ್ತ್ರಕ್ಕಿಂತ ರೂಢಿಯೇ ಮಾನ್ಯವಾಗಿರುವುದರಿಂದ ಆಕೆಯನ್ನು ಇನ್ನುಮುಂದೆ ಆ ಹೆಸರಿನಿಂದ ಕರೆಯುತ್ತೇನೆ) ಸ್ವಭಾವ ದೊಡ್ಡದು. ಆಕೆಯ ಮೊರೆಯಲ್ಲಿರುವ ತಿಲಕದ ಉದ್ದ; ಅಷ್ಟೇ ಅಗಲ. ಕೆಲಸ ಮಾಡದೆ ಇರುವುದೆಂದರೆ ಆಕೆಗೆ ಬೇಜಾರು. ಏನೂ ಕೆಲಸವಿಲ್ಲದಿದ್ದರೆ ನಾಲ್ಕು ‘ಶೋಭಾನೆ’ಗಳನ್ನಾದರೂ ಹೇಳಬೇಕು. ಮತ್ತೇನೂ ಇಲ್ಲದಿದ್ದರೆ ನಾಲ್ಕಾರು ಕಾಳು ಅಕ್ಕಿಯನ್ನಾದರೂ ಬಾಯಿಗೆ ಹಾಕಿ ಜಗಿಯುತ್ತಿರಬೇಕು. ಅಂತಹ ಹೆಂಗಸು ಶ್ರಾದ್ಧದ ದಿನ ಹೇಗೆ ಸುಮ್ಮನೆ ಕುಳಿತಾಳು? ಮನೆ ಹೆಂಗುಸರಿಗೆ ತುಂಬ ಕೆಲಸವಿದೆ. ಊಟವಾಗುವಾಗಲೇ ಮೂರು ಘಂಟೆ. ಮತ್ತೆ ಮುಸರೆಯಾದ ಪಾತ್ರೆಗಳನ್ನು ತಿಕ್ಕಬೇಕು. ಅತ್ತಿತ್ತ ಬಿದ್ದಿರುವ ಸಾಮಾನುಗಳನ್ನೂ ಗಡಿಗೆ ಮಡಿಕೆಗಳನ್ನೂ ಚಾಪೆ ವಸ್ತ್ರಗಳನ್ನೂ ಆಯಾ ಸ್ಥಳಗಳಲ್ಲಿ ಇರಿಸಬೇಕು. ಮಾಡತಕ್ಕ ಕೆಲಸಗಳು ಇನ್ನು ಎಷ್ಟೋ ಇವೆ. ಪಾಪ! ಸಾಧುಗುಣದ ಪಾರ್ತಮ್ಮ ಹೊಟ್ಟೆತುಂಬಾ ಮೃಷ್ಟಾನ್ನ ಭೋಜನ ಮಾಡಿ, ತಾಂಬೂಲವನ್ನು ಜಗಿದಾದ ಮೇಲೆ, ಮನೆ ಹೆಂಗುಸರು ಊಟಮಾಡದೆ ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಓಡಾಡುತ್ತಿರುವಾಗ, ಅದನ್ನೆಲ್ಲಾ ನೋಡಿ ಹೇಗೆ ಸಹಿಸಿಯಾಳು? ಅವಳ ಕರ್ತವ್ಯಭಾರದಲ್ಲಿ ಒಂದು ಹೇರನ್ನಾದರೂ ಹೇಗೆ ಹೊರದಿದ್ದಾಳು? ಉಂಡದ್ದೇ ತಡ; ಢುರ್‍ರೆಂದು ತೇಗಿದ್ದೇ ತಡ. ತಾಂಬೂಲವನ್ನೂ ಹಾಕಿ ನಾಲ್ಕಾರು ಸಲ ಅಂಗಳದಲ್ಲಿ ಉಗುಳಿದ್ದೇ ತಡ; ಪಾರ್ತಮ್ಮ ನೆಟ್ಟಗೆ ಅಡಿಗೆಮನೆಗೆ ನುಗ್ಗಿ ದಾಳಿಯಿಟ್ಟು ಅಲ್ಲಿಯೇ ಕಜ್ಜಾಯ ಬೇಯಿಸುತ್ತಿದ್ದ ತುಂಗಮ್ಮನ ಕೈಯಲ್ಲಿದ್ದ ಸೌಟನ್ನು ಕಿತ್ತುಕೊಂಡು ”ತುಂಗಮ್ಮ! ನೀನು ಹೋಗು, ಊಟ ಮಾಡಿ ಬಾ!” ಎಂದು ಆ ಕೆಲಸಕ್ಕೆ ಪವಿತ್ರ ಹಾಕಿಕೊಂಡಳು. ತುಂಗಮ್ಮನೆಂದರೆ ಮಹಾದೇವ ಶಾಸ್ತ್ರಿಗಳ ಹಿರಿಯ ಮಗಳು. ಒಲೆಬುಡದಲ್ಲಿ ಬೆಂಕಿಗೆ ಕುಳಿತು ಕುಳಿತು ಮೈಯೆಲ್ಲ ಬೆವರಿನಿಂದ ತೊಯಿದು ಹೋಗಿದ್ದರೂ ತುಂಗಮ್ಮನು ”ಏನು? ನೀವಿಲ್ಲಿ ಅಡಿಗೆ ಮಾಡುವುದಕ್ಕೆ ಬಂದುದೇ! ಕೈಸಾಲೆಯಲ್ಲಿ ಮಲಗಿಕೊಳ್ಳಿ” ಎಂದಳು. ಪಾರ್ತಮ್ಮ ಇಂತಹ ‘ಕೊಳ್ಳಿ’ ಎನ್ನುವ ಆಜ್ಞೆಗೆ ಒಳಪಡುವ ಹೆಂಗುಸಲ್ಲ. ”ನನಗೇನು ಸಂಕಟ! ಕಂಠಪ್ರಮಾಣ ಉಂಡಾಯಿತು. ಹೋಗು ನೋಡೋಣ. ಒಂದು ತುತ್ತು ಬಾಯಿಗೆ ಹಾಕಿ ಮತ್ತೆ ಬೇಕಾದರೆ ಕೆಲಸ ಮಾಡು” ಎಂದು ಪಾರ್ತಮ್ಮನ ಹುಕುಂ ಹೊರಟೇಬಿಟ್ಟಿತು. ತುಂಗಮ್ಮ ನಿರುಪಾಯಳಾದಳು. ಬೆವರನ್ನುಜ್ಜಿಕೊಂಡು, ಮೊಗದಲ್ಲಿ ಬೊಟ್ಟು ಅಳಿಸಿಹೋಗಿದ್ದುದರಿಂದ ಒಂದು ಬೊಟ್ಟನ್ನು ಹಾಕಿಕೊಂಡು, ಕೈಕಾಲು ತೊಳೆದು ಊಟಕ್ಕೆ ಹೋದಳು. ಪಾರ್ತಮ್ಮನು ಒಲೆಯ ಬುಡದಲ್ಲಿ ಕುಳಿತು ಕಜ್ಜಾಯಗಳನ್ನು ಬೇಯಿಸಿ, ಬೇಯಿಸಿ ಅಲ್ಲೆ ಇಟ್ಟಿದ್ದ ಮಡಿಕೆಗಳನ್ನು ತುಂಬಿಸುತ್ತಿದ್ದಳು. ಬೆಂಕಿ ಕನಲುತ್ತಿತ್ತು. ಅದರ ಮೇಲಿಂದ ಉರುಳಿಯ ಎಣ್ಣೆ ಕುದಿದು ಗುಳಗುಳಿಸುತ್ತಿತ್ತು. ಚುಯ್ಯೆಂದು ಕಜ್ಜಾಯಗಳ ಹಿಟ್ಟು ಉರುಳಿಯಲ್ಲಿ ಬೀಳುತ್ತಲೇ ಇತ್ತು. ಕೈಸಟ್ಟುಗದಿಂದ ಉರುಳಿಯನ್ನು ತೊಳಸುವ ಗಣಗಣ ಶಬ್ದವು ಕಿವಿಗೆ ಇಂಪಾಗಿಯೇ ಇತ್ತು. ಇಂತಹ ಹೃದಯಾನಂದಕರ ಸಂದರ್ಭಗಳು ದೊರೆತಾಗ ಕವಿಗಳಾದರೆ ಸ್ಫೂರ್ತಿಗೊಂಡು ಕವಿತಾನಿರ್ಝರವನ್ನೇ ಕೆಡೆಯಿಸಿಬಿಟ್ಟಾರು. ಆದರೆ ಅಲ್ಲಿದ್ದುದು ಕವಿಯಲ್ಲ, ನಮ್ಮ ಮುಖ್ಯಪ್ರಾಣಾಚಾರ್ಯರ ಅರ್ಧಾಂಗಿ ಪಾರ್ತಮ್ಮ; ಪುರೋಹಿತರ ಪತ್ನಿ ಪಾರ್ತಮ್ಮ. ಆಕೆ ದಿವ್ಯವಾದ ಶೋಭನವೊಂದನ್ನು ಹಾಡುತ್ತ ಮಧ್ಯೆಮಧ್ಯೆ ಆಕಳಿಸುತ್ತಾ ಸೌಟಿನ ಘಣಘಣ ಶಬ್ದದಿಂದ ಆ ಹಾಡಿಗೆ ತಾಳ ಹಾಕುತ್ತಾ ”ದ್ವಾಪರಯುಗದಿ…” ಎಂದು ‘ಶೋಭಾನ’ದ ಸೊಲ್ಲನ್ನು ಪ್ರಾರಂಭಿಸುವಾಗ, ಈ ಕಲಿಯುಗದ ಗೊಡವೆಯೇ ಮರೆತುಹೋಗಿ ನಮ್ಮ ಮನಸ್ಸು ಆ ದ್ವಾಪರಯುಗಕ್ಕೂ ಅಂದಿನ ಶ್ರೀಕೃಷ್ಣನ ನಿವಾಸಭೂಮಿಯಾಗಿದ್ದ ಮಧುರೆಗೋ ದ್ವಾರಕಿಗೋ ಹೋದಲ್ಲಿ ಆಶ್ಚರ್ಯವೇನಿದೆ? ಹೀಗೆ ಉದ್ದಕ್ಕೂ ಹಾಡು ಹೋಗುತ್ತಿದ್ದಾಗ, ಕೈಯ ಸೌಟು ತೊಳೆಸಿ ತೊಳೆಸಿ ಕಜ್ಜಾಯಗಳನ್ನು ಬೇಯಿಸುತ್ತಲೆ ಇರುವಾಗ ಅಲ್ಲಿ ಕಜ್ಜಾಯದ ಅಸಿದ್ಧ ಪದಾರ್ಥಗಳೆಲ್ಲ ಸಿದ್ಧವಾಗಿ, ಒಳ್ಳೆಯ ರುಚಿಕರವಾದ ಅಪ್ಪಗಳೊ ಒಡೆಗಳೊ ಉಂಡೆಗಳೊ ಆಗಿ ಪರಿವರ್ತನಗೊಳ್ಳುವುದರಲ್ಲಿಯೂ ಆಶ್ಚರ್ಯವುಂಟೇ?

Thats it 06

ಪಾರ್ತಮ್ಮನು ಆಯಾ ಜಾತಿಗೆ ಸೇರಿದ ಕಜ್ಜಾಯಗಳನ್ನು ಮಾಡಿ ಮುಗಿಸಿಯೇಬಿಟ್ಟಳು. ಅಪ್ಪಗಳಾದುವು; ಓಡೆಗಳಾದುವು; ಉಂಡೆಗಳಾದುವು; ಆ ದಿನದ ಅವಶೇಷವೆಲ್ಲ ರಾಶಿರಾಶಿಯಾಗಿ ಕುಡಿಕೆಗಳಲ್ಲಿ ತುಂಬಿದುವು. ಈಗತಾನೆ ಪಾರ್ತಮ್ಮ ಅದ್ದಿಟ್ಟನ್ನು ತಯಾರಿಸುವ ಕೆಲಸಕ್ಕೆ ಕೈಹಚ್ಚಿದ್ದಾಳೆ. ಅದ್ದಿಟ್ಟನ್ನು ಮಾಡುವುದೆಂದರೆ ಭಕ್ಷ್ಯಗಳನ್ನು ಬೇಯಿಸುವ ಕೆಲಸಕ್ಕೆ ಮಂಗಳಪದ ಹೇಳುವುದೆಂದರ್ಥ. ಈ ಅದ್ದಿಟ್ಟೆಂದರೆ ಏನೆಂದು ಹಲವರಿಗೆ ತಿಳಿಯದಿರಬಹುದಲ್ಲವೇ? ಅದರ ಪರಿಚಯವನ್ನು ಮಾಡಿಕೊಟ್ಟಿದ್ದೇನೆ.

‘ಅದ್ದಿಟ್ಟು’ ಎಂಬ ಪದದ ವ್ಯುತ್ಪತ್ತಿ ಹೇಗೆ ಎಂದು ನನ್ನಲ್ಲಿ ಕೇಳಬೇಡಿ. ಅದನ್ನು ಮಾಡುವವರಾಗಲಿ, ತಿನ್ನುವವರಾಗಲಿ, ಅದಕ್ಕೆ ಆ ಹೆಸರನ್ನು ಕೊಟ್ಟವರಾಗಲಿ, ವ್ಯಾಕರಣವನ್ನೋದಿರಲಿಕ್ಕೆ ಕಾರಣವಿಲ್ಲ. ಆದರೂ ಬೇರೆ ಬೇರೆ ಶಬ್ದಗಳ ಪ್ರಯೋಗವನ್ನು ನೋಡಿ, ಅದರ ವ್ಯುತ್ಪತ್ತಿ ಹೇಗಾಯಿತೆಂಬುದನ್ನು ಮಾತ್ರ ಸೂಚಿಸುತ್ತೇನೆ. ಹಾಗೆಂದು ನನ್ನ ಮತವೆ ಸರಿಯೆನ್ನಲು ಧೈರ್ಯ ಸಾಲದು.

‘ಉಪ್ಪಿಟ್ಟು’ ಎಂದರೆ ಏನೆಂದು ನಿಮಗೆ ಗೊತ್ತಿದೆಯಲ್ಲ? ಉಪ್ಪು + ಹಿಟ್ಟು ಎಂದು ಅದರ ಸಂಧಿಯನ್ನು ಬಿಡಿಸಬೇಕು. ಉಪ್ಪಿನಿಂದ ಕೂಡಿದ ಹಿಟ್ಟು ಎಂದದರ ಅರ್ಥವಾಗಬಹುದೇ? ಹಾಗೆಂದರೇನು? ಯಾವ ತಿಂಡಿ ತಿನಿಸಿಗೆ ಉಪ್ಪು ಹಾಕುವುದಿಲ್ಲ? ಎಲ್ಲದಕ್ಕೂ ಉಪ್ಪು ಹಾಕುವಾಗ ರವೆಯ ಉಪ್ಪಿಟ್ಟಿಗೆ ಮಾತ್ರ ಉಪ್ಪಿನಿಂದ ಕೂಡಿದ ಒಟ್ಟು ಎಂಬ ಹೆಸರೇಕೆ ಬಂತು? ಗೋಧಿರವೆಯನ್ನು ಹಿಟ್ಟು ಎಂದು ಹೇಳಬಹುದೇ? ಹೀಗೆಲ್ಲ ಪ್ರಶ್ನೆಗಳ ಗುಂಡುಗಳನ್ನೆಸೆದರೆ ನಾನು ಕೆಟ್ಟೆ. ಹೇಗೂ ಇದೊಂದು ನಿಜ. ಉಪ್ಪು ಮತ್ತು ಹಿಟ್ಟು ಎಂಬಿ ಎರಡು ಪದಗಳು ಸೇರಿ ಉಪ್ಪಿಟ್ಟಾಗುತ್ತದೆ. ಅದರಂತೆ ಅದ್ದು ಎಂಬ ಕ್ರಿಯಾಪದವೂ ಹಿಟ್ಟು ಎಂಬ ನಾಮಪದವೂ ಸೇರಿ ಅದ್ದಿಟ್ಟು ಎಂದಾಗುತ್ತದೆ. ಇದರ ಅರ್ಥವೇನೆಂದು ಇಷ್ಟರಿಂದಲೇ ಊಹಿಸಿಕೊಳ್ಳಿರಿ. ಈ ತಿಂಡಿ ಏನೆಂಬುದನ್ನು ತಿಂದೇ ಪರೀಕ್ಷಿಸಬೇಕಷ್ಟೆ, ಅದು ಸದ್ಯಃ ಅಸಾಧ್ಯ.

ಶ್ರಾದ್ಧಾದಿ ಪುಣ್ಯದಿನಗಳಲ್ಲಿ ಅನೇಕಾನೇಕ ಖಾದ್ಯ ವಸ್ತುಗಳು ತಯಾರಾಗುತ್ತವಲ್ಲ? ಅವುಗಳಲ್ಲಿ ಸುಕ್ಕಿನುಂಡೆ ಎಂಬುದು ಭಕ್ಷ್ಯರಾಜನೆನಿಸಿಕೊಂಡಿದೆ ನಮ್ಮೂರಲ್ಲಿ. ಅದರೊಳಗಿನ ಹೂರಣದಲ್ಲಿ ಬೇಯಿಸಿದ ಕಡಲೆ ಹಿಟ್ಟು, ಬೆಲ್ಲ, ಎಳ್ಳು, ತೆಂಗಿನ ತಿರುಳು ಮೊದಲಾದ ಸರಸ ವಸ್ತುಗಳಿರುತ್ತವೆ. ಹೊರಗಿನ ಆವರಣವು ಅಥವಾ ಕಣಕವು ಅಕ್ಕಿಯ ಹಿಟ್ಟಿನಿಂದಲೇ ಆಗುತ್ತದೆ. ಹೊರಗಿನ ‘ಕಣಕ’ಕ್ಕೆ ತಯಾರಿಸಿದ ಹಿಟ್ಟಿನಿಂದ ತಯಾರಾಗುವುದು ಈ ಅದ್ದಿಟ್ಟು. ಎಲ್ಲ ಭಕ್ಷ್ಯಗಳನ್ನೂ ತಯಾರಿಸಿದ ಅನಂತರ ಕೊನೆಯಲ್ಲಿ ಇದರ ತಯಾರಿಯಾಗುವುದರಿಂದ ಈ ಹಿಟ್ಟಿಗೆ ಬೇರೆ ಲಕ್ಷ್ಯಗಳ ಮೂಲಪದಾರ್ಥಗಳು ಸೇರುವುದೂ ಉಂಟು. ಎಲ್ಲವನ್ನೂ ಕಲಸಿ ಒಲೆಯ ಮೇಲಿಟ್ಟ ಉರುಳಿಗೆ ಹೊಯ್ಯುವುದು; ಬೇಯಿಸಿ ತೆಗೆಯುವುದು; ಹಾಗೆ ತಯಾರಿಸಿದ ಪಾಕವೆ ಅದ್ದಿಟ್ಟೆಂದರೆ. ಎಂದರೆ ದೊಡ್ಡ ದೊಡ್ಡ ಗ್ರಂಥಗಳನ್ನು ಬರೆವಾಗ ಹಿಂದಿನ ಅಧ್ಯಾಯಗಳಲ್ಲಿ ಅಡಗದಿರುವ ವಿಷಯಗಳನ್ನೆಲ್ಲಾ ಒಟ್ಟುಮಾಡಿ ಅನುಬಂಧ ಎಂದು ಅಧ್ಯಾಯಗಳನ್ನು ಸೇರಿಸುತ್ತಾರಲ್ಲ? ಹಾಗೆಯೆ ಅದ್ದಿಟ್ವೆಂಬುದು ಭಕ್ಷ್ಯಗಳ ಅನುಬಂಧ. ಅನುಬಂಧಗಳಲ್ಲಿ ಪ್ರತಿಪಾದಿಸಬಾರದ ವಿಷಯವೆಂಬುದಿಲ್ಲ. ಹಾಗೆಯೇ ಅದ್ದಿಟ್ಟಿನಲ್ಲಿ ಇಲ್ಲದ ರಸವಿಲ್ಲ, ಉಪ್ಪು, ಹುಳಿ, ಕಾರ, ಸಿಹಿ-ಹೆಚ್ಚೇನು? ಷಡ್ರಸಯುಕ್ತವಾದ ಭಕ್ಷ್ಯ ವಿಶೇಷವೇ ಇದು. ಅದರ ಆಕಾರ ವಿವರಣವನ್ನು ಮಾಡದಿದ್ದರೆ ಎಲ್ಲರಿಗೂ ಅದರ ಸಂಪೂರ್ಣ ಜ್ಞಾನವಾಗುವುದು ಕಷ್ಟ. ಅದ್ದಿಟ್ಟಿಗೆ ನಿಶ್ಚಿತವಾದ ಆಕಾರವೆಂಬುದಿಲ್ಲ. ಅದು ಒಮ್ಮೊಮ್ಮೆ ಹಿಂದುಸ್ಥಾನದಂತೆ ತ್ರಿಕೋನಾಕೃತಿಯನ್ನು ಹೊಂದಿರಬಹುದು. ಇಂಗ್ಲೆಂಡು ದ್ವೀಪದಂತೆ ಸುತ್ತಲೂ ಒಡಕಾಗಿದ್ದು ಒಂದೆಡೆ ತೋರ, ಒಂದೆಡೆ ಸಪುರವಾಗಿರಬಹುದು. ಅರೇಬಿಯದಂತೆ ಒಮ್ಮೊಮ್ಮೆ ಚೌಕವಾಗಿರಲೂಬಹುದು. ಒಮ್ಮೊಮ್ಮೆ ದಕ್ಷಿಣ ಅಮೆರಿಕದಂತೆ, ಮೇಲೆ ದೊಡ್ಡದಾಗಿದ್ದು, ಕೆಳಕೆಳಗೆ ಬರುತ್ತಾ ಸಪುರವಾಗಿ, ದೊಡ್ಡ ತಲೆಯಿದ್ದು ಸಪುರ ಕಾಲುಗಳುಳ್ಳ ಮನುಷ್ಯನ ಆಕಾರ ಸ್ಮರಣೆಯನ್ನುಂಟುಮಾಡಲುಬಹುದು. ಏರುತಗ್ಗುಗಳೂ ಹಾಗೆಯೆ. ಒಂದೆಡೆ ಹೆಚ್ಚು ಹಿಟ್ಟು ಬಿದ್ದು ದಪ್ಪವಾಗಿ ಎತ್ತರವಾಗಿ ಹಿಮಾಲಯ ಪರ್ವತದ ಪೃಷ್ಠಭೂಮಿಯಂತೆಯೂ, ಇನ್ನೊಂದೆಡೆ ತಗ್ಗಾಗಿ ಪರಶುರಾಮ ಕ್ಷೇತ್ರದಂತೆಯೂ ಇರಬಹುದೆನ್ನಿ. ಹೀಗಿರುವ ಭಕ್ಷದ ರುಚಿಯೂ ಒಂದೊಂದು ಸ್ಥಳದಲ್ಲಿ ಒಂದೊಂದು ಎಂಬುದನ್ನು ಊಹಿಸಿಕೊಳ್ಳಿರಿ. ನಮ್ಮ ಪಾರ್ತಮ್ಮನ್ನು ಬೇಯಿಸಲು ಪ್ರಾರಂಭಿಸಿದುದು ಇದನ್ನೆ! ಹೆಮ್ಮಕ್ಕಳಿಗೆ ತಮ್ಮ ಕಿರಿಯ ಮಕ್ಕಳ ಮೇಲೂ ಅದ್ದಿಟ್ಟಿನ ಮೇಲೂ ಸಮಾನ ಪ್ರೀತಿ.

ಪಾರ್ತಮ್ಮನು ಅದ್ದಿಟ್ಟನ್ನು ಬೇಯಿಸುತ್ತಿದ್ದಳು. ಒಲೆಯೊಳಗೆ ಬೆಂಕಿ ಧಗಧಿಗಿಸುತ್ತಿತ್ತು. ಉರುಳಿಯಲ್ಲಿದ್ದ ಎಣ್ಣೆ ಚುಯ್ಯೆಂದು ಕುಚಿಯುತ್ತಿತ್ತು. ”ದ್ವಾಪರಯುಗದಿ…” ಎಂಬ ನೂರು ಸೊಲ್ಲಿನ ಹಾಡು ಕೊನೆಯನ್ನು ಮುಟ್ಟುತ್ತಿತ್ತು. ಅಷ್ಟರಲ್ಲಿ ತುಂಗಮ್ಮನೇ ಬಂದಳು. ”ಏಳಿರಿ ಪಾರ್ತಮ್ಮ! ಇನ್ನು ನಾನೇ ಬೇಯಿಸುತ್ತೇನೆ” ಎಂದಳು. ”ಯಾವ ಕೆಲಸವನ್ನೂ ಅರ್ಧದಲ್ಲಿ ಬಿಡುವ ಸ್ವಭಾವ ನನ್ನದಲ್ಲ. ಇಷ್ಟನ್ನು ಮುಗಿಸುತ್ತೇನೆ” ಎಂದು ಪಾರ್ತಮ್ಮ ಸೌಟನ್ನು ತಿರುಗಿಸುತ್ತಲೇ ಇದ್ದಳು. ತುಂಗಮ್ಮ ಬಳಿಯಲ್ಲೆ ಕುಳಿತು ತಾಂಬೂಲ ಹಾಕುತ್ತಿದ್ದಳು.

ಫಕ್ಕನೆ ಪಾರ್ತಮ್ಮನ ಹಾಡು ನಿಂತುಹೋಯಿತು. ”ಅಯ್ಯೋ! ಈ ಅದ್ದಿಟ್ಟನ್ನು ಮಾಡುವಾಗ ನನ್ನ ಮಗಳು ಶಾರದೆಯ ನೆನಪಾಗುತ್ತದೆ. ಆಕೆಗೆ ಅದ್ದಿಟ್ಟೆಂದರೆ ಪ್ರಾಣ… ಆದರೆ ಯೋಗ್ಯತೆ ಬೇಕಷ್ಟೆ. ಅವಳಿಗೆ ಈ ನೆಲದ ನೀರು ಎಂದೋ ಮುಗಿದುಹೋಯಿತು” ಎಂದು ನಿಟ್ಟುಸಿರು ಬಿಟ್ಟಳು. ಕಣ್ಣುಜ್ಜಿದಳು.

”ಲೋಕದಲ್ಲಿ ಹುಟ್ಟುವ ಪ್ರತಿಯೊಬ್ಬನ ಹಣೆಯಲ್ಲಿಯೂ ವರ್ಷ, ತಿಂಗಳು, ದಿನ, ಗಳಿಗೆಯೂ ತಪ್ಪದಂತೆ ಇಂತಿಷ್ಟೆ ಆಯಸ್ಸೆಂದು ಆ ಬ್ರಹ್ಮ ಬರೆದಿರುವಾಗ ನಾವೇನು ಮಾಡಲಾಗುತ್ತದೆ ಪಾರ್ವತಮ್ಮ” ಎಂದು ತುಂಗಮ್ಮನ ಸಮರ್ಥನೆ.

“ಅದು ನಿಜ, ಆದರೇನು? ಈ ಅದ್ದಿಟ್ಟನ್ನು ನೋಡಿದೊಡನೆ ಅವಳದೇ ನೆನಪು ನನಗೆ. ಅವಳಿಗೆ ಇದೆಂದರೆ ಪ್ರಾಣ ನೋಡು. ಬೇರೇನೂ ಬೇಡ; ಪಂಚಭಕ್ಷ್ಯ ಪರಮಾನ್ನವೂ ಬೇಡ. ಅದ್ದಿಟ್ಟೆಂದರೆ ಇಡೀ ದಿನ ಅದನ್ನೇ ಜಗಿಯುತ್ತ ಇರುವುದು. ಹಾ! ಅದ್ದಿಟ್ಟನ್ನು ತಿನ್ನಲು ಅವಳು ಇನ್ನೆಲ್ಲಿಂದ ಬರಬೇಕು?” ಎಂದು ಪಾರ್ತಮ್ಮನ್ನು ಮತ್ತಷ್ಟು ಕಣ್ಣುಜ್ಜಿದಳು. ಅದ್ದಿಟ್ಟನ್ನು ಮುಟ್ಟಿದ ಕೈಯಲ್ಲಿ ಅಂಟಿಕೊಂಡಿದ್ದ ರಸವನ್ನು ಕಣ್ಣೂ ಪರೀಕ್ಷಿಸಿದಂತೆ ತೋರುತ್ತದೆ. ಧಾರಾಕಾರವಾಗಿ ಕಣ್ಣೀರು ಸುರಿಯಿತು.

ಮತ್ತೂ ಹೇಳಿದಳು ಪಾರ್ತಮ್ಮ- “ನನಗೆ ಅನುಕೂಲ ಕಡಿಮೆಯಾದರೂ ಸಂಸಾರ ದೊಡ್ಡದು ತುಂಗಮ್ಮ. ಹಬ್ಬ ಹುಣ್ಣಿಮೆ, ಶ್ರಾದ್ಧ ಮಹಾಲಯಗಳೇನಾದರೂ ಆದರೆ ಮನೆತುಂಬ ಮಂದಿಗಳು; ಮಕ್ಕಳು ಮರಿಗಳು; ನಮ್ಮ ಯಜಮಾನರು ಹೇಗಾದರೂ ಮಾಡಿ ಒಳೊಳ್ಳೆಯ ಭಕ್ಷ್ಯಭೋಜ್ಯಗಳನ್ನು ಮಾಡಿಸದೆ ಇರುತ್ತಿರಲಿಲ್ಲ. ಏಳು ಸೇರು ಹಿಟ್ಟಿನ ಹೋಳಿಗೆ ಮಾಡಿಸುವುದು ನಮ್ಮ ಪದ್ಧತಿ. ಬೇಡಿ ಕಾಡಿ ಸಾಮಾನು ತಂದರೂ ಹೋಳಿಗೆಯಾಗಬೇಕು ನೋಡು! ನಮ್ಮ ಯಜಮಾನರ ನಾಲಗೆ ಅಂತಹುದು… ಆದರೆ ನಮ್ಮ ಶಾರದೆಗೆ ಅದೊಂದೂ ಬೇಡ… ತಂದೆಯ ಹಾಗೆ ಸವಿಯಾದ ಭಕ್ಷ್ಯಗಳನ್ನು ತಿನ್ನುವ ಯೋಗ್ಯತೆ ಅವಳಲ್ಲಿರಲಿಲ್ಲ. ಆದರೆ ಒಂದು ಅದ್ದಿಟ್ಟು ಇದ್ದರೆ ಆಯಿತು. ಅವಳು ಮನೆಗೆ ಬಂದರೆ ಒಂದು ಕುಡಿಕೆ ತುಂಬ ಅದ್ದಿಟ್ಟು ಮಾಡಿ ಅವಳ ವಶಕ್ಕೆ ಒಪ್ಪಿಸಿಬಿಡುತ್ತಿದ್ದೆ… ಆದರೆ ಯೋಗ್ಯತೆ ಎಂಬುದು ಪ್ರತಿಯೊಂದರಲ್ಲಿಯೂ ಇದೆ. ಅದ್ದಿಟ್ಟು ತಿನ್ನಲೂ ಯೋಗ್ಯತೆ ಬೇಕು. ಬ್ರಹ್ಮ ಹಾಗೆಯೇ ಬರೆದಿರಬೇಕು. ಅಯ್ಯೋ! ನನಗೆ ಪ್ರತಿಯೊಂದು ಬಾರಿಯೂ ಅದ್ದಿಟ್ಟು ಮಾಡುವಾಗ ಅವಳ ನೆನಪೇ ತುಂಗಮ್ಮ” ಹೀಗೆನ್ನುವಷ್ಟರಲ್ಲಿ ಆಕೆಯ ಸ್ವರ ನಡುಗಿತು.

“ಹೆಣ್ಣಾಗಿ ಹುಟ್ಟುವುದು ಕಷ್ಟ ಪಾರ್ತಮ್ಮ. ಕೈಹಿಡಿದ ಗಂಡ ಒಳ್ಳೆಯವನಾದರೆ ಆಯಿತು. ಇಲ್ಲವಾದರೆ ನೋಡು ಅಗಸನ ಕತ್ತೆಗಿಂತಲೂ ಕಡೆ ಆಕೆಯ ಅವಸ್ಥೆ… ಹೌದು… ಪಾರ್ತಮ್ಮ… ಶಾರದೆಯ ಕಥೆಯನ್ನು ಕೇಳಿದ್ದೇನೆ” ಎಂದಳು ತುಂಗಮ್ಮ.

ಪಾರ್ತಮ್ಮ- “ನೀನು ಕೇಳಿದ್ದೇನು? ಎರಡು ವರ್ಷಗಳ ಹಿಂದೆ ಶಾರದೆ ಹೆರಿಗೆಯ ಕಷ್ಟದಿಂದ ತೀರಿಹೋದಳೆಂದಲ್ಲವೇ? ಆಕೆ ಸತ್ತಳು, ಸತ್ತ ದನದ ಶವವನ್ನು ಒಯಿದುಕೊಂಡು ಹೋಗುತ್ತಾರಲ್ಲ? ಹಾಗೆ ಅವಳ ಹೆಣವನ್ನು ಸ್ಮಶಾನಕ್ಕೆ ಒಯ್ದರು ಎಂದು ಇಷ್ಟಲ್ಲವೇ ನೀನು ಕೇಳಿದುದು?”

ತುಂಗಮ್ಮ- “ಹೌದು; ಏಳು ತಿಂಗಳ ಗರ್ಭಿಣಿಯಾಗಿದ್ದಾಗಲೆ ಎಲ್ಲವೂ ಆಗಿಹೋಯಿತೆಂದು ಕೇಳಿದೆ.”

addittu1

ಪಾರ್ತಮ್ಮ- “ಅಲ್ಲ ಗಂಡನ ಮನೆಯಲ್ಲಿ ಹುಡುಗಿಗೆ ಏನು ಕಷ್ಟ ಬಂದರೂ ಕೊಟ್ಟ ಮನೆಯವರು ಹೇಳಬಾರದು. ಒಂದುವೇಳೆ ಹೇಳಿದರೆ ನನ್ನ ಕೈಬಿಟ್ಟು ಹೋದ ಆ ಮುದ್ದು ಮಗಳು ಬರುವಂತಿಲ್ಲ. ಆಕೆಯ ಆಯುಷ್ಯ ಮುಗಿಯಿತೆಂದೆ ಹೇಳಿ ನಾವು ಸಮಾಧಾನ ಮಾಡಿಕೊಳ್ಳಬೇಕು. ಆದರೂ ಹೆತ್ತ ತಾಯಿಯಲ್ಲವೇ? ಎಲ್ಲ ನೆನಪಾಗುತ್ತದೆ. ಆಕೆಯ ಪ್ರೀತಿಯ ತಿನಿಸುಗಳನ್ನು ನೋಡುವಾಗ ಆಕೆ ಇರುತ್ತಿದ್ದರೆ ಸಂತೋಷದಿಂದ ತಿಂದು ಹೇಗೆ ನಮ್ಮೊಡನೆ ನಗುಮಾತುಗಳನ್ನಾಡಿ ಸಂತೋಷಪಡುತ್ತಿದ್ದಳು! ಎಂಬ ಎಣಿಕೆಯಾಗುತ್ತಿದೆ… ಇಷ್ಟೆ…”

ತುಂಗಮ್ಮನು ಈ ಮಾತಿಗೆ ಒಪ್ಪಲೇಬೇಕಾಯಿತು. ”ನನಗೆ ಸಮೀಪದವರಲ್ಲಿ ಯಾವುದನ್ನೂ ಮುಚ್ಚಿಡುವ ಕ್ರಮವಿಲ್ಲ. ಹೇಳಬಾರದೆಂದಿದ್ದರೂ ಹೇಳದೆ ಮನಸ್ಸು ಕೇಳುವುದಿಲ್ಲ” ಎಂದು ಪಾರ್ತಮ್ಮ ಪೀಠಿಕೆ ಹಾಕಿಯಬಿಟ್ಟಳು.

”ಸಹಜವಲ್ಲವೆ ಅದು” ಎಂದು ತುಂಗಮ್ಮ ಹೇಳುವುದಕ್ಕೆ ಸಿದ್ಧತೆ ಮಾಡಿದಳು. ಪಾರ್ತಮ್ಮ ಅದ್ದಿಟ್ಟಿನ ಕಥೆಯನ್ನು ಹೇಳುವುದಕ್ಕೆ ತೊಡಗಿದಳು.

*

ನನ್ನ ಹುಡುಗಿಗೆ ಮದುವೆಯಾಗುವಾಗ ಹದಿನಾಲ್ಕು ವರ್ಷವಾಗಿತ್ತು. ವರ ವರ ಎಂದು ಊರೆಲ್ಲ ಸುತ್ತಿದ್ದಾಯಿತು. ನಮ್ಮಂತಹ ಬಡವರಲ್ಲಿ ಏನಿದೆ? ಹಣವಿದೆಯೇ? ಹುಡುಗಿಗೆ ಕೊಡಲು ಚಿನ್ನವಿದೆಯೇ? ಬಡವರ ಹುಡುಗಿಯ ರೂಪ ನೋಡಿ ಕೈಯೊಡ್ಡುವವರು ಯಾರಿದ್ದಾರೆ ಲೋಕದಲ್ಲಿ? ಹುಡುಗಿಯ ಮಾತು ಬಂದರೆ ಹಣವೆಷ್ಟು ಕೊಡುತ್ತೀರಿ ಎಂಬ ಪ್ರಶ್ನೆಯೇ ಮೊದಲು ಬರುತ್ತದೆ. ಕುಲವನ್ನು ನೋಡುವವರಿಲ್ಲ. ಹುಡುಗಿಯರ ತಾಯಿತಂದೆಗಳ ಗುಣವನ್ನು ನೋಡುವವರಿಲ್ಲ. ಬಂಧುಬಳಗದವರ ಸ್ವಭಾವವನ್ನು ನೋಡುವವರಿಲ್ಲ. ನಮಗೆ ಹೇಗೊ ಹುಡುಗಿಯನ್ನು ದಾಟಿಸದೆ ನಿರ್ವಾಹವುಂಟೆ? ಹದಿನಾಲ್ಕು ವರ್ಷಗಳಾಗುವವರೆಗೆ ಊರೂರು ಅಲೆದರು ಯಜಮಾನರು. ಅವರು ಒಂದು ದಿನವಾದರೂ ಮನೆಯಲ್ಲಿರುವುದೆಂದಿಲ್ಲ. ಅವರಿಗೆ ಗೊತ್ತಿಲ್ಲದ ಮಂದಿಯೂ ಊರಲ್ಲಿಲ್ಲ. ದೊಡ್ಡ ದೊಡ್ಡ ಕ್ರಿಯೆಗಳನ್ನು ಮಾಡಿಸುವುದಕ್ಕೂ ಅವರೇ ಬೇಕು. ಆದರೇನು? ಹುಡುಗಿಗೆ ಮನೆಯಾಗಲಿಲ್ಲ. ಕೊನೆಗೆ ಹುಡುಕಿ ಹುಡುಕಿ ಬೇಸತ್ತು ಒಂದು ಕಡೆ ವರನನ್ನು ನಿಶ್ಚಿಸಿದೆವು. ಆ ದಿನ ಈ ದಿನ ಆ ಮುಹೂರ್ತ ಈ ಮುಹೂರ್ತ ಎಂದು ನೋಡಲಿಲ್ಲ. ಧಾರೆಯೆರೆದು ಕೊಟ್ಟೇಬಿಟ್ಟೆವು. ಹುಡುಗನೇನೋ ಕೆಟ್ಟವನಂತೆ ಕಾಣಿಸಲಿಲ್ಲ. ವೃತ್ತಿಯಾದರೂ ನಮ್ಮದೇ. ವೈದಿಕ ವೃತ್ತಿಯವರಿಗೆ ಐಶ್ವರ್ಯವಿರುವುದು ಕಡಿಮೆಯಾದರೂ ಊಟಕ್ಕೆ ಕಡಿಮೆಯೆಂದಿಲ್ಲ. ಲೋಕದಲ್ಲಿ ಸಾವು ಹುಟ್ಟುಗಳು ಆಗದಿರುವುದುಂಟೆ? ಅಕ್ಕಿ, ಕಾಯಿ, ಧಾನ್ಯ, ಬಾಗಿನ ಎಂದು ಎಂದಾದರೂ ಸಿಕ್ಕದಿರುವುದುಂಟೆ? ಶಾರದೆಯ ಗಂಡ ನಾರಾಯಣನು ಒಳ್ಳೆಯ ರೀತಿಯಲ್ಲಿ ಕ್ರಿಯಾಭಾಗಗಳನ್ನು ಮಾಡಿಸುತ್ತಿದ್ದ. ಮನೆಗೆ ಬರುವಾಗ ಒಂದು ಹೊರೆ ಸಾಮಾನು ಬಾರದೆ ಇರುತ್ತಿರಲಿಲ್ಲ. ಹೀಗಾಗಿ ಅವರಿಗೆ ದಾರಿದ್ರ್ಯವೆನ್ನುವಷ್ಟು ಬಡತನವಿರಲಿಲ್ಲ. ಆದರೆ ಪುಣ್ಯ ಬೇಕಷ್ಟೆ ನಮಗೆ? ಗಂಡಹೆಂಡಿರು ಸುಖವಾಗಿದ್ದು ವರ್ಷಕ್ಕೊಮ್ಮೆಯಾದರೂ ಬಂದುಹೋಗುವುದನ್ನು ನೋಡುವ ಭಾಗ್ಯವು ನಮಗಿರಬೇಕಷ್ಟೆ?… ಇದೊಂದೇ ಕಡಿಮೆಯಾದುದು. ನಾರಾಯಣನ ಸಿಟ್ಟೆ ಇದಕ್ಕೆ ಕಾರಣ, ಹುಡುಗನೇನೋ ಒಳ್ಳೆಯವ. ಆದರೆ ಅಕ್ಕ ತಂಗಿಯರ ಮಾತಿಗೆ ಒಳಗಾಗುವನು ಆತ. ಗಂಡನ ಮನೆಯಲ್ಲಿರದೆ ತವರು ಮನೆ ಸೇರುವ ಹೆಂಗುಸರಿಗೆ ಮತ್ತೇನು ಕೆಲಸ ತುಂಗಮ್ಮ! ಅಣ್ಣತಮ್ಮಂದಿರ ಹೆಂಡಿರಲ್ಲಿ ಇಲ್ಲದ ದೋಷಗಳನ್ನು ಹುಡುಕುವುದು, ಚಾಡಿ ಹೇಳುವುದು, ಜಗಳವೆಬ್ಬಿಸುವುದು, ಏನಾದರೂ ಹೊಡೆದಾಟ ಮಾಡಿಸುವುದು… ಇದರಿಂದಾಗಿ ಶಾರದೆಗೆ ಗಂಡನ ಮನೆಯಲ್ಲಿ ಒಂದು ದಿನ ಸುಖವಿರಲಿಲ್ಲ. ಒಂದು ದಿನ ಹೊಟ್ಟೆತುಂಬ ಊಟವಿರಲಿಲ್ಲ. ಒಂದು ದಿನ ಬೈಗಳೂ ಪೆಟ್ಟೂ ತಪ್ಪಿದುದಿಲ್ಲ. ಸಾಯುವವರೆಗೂ ಗಂಡನ ಪೆಟ್ಟು ತಿಂದುಕೊಂಡೇ ಇದ್ದಳು ನನ್ನ ಮಗಳು. ಆದರೂ ಈ ಕಾಲದ ಹುಡುಗಿಯರಂತಲ್ಲ ಆಕೆ. ಗಂಡ ಹೊಡೆಯಲಿ, ಬಡಿಯಲಿ, ಬೇಕಾದರೆ ಕೊಲ್ಲಲಿ, ಪಿಟ್ಟೆಂದು ಮಾತನಾಡುವ ಸ್ವಭಾವದವಳಲ್ಲ ನನ್ನ ಶಾರದೆ… ಅಂಥ ಮಗಳನ್ನು ಇಟ್ಟುಕೊಂಡಿರಬೇಕಾದರೆ ತಾಯಿತಂದೆಗಳು ಪೂರ್ವಜನ್ಮದಲ್ಲಿ ಎಷ್ಟೋ ಪುಣ್ಯವನ್ನು ಸಂಪಾದನೆ ಮಾಡಿರಬೇಕು.

ತುಂಗಮ್ಮ ಈ ಮಾತಿಗೆ ಮೌನವಾಗಿ ಸಮ್ಮತಿಸಿದಳು. ಪಾರ್ತಮ್ಮ ಮುಂದುವರಿಸಿದಳು.

ಇದಿಷ್ಟು ಅವಳ ಮನೆಯ ಅವಸ್ಥೆ, ನಮ್ಮ ಶಾರದೆ ಬಹಳ ಮಾನಸ್ಥೆ ನೋಡಿ. ‘ಶಾಸ್ತ್ರಿಗಳ ಹಿರಿಯ ಮಗಳು, ನಡೆನುಡಿಯಲ್ಲಿ ಏನಾದರೂ ಒಂದಿಷ್ಟು ಕೋಲ ಕಟ್ಟಿದರೆ ನಮ್ಮ ಕುಲಕ್ಕೆ ಹೆಸರು ಬಂದೀತು’ ಎಂದು ಯಜಮಾನರು ಯಾವಾಗಲೂ ಹೇಳುತ್ತಿದ್ದರು. ಸಾವಿತ್ರೀ ಸತ್ಯವಾನರ ಕಥೆ, ನಳ ದಮಯಂತೀ ಕಥೆ- ಹೀಗಿರುವ ಎಲ್ಲ ಪುಣ್ಯಕಥೆಗಳನ್ನು ಕೇಳಿಯ ದೊಡ್ಡವಳಾದುದು ನಮ್ಮ ಶಾರದೆ. ಅಯ್ಯೋ! ಹಿರಿಯರಲ್ಲಿ ಮಾತಾಡುವುದೆಂದರೆ ಅವಳದೆಷ್ಟು ವಿನಯ! ಅವಳಿಗೆಷ್ಟು ಭಯ! ಎಂತಹ ಸೌಮ್ಯವಾದ ನುಡಿ! ನಮ್ಮ ಹುಡುಗಿಯೆಂದು ಹೊಗಳಿಕೊಳ್ಳುವುದಲ್ಲ. ನಾವು ಹತ್ತು ಮಾತಾಡಿದರೆ ಅವಳು ಒಂದು ಮಾತಾಡುವವಳಲ್ಲ. ಈಗಿನ ಹುಡುಗಿಯರಂತೆ ಕೊಂಕುಕೋರೆಗಳನ್ನು ತಿಳಿಯದವಳು; ‘ಮುಟ್ಟಲು ಬಂದರೆ ಕಚ್ಚಲು ಬರುತ್ತದೆ’ ಎಂದು ಏಡಿಯ ವಿಷಯವಾಗಿ ಒಗಟು ಹೇಳುತ್ತಾರಲ್ಲ! ಹಾಗೆ ಈಗಿನ ಹುಡುಗಿಯರ ಮಾತು. ಒಂದಾಡಿದರೆ ಹತ್ತು ಉತ್ತರ. ನನ್ನ ಶಾರದೆ- ನನ್ನ ಹಿರಿಯ ಮಗಳು- ನನ್ನ ಯಜಮಾನರ ಪ್ರೀತಿಯ ಬೊಂಬೆ- ಆಕೆಗೆ ಈಗಿನ ಸೋಗೇನೂ ತಿಳಿಯದಮ್ಮ. ಇದೇ ಏನೋ! ಆಕೆಯ ಅತ್ತಿಗೆಯಷ್ಟೆ ಬಾಯಿ ಅವಳಿಗಿದ್ದರೆ ಅವಳೂ ಬದುಕುತ್ತಿದ್ದಳೋ ಏನೋ! ಆದರೆ ಅಂಥ ಬದುಕು ಯಾಕೆ ತುಂಗಮ್ಮ? ಹೆಂಗುಸಾಗಿ ಹುಟ್ಟಿದ ಮೇಲೆ ಹೆಂಗುಸಿನಂತೆಯೆ ಇರಬೇಕು. ಹಾಗಿದ್ದರೆ ಸೊಗಸು ಬಜಾರಿಯಂತಿದ್ದರೆ ಏನು ಫಲ! ಅಂತೂ ನನ್ನ ಶಾರದೆ ಹಳೆ ಹೆಂಗುಸರ ಕೂಟದವಳು. ಆಕೆಯನ್ನು ಕೊಟ್ಟುದ್ದು ಮಾತ್ರ ಕೋಗಿಲೆ ಮರಿಯನ್ನು ಕಾಗೆಗಳ ವಂಶಕ್ಕೆ ಧಾರೆಯೆರೆದು ಕೊಟ್ಟಂತಾಯಿತು; ಅಷ್ಟೆ ವ್ಯಥೆ! ಒಳ್ಳೆಯ ಮಾತುಗಳನ್ನೇ ಕೇಳಿ, ಇದ್ದಷ್ಟು ದಿನ ಸುಖವಾಗಿದ್ದು, ನಾಲ್ಕು ದಿನ ಮೊದಲೇ ಸಾಯುತ್ತಿದ್ದರೂ ನನಗೆ ವ್ಯಸನವಾಗುತ್ತಿರಲಿಲ್ಲ! ಆದರೆ ಸತ್ತುದು ಹೀಗೆ ನೋಡು! ನಾಲ್ಕು ಜನರ ಮಾತಿಗೆ ಆಸ್ಪದವಾಯಿತು; ಅಷ್ಟೆ!

ನನ್ನ ಅಳಿಯನ ಮನೆಯಲ್ಲಿ ಯಾವಾಗಲೂ ಜಗಳ ತಪ್ಪುತ್ತಿರಲಿಲ್ಲವೆಂದು ಹೇಳಿದೆನಲ್ಲ. ಅದಕ್ಕೆ ಮುಖ್ಯ ಕಾರಣ ನನ್ನ ಮಗಳನ್ನು ನಾರಾಯಣನು ಮದುವೆಯಾದುದು. ಬೇರೆ ಯಾವ ಬಜಾರಿ ಹೆಂಗುಸನ್ನಾದರೂ ಮದುವೆಯಾಗಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. “ಕೇರೆ ತಿನ್ನುವ ಊರಿಗೆ ಹೋದರೆ ನಡುವಿನ ತುಂಡಿಗೆ ಕೈ ನೀಡಬೇಕು” ಎಂದೊಂದು ಗಾದೆಯಿದೆ. ಮಾನಸ್ಥೆಯಾದ ನನ್ನ ಮಗಳಿಗೆ ಹಾಗೆಲ್ಲ ತಿಳಿಯದು. ತಂದೆ ಕಲಿಸಿದ ಬುದ್ದಿ-ತಾಯಿ ಕಲಿಸಿದ ನಡತೆ- ಇದೆಲ್ಲಿಗಾದರೂ ಬಿಟ್ಟು ಹೋಗುತ್ತದೆಯೇ? ಇಷ್ಟೆಲ್ಲ ಹೇಳಿದುದು ಏಕೆಂದರೆ ನಾರಾಯಣನ ಅಕ್ಕನೊಬ್ಬಳು ತವರು ಮನೆಯಲ್ಲಿದ್ದಾಳೆಂದು ಹೇಳಿದೆನಲ್ಲ? ಅವಳ ವಿಷಯಕ್ಕಾಗಿ ಹೇಳಬೇಕಾಯಿತು ಹೀಗೆ. ಅವಳು ಒಂದು ತರದ ಹೆಂಗುಸು. ಗಂಡನೇ ಅವಳನ್ನು ಬಿಟ್ಟುದೋ ಅವಳೇ ಗಂಡನನ್ನು ಬಿಟ್ಟುದೋ ಗೊತ್ತಿಲ್ಲ. ಅಂತು ಅವಳಿರುವುದು ತಮ್ಮನ ಮನೆಯಲ್ಲಿ.

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

ನಾರಾಯಣನು ಚಿಕ್ಕ ಹುಡುಗನಾಗಿದ್ದಾಗ ಮನೆತುಂಬ ಮಂದಿಗಳಿದ್ದರು. ಆತನ ತಂದೆಯಿದ್ದ; ತಾಯಿಯಿದ್ದಳು; ಎಲ್ಲರೂ ಇದ್ದರು; ಆಗ ಆಕೆಯ ಆಟವೇನೂ ಗೊತ್ತಾಗಲಿಲ್ಲ. ಮತ್ತೆ ಒಬ್ಬೊಬ್ಬರೆ ಹೋದರು- ಎಂದರೆ ತೀರಿ ಹೋದರು. ಮತ್ತೆ ಆಕೆಯ ಆಟವನ್ನು ಹೇಳುವುದೇನು ತುಂಗಮ್ಮ! -ಗ್ರಹಚಾರವಶದಿಂದ ನಮ್ಮ ಹುಡುಗಿಯನ್ನು ನಾರಾಯಣನಿಗೆ ಕೊಟ್ಟು ಮದುವೆಯಾದ ಮೇಲೆ ಹುಚ್ಚು ಕುದುರೆಗೆ ಕಡಿವಾಣ ಕಟ್ಟಿದಂತಾಯಿತು. ಶಾರದೆ ಎಷ್ಟಾದರೂ ಹೊಸಬಳು; ಎಷ್ಟೆಂದರೂ ಮನೆಗೆ ಯಜಮಾನಿ; ಮಾನಸ್ಥೆ; ಕಂಡ ಕಂಡ ಗಂಡುಸರೊಡನೆ ಜಾವ ಹೊತ್ತು ಸರಸಲ್ಲಾಪ ಮಾಡುವವಳಲ್ಲ; ಶಾರದೆಯ ಅತ್ತಿಗೆಗಿದು ತೊಂದರೆಗೆ ಕಾರಣವಾಯಿತು. ಆದುದರಿಂದಲೆ ಮನೆಯೊಳಕ್ಕೆ ಜಗಳಕ್ಕೆ ಪ್ರಾರಂಭವಾಯಿತು ತುಂಗಮ್ಮ. ಹೆಂಗುಸರಿಗೆ ಜಗಳ ಮಾಡುವುದಕ್ಕೆ ಕಲಿಸಬೇಕೇ? ಒಂದು ಮನೆಯಲ್ಲಿ ಒಂದೇ ಹೆಂಗುಸಿದ್ದರೆ ಲೇಸು ನೋಡು. ಇಬ್ಬರು ಹೆಂಗುಸರಿದ್ದರೆ ಮನೆಯೂ ಎರಡಾಗದೆ ಇರದು. ಎರಡಾಗದಿದ್ದರೆ ದಿನಂಪ್ರತಿ ಸಹಸ್ರನಾಮ ತಪ್ಪದು. ನಾರಾಯಣನು ಹೇಗೆಂದರೂ ನನ್ನ ತಮ್ಮ; ಶಾರದೆ ತಮ್ಮನ್ಮ ಹೆಂಡತಿಯೇ ಆದಳಷ್ಟೆ. ತಮ್ಮನೇ ತನಗೆ ಹೆದರಿ ನಡೆಯುತ್ತಾನೆ; ಎಂದಮೇಲೆ ತಮ್ಮನ ಹೆಂಡತಿಯ ಪಾಡೇನು? ಶಾರದೆಯು ಮೊದಮೊದಲು ಅತ್ತಿಗೆ ಏನು ಮಾಡಿದರೂ ಮಾತಾಡುತ್ತಿರಲಿಲ್ಲ; ಇದು ಸ್ವಲ್ಪ ಕಾಲ ನಡೆಯಿತು. ಆದರೆ ಎಷ್ಟು ದಿನ ಸಹಿಸಲಾದೀತು ತುಂಗಮ್ಮ? ಒಳ್ಳೆಯ ಶಾಸ್ತ್ರಿಗಳ ಪರಿಶುದ್ಧವಾದ ಮನೆತನದಲ್ಲಿ ಹುಟ್ಟಿ ನೀತಿಗೆಟ್ಟವಳ ನಡತೆಯನ್ನು ನೋಡಿಕೊಂಡೂ ಆಕೆಯ ಬೈಗಳನ್ನು ಕೇಳಿಕೊಂಡೂ ನನ್ನ ಶಾರದೆ ಹೇಗೆ ಕುಳಿತುಕೊಂಡಾಳು? ನೀನು ಹೇಳು. ಶಾರದೆಯ ಬದಲು ನೀನಾಗಿದ್ದರೆ ಏನು ಮಾಡುತ್ತಿದ್ದೆ? ಅವಳ ಕೆಟ್ಟ ನಡತೆಯನ್ನು ಸಹಿಸಿಕೊಂಡು, ಇಡೀ ವಂಶಕ್ಕೆ, ವಂಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೆ, ಸತ್ತುಹೋದವರಿಗೆ, ಮುಂದೆ ಹುಟ್ಟುವವರಿಗೆ, ಬಂಧುಗಳಿಗೆ, ಬಳಗದವರಿಗೆ, ನೋಡಿದವರಿಗೆ, ಕೇಳಿದವರಿಗೆ ನಾಚಿಕೆಯುಂಟುಮಾಡುವ ನಡತೆಯನ್ನು ನೋಡಿ ನೋಡಿ, ಹೇಗೆ ಸಹಿಸಿಕೊಳ್ಳುತ್ತಿದ್ದೆ ತುಂಗಮ್ಮ? ಒಂದು ದಿನ ಈ ವಿಚಾರ ಶಾರದೆಯ ಗಂಡ ನಾರಾಯಣನ ಕಿವಿಗೂ ಬಿದ್ದಿತು. ಯಾರ ಬಾಯಿಯಿಂದ ಬಿದ್ದುದೆಂದು ನನಗಂತೂ ಗೊತ್ತಿಲ್ಲ. ನಿಮ್ಮಲ್ಲಿ ಸುಳ್ಳು ಹೇಳುತ್ತೇನೆಯೇ? ನನಗೆ ನಿಜವಾಗಿಯೂ ತಿಳಿಯದು. ಒಂದುವೇಳೆ ನನ್ನ ಶಾರದೆಯೆ ಗಂಡನಿಗೆ ಈ ವಿಷಯವನ್ನು ತಿಳಿಸಿದುದೂ ಆಗಿರಬಹುದು. ಗಂಡನಲ್ಲಿ ಹೇಳಿದರೆ ತಪ್ಪೇನು? ಪತಿವ್ರತೆ ಹೇಳದೆ ಹೇಗೆ ಇದ್ದಾಳು?

addittu2

ನಾರಾಯಣನಿಗೆ ಪಾಪ! ಮನೆಯಲ್ಲಿ ಕುಳಿತುಕೊಳ್ಳಲು ಅರೆ ನಿಮಿಷ ಪುರುಸತ್ತಿಲ್ಲ. ಇಂದು ಉಪನಯನ; ನಾಳೆ ಶ್ರಾದ್ಧ; ನಾಡಿದ್ದು ಸೀಮಂತ- ಹೀಗೆ ಶಿಷ್ಯವರ್ಗದ ಮನೆಯಲ್ಲಿಯೇ ಆತನ ಸುಳಿದಾಟ. ನಮ್ಮ ಬೀಗಿರಿದ್ದಾಗ ಕೆಲವಕ್ಕೆ ಅವರು ಹೋಗುತ್ತಿದ್ದರು; ಕೆಲವಕ್ಕೆ ಇವನು ಹೋಗುತ್ತಿದ್ದ. ಈಗ ಭಾರವೆಲ್ಲ ಇವನ ತಲೆಯ ಮೇಲೆ. ಅದರೊಂದಿಗೆ ಈ ಸಮಾಚಾರ. ಕೇಳುವುದೇನು? ಒಣಗಿದ ಮರಕ್ಕೆ ಬೆಂಕಿ ಹತ್ತಿದಂತಾಯಿತು. ನಾರಾಯಣನಿಗೆ ಸಿಟ್ಟು ಬಂತು. ಯಾರ ಮೇಲೆ? ಮೊದಲು ಅಕ್ಕನ ಮೇಲೆ. ಆದರೆ ಅಕ್ಕ ಗಣ್ಯಮಾಡುತ್ತಾಳೆಯೇ? ಯಾರೋ ಒಬ್ಬ ಹಸಿಭಟ್ಟರ ಮನೆಯಲ್ಲಿ ಬೀದಿಬಸವಿಯಂತಿದ್ದ ಹುಡುಗಿಯನ್ನು ತಂದು ಕೊರಳಿಗೆ ಕಟ್ಟಿಕೊಂಡಿದ್ದಿ. ಅವಳಿಂದ ನನಗೆ ಮನುಧರ್ಮಶಾಸ್ತ್ರವನ್ನು ಹೇಳಿಸುತ್ತೀ. ಹೌದೋ ನಾರಾಯಣ! ನೀನು ಹುಟ್ಟುವ ಮುಂಚೆ ನಾನು ಹುಟ್ಟಿದೆನಲ್ಲ? ನಿನಗೆ ಮೀಸೆ ಬರುವ ಮುಂಚೆ ನನಗೆ ಈ ಅವಸ್ಥೆಯಾಗಿತ್ತಲ್ಲ? ನನಗೆಷ್ಟು ಸಲ ಇಂತಹ ಕೆಟ್ಟ ಹೆಸರು ಬಂದಿದೆಯೊ? ನಿನ್ನೊಬ್ಬನ ಕಾಲದಲ್ಲಿ ಅಪಕೀರ್ತಿ ಕೇಳಬೇಕಾಯಿತು.

ನಿನ್ನನ್ನು ಹುಟ್ಟಿದಂದಿನಿಂದ ಸಾಕಿದಾಕೆ ನಾನು. ಗಂಡಸಾದವ ಸ್ವಭಾವವೆ ಇದು. ಮದುವೆಯಾಗುವ ಮುಂಚೆ ಅಕ್ಕ-ತಂಗಿ-ತಾಯಿ-ಅಜ್ಜಿ. ಮತ್ತೆ ಹೆಂಡತಿಯೊಂದೇ ಅವನ ಕುಲದೈವ. ಹೆಂಡತಿಯ ದಾಸನಾಗಿ, ಅವಳಿಗೆ ದಿನಕ್ಕೆ ಬಾರಿ ಸುತ್ತು ಬಂದು ಗಂಟೆಜಾಗಟೆ ಹೊಡೆದುಕೊಂಡು ಹೆಂಡತಿಯ ಕೀರ್ತನೆ ಮಾಡುವ ಹಣೆಬರಹ ಪ್ರತಿಯೊಬ್ಬನ ಹಣೆಯಲ್ಲಿಯೂ ಬರೆದೇ ಇದೆ. ಇದಕ್ಕೆ ನೀನೊಬ್ಬ ಹೊರಗೇ? ನನಗಿಷ್ಟು ಪ್ರಾಯವಾಯಿತು ನಾರಾಯಣ. ನನಗೆ ಕೆಟ್ಟ ಹೆಸರು ಬಂದರೆ ಆ ಹೆಸರು ಕೇಳಿಕೊಂಡು ಬದುಕುವ ಹೆಚ್ಚು ಕಾಲವಿಲ್ಲ. ನಿನ್ನ ಹೆಂಡತಿಯ ಸಮಾಚಾರ ನೋಡಿಕೋ. ಇನ್ನೊಬ್ಬಳ ಮೇಲೆ ಅಪವಾದ ಹೇಳುವ ನಾಲಗೆ ಎಂತಹ ನಾಲಗೆ? ಆ ಹೆಣ್ಣು ಎಂತಹ ಹೆಣ್ಣು! ನೀನೇ ನೋಡಿಕೋ! ನಾನು ಈ ಮನೆಯಿಂದ ಇಂದೇ ಹೊರಡುತ್ತೇನೆ. ನನಗೆ ಕುಷಿ ಬಂದಲ್ಲಿಗೆ ಹೋಗುತ್ತೇನೆ. ನನಗಂತೂ ಕೆಟ್ಟ ಹೆಸರು ಬಂತಲ್ಲ. ಆದರೆ ಈ ಸಾವಿತ್ರಿಯನ್ನು, ಈ ದಮಯಂತಿಯನ್ನು ಕಟ್ಟಿಕೊಂಡು ನೀನು ಗೃಹಕೃತ್ಯ ನಡಿಸಬೇಕಾದರೆ, ಅಪಕೀರ್ತಿ ಕೇಳದಿರಬೇಕಾದರೆ, ನಿನ್ನ ಮನೆ ಸುತ್ತಲೂ ದೊಡ್ಡ ಕೋಟೆ ಹಾಕಿಸಬೇಕು; ಇಲ್ಲವಾದರೆ ಊರಲ್ಲಿರುವ ಗಂಡಸರನ್ನೆಲ್ಲ ಓಡಿಸಬೇಕಾದೀತು… ಎಂದು ಒಮ್ಮೊಮ್ಮೆ ಕಣ್ಣೀರು ಸುರಿಸುತ್ತಾ, ಒಮ್ಮೊಮ್ಮೆ ಕಣ್ಣಿನಿಂದ ಕಿಡಿ ಹಾರಿಸುತ್ತಾ ಹೇಳಿದಳು ಆ ಹಿಡಿಂಬೆ. ನಾನು ಏನು ಹೇಳಲಿ ತುಂಗಮ್ಮ ಮಗಳ ಅವಸ್ಥೆಯನ್ನು! ಅಂದೇ ಅವಳ ಆಯುಸ್ಸಿಗೆ ಯಮನ ಬೀಗಮುದ್ರೆ ಬಿತ್ತು. ಅಂದಿನಿಂದ ಆಕೆಯ ಮೇಲೆ ಗಂಡನಿಗೆ ತೃಪ್ತಿಯಿಲ್ಲ. ಅತ್ತಿಗೆ ಮನೆಯಿಂದ ಎಲ್ಲಿಗಾದರೂ ಹೋಗುತ್ತೇನೆಂದು ಹೇಳಿದುದಲ್ಲದೆ ಹೋಗಲಿಲ್ಲ. ಹೋಗುವುದಕ್ಕಾಗಿ ಹಾಗೆ ಹೇಳಿದುದೂ ಅಲ್ಲ ಆಕೆ. ಒಮ್ಮೆ ತಮ್ಮನನ್ನು ಗದರಿಸುವುದಕ್ಕೆ! ನಾದಿನಿಯ ಮಾನವನ್ನು ಭಂಗ ಮಾಡುವುದಕ್ಕೆ! ನಾದಿನಿಯನ್ನು ತಮ್ಮನಿಂದ ದೂರ ಮಾಡಿಸಿ ತನ್ನ ದಿಗ್ವಿಜಯವನ್ನು ಹೆಚ್ಚಿಸುವುದಕ್ಕೆ! ತನ್ನ ರಥವನ್ನು ಮುಂದೊತ್ತುವುದಕ್ಕೆ!

ನಾರಾಯಣ ಅಕ್ಕನೆಂದು ಸ್ವಲ್ಪ ಹೆದರಿಬಿಟ್ಟ. ಇದಕ್ಕಾಗಿ ನಾರಾಯಣನನ್ನು ದೂರಿ ಫಲವೇನು? ಎಷ್ಟು ಕೆಟ್ಟ ನಡತೆಯವಳಾದರೂ ಅಕ್ಕನ ಮೇಲೆ ಅಪನಂಬಿಕೆಯನ್ನಿಡುವುದು ಹೇಗೆ? ಅವಳ ಮೇಲೆ ಅಪನಂಬಿಕೆಯನ್ನು ಇಡಲು ಸಾಧ್ಯವಿಲ್ಲ ಎಂದಾದ ಮೇಲೆ ಯಾರ ಮೇಲೆ ಅಪನಂಬಿಕೆಯಿಡಬೇಕಾದುದು? ತನ್ನ ಹೆಂಡತಿಯ ಮೇಲೆ! ನನ್ನ ಮುದ್ದು ಮಗಳ ಮೇಲೆ! ಶುದ್ಧ ವೈದಿಕವಂಶದಲ್ಲಿ ಹುಟ್ಟಿದ ಈ ಕಲಿಯುಗದ ಸಾವಿತ್ರಿಯ ಮೇಲೆ! ಏನು ಹೇಳಲಿ ತುಂಗಮ್ಮ ನಮ್ಮ ದುರ್ದೈವವನ್ನು! ಆ ದಿನದ ಮಟ್ಟಿಗೆ ಒಮ್ಮೆಗೆ ಬಂದ ವಿಪತ್ತು ದೂರವಾಯಿತು. ಹೇಗೆಂದರೆ ಹೆಂಡತಿಯನ್ನು ನಾರಾಯಣ ಗದರಿಸಿದ; ಹೊಡೆದ; ಎಷ್ಟು ಹೊಡೆದರೂ ಪ್ರಾಣವೇ ಒಂದು ವೇಳೆ ಹಾರಿಹೋದರೂ ಮಾನಸ್ಥೆಯಾದ ಹೆಂಗುಸು ಮಾಡದಿದ್ದ ಕೆಲಸವನ್ನು ಮಾಡಿದೆನೆಂದು ಹೇಳಿಯಾಳೇ ? ಹೆಂಗುಸಿಗೆ ಪ್ರಾಣ ಹೆಚ್ಚೊ? ಮಾನ ಹೆಚ್ಚೊ? ಆ ದಿನ ನಾರಾಯಣ ಹೊಡೆದುದರಲ್ಲಿ ಶಾರದೆಯ ಹೆಣ ಬೀಳುತ್ತಿತ್ತು. ಆದರೆ ಅಷ್ಟೆಲ್ಲ ಆದಮೇಲೆ ರಾಕ್ಷಸಿ ”ನಾರಾಯಣ! ತಂದ ಹುಡುಗಿಯರನ್ನು ಎಷ್ಟು ಪ್ರೀತಿಯಿಂದ ಸಲಹಿದರೂ ತಂದವರಿಗೆ ಅಪವಾದ ಹೋಗುವುದಿಲ್ಲ. ಸಾಕು; ಇನ್ನು ಹೊಡೆಯಬೇಡ; ನಿನಗೆ ಆಕೆಯ ನಡತೆ ಸರಿಯೆಂದು ತೋರದಿದ್ದರೆ ತವರು ಮನೆಗೆ ಕಳುಹಿಸಿಬಿಡು; ಪ್ರಾಣಕ್ಕೆ ಅಪಾಯ ತರುವುದು ಬೇಡ” -ಎಂದಳು. ಶಾರದೆ ಅತ್ತಿಗೆಯ ಮತ್ತು ಗಂಡನ ಕಾಲಿಗೆ ಬಿದ್ದಳು; ಮಹಿಷಮರ್ದಿನಿ ಕೊನೆಗಂತೂ ಪ್ರಸನ್ನಳಾದಳು; ”ನಾರಾಯಣ, ಈ ಸಾರಿ ಮಾಫಿಯಿರಲಿ!” ಎಂದಳು. ನಾರಾಯಣನಿಗೆ ಅಕ್ಕನ ಆಜ್ಞೆಮೀರಲು ಧೈರ್ಯವೆ ಇಲ್ಲ. ಅದರಲ್ಲಿಯೂ ಒಮ್ಮೆ ತನ್ನ ಹೆಂಡತಿಯ ಮಾತನ್ನು ಕೇಳಿ ಅಕ್ಕನ ಮೇಲೆ ಹಾರಿಬಿದ್ದು ಕೊನೆಗೆ ತನಗೂ ಹೆಂಡತಿಗೂ ಅಪಜಯವಾಗಿರುವಾಗ ಅಕ್ಕ ಹೇಳಿದ ಮಾತು ಪಥ್ಯವಾಗಿರಲಿ; ಅಪಥ್ಯವಾಗಿರಲಿ, ಒಪ್ಪದಿರುವುದು ಹೇಗೆ? ನಾರಾಯಣ ಒಪ್ಪಿದ. ಒಂದು ಸಲ ನನ್ನ ಶಾರದೆಯ ಜೀವವುಳಿಯಿತು. ಆದರೆ ನಾರಾಯಣ ಹೇಳಿದ: “ಅಕ್ಕ! ನಾನೆಷ್ಟಾದರೂ ಒಬ್ಬಂಟಿಗ. ಯಾವಾಗಲೂ ತಿರುಗಾಟದಲ್ಲಿರುತ್ತೇನೆ. ಮನೆಯಲ್ಲಿ ಯಾರೂ ಇಲ್ಲ. ಅವಳ ನಡತೆ ಹೀಗಾಯಿತು. ನೀನೆ ಎಲ್ಲದರ ಜಾಗ್ರತೆ ನೋಡಿಕೊಳ್ಳಬೇಕು.” ತಮ್ಮನ ಈ ಒಂದು ಮಾತೇ ಸಾಕಾಯಿತು ರುದ್ರಮ್ಮನ ಸಿಟ್ಟನ್ನು ಆರಿಸುವುದಕ್ಕೆ (ಹೌದು; ನಾರಾಯಣನ ಅಕ್ಕನ ಹೆಸರು ರುದ್ರಮ್ಮ ಹೇಳುವುದಕ್ಕೆ ಮರೆತಿದ್ದೆ). ಬೇರೆ ಹೆಂಗುಸಾಗಿದ್ದರೆ ತಮ್ಮನಿಂದ ಕೆಟ್ಟ ಮಾತುಗಳನ್ನು ಕೇಳಿ ಒಂದು ನಿಮಿಷ ಕುಳಿತುಕೊಳ್ಳುತ್ತಿರಲಿಲ್ಲ ಆ ಮನೆಯಲ್ಲಿ. ಆದರೆ ಲಜ್ಜಗೇಡಿಗಳ ಸ್ವಭಾವವು ಹೀಗೆಯೆ; ರುದ್ರಮ್ಮ ಅಂದಿನಿಂದ ಮನೆಯ ಬೀಗದ ಕೈಯನ್ನು ಕೈಯಲ್ಲಿ ಹಿಡಿದುಕೊಂಡು ಯಜಮಾನಿಕೆಯನ್ನು ನೋಡುತ್ತಿದ್ದಳು. ನನ್ನ ಮಗಳಿಗೆ ಹೇಳಿದ ಕೆಲಸ; ಹಾಕಿದ ಅನ್ನ; ಗಂಡನ ನಿರ್ಬಂಧ; ಅತ್ತಿಗೆಯ ಆರೋಪಣೆ ಯಾವಾಗಲೂ; ನಾನು ಹೇಳಿದ ಕಥೆ ನಡೆದು ಒಂದೇ ಒಂದು ವರ್ಷ ಇದ್ದುದು ನನ್ನ ಹುಡುಗಿ. ಅದುವರೆಗೂ ಇದೇ ಹಾಡು! ಇದೇ ಗೋಳು! ಗಂಡನಿಗೆ ಸಂದೇಹ ಆಕೆಯಲ್ಲಿ!

ಯಾರೇನು ಮಾಡುವುದು ತುಂಗಮ್ಮ? ದೇವರು ಒಮ್ಮೊಮ್ಮೆ ಬಡವರ ಕೈಗೂ ತಿಂಡಿತಿನಿಸುಗಳನ್ನು ಕೊಡುತ್ತಾನೆ. ಆದರೆ ಅದನ್ನು ತಿನ್ನಬೇಕಾದರೆ ಭಾಗ್ಯ ಬೇಕಷ್ಟೆ! ಅದನ್ನು ಕೊಡುವುದಿಲ್ಲ. ಆದುದರಿಂದ ಮಕ್ಕಳು ತಿಂಡಿತಿನಿಸುಗಳನ್ನು ನಮಗೆ ಅಳುಪಿಸಿ ತಿನ್ನುತ್ತಾವಲ್ಲ! ಹಾಗಾಗುತ್ತದೆ ನಮ್ಮ ಪಾಡು!

ಇಷ್ಟು ಕಷ್ಟಗಳಿದ್ದರೂ ಒಂದು ದಿನ ನಮ್ಮ ಶಾರದೆ ತವರುಮನೆಗೆ ಬರಬೇಕೆಂಬ ಆಸೆಯನ್ನು ತೋರಿಸಲಿಲ್ಲ. ಅವರು ಕಳುಹಿಸಲೂ ಇಲ್ಲವೆನ್ನಿ; ಅವರಾಗಿ ಕಳುಹಿಸಿದ್ದರೆ ಬರುತ್ತಿದ್ದಳೋ ಏನೊ! ಅದನ್ನೆಣಿಸಿ ಏನು ಪ್ರಯೋಜನ? ಯಜಮಾನರು ಒಮ್ಮೊಮ್ಮೆ ಮಗಳ ಮನೆಗೆ ಹೋಗುವುದಿತ್ತು. ಆಕೆಯ ಮೈಯಲ್ಲಿ ಎದ್ದ ಪೆಟ್ಟಿನ ಗಾಯಗಳನ್ನು ನೋಡಿ ಕಣ್ಣೀರು ಸುರಿಸಿಕೊಂಡು ಬರುವುದೂ ಇತ್ತು. ಆದರೆ ತವರುಮನೆಗೆ ಬರಲು ನಮ್ಮ ಶಾರದೆ ಎಂದೂ ಒಪ್ಪುತ್ತಿರಲಿಲ್ಲ. ಯಜಮಾನರು ಕೇಳುವಾಗ “ಇಲ್ಲಪ್ಪ! ಈಗ ಬರುವುದಿಲ್ಲ” ಎನ್ನುತ್ತಿದ್ದಳು. ತವರುಮನೆಗೆ ಬಂದರೇನಾದೀತೆಂದು ಅವಳಿಗೇ ಗೊತ್ತು. ಯಜಮಾನರು ಕೇಳಿದ್ದರೆ ಕರೆದುಕೊಂಡು ಹೋಗಲು ಅಡ್ಡಿಯಿಲ್ಲ ಎಂದು ನಾರಾಯಣನೂ ಹೇಳುತ್ತಿದ್ದ. ಆ ಲಂಕಿಣಿಯೂ ಹೇಳುತ್ತಿದ್ದಳು. ಆದರೆ ಶಾರದೆಯೇ ”ಬರುವುದಿಲ್ಲ” ಎನ್ನುತ್ತಿದ್ದಳು.

ಈ ಮಧ್ಯದಲ್ಲಿ ಶಾರದೆಗೆ ಮುಟ್ಟು ಕಟ್ಟಾಯಿತು. ಆರೇಳು ತಿಂಗಳ ಬಸಿರಿಯಾಗಿದ್ದಳು. ಒಂದು ದಿನ ನಾರಾಯಣನೆ ಮನೆಗೆ ಬಂದು ಮಾವನವರೇ, ಸೀಮಂತ ಗೀಮಂತ ಮಾಡಲು ನಮ್ಮ ಕೈಯಲ್ಲಿ ಕಾಸಿಲ್ಲ; ನೀವು ಬಂದು ಒಮ್ಮೆ ಆಕೆಯನ್ನಿಲ್ಲಿಗೆ ಕರೆದುಕೊಂಡು ಬನ್ನಿ; ನಾಡಿದು ತಂದೆಯ ಶ್ರಾದ್ಧ; ಆ ದಿನ ಬಂದರೆ ಮರುದಿನವೇ ಕರೆದುಕೊಂಡು ಬರಬಹುದು-ಎಂದಿದ್ದ. ನನ್ನ ಸಂತೋಷಕ್ಕೆ ಕಡಿಮೆಯೇ ಇಲ್ಲ. ಶಾರದೆಯನ್ನು ನೋಡದೇ ವರ್ಷವಾಗಿತ್ತು… ಹಾ, ಇಂದೀಗ ಶಾರದೆ ಹೇಗಿರಬಹುದು? ಗೊನೆ ಹಾಕಲಿರುವ ಬಾಳೆಯಂತೆ, ಮೈತುಂಬಿ ಕಳೆಯೇರಿ ಶೋಭಿಸುತ್ತಿರಬಹುದು. ಅಂತಹ ನನ್ನ ಶಾರದೆಯನ್ನು ನೋಡುವ ಕಣ್ಣುಗಳು ಪುಣ್ಯ ಮಾಡಿದ್ದಿರಬೇಕು ಎಂದು ಮನಸ್ಸಿನಲ್ಲಿ ಎಂದುಕೊಂಡೆ. “ನಾರಾಯಣ! ಹುಡುಗಿಯನ್ನು ಕರೆತರಲು ನಾನೇ ಬರುತ್ತೇನೆ” ಎಂದು ಸಂತೋಷದಿಂದ ನುಡಿದೆ. ಮಂಗಳ ವಾರ್ತೆಯನ್ನು ತಂದಿದ್ದ ಅಳಿಯನಿಗೆ ಸಮ್ಮಾನಮಾಡಿ ಕಳುಹಿಕೊಟ್ಟೆ,

ಶ್ರಾದ್ಧದ ದಿನ ಬಂತೆನ್ನಿ; ನಾನು ನಿರೀಕ್ಷಿಸಿದಷ್ಟು ಬೇಗನೆ ಬರಲಿಲ್ಲ. ಹೇಗೆ ಹೇಗೋ ಮೆಲ್ಲ ಮೆಲ್ಲನೆ ಬಂತು. ಒಬ್ಬಳು ಕೆಲಸದ ಹೆಂಗುಸನ್ನು ಕರೆದುಕೊಂಡು ನಾನೇ ಶ್ರಾದ್ಧದ ದಿನ ಅಲ್ಲಿಗೆ ಹೋದೆ. ಹೋಗಿ ನೋಡುತ್ತೇನೆ ಹುಡುಗಿಯನ್ನು! ನನಗೆ ಪರಿಚಯವಾದರೂ ಫಕ್ಕನೆ ಆಗಬೇಕೆ? ದೇಹವೆಷ್ಟು ಕಂದಿಹೋದರೂ ನಮ್ಮ ಶಾರದೆಯ ಮುಖ ಬೆಳ್ಳಿದೇವರ ಹಾಗೆ ನೋಡು! ಅದರಿಂದಲೆ ಇವಳು ನನ್ನ ಶಾರದೆ ಹೌದು ಎಂದು ಗುರುತು ಸಿಕ್ಕಿತು. ಶಾರದೆ ನನ್ನನ್ನು ಕಂಡು ಅತ್ತಳು; ‘ಇನ್ನೂ ಬದುಕಿದ್ದೇನೆ ತಾಯಿ’ ಎಂದಳು. ನಾನು ಮಕ್ಕಳಂತೆ ಅತ್ತೆ. ಆದರೂ ಹುಡುಗಿಯನ್ನು ಕರೆದುಕೊಂಡು ಬರುವ ಸಂತೋಷದಲ್ಲಿ ಎಲ್ಲ ಮರೆತುಹೋಯಿತು. ಅವಳ ಮೈತುಂಬ ಗಾಯಗಳಿದ್ದುವು; ಕಣ್ಣು ಹೂತು ಹೋದಂತಿತ್ತು. ದೇಹ ಒಣಗಿದ ಬಾಳೆದಿಂಡಿಗಿಂತಲೂ ಸಪುರವಾಗಿತ್ತು. ಆದರೂ ಮನಸ್ಸಿನೊಳಗೇ ಸಮಾಧಾನ ಮಾಡಿಕೊಂಡೆ. ”ಇದುವರೆಗೆ ಪಾಪ! ಶಾರದೆಗೆ ಕಷ್ಟ. ನಾರಾಯಣನೂ ಹುಡುಗನಾಗಿದ್ದ. ಶಾರದೆ ದೇವರ ದಯೆಯಿಂದ ಹೆತ್ತಮೇಲೆ- ನಾರಾಯಣನು ಮಗುವಿನ ತಂದೆಯಾಗುತ್ತಾರೆ. ಮಗುವಿನ ಪ್ರೀತಿಯಿಂದಾದರೂ ತಾಯಿಯನ್ನು ಪ್ರೀತಿಸದಿರುವನೇ? ಶಾರದೆಯ ಕಷ್ಟವನ್ನು ತಪ್ಪಿಸಬೇಕೆಂದೇ ದೇವರು ಆಕೆಗೆ ಈ ವರವನ್ನು ದಯಪಾಲಿಸಿದುದು” ಎಂದುಕೊಂಡೆ!

ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ

ಪುರೋಹಿತರ ಮನೆಗಳಲ್ಲಿ ಶ್ರಾದ್ಧದ ಊಟ ಯಾವಾಗಲೂ ಬೇಗನೆ. ಅಲ್ಲಿಯೂ ಹಾಗೆ; ಸೂರ್ಯದೇವರು ನಡುನೆತ್ತಿಗೆ ಮುಟ್ಟಬೇಕಾದರೆ ಎಲೆ ಹಾಕಿತ್ತು. ಹೊತ್ತು ಅಂಗಳಕ್ಕಿಳಿಯಬೇಕಾದರೆ ಊಟ ಆಗಿತ್ತು. ನನಗೇಕೋ ತುಂಗಮ್ಮ! ಯಾರಲ್ಲಿ ಮನಸ್ಸು ಎರಕಹೋಯಿದಂತೆ ಇದೆಯೋ ಅವರ ಮನೆಯಲ್ಲಿ ಯಾವ ಕೆಲಸವನ್ನೂ ಮಾಡಬೇಕೆಂದು ತೋರಿತು. ನಾನು ಇಲ್ಲಿ ಕೆಲಸ ಮಾಡುತ್ತಿರುವುದು ನಿಮಗೇ ಕಾಣುತ್ತಿರುವಾಗ ಅದಕ್ಕೆ ಬೇರೆ ಸಾಕ್ಷಿಯೇಕೆ? ಆದರೆ ಶಾರದೆಯ ಮನೆಯಲ್ಲಿ ಹಾಗಲ್ಲ. ಆ ರುದ್ರಮ್ಮನನ್ನು ಕಂಡರೆ ನನಗಾಗದು, ಅಳಿಯನಲ್ಲಿಯೂ ನನಗಷ್ಟು ಮನಸ್ಸಮಾಧಾನಿಲ್ಲ. ಅವನು ಅಕ್ಕನ ದಾಸ. ಅಂಥವನಲ್ಲಿ ಆಡುವುದೇನು? ಮನೆಗೆ ಬಂದರೆ ಸಮ್ಮಾನ ಮಾಡಿ ಕಳುಹಿಸಿದರಾಯಿತು. ಅಳಿಯನಾದುದಕ್ಕೆ ಮರ್ಯಾದೆ ಇಷ್ಟೆ. ಇದಕ್ಕಿಂತ ಹೆಚ್ಚಿನದೇನು ಬೇಕು? ಮನಸ್ಸು ಬೇಸರದಿಂದ ಯಾವುದರಲ್ಲಿಯೂ ಸೇರದೆ ಪ್ರತ್ಯೇಕವಾಗಿದ್ದುದರಿಂದಲೂ, ಊಟ ಮಾಡಿ ಆಯಾಸವಾದುದರಿಂದಲೂ, ಶಾರದೆಯ ಕೈಯಲ್ಲಿ ಒಂದು ಚಾಪೆಯನ್ನು ಕೇಳಿ ನಾನು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆ.

ಕತೆ೧ 1

ನಾನು ಮಲಗಿ ಸ್ವಲ್ಪ ಸಮಯವಾದ ಮೇಲೆ, ಶಾರದೆಯೂ ರುದ್ರಮ್ಮನೂ ಊಟ ತೀರಿಸಿಕೊಂಡು ಅಡಿಗೆಮನೆಯನ್ನು ಪ್ರವೇಶಿಸಿದರೆಂದು ತೋರುತ್ತದೆ. ಅಡಿಗೆಮನೆಯಲ್ಲಿ ಕೆಲಸಗಳೆಲ್ಲ ಮುಗಿದಿರಲಿಲ್ಲ. ಒಲೆಯಲ್ಲಿ ಒಂದೆರಡು ಬೆಂಕಿಕೊಳ್ಳಿಗಳಿದ್ದುವು. ಬಳಿಯಲ್ಲಿಯ ಉರುಳಿಯೊಂದಿತ್ತು. ಅಲ್ಲಿ ಅದ್ದಿಟ್ಟು ಮಾಡುವ ಹಿಟ್ಟೂ ಇತ್ತು. ರುದ್ರಮ್ಮನ ದೃಷ್ಟಿ ಅದರ ಮೇಲೆ ಬಿತ್ತು. “ಏನು ಶಾರದೆ ಇದು?” ಎಂದು ರುದ್ರಮ್ಮ ದಟ್ಟಿಸುವ ಸ್ವರದಿಂದ ಕೇಳಿದಳು. “ಏನೂ ಇಲ್ಲ ಅತ್ತಿಗೆ ಅದ್ದಿಟ್ಟು ಮಾಡಿ ತಿನ್ನಬೇಕೆಂಬ ಬಯಕೆಯಾಯಿತು” ಎಂದು ನಡುಗುವ ಸ್ವರದಲ್ಲಿ ನನ್ನ ಬಸಿರ ಮಗಳು ಉತ್ತರಕೊಟ್ಟಳು. ”ಇದು ಬಡವರ ಮನೆ ತಿಳಿಯಿತೇ! ನಿನ್ನ ಅದ್ದಿಟ್ಟು ತಿನ್ನುವ ಬಯಕೆಯನ್ನು ತೀರಿಸುವಾಗ ನಮ್ಮ ಮನೆ ಅಡಿಮೇಲಾದೀತು!” ಎಂದು ಗರ್ಜನೆ ಕೇಳಿತು, ”ತಪ್ಪಾಯಿತು; ಹೇಗೂ ಇಷ್ಟು ಅಕ್ಕಿಯನ್ನು ಹಿಟ್ಟು ಮಾಡಿ ಆಯಿತು. ಅದನ್ನು ಹೊಯಿದು ಬಿಡುತ್ತೇನೆ” ಎಂದು ಶಾರದೆ ನುಡಿದಳು.

ಇಷ್ಟಾಗುವಾಗ, ನಾನೊಬ್ಬಳು ಬಂದಿದ್ದೇನೆಂಬುದನ್ನು ತಿಳಿದು, ನನ್ನ ಮುಂದೆ ಮಗಳ ಸಹಸ್ರ ನಾಮವನ್ನು ಮಾಡಿಸಬೇಕೆಂಬ ಸದುದ್ದೇಶದಿಂದಲೋ ಏನೋ, ರುದ್ರಮ್ಮ, ಕೋರ್ಟಿನ ಮುಂದೆ ನಿಂತು ನಂಬ್ರ ಮಾಡುವ ವಕೀಲರಂತೆ, ಶಾರದೆಯ ಮೇಲೆ ಹೀಗೆ ಬೈಗಳ ಸುರಿಮಳೆಯನ್ನು ಸುರಿಸಿದಳು. ”ದೊಡ್ಡವರ ಹುಡುಗಿಯನ್ನು ತರಬೇಡವೆಂದು ತಂದೆಯ ಕಾಲು ಮಾತ್ರ ಹಿಡಿದಿರಲಿಲ್ಲ. ಆದರೂ ತಂದರು. ಅದರ ಫಲ ಇದು. ನಾರಾಯಣನು ಮನೆಮನೆಗೆ ಹೋಗಿ ಕಡಿ ಅಕ್ಕಿ, ಕೊಳೆತ ತೆಂಗಿನಕಾಯಿಗಳನ್ನು ಬಹುಕಷ್ಟದಿಂದ ತಂದುಹಾಕಿದರೆ ಅದೆಲ್ಲಾ ಇವಳೊಬ್ಬಳ ಅದ್ದಿಟ್ಟಿಗೆ ಸಾಕಾಗುವುದಿಲ್ಲ. ತನ್ನ ಹೆಂಡತಿಯೆಂದರೆ ಗುಣದಲ್ಲಿ ಸೀತೆ, ಸೌಂದರ್ಯದಲ್ಲಿ ರಂಭೆ, ಎಂದು ಭಾವಿಸುತ್ತಾನೆ ಈ ಹೆಂಡತಿಯ ದಾಸ. ಅವಳು ಬಹಳ ಮಾನಸ್ಥೆ! ಕುಲೀನರ ಮಗಳು. ನಮಗೆ ಮಾತ್ರ ಕುಲವಿಲ್ಲ. ಆಕೆಯ ತಂದೆ ದೊಡ್ಡ ಶಾಸ್ತ್ರಿಗಳು! ಶಾಸ್ತ್ರಿಗಳ ಮಗಳು ಅನ್ಯಾಯ ಮಾಡಿದರೆ ದೂರು ಕೇಳಬೇಕು ನನ್ನಂಥ ಪಾಪಿಗಳು! ಒಂದು ಮಾತು ಹೇಳಿ ಎರಡನೆಯ ಮಾತನ್ನು ಹೇಳಬೇಕಾದರೆ ಕಣ್ಣೀರು! ಈ ಕಣ್ಣೀರು ಎಷ್ಟು ಬೇಗನೇ ಬರುವುದೋ ಅಷ್ಟೇ ಬೇಗನೆ-ನಾನು ಹೇಳುವುದಿಲ್ಲ-ಇನ್ನೊಂದು ಬುದ್ಧಿಯೂ ಬರುತ್ತದೆ. ಸಣ್ಣ ಪ್ರಾಯದಲ್ಲಿ ಬೀದಿಬಸವಿಗಳಂತೆ ತಿರುಗಿದವುಗಳಿಗೆ ಏನು ಬುದ್ದಿ ಬಂದೀತು? ಹುಡುಗಿಯ ತಂದೆ, ಎರಡು ಅಂಗೈಯಗಲದ ಷಟ್ಟುಚ್ಛ ಹಾಕುತ್ತಾನೆ. ಬಾವಿ ಹಗ್ಗದಷ್ಟು ತೋರದ ಯಜ್ಯೋಪವೀತ ಹಾಕುತ್ತಾನೆ. ಮೋರೆಯಲ್ಲಿ ಸ್ಥಳವಿರುವಷ್ಟು ಅಕ್ಷತೆ ಹಾಕುತ್ತಾನೆ- ಎಂದು ಗುಣಸ್ವಭಾವಗಳನ್ನು ನೋಡದೆ ಹುಡುಗಿಯನ್ನು ತಂದರೆ ಆಗುವ ಅವಸ್ಥೆಯಿದು! ಕೈಹಿಡಿದವನಿಗೊಂದು ಹೆಸರು. ಅವನ ಬಂಧುಬಳಗಕ್ಕೊಂದು ಹೆಸರು…” ಹೀಗೆಯೇ ಆಕೆಯ ಮಾತು ‘ಸಟಪಟ’ ಎಂದು ಕಲ್ಲುರುಳಿದಂತೆ ಬೀಳುತ್ತಿತ್ತು. ರುದ್ರಮ್ಮ ಹೀಗೆಲ್ಲವನ್ನೂ ಒಂದೇ ಸಲ ಹೇಳಿ ಮುಗಿಸಿ ಬಿಟ್ಟುದೇಕೆಂದು ನನಗೆ ತಿಳಿಯಲಿಲ್ಲ. ಅಥವಾ ಎಲ್ಲವನ್ನೂ ನನಗೆ ತಿಳಿಸುವುದಕ್ಕೆ ಹೇಳಿದುದಾಗಿರಬಹುದು. ಬರಿಯ ಅದ್ದಿಟ್ಟು ಒಂದರ ವಿಷಯವಾಗಿ ಬೈಯಬೇಕಾಗಿದ್ದರೆ ಇಷ್ಟೆಲ್ಲಾ ಪುರಾಣವನ್ನು ಹೇಳಬೇಕಾಗಿರಲಿಲ್ಲ. ಅದ್ದಿಟ್ಟೊಂದನ್ನು ನೆವಮಾಡಿ ನನ್ನ ಮಗಳ ನಡತೆ ಹಾಳು ಎಂದು ನನ್ನ ಮುಂದೆಯೇ ರುಜುಪಡಿಸುವುದಕ್ಕಾಗಿ ಆ ಮೂಲಕ ತನ್ನ ಗುಣಕ್ಕೆ ಒಳ್ಳೆಯ ಬಣ್ಣವನ್ನು ಬಳಿದು ತಾನು ದೊಡ್ಡ ಸನ್ಯಾಸಿಯೆಂದು ತೋರಿಸುವುದಕ್ಕಾಗಿ ಅವಳು ಹೀಗೆ ಬೈದುದಿರಬೇಕು. ಹೇಗೂ ಇರಲಿ; ನನ್ನಿಂದೇನು ಮಾಡಲಾಗುತ್ತದೆ? ಗಂಡನ ಮನೆ; ಗಂಡನಿದ್ದಾನೆ! ”ಅಯ್ಯೋ, ನಾನೇಕೆ ಇಲ್ಲಿಗೆ ಬಂದೆ?” ಎಂದುಕೊಂಡು ಮಲಗಿದ್ದಲ್ಲೇ ಅತ್ತೆ. ಅತ್ತಲ್ಲೇ ಮಲಗಿದೆ.

ಇನ್ನು ಮುಂದಿನ ಕಥೆಯನ್ನು ಕೇಳುವಾಗ ತುಂಗಮ್ಮ, ರೋಮರೋಮಗಳೂ ನೆಟ್ಟಗೆ ನಿಲ್ಲುತ್ತವೆ. ಇಂತಹ ಕತೆಯನ್ನು ಕೇಳಿ ರಾತ್ರಿ ಮಲಗಿದರೆ ಸ್ವಪ್ನದಲ್ಲಿ ಭೂತಪಿಶಾಚಿಗಳ ದರ್ಶನವಾದೀತು. ಪ್ರಾಣ ಹೋಗುವಷ್ಟು ಭಯವಾದೀತು. ಲೋಕದಲ್ಲಿ ಹುಟ್ಟಿ ಮನುಷ್ಯರೆನಿಸಿಕೊಳ್ಳುವವರಾರೂ ಇಂತಹ ಕೆಲಸ ಮಾಡಲಾರರು. ಕಾಡಿನ ಜಂತುಗಳಾದರೂ ಆರ್ತ ಪ್ರಾಣಿಗಳನ್ನು ಕನಿಕರದಿಂದ ನೋಡುತ್ತವೆ. ಹೀಗೆ ಮಾಡುವವರಿಗೆ ಯಾವ ನರಕವನ್ನು ದೇವರು ಕಟ್ಟಿಸಿ ಇಟ್ಟಿದ್ದಾನೋ? ನಾನು ಇದನ್ನೆಲ್ಲಾ ಕಂಡವಳು ಕೇಳುವ ನಿನಗೇ ವ್ಯಸನವಾಗುತ್ತದೆ ಎಂದಮೇಲೆ ಕಂಡ ನನಗೇನಾಗಿರಬೇಕು? ಪ್ರಾಣ ಹೋಗದೆ ನಾನು ಆಗ ಹೇಗೆ ಬದುಕಿದೆನೋ ತಿಳಿಯದು. ಅದರಲ್ಲಿಯೂ ಹೆತ್ತ ತಾಯಿ. ಇತರರಿಗೆ ನನ್ನ ಮಗಳು ಕಸಕಡ್ಡಿಯಂತೆ ಒಡೆದು ಬಿಸಾಡುವ ವಸ್ತುವಾಗಿರಬಹುದು. ನನಗಾದರೆ ಹಾಗಲ್ಲ ತುಂಗಮ್ಮ. ಹತ್ತು ತಿಂಗಳು ಈ ಹೊಟ್ಟೆಯಲ್ಲೇ ಹೊತ್ತಿದ್ದೇನೆ. ಹದಿಮೂರು ವರ್ಷ ಈ ಕೈಗಳಿಂದಲೇ ಸಾಕಿದ್ದೇನೆ. ಒಂದು ಕೆಟ್ಟ ಮಾತನ್ನು ಕೇಳಿದವಳಲ್ಲ ನನ್ನ ಮಗಳು. ಅಂತಹ ಬಡ ಕೂಸಿಗೆ ದೇವರು ಎಂಥ ಗಂಡನನ್ನು ಕೊಟ್ಟ! ಎಂಥ ಮನೆಯನ್ನು ಕೊಟ್ಟ! ಹೇಳಿಬಿಡುತ್ತೇನೆ. ಉಳಿದ ಕತೆಯನ್ನು ಬೇಗನೆ ಮುಗಿಸಿಬಿಡುತ್ತೇನೆ.

ರುದ್ರಮ್ಮ ಹೀಗೆ ಬಾಯಿಗೆ ಬಂದಂತಹ ಕೆಟ್ಟ ಮಾತುಗಳನ್ನು ಆಡಿದ್ದೇ ತಡ, ಎಲ್ಲಿಯೋ ಇದ್ದ ನಾರಾಯಣ, ಬೇನೆಯಾದ ಸರ್ಪದಂತೆ ಎಲ್ಲಿಂದಲೋ ಓಡಿಬಂದು ತನ್ನ ಮುಷ್ಟಿಯಿಂದ ಬಲವಾದ ಏಟೊಂದನ್ನು ಕೊಟ್ಟ. ಅದರ ಶಬ್ದದ ನೆನಪಾದರೆ ಈಗಲೂ ಮೈ ಝಮ್ಮೆನ್ನುತ್ತದೆ. ಎಂತಹ ಶಬ್ದವೆಂದು ಭಾವಿಸಿರುವೆ? ಅಯ್ಯೋ! ಒಂದು ದೊಡ್ಡ ಬಾಳೆಗೆ ದೊಡ್ಡ ದೊಣ್ಣೆಯಿಂದ ಬಲವಾಗಿ ಹೊಡೆದರೆ ಎಂತಹ ಶಬ್ದವಾದೀತೋ ಅಂತಹ ಶಬ್ದ. ‘ಅಯ್ಯೋ ನಾನು ಸತ್ತೆ!’ ಎಂಬ ಕರ್ಣಕಠೋರ ಶಬ್ದ ಕೇಳಿಬಂತು. ಅನಂತರ ದೊಪ್ಪನೆ ಬಿದ್ದ ಶಬ್ದ. ಬಿದ್ದುದು ಯಾರು? ನನ್ನ ಮಗಳು! ಹದಿನೆಂಟು ವರ್ಷದಲ್ಲಿ ಸಾಯಬೇಕೆಂದು ಬ್ರಹ್ಮನ ಅಪ್ಪಣೆ ಪಡೆದ ನನ್ನ ಮಗಳು! ನಾನು ಹತ್ತು ತಿಂಗಳು ಹೊಟ್ಟೆಯೊಳಗೆ ಹೊತ್ತು ಹದಿಮೂರು ವರ್ಷ ಸಾಕಿದ ನನ್ನ ಮುದ್ದು ಮಗಳು! ನನ್ನ ಪ್ರಾಣದ ಮಗಳು! ನನ್ನ ಸರ್ವಸ್ವವಾಗಿದ್ದ ಮಗಳು!

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ನಾನು ಮಲಗಿದಲ್ಲಿಂದ ಎದ್ದು ಥಟ್ಟನೆ ಅಲ್ಲಿಗೆ ಓಡುತ್ತೇನೆ. ನೋಡುವುದೇನನ್ನು? ತುಂಬಿದ ಗರ್ಭದ ಆ ಹುಡುಗಿ, ನೆಲದಲ್ಲಿ ಬಿದ್ದಿದ್ದಾಳೆ. ನಾರಾಯಣ ಕಾಲಿನಿಂದ ಒದೆಯುತ್ತಾನೆ. ರುದ್ರಮ್ಮ ಕಾಣುವುದಿಲ್ಲ. ಅಯ್ಯೋ ನನ್ನ ಮಗಳನ್ನು ಕೊಲ್ಲುವೆಯಾ ಎಂದು ಅಳಿಯನ ಕಾಲಿಗೆ ಬಿದ್ದೆ! ಆತನು ಏನು ಭಾವಿಸಿದ್ದನೋ ಗೊತ್ತಿಲ್ಲ. ಅಲ್ಲಿಂದೆದ್ದು ಹೋದ. ಹೆಂಡತಿ ಸತ್ತಳೋ ಬದುಕಿದಳೋ ನೋಡಲಿಲ್ಲ. ನನ್ನ ಕರುಳಲ್ಲವೆ? ನಾನು ಆಕೆಯನ್ನು ಹಿಡಿದೆತ್ತಿದೆ; ಮುಖಕ್ಕೆ ನೀರು ಚಿಮುಕಿಸಿದೆ. ಮುಖದಲ್ಲಿ ಜೀವಕಳೆಯೇ ಇಲ್ಲದಂತಿತ್ತು. ಆದರೂ ಅಯ್ಯೋ! ಅಯ್ಯೋ! ಎಂದು ನರಳುತ್ತಿದ್ದಳು. ನೋಡು, ಇಷ್ಟು ಪ್ರೀತಿಯಿಂದ, ಇಷ್ಟು ಕೊಂಡಾಟದಿಂದ ಸಾಕಿ ಸಲಹಿದ ಹುಡುಗಿಯನ್ನು, ಯಾರೋ ಒಬ್ಬ ಪಟ್ಟಿಂಗನಿಗೆ ಹೌದು, ಹಾಗೆಯೇ ಹೇಳಬೇಕು; ಇಲ್ಲದಿದ್ದರೆ ಹೀಗೆ ರಾಕ್ಷಸರಂತೆ ವರ್ತಿಸುತ್ತಿದ್ದ ಕೈಹಿಡಿದ ಗಂಡ- ಚೆಂಡಿನಂತೆ ಹೊಡೆಯುವುದಕ್ಕೆ ಕೊಟ್ಟೆ. ಹೆಂಗುಸಾಗಿ ಹುಟ್ಟಿದವಳ ಅವಸ್ಥೆ ಹೀಗೆಯೆ ಅಮ್ಮ. ಹಣವಿರುವವರ ಪಾಡು ಬೇಕೆ! ಹೆಂಡತಿಯ ತಾಯ್ತಂದೆಗಳಿಂದ ಹಣ ಸುಲಿಯಬಹುದೆಂದು, ಕರೆವ ದನವನ್ನು ಸಾಕುವಂತೆ, ಹುಡುಗಿಯನ್ನು ಸಾಕುತ್ತಾರೆ. ಇಲ್ಲವಾದರೆ ಇದೇ ಗತಿ ಹುಡುಗಿಗೆ! ಗಂಡನೆನಿಸಿ ಎರಡು ದಿನವಾದರೂ ಸುಖದಿಂದ ಸಂಸಾರ ಮಾಡದೆ, ಬೈಗಳಿಗೂ, ಪೆಟ್ಟುಗಳಿಗೂ, ಒದೆತಕ್ಕೂ ಸಿಕ್ಕಿ ಪ್ರಾಣ ಬಿಡುವುದೊಂದೇ ಗತಿ ಹುಡುಗಿಗೆ- ಇಷ್ಟು ಹೇಳುವಾಗ ಪಾರ್ತಮ್ಮ ಗೊಳ್ಳೆಂದು ಅತ್ತಳು.

ಇನ್ನೇನು ಹೇಳುವುದು ತುಂಗಮ್ಮ! ಸಾಯಲು ಬಿದ್ದವರಿಗೆ ಔಷಧೋಪಚಾರವಾಗದಿರುವುದೇ! ಒದೆದು ಉರುಳಿಸಿದ ನಾರಾಯಣನೇ, ಅದಕ್ಕೆಲ್ಲ ಕಾರಣಭೂತಳಾದ ರುದ್ರಮ್ಮನೆ ಬಂದು ಬೇಕಾದ ಉಪಚಾರ ಮಾಡಿದರು. “ನೆಲಕ್ಕೆ ಬಿದ್ದು ಪೆಟ್ಟಾಗಿದೆ; ಬಹಳ ಪೆಟ್ಟಾಗಿದೆ” ಎಂದು ತಮ್ಮ ತಪ್ಪನ್ನು ಮರೆಯಿಸುವುದಕ್ಕೆ ಪ್ರಯತ್ನಪಟ್ಟರು. ನಾನು ಆಕೆಯ ಕೊನೆಯ ಸೇವೆಯನ್ನು ಕೂಡಿದಷ್ಟು ಮಾಡಿದೆ. ಬಹು ಸಂತೋಷದಿಂದ ಧಾರೆಯೆರೆದು ಕೊಟ್ಟ ಮಗಳನ್ನು ಪರಲೋಕಕ್ಕೆ ಕಳುಹಿಸಿಕೊಡುವಾಗಲೂ ಇದ್ದೆ. ಊರಲ್ಲಿ ಒಬ್ಬರು ಪಂಡಿತರು ಇದ್ದರು. ಅವರೇನೋ ಔಷದೋಪಚಾರ ಮಾಡಿದರು. ಬಸಿರಿಯಲ್ಲವೇ? ದೇವರಂತೆ ಪೂಜಿಸಬೇಕಾದ ಪ್ರಾಣಿಯದು. ಇಂತಹ ಹಿಂಸೆಯನ್ನು ಸಹಿಸಿ ಬದುಕುವುದಾದರೂ ಹೇಗೆ? ಆ ದಿನವೇ ಆಕೆಗೆ ಪ್ರಸವವೇದನೆ. ಮೂರನೆಯ ದಿನ ಕಾಷ್ಠದ ಹಾಸಿಗೆಯನ್ನೇರಿದಳು. ನನ್ನ ಮುದ್ದು ಶಾರದೆ. ಆಕೆಗೆ ಇನ್ನೊಂದು ಜನ್ಮದಲ್ಲಿಯಾದರೂ ಒಳ್ಳೆಯ ಗಂಡ ದೊರೆಯಲಿ ಎಂದಿಷ್ಟೆ ನಾನು ಪ್ರಾರ್ಥಿಸುವುದು. ಮನುಷ್ಯರು ಇದಕ್ಕಿಂತ ಹೆಚ್ಚೇನು ಮಾಡಬಲ್ಲರು? ಸಾವೂ ಬದುಕೂ ದೈವೇಚ್ಛೆ. ಅದರಲ್ಲಿಯೂ ಇಂತಹ ಸಾವನ್ನು ಪಡೆಯಬೇಕಾಗಿದ್ದರೆ ಆ ಕೂಸು ಪೂರ್ವಜನ್ಮದಲ್ಲಿ ಎಂತಹ ಪಾಪ ಮಾಡಿದ್ದಾಳೋ! ನಾವೆಂತಹ ಪಾಪ ಮಾಡಿದ್ದೇವೋ! ಪಾಪ ಪುಣ್ಯಗಳ ಲೆಕ್ಕಗಳನ್ನು ಬರೆದಿಡುವ ಆ ಪರಮಾತ್ಮನಿಗೇ ಗೊತ್ತು. ಸ್ಥಿತಿ ಹೀಗಾದರೂ ನಾವು ಶಾರದೆಯ ಮರಣದ ಕಾರಣವನ್ನಾರಿಗೂ ತಿಳಿಸಲಿಲ್ಲ. ಸತ್ತವಳು ಸತ್ತೇ ಹೋದಳು. ಯಾರಲ್ಲಿಯೂ ಹೇಳದೆ ಕೇಳದೆ ನಡೆದೇಬಿಟ್ಟಳು. ಸಾಯುವ ಪ್ರಾಯದ ತಾಯಿತಂದೆಗಳಿದ್ದರೂ ಅವರನ್ನು ಬಿಟ್ಟು ಓಡಿಯೇಬಿಟ್ಟಳು. ಒಟ್ಟಿನಲ್ಲಿ ಸಾಯುವವರು ಪುಣ್ಯವಂತರು. ಅದರಲ್ಲಿಯೂ ಸುಮಂಗಲೆಯಾಗಿ ಸಾಯುವುದು ಎಷ್ಟೊ ಪುಣ್ಯ. ಹಾಗೆಯೇ ಆಯಿತು ನಮಗೆ. ಆದರೆ ನಾವಿನ್ನೂ ಸಾಯದೆ ಅವಳ ಕಥೆಯನ್ನು ಹೇಳುವುದಕ್ಕೆ ಉಳಿದಿದ್ದೇವೆ ಭೂಭಾರವಾಗಿ.

ಪಾರ್ತಮ್ಮನ ಮಾತನ್ನು ಕೇಳಿ ತುಂಗಮ್ಮನೂ ಅತ್ತಳು. ತನ್ನ ಕಷ್ಟವನ್ನು ಕೇಳಿ ಅಳುವವರಿದ್ದಾರಲ್ಲ ಎಂದು ಪಾರ್ತಮ್ಮ ಮತ್ತೂ ಅತ್ತಳು. ಅಷ್ಟರಲ್ಲಿ ಮಾಡಬೇಕಾಗಿದ್ದ ಅದ್ದಿಟ್ಟು ಮುಗಿದುಹೋಗಿ ಕಾದ ಎಣ್ಣೆಗೆ ಬೆಂಕಿ ಹತ್ತಿದ್ದಿತು. ಧಗಧಗನೆ ಉರಿಯುತ್ತಿದ್ದ ಬೆಂಕಿಯ ಶಬ್ದ ಕೇಳಿ ಅವರ ದುಃಖವು ಫಕ್ಕನೆ ನಿಂತುಹೋಯಿತು.

ಅದ್ದಿಟ್ಟಿನ ಕುಡಿಕೆಗಳೆಲ್ಲ ತುಂಬಿಹೋದುವು. ಅಷ್ಟಾಗುವುದರ ಒಳಗೆ ಪಾರ್ತಮ್ಮನ ಹೃದಯದಲ್ಲಿ ಅಡಗಿಕೊಂಡಿದ್ದ ಅದ್ದಿಟ್ಟನ್ನು ಕಂಡೊಡನೆ ಉಕ್ಕಿ ಬಂದ ದುಃಖರಸವೆಲ್ಲ ಒಮ್ಮೆ ಸೋರಿಯೂ ಹೋಯಿತು. ಆ ದಿನದ ಶ್ರಾದ್ಧದ ಕಾರ್ಯಭಾಗವಾದ ಅದ್ದಿಟ್ಟಿನ ಕೆಲಸವೂ ಯಥಾಸಾಂಗವಾಗಿಯೇ ಜರುಗಿತು.

(ಕೃಪೆ: ಮಲ್ಲಿಗೆ ಮಾಸಪತ್ರಿಕೆ. ಕೃಪೆ: ‘ಹಿಂದಿನ ಕತೆಗಳು’, ಯು.ಆರ್. ಶೆಣೈ ಎಂಡ್ ಸನ್ಸ್, ಮಂಗಳೂರು, 1946)

ಕಡೆಂಗೋಡ್ಲು ಶಂಕರ ಭಟ್ಟ

ಕಡೆಂಗೋಡ್ಲು ಅವರ ‘ಅದ್ದಿಟ್ಟು’

ಕಡೆಂಗೋಡ್ಲು ಶಂಕರಭಟ್ಟರು (1904-1968) ಹಾಗೆ ನಿರ್ಲಕ್ಷ್ಯಕ್ಕೀಡಾದ ಲೇಖಕರೇನೂ ಅಲ್ಲ. ಕವಿ, ಕತೆಗಾರ, ಕಾದಂಬರಿಗಾರ, ಪತ್ರಕರ್ತರೆಂದು ಅವರಿಗೆ ಸಾಕಷ್ಟು ಮನ್ನಣೆ ಸಿಕ್ಕಿದೆ. ಕಾರವಾರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ಆಯ್ಕೆಯಾಗಿದ್ದರು. ಕತೆಗಾರರಾಗಿಯೂ ಅವರು ವಿಮರ್ಶಕರ ಗಮನವನ್ನು ತಕ್ಕಮಟ್ಟಿಗೆ ಸೆಳೆದಿದ್ದಾರೆ. ‘ಸಾಹಿತ್ಯ ಯೋಗಿ’, ‘ವಾಜ್ಮಯ ತಪಸ್ವಿ’ ಮುಂತಾದ ಅವರನ್ನು ಕುರಿತ ಸಂಭಾವನಾ ಗ್ರಂಥಗಳಲ್ಲಿ ಅವರ ಕಥೆಗಳನ್ನು ಕುರಿತ ಒಂದೆರಡು ಲೇಖನಗಳು ಬಂದಿವೆ. ‘ನಮ್ಮ ಕತೆಗಳು'(1932), ‘ಕಾಮನಬಿಲ್ಲು'(1933), ‘ಮಧುವನ'(1935), ‘ಆರು ಕತೆಗಳು'(1942), ‘ಹೂದೋಟ'(1952) ಮೊದಲಾದ ಅಂಥಾಲಜಿಗಳಲ್ಲಿ ಅವರ ಕಥೆಗಳು ಸೇರಿವೆ.

ಕಡೆಂಗೋಡ್ಲು ಅವರ ಮೂರು ಕಥಾ ಸಂಕಲನಗಳು ಪ್ರಕಟವಾಗಿವೆ. ‘ಹಿಂದಿನ ಕತೆಗಳು'(1946)ರಲ್ಲಿ ಆರು, ‘ಗಾಜಿನ ಬಳೆ'(1947)ಯಲ್ಲಿ ಐದು, ‘ದುಡಿಯುವ ಮಕ್ಕಳು'(1953)ದಲ್ಲಿ ಮೂರು- ಹೀಗೆ ಈ ಸಂಕಲನಗಳಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ. ಇವುಗಳಲ್ಲಿ ಸೇರಿರದ ‘ಒಂದು ನಿಟ್ಟುಸಿರು'(ಕಾಮನ ಬಿಲ್ಲು), ‘ಮಡದಿಯ ಮುನಿಸು'(ಮಧುವನ), ‘ನಿರಾಶೆ'(ಆರು ಕತೆಗಳು)ಗಳನ್ನು ಸೇರಿಸಿದರೆ ಹದಿನೇಳಾಯಿತು. ಈ ಕತೆಗಳನ್ನು 1927ರಿಂದ 1953ರ ನಡುವಿನ ಅವಧಿಯಲ್ಲಿ ಬರೆಯಲಾಗಿದೆ. ಅದರಲ್ಲೂ ಮೊದಲ ಎರಡು ಸಂಕಲನಗಳ ಕಥೆಗಳು 1935ಕ್ಕಿಂತ ಮುಂಚೆ ಬಂದುವು. ಈಗ ಅವರ ಯಾವ ಸಂಕಲನಗಳೂ ಪೇಟೆಯಲ್ಲಿ ಸಿಗುತ್ತಿಲ್ಲ. (‘ಹಿಂದಿನ ಕತೆಗಳು’ ಸಂಕಲನವನ್ನು ನನಗೆ ದೊಕಿಸಿಕೊಟ್ಟವರು ಸಿದ್ದಲಿಂಗ ಪಟ್ಟಣಶೆಟ್ಟಿ.) ಜೊತೆಗೆ, ಸಂಕಲನ ರೂಪದಲ್ಲಿ ಬಾರದ ಅವರ ಇನ್ನೂ ಹಲವಾರು ಕಥೆಗಳು ಅವರೇ ಸಂಪಾದಕರಾಗಿದ್ದ ‘ರಾಷ್ಟ್ರಬಂಧು’, ‘ರಾಷ್ಟ್ರಮತ’ ಮತ್ತಿತರ ಪತ್ರಿಕೆಗಳಲ್ಲಿ ಉಳಿದಿರಬಹುದು. 1935ಕ್ಕಿಂತ ಮುಂಚೆಯೇ ಅವರ ನೂರಾರು(?) ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವೆಂದು ‘ಮಧುವನ’ದ ಸಂಪಾದಕರು ಬರೆದಿದ್ದಾರೆ.

ಕಡೆಂಗೋಡ್ಲು ಅವರ ಕಥೆಗಳ ಗುಣಮಟ್ಟ ಒಂದೇ ರೀತಿಯದಾಗಿಲ್ಲ. ಮೂರನೆಯ ಸಂಕಲನದ ‘ಚೂರಿಯ ಕತೆ’ಯೊಂದನ್ನು ಬಿಟ್ಟರೆ, ಅವರ ಉತ್ತಮ ಕಥೆಗಳೆಲ್ಲಾ ಇರುವುದು ಮೊದಲ ಸಂಕಲನದಲ್ಲೇ. ‘ಚೂರಿಯ ಕತೆ’, ‘ದೊಡ್ಡಣ್ಣ’ -ಇವೆಲ್ಲ ಮೆಲೊಡ್ರಾಮಕ್ಕೆ ತಿರುಗುವ ಕಥೆಗಳು. ಒಂದು ರೀತಿಯಿಂದ ಮೆಲೊಡ್ರಾಮವೇ ಅವರ ಎಲ್ಲಾ ಕತೆಗಳ ಮುಖ್ಯಲಕ್ಷಣವೆಂದು ಹೇಳಬಹುದು. ಸನ್ನಿವೇಶಗಳ ನಾಟಕೀಯ ಕೃತಕತೆ, ಆಕಸ್ಮಿಕಗಳ ಉಪಯೋಗ, ಭಾವ ದೌರ್ಬಲ್ಯ ಮೊದಲಾದುವು ಇದರ ಬೇರೆ ಬೇರೆ ರೂಪಗಳು. ‘ಕಥೆ’ಯ ಅಂಶವೂ ಸ್ವಲ್ಪ ಭಾರವೆನಿಸುವಷ್ಟು ಹೆಚ್ಚು. ಇವುಗಳನ್ನು ಹಿಡಿತದಲ್ಲಿಟ್ಟುಕೊಂಡಾಗ ‘ಅದ್ದಿಟ್ಟು’, ‘ಹೊಡೆಯುವ ಗಡಿಯಾರ’ದಂಥ ಉತ್ತಮ ಕಥೆಗಳನ್ನು ಅವರು ಕೊಟ್ಟಿದ್ದಾರೆ.

ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ

‘ಅದ್ದಿಟ್ಟು'(1933) ಮೇಲುನೋಟಕ್ಕೆ ಒಂದು ಕೌಟುಂಬಿಕ ಕಥೆ. ಬ್ರಾಹ್ಮಣರ ಮನೆಯ ಬಡತನ, ಮಗಳಿಗೆ ವರ ಹುಡುಕಲು ತಂದೆ ಪಡುವ ಕಷ್ಟ, ಕೊನೆಗೆ ಸಿಕ್ಕ ವರನೊಡನೆ ಹಿಂದುಮುಂದು ವಿಚಾರಿಸದೆ ಮದುವೆ, ಗಂಡನ ಮನೆಯಲ್ಲೊಬ್ಬಳು ಗಂಡ ಬಿಟ್ಟ ಗಯ್ಯಾಳಿ ಅತ್ತಿಗೆ, ಗಂಡನಿಗೆ ಹೆಂಡತಿಯ ಮೇಲೆ ಚಾಡಿ, ದಿನವೂ ಹೆಂಡತಿಗೆ ಹೊಡೆತ, ಮಾನವಂತಿ ಹುಡುಗಿ ಎದುರಾಡದೆ ನುಂಗಿಕೊಳ್ಳುವುದು, ಕೊನೆಗೊಮ್ಮೆ ಗಂಡನ ಪೆಟ್ಟಿನಿಂದಲೇ ಬಸುರಿ ಹುಡುಗಿಯ ಸಾವು- ಅದೂ ಅವಳ ಹಡೆದ ತಾಯಿಯ ಎದುರಿಗೇ ಇವೆಲ್ಲ ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸುವ ವ್ಯಾಪಾರೀ ಸಿನಿಮಾದ ಕಥೆಗೆ ಒಳ್ಳೆಯ ಸಾಮಗ್ರಿಯಾಗಬಲ್ಲವು. ಕಥೆಯಲ್ಲಿ ಸಾಕಷ್ಟು ಮೆಲೊಡ್ರಾಮದ ಅಂಶಗಳಿವೆ ಎಂಬುದು ಮೇಲೆಯೇ ಕಾಣುತ್ತದೆ.

ಆದರೂ ಕತೆ ಮೆಲೊಡ್ರಾಮ ಆಗದೆ ತಪ್ಪಿಸಿಕೊಂಡಿದೆ. ಇದರಲ್ಲಿ ಕಥೆಯನ್ನು ಹೇಳಲು ಆರಿಸಿಕೊಳ್ಳಲಾಗಿದೆ. ಕಥೆಯನ್ನು ಆರಂಭಿಸುವವನು ಕಥೆಗಾರನೇ. ಆದರೆ ಪ್ರಾಥಮಿಕ ಹಿನ್ನೆಲೆಯನ್ನು ಒದಗಿಸಿದ ಮೇಲೆ ಕತೆಗಾರ ಹಿಂದೆ ಸರಿದು ಒಂದು ಪಾತ್ರದ ಮೂಲಕ ಕಥೆ ಹೇಳಿಸುತ್ತಾನೆ.

ಕಥೆ ಮುಂಬರುವ ದಾರುಣ ಸನ್ನಿವೇಶದ ಯಾವ ಸೂಚನೆಯನ್ನೂ ಕೊಡದೆ ಲಘು ಹಾಸ್ಯದ ಧಾಟಿಯಲ್ಲಿ ಆರಂಭವಾಗುತ್ತದೆ. ಆದರೆ ಆರಂಭದಲ್ಲಿಯೇ ಬರುವ ಶ್ರಾದ್ಧದ ಪ್ರಸ್ತಾಪದಲ್ಲಿಯೇ ಮುಂಬರುವ ಸಾವಿನ ಪೀಠಿಕೆ ಹಾಕಲ್ಪಟ್ಟಿದೆ. ಈ ಶ್ರಾದ್ಧದ ಊಟದಲ್ಲಿ ಕೊನೆಯದಾಗಿ ತಯಾರಾಗುವ ಅದ್ದಿಟ್ಟು ಒಂದು ವಿಶಿಷ್ಟ ಖಾದ್ಯವಾಗಿ ವರ್ಣಿಸಲ್ಪಟ್ಟಿದೆ. ಇಲ್ಲಿ ಬರುವ ಅದ್ದಿಟ್ಟಿನ ತಯಾರಿಯ ವರ್ಣನೆ ಹರಟೆಗಳಲ್ಲಿ ಬುದ್ಧಿಪೂರ್ವಕವಾಗಿ ಬರುವ ವಿಷಯಾಂತರಗಳಂತೆ ಸ್ವಲ್ಪ ದೀರ್ಘವಾಗಿಯೇ ಬಂದಿದೆ. ಇಲ್ಲಿಯೂ ಹಾಸ್ಯದ ಲಘು ಧಾಟಿಯೇ ಪ್ರಧಾನವಾಗಿದೆ. ಈ ದೀರ್ಘ ಪ್ರಸ್ತಾವನೆಯ ನಂತರ ಕಥೆಯ ಸುದ್ದಿ ಬರುತ್ತದೆ. ಅದ್ದಿಟ್ಟನ್ನು ತಯಾರಿಸುತ್ತಿರುವ ಪಾರ್ವತಮ್ಮನಿಗೆ ಅದ್ದಿಟ್ಟಿನ ಮೇಲೆ ಬಹಳ ಪ್ರೀತಿಯಿದ್ದ, ಅದ್ದಿಟ್ಟಿನ ನೆವದಿಂದಾಗಿಯೇ ದುರ್ಮರಣಕ್ಕೀಡಾದ ತನ್ನ ಮಗಳು ಶಾರದೆಯ ಕಥೆ ನೆನಪಾಗುತ್ತದೆ. ಆಕೆ ತುಂಗಮ್ಮನಿಗೆ ಕಥೆ ಹೇಳಲು ಆರಂಭಿಸುತ್ತಾಳೆ. ಹೀಗೆ ಯಾವುದೋ ಒಂದು ವಸ್ತುವನ್ನು ನೋಡಿ ಅದಕ್ಕೆ ಸಂಬಂಧಿಸಿದ ಹಿಂದಣ ನೆನಪುಗಳನ್ನು ಕಥೆ ಮಾಡಿ ಹೇಳುವ ತಂತ್ರ ನವೋದಯದ ಅನೇಕ ಕಥೆಗಳಲ್ಲಿ ಕಂಡುಬರುವಂಥದು.

ಆದರೆ ಇಲ್ಲಿಯ ವಿಶೇಷವೆಂದರೆ, ಕಥೆಯನ್ನು ಪಾರ್ತಮ್ಮ ಹೇಳಿದಳೆಂದು ಸೂಚನೆ ಕೊಟ್ಟು ಲೇಖಕ ತನ್ನ ಭಾಷೆಯಲ್ಲಿಯೇ ಕಥೆ ಹೇಳಿಬಿಡುವುದಿಲ್ಲ. ಹಾಗೆ ಬೇರೊಂದು ಪಾತ್ರದ ಮೂಲಕ ಕತೆಗಾರನೇ ಹೇಳುವ ಕಥೆಗಳಲ್ಲಿ ನಿರೂಪಕನಿಗೆ ಅಂಥ ಮಹತ್ವವಿರುವದಿಲ್ಲ. ಅಲ್ಲಿ ಹೇಳಿದ ಕಥೆಯೇ ಮುಖ್ಯವಾಗಿ, ನಿರೂಪಕ ಕೇವಲ ಒಂದು ಅನುಕೂಲಕರ ದೃಷ್ಟಿಕೋನವಾಗಿ ಹಿಂದಕ್ಕೆ ಸರಿದುಬಿಡುತ್ತಾನೆ. ಆದರೆ ಇಲ್ಲಿ ಪಾರ್ತಮ್ಮನಿಗೆ ಅವಳದೇ ಆದ ಒಂದು ವಿಶಿಷ್ಟ ವ್ಯಕ್ತಿತ್ವ, ಮನೋಧರ್ಮ, ಭಾಷೆ, ಕಥನ ಶೈಲಿಗಳನ್ನು ಕೊಟ್ಟು ಅವುಗಳ ಮೂಲಕವಾಗಿಯೇ ಕಥೆ ಹೇಳಿಸಲಾಗಿದೆ. ಇದರಿಂದಾಗಿ ಇಡೀ ಕಥೆಗೆ ಬೇರೊಂದು ತಿರುವು ಬಂದಂತಾಗಿದೆ.

ಪಾರ್ತಮ್ಮ ವಾಚಾಳಿ, ದುರಂತದಲ್ಲಿ ಸತ್ತ ತನ್ನ ಮಗಳ ಬಗ್ಗೆ ಆಕೆಗೆ ಸಹಜವಾಗಿಯೇ ಪ್ರೀತಿಯಿದೆ, ಪಕ್ಷಪಾತವಿದೆ. ತನ್ನ ಮಗಳ ದುರಂತಕ್ಕೆ ಕಾರಣರಾದವರ ಬಗ್ಗೆ ಸಂತಾಪವಿದೆ. ಇದೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ವಿಧಿಯ ಪಾತ್ರದ ಬಗ್ಗೆ ಅರಿವಿದೆ. ತನ್ನ ಮನೆತನದ ಸಂಸ್ಕೃತಿಯ ಬಗ್ಗೆ ಅಭಿಮಾನವಿದೆ. ಕಥೆಯಲ್ಲಿ ಆಕೆಗೆ ಸ್ವತಃ ವೈಯಕ್ತಿಕ ಸಿಲುಕು-ತೊಡಕುಗಳಿರುವುದರಿಂದ ಆಕೆಯ ನಿರೂಪಣೆಯಲ್ಲಿ ಸಾಮಾನ್ಯವಾಗಿ ಲೇಖಕನ ನಿರೂಪಣೆಯಲ್ಲಿ ನಿರೀಕ್ಷಿಸಬಹುದಾದ ನಿಷ್ಪಕ್ಷಪಾತವೇನೂ ಇಲ್ಲ. ಆಕೆ ಸ್ಪಷ್ಟವಾಗಿ ಮಗಳನ್ನು ಮೇಲುಗಟ್ಟಿಕೊಂಡು, ಅವಳ ನಡತೆಯನ್ನು ಹೆಜ್ಜೆಹೆಜ್ಜೆಗೆ ಸಮರ್ಥಿಸಿಕೊಳ್ಳುತ್ತ, ಕಥೆ ಹೇಳುತ್ತಾಳೆ. ಹೀಗೆ ತನ್ನ ಮಗಳ ನಡತೆಯನ್ನು, ತನ್ನ ಮನೆತನದ ಸುಸಂಸ್ಕೃತ ಪರಂಪರೆಯನ್ನು ಹೊಗಳಿಕೊಂಡು ತನ್ನದೇ ಆದ ವಿಶಿಷ್ಟ ಮಾತುಗಾರಿಕೆಯಲ್ಲಿ ಕಥೆ ಹೇಳುವಾಗ ಉದ್ದಕ್ಕೂ ಒಂದು ಬಗೆಯ ವ್ಯಂಗ್ಯದ ಎಳೆ ನೇಯ್ದುಕೊಳ್ಳುತ್ತದೆ. ಇದು ಪಾರ್ತಮ್ಮನ ಮುಗ್ಧ ಪಕ್ಷಪಾತದ ದೃಷ್ಟಿಗೂ ನಡುವೆ ಹುಟ್ಟುವ ಘರ್ಷಣೆಯ ಪರಿಣಾಮವಾಗಿ ಕಾಣಿಸಿಕೊಳ್ಳುವ ವ್ಯಂಗ್ಯ.

ಪಾರ್ತಮ್ಮನ ಮಾತಿನ ಧಾಟಿಯಲ್ಲಿಯೇ ಒಂದು ಬಗೆಯ ಸಂಕೀರ್ಣ ವಿರೋಧಾಭಾಸಗಳನ್ನೆಲ್ಲ ಒಳಗೊಳ್ಳುವ ವೈಶಿಷ್ಟ್ಯವಿರುವದು ಕುತೂಹಲಕಾರಿಯಾಗಿದೆ. ”ಗಂಡನ ಮನೆಯಲ್ಲಿ ಹುಡುಗಿಗೆ ಏನು ಕಷ್ಟ ಬಂದರೂ ಕೊಟ್ಟ ಮನೆಯವರು ಹೇಳಬಾರದು. ಒಂದು ವೇಳೆ ಹೇಳಿದರೆ ನನ್ನ ಕೈ ಬಿಟ್ಟುಹೋದ ಆ ಮುದ್ದುಮಗಳು ಬರುವಂತಿಲ್ಲ. ಆಕೆಯ ಆಯುಷ್ಯ ಮುಗಿಯಿತೆಂದೆ ಹೇಳಿ ನಾವು ಸಮಾಧಾನ ಮಾಡಿಕೊಳ್ಳಬೇಕು. ಆದರೂ ಹೆತ್ತ ತಾಯಿಯಲ್ಲವೆ? ಎಲ್ಲ ನೆನಪಾಗುತ್ತದೆ” ಎಂದು ತನ್ನ ಮಗಳು ಗಂಡನ ಮನೆಯಲ್ಲಿ ಅನುಭವಿಸಿದ ಕಷ್ಟಗಳನ್ನು ವರ್ಣಿಸಿ ಹೇಳುತ್ತಾಳೆ. ”ಆಕೆಗೆ ಇನ್ನೊಂದು ಜನ್ಮದಲ್ಲಿಯಾದರೂ ಒಳ್ಳೆಯ ಗಂಡ ದೊರೆಯಲಿ ಎಂದಿಷ್ಟೆ ನಾನು ಪ್ರಾರ್ಥಿಸುವುದು. ಮನುಷ್ಯರು ಇದಕ್ಕಿಂತ ಹೆಚ್ಚೇನು ಮಾಡಬಲ್ಲರು? ಸಾವು ಬದುಕು ದೈವೇಚ್ಛೆ, ಅದರಲ್ಲಿಯೂ ಇಂತಹ ಸಾವನ್ನು ಪಡೆಯಬೇಕಾದರೆ ಆ ಕೂಸು ಪೂರ್ವಜನ್ಮದಲ್ಲಿ ಎಂತಹ ಪಾಪ ಮಾಡಿದ್ದಾಳೊ! ನಾವೆಂತಹ ಪಾಪ ಮಾಡಿದ್ದೆವೊ! ಪಾಪ ಪುಣ್ಯಗಳ ಲೆಕ್ಕ ಬರೆದಿಡುವ ಆ ಪರಮಾತ್ಮನಿಗೇ ಗೊತ್ತು. ಸ್ಥಿತಿ ಹೀಗಾದರೂ ನಾವು ಶಾರದೆಯ ಮರಣದ ಕಾರಣವನ್ನಾರಿಗೂ ತಿಳಿಸಲಿಲ್ಲ. ಸತ್ತವಳು ಸತ್ತೇಹೋದಳು… ಒಟ್ಟಿನಲ್ಲಿ ಸಾಯುವವರು ಪುಣ್ಯವಂತರು. ಅದರಲ್ಲಿಯೂ ಸುಮಂಗಲಿಯಾಗಿ ಸಾಯುವುದು ಎಷ್ಟೋ ಪುಣ್ಯ” ಎಂಬಂಥ ಮಾತುಗಳಲ್ಲಿ ವ್ಯಾವಹಾರಿಕ ತಿಳಿವಳಿಕೆ, ಸಾಂಪ್ರದಾಯಿಕ ಧರ್ಮಶ್ರದ್ಧೆ, ವಾಸ್ತವತೆಯ ಅರಿವು, ಕರುಳಿನ ನೋವು -ಇವೆಲ್ಲ ಪರಸ್ಪರ ವಿರುದ್ದ ದಿಕ್ಕುಗಳಿಗೆ ಎಳೆಯುತ್ತಿದ್ದರೂ ಅವನ್ನೆಲ್ಲ ಒಂದೆಡೆ ಕೂಡಿಸಿ ಹಿಡಿದಿರುವ ಮನೋಧರ್ಮ ಆಶ್ಚರ್ಯವನ್ನುಂಟುಮಾಡುತ್ತವೆ. ಪಾರ್ತಮ್ಮ ದುಃಖವನ್ನು ನುಂಗಿಕೊಂಡು ಕೂಡುವ ಸ್ಥಿತಪ್ರಜ್ಞಳೇನೂ ಅಲ್ಲ. ಆಕೆ ಕಥೆ ಹೇಳುತ್ತ ಹೇಳುತ್ತ ಎಲ್ಲ ನೆನಪಾಗಿ ಅಳುತ್ತಾಳೆ. ಮಗಳ ಸಾವಿಗೆ ಕಾರಣರಾದವರನ್ನು ಆಕೆ ಸುಲಭವಾಗಿ ಕ್ಷಮಿಸಿಯೂ ಇಲ್ಲ. ಆದರೆ ಈ ಅಳುವಿನ ಹಿಂದೆಯೂ ಕಾಣುವ ಸಂಯಮ, ತಿಳಿವಳಿಕೆಗಳು ಮಹತ್ವದವಾಗಿವೆ. ಈ ತಿಳಿವಳಿಕೆ ಸಾಂಪ್ರದಾಯಿಕವಾದ ಕರ್ಮಸಿದ್ಧಾಂತದಿಂದ ಬಂದುದಾಗಿರಬಹುದು. ಹಾಗೆಂದು ಅದನ್ನು ಗೇಲಿ ಮಾಡಿಬಿಡುವದು ಸುಲಭ. ಅಷ್ಟೇಕೆ, ಪಾರ್ತಮ್ಮನಿಗೇ ಈ ವಿಷಯ ಚೆನ್ನಾಗಿ ಗೊತ್ತಿದೆ. ಆದರೂ ಅದು ಆಕೆಗೊಂದು ತಾಳಿಕೊಳ್ಳುವ ಗುಣವನ್ನು ಕೊಡುತ್ತದೆ. ಮಗಳು ಬಸಿರಿಯಾದ ಸುದ್ದಿಯನ್ನು ಕೇಳಿ ಅವಳ ಮನೆಗೆ ಹೋದಾಗ ನಡೆಯುವ ರಾದ್ಧಾಂತದ ಕಾಲಕ್ಕೆ ಆಕೆ ತೋರಿಸುವ ಸಂಯಮ ಕೇವಲ ಅಸಹಾಯಕತೆಯಿಂದ ಬಂದದ್ದಲ್ಲ. ಕಣ್ಣೆದುರೇ ನಡೆಯುವ ದುರಂತದಲ್ಲಿ ಆಕೆ ಮೂಕ ಪ್ರೇಕ್ಷಕಳಾಗಬೇಕಾಗುವ ದುಃಖ ಸಾಮಾನ್ಯವೇನೂ ಅಲ್ಲ. ಇಂಥ ಸಂದರ್ಭದಲ್ಲಿ ಆಕೆ ಪ್ರತಿಭಟಿಸಬಹುದಾಗಿತ್ತೆ? ಅದರಿಂದ ಅವಳ ಮಗಳ ಬಾಳುವೆ ಸುಧಾರಿಸಬಹುದಿತ್ತೆ? ಮಗಳು ಉಳಿಯುತ್ತಿದ್ದಳೆ? ಆದರೆ ಇದಾವುದೂ ಅಪ್ರಸ್ತುತವೆನಿಸುವಂತೆ ಒಳಿತಿನ ಶಕ್ತಿಗಳೆಲ್ಲ ಅಸಹಾಯವಾಗುತ್ತವೆ, ಕೆಡುಕು ವಿಜೃಂಭಿಸುತ್ತದೆ. ಕೊನೆಗೂ ಪಾರ್ತಮ್ಮ ತನ್ನ ಮನೆತನದ ಬಗ್ಗೆ, ಆ ಸಂಸ್ಕಾರದಲ್ಲಿ ಬೆಳೆದ ಮಗಳ ನಡತೆಯ ಬಗ್ಗೆ ಹೇಳಿಕೊಳ್ಳುವ ಮಾತುಗಳ ಬಗ್ಗೆ ಉತ್ಪ್ರೇಕ್ಷೆಯೇನೂ ಇಲ್ಲವೆಂದೇ ಸಿದ್ಧವಾಗುತ್ತದೆ.

ಇದನ್ನು ಓದಿದ್ದೀರಾ?: ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ

ಶ್ರೀನಿವಾಸರ ಅನೇಕ ಕಥೆಗಳಲ್ಲಿಯೂ ನಿರೂಪಕನೊಬ್ಬನ ಮೂಲಕ ಕಥೆ ಹೇಳಿಸುವ ತಂತ್ರ ಕಾಣುತ್ತದೆ. ಅಲ್ಲಿ ನಿರೂಪಕನ ಮೌಲ್ಯಗಳ ಚೌಕಟ್ಟಿನಲ್ಲಿ ಕಥೆಯ ಅನುಭವದ ಮೌಲ್ಯಗಳನ್ನು ಬೆಲೆಗಟ್ಟುವ ವೈದೃಶ್ಯದ ಮೂಲಕ ಅವುಗಳ ಅರ್ಥವನ್ನು ವಿಸ್ತರಿಸುವ ಪ್ರಯತ್ನ ಮುಖ್ಯವಾಗಿ ಕಾಣುತ್ತದೆ. ಆದರೆ ‘ಅದ್ದಿಟ್ಟಿ’ನ ರೀತಿಯೇ ಬೇರೆಯಾಗಿದೆ. ಇದು ಪಾರ್ತಮ್ಮನ ಮಗಳು ಶಾರದೆಯ ಕಥೆಯಲ್ಲ, ಸ್ವತಃ ಪಾರ್ತಮ್ಮನದೇ ಕಥೆ. ಒಂದು ರೀತಿಯಿಂದ ಶಾರದೆ ಪಾರ್ತಮ್ಮನ ಪಾತ್ರದ ವಿಸ್ತರಣ ಎಂದು ಹೇಳಬಹುದು. ಆಕೆ ಪಾರ್ತಮ್ಮನ ವ್ಯಕ್ತಿತ್ವ-ಮನೋಧರ್ಮ-ದರ್ಶನಗಳ ಅಭಿವ್ಯಕ್ತಿಗೆ ಒಂದು ಮುಖ್ಯ ಅವಕಾಶವಾಗಿ ಮಾತ್ರ ಬರುತ್ತಾಳೆ. ಅಂತೆಯ ಶಾರದೆಯ ಕಥೆಯಲ್ಲಿಯ ಮೆಲೊಡ್ರಮ್ಯಾಟಿಕ್ ಅಂಶಗಳೆಲ್ಲಾ ಗೌಣವಾಗುತ್ತವೆ. ಪಾರ್ತಮ್ಮ ಈ ಒಳ ಕಥೆಯನ್ನು ಅನುಭವಿಸುವ, ನಿರೂಪಿಸುವ, ಅದಕ್ಕೆ ಪ್ರತಿಕ್ರಿಯಿಸುವ ಪ್ರಕ್ರಿಯೆಯೇ ಕಥೆಯ ಮುಖ್ಯ ಅನುಭವವಾಗುತ್ತದೆ.

ಹೀಗೆ ಬೇರೊಂದು ಕಥೆಯನ್ನು ನಿರೂಪಿಸುತ್ತಿದ್ದಾಗಲೂ, ಇಡಿಯ ಕಥೆಯೇ ಸ್ವತಃ ನಿರೂಪಕನ ಕಥೆಯಾಗಿ ಮಾರ್ಪಡುವದು ಈ ‘ಅದ್ದಿಟ್ಟಿ’ನ ವೈಶಿಷ್ಟ್ಯವಾಗಿದೆ. ಇದರಲ್ಲಿಯೇ ಈ ಕಥೆಯ ಹೊಸತನವಿರುವುದು.

(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ನನ್ನ ಮಕ್ಕಳ ಕಥೆಗಳು ಮಕ್ಕಳ ಕಾದಂಬರಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಕಳಿಸಬಹುದೆ…

    • ಮಾನ್ಯರೇ,
      ನೀವು ನಮ್ಮ ಈದಿನ ವೆಬ್ ತಾಣಕ್ಕೆ ಭೇಟಿ ನೀಡಿ, ಕತೆ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
      ಸದ್ಯಕ್ಕೆ ನಾವು ಕನ್ನಡದ ಮರೆಯಬಾರದ ಹಳೆಯ ಕತೆಗಳನ್ನು, ಹೊಸ ತಲೆಮಾರಿನ ಜನಕ್ಕೆ ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಮರುಪ್ರಕಟಿಸುತ್ತಿದ್ದೇವೆ.
      ಮಕ್ಕಳ ಕತೆಗಳನ್ನು ಪ್ರಕಟಿಸಬಹುದು. ಹೊಸದಾಗಿ ಬರೆದಿದ್ದರೆ, ಕಳುಹಿಸಿಕೊಡಿ.
      ಸಂಪಾದಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ದೇವುಡು ಅವರ ಕತೆ | ಮೂರು ಕನಸು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X