ಐತಿಹಾಸಿಕ ರೈತರ ಪ್ರತಿಭಟನೆಯ ವೇಳೆ ಭಾರತದಲ್ಲಿ ಟ್ವಿಟ್ಟರ್ ಅನ್ನು ಬಂದ್ ಮಾಡುವ ಬೆದರಿಕೆ ಒಡ್ಡಲಾಗಿತ್ತು ಎಂದು ಟ್ವಿಟ್ಟರ್‌ನ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ʻಬ್ರೇಕಿಂಗ್ ದಿ ಪಾಯಿಂಟ್ಸ್ʼ ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜಾಕ್ ಡೋರ್ಸಿ, ರೈತರ ಪ್ರತಿಭಟನೆಯ ವೇಳೆ ಚಳವಳಿಯನ್ನು ಬೆಂಬಲಿಸಿ ಮತ್ತು ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸಿ ಟ್ವೀಟ್ ಮಾಡುವ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಜನಸಮಾನ್ಯರ ಟ್ವಿಟರ್ ಖಾತೆಗಳನ್ನು ರದ್ದುಗೊಳಿಸುವಂತೆ ತಮಗೆ ಮನವಿ ಮಾಡಲಾಗಿತ್ತು.
ʻಕೇಂದ್ರ ಸರ್ಕಾರದ ಸೂಚನೆಯನ್ನು ಪಾಲಿಸದೇ ಇದ್ದಲ್ಲಿ ಭಾರತದಲ್ಲಿ ಟ್ವಿಟ್ಟರ್ ಬಂದ್ ಮಾಡುತ್ತೇವೆ, ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ, ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ, ಕಾನೂನು ಹೋರಾಟಕ್ಕೆ ಸಿದ್ಧರಾಗಿರಿ ಎಂದು ಬೆದರಿಕೆ ಹಾಕಲಾಗಿತ್ತು. ನಮ್ಮ ಕೆಲ ಉದ್ಯೋಗಿಗಳ ಮನೆ ಮೇಲೆ ದಾಳಿಯೂ ಆಗಿತ್ತುʼ ಎಂದು ಜಾಕ್ ಡೋರ್ಸಿ ಗಂಭೀರ ಆರೋಪ ಮಾಡಿದ್ದಾರೆ.
ಶುದ್ಧ ಸುಳ್ಳು : ರಾಜೀವ್ ಚಂದ್ರಶೇಖರ್
ರೈತರ ಪ್ರತಿಭಟನೆ ವೇಳೆ ಭಾರತದಲ್ಲಿ ಟ್ವಿಟ್ಟರ್ ನಿಷೇಧಿಸುವ ಬೆದರಿಕೆ ಹಾಕಲಾಗಿತ್ತು ಎಂಬ ಟ್ವಿಟ್ಟರ್ ಸಹ-ಸಂಸ್ಥಾಪಕ ಜಾಕ್ ಡೋರ್ಸಿ ಹೇಳಿಕೆಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ʻಜಾಕ್ ಹೇಳಿಕೆ ಶುದ್ಧ ಸುಳ್ಳುʼ ಎಂದಿದ್ದಾರೆ. 2020-2022ರ ಅವಧಿಯಲ್ಲಿ ಟ್ವಿಟ್ಟರ್, ಹಲವು ಬಾರಿ ದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿತ್ತು. ರೈತರ ಪ್ರತಿಭಟನೆ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಸಾಕಷ್ಟು ತಪ್ಪು ಮಾಹಿತಿಗಳು ಹರಿದಾಡಿದ್ದವು. ಇಂತಹ ಸುಳ್ಳು ಸುದ್ದಿಗಳನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಾಗಿತ್ತು ಎಂದು ರಾಜೀವ್ ಹೇಳಿದ್ದಾರೆ.
ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ರಾಜ್ಯಸಭಾ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವರು, ಜಾಕ್ ಡೋರ್ಸಿ ಸಂದರ್ಶನದ ತುಣುಕುಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಜಾಕ್ ಡೋರ್ಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ʼರೈತರ ಪ್ರತಿಭಟನೆಗೆ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ನಾವು ನಿರೀಕ್ಷಿಸಿದ ರೀತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ ಎಂಬ ಮಾಹಿತಿ ನಮಗೆ ಇತ್ತು. ಅವರ ಮಟ್ಟದಲ್ಲಿ ತಡೆಯಲು ಪ್ರಯತ್ನಿಸಿದ್ದರು. ಈ ವಿಚಾರವನ್ನು ಜಾಕ್ ಡೋರ್ಸಿ ಇದೀಗ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಈ ಸಂಸ್ಥೆಗಳು ಯಾರ ಒತ್ತಡಕ್ಕೂ ಒಳಗಾಗುವುದಿಲ್ಲ. ಕೇಂದ್ರ ಸರ್ಕಾರವು ಅಂತಹ ಪ್ರಯತ್ನಗಳನ್ನು ಮಾಡಿರಬೇಕುʼ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ಟಿಕಾಯತ್ ಪ್ರತಿಕ್ರಿಯಿಸಿದ್ದಾರೆ.
2020ರ ಸೆಪ್ಟಂಬರ್ 20ರಂದು ಮೂರು ವಿವಾದಿತ ಕೃಷಿ ಕಾನೂನುಗಳಿಗೆ ಸಂಸತ್ತಿನಲ್ಲಿ ಅನುಮೋದನೆ ನೀಡಿರುವುದನ್ನು ಖಂಡಿಸಿ ನವೆಂಬರ್‌ನಲ್ಲಿ ರೈತರು ಐತಿಹಾಸಿಕ ಪ್ರತಿಭಟನೆ ನಡೆಸಿದ್ದರು. ಪಂಜಾಬ್, ಹರ್ಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಐದು ಲಕ್ಷಕ್ಕೂ ಅಧಿಕ ರೈತರು ದೆಹಲಿಯ ಗಡಿಗಳಲ್ಲಿ ಧರಣಿ ಮಾಡಿದ್ದರು. ರೈತರ ಸುದೀರ್ಘ ಪ್ರತಿಭಟನೆ ಎದುರು ಕೇಂದ್ರ ಸರ್ಕಾರ ಮಂಡಿಯೂರಿತ್ತು. ನವೆಂಬರ್ 2021ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು.