ಮುಂದಿನ 30 ವರ್ಷದವರೆಗೂ ನೆಲಮಂಗಲ ಕ್ಷೇತ್ರಕ್ಕೆ ವಿದ್ಯುತ್ ಪೂರೈಕೆ ಕೊರತೆ ಇಲ್ಲ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಸವನಹಳ್ಳಿಯಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ 220 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ನೆಲಮಂಗಲ ತಾಲ್ಲೂಕಿನಲ್ಲಿ ಗೃಹ ಬಳಕೆಗೆ, ಕೃಷಿ, ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ಸಮಸ್ಯೆ ಎದುರಾಗಿತ್ತು. ನೆಲಮಂಗಲ ತಾಲ್ಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದು, ಇದನ್ನು ಬಗೆಹರಿಸಲು ಸುಗಮ ವಿದ್ಯುತ್ ಪೂರೈಕೆಗಾಗಿ ನಾವು 220 ಕೆವಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲು ಗುದ್ದಲಿಪೂಜೆ ನೆರವೇರಿಸಿದ್ದೇವೆ. ಅದಕ್ಕಾಗಿ ಫೀಡರ್ ಗಳು, ಟ್ರಾನ್ಸ್ ಫಾರ್ಮರ್ ಗಳನ್ನು ನೀಡಲಾಗುತ್ತಿದೆ. ಫೀಡರ್ ಮಟ್ಟದ ಸೌರೀಕರಣದ ಮೂಲಕ ರೈತ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ಕುಸುಮ್ – ಸಿ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಕೃಷಿ ಪಂಪ್ ಸೆಟ್‌ಗಳಿಗೆ ಸಂಬಂಧಿಸಿದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು, ಸರ್ಕಾರ ರೈತರಿಗೆ ಸೌರಶಕ್ತಿ ಚಾಲಿತ ಪಂಪ್ ಸೆಟ್‌ಗಳನ್ನು ಒದಗಿಸುವ ಕುಸುಮ್-ಬಿ ಯೋಜನೆಗೆ ಆದ್ಯತೆ ನೀಡುತ್ತಿದೆ. ರಾಜ್ಯ ಸರ್ಕಾರ ತನ್ನ ಸಬ್ಸಿಡಿ ಪಾಲನ್ನು ಶೇ.50ಕ್ಕೆ ಹೆಚ್ಚಿಸಿದೆ. ಆದರೆ, ಕೇಂದ್ರ ಸರ್ಕಾರವು ಶೇ.30ರಷ್ಟು ಸಬ್ಸಿಡಿ ನೀಡುತ್ತದೆ. ರೈತರು ಸೌರ ಪಂಪ್ ಸೆಟ್ ಪಡೆಯಲು ಶೇ.20ರಷ್ಟು ವೆಚ್ಚ ಮಾತ್ರ ಪಾವತಿಸಬೇಕಾಗುತ್ತದೆ. ಈ ಯೋಜನೆಯು ರೈತರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
ರಾಜ್ಯಾದ್ಯಂತ ಮುಂದಿನ ಆರ್ಥಿಕ ವರ್ಷದಲ್ಲಿ 100 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವ ಗುರಿ ಇದೆ ಎಂದು ಹೇಳಿದರು.
ನೆಲಮಂಗಲ ಶಾಸಕ ಶ್ರೀನಿವಾಸ ಮಾತನಾಡಿ, ನೆಲಮಂಗಲ ತಾಲೂಕಿನಲ್ಲಿ 300 ಕೋಟಿ ವೆಚ್ಚದ 220 ಕೆ.ವಿ ವಿದ್ಯುತ್ ಸ್ಥಾವರ ನಿರ್ಮಾಣದಿಂದ ಭವಿಷ್ಯದ ವಿದ್ಯುತ್ ಹೊರೆಯನ್ನು ನೀಗಿಸಬಹುದು. ಜೊತೆಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದು. ತಾಲೂಕಿಗೆ ನೆಲದಡಿ(ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್) ಅಳವಡಿಕೆಗೆ ಮಂಜೂರು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ತಾಲ್ಲೂಕಿನಲ್ಲಿ ನಾಲ್ಕು ವಿದ್ಯುತ್ ಉಪಕೇಂದ್ರಗಳು ಸ್ಥಾಪನೆಗೆ ಕೂಡ ಅನುಮೋದನೆ ನೀಡಿದ್ದಾರೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಕೈಗಾರಿಕಾ ಮತ್ತು ವಾಣಿಜ್ಯ ಸ್ಥಾವರಗಳು ಹೊಸದಾಗಿ ಸ್ಥಾಪನೆಗೊಳ್ಳುತ್ತಿದೆ. ವಿದ್ಯುತ್ ಹೊರೆಯು ದಿನೇ ದಿನೇ ಹೆಚ್ಚಾಗುತ್ತಿದ್ದು, ವಿದ್ಯುತ್ ಪೂರೈಸಲು ಸಹಕಾರಿಯಾಗಲಿದೆ. ಜೊತೆಗೆ ಬೇಸಿಗೆ ಸಮಯದಲ್ಲಿ ರೈತರಿಗೆ ಅನುಕೂಲವಾಗುವಂತೆ ಕೃಷಿ ಪಂಪ್ ಸೆಟ್ ಗಳಿಗೆ ಹೆಚ್ಚುವರಿ ವಿದ್ಯುತ್ ಪೂರೈಸಲು ಹೆಚ್ಚು ಅನೂಕುಲವಾಯಿತು ಎಂದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | 2024ರಲ್ಲಿ 190 ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಕುಮಾರ್ ಪಾಂಡೆ, ನೆಲಮಂಗಲ ನಗರ ಸಭೆ ಅಧ್ಯಕ್ಷರಾದ ಎನ್. ಗಣೇಶ್, ಉಪಾಧ್ಯಕ್ಷರಾದ ಜಿ. ಆನಂದ್, ನೆಲಮಂಗಲ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ನಾರಯಣ ಗೌಡ, ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರ್, ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ನಾಗರತ್ನ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.