ವಾಹನವೊಂದರಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಒಂದೇ ಕುಟುಂಬದ ಮೂವರು ಮತ್ತು ಇತರೆ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಸೆನ್ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಗೆರಗಿರೆಡ್ಡಿ ಪಾಳ್ಯದ ನಿವಾಸಿಗಳಾದ ದೇವಮ್ಮ(38), ತಂದೆ ಮಾರಪ್ಪ(63), ಮಗ ಅಂಜಿ(18), ಆದಿನಾರಾಯಣ(26) ಮತ್ತು ಹಾಲಿ ಚಿಂತಾಮಣಿ ನಗರದಲ್ಲಿ ವಾಸವಿರುವ ಆಂಧ್ರ ಮೂಲದ ವೆಂಕಟರಮಣ(24) ಬಂಧಿತ ಐವರು ಆರೋಪಿಗಳು.
ಒರಿಸ್ಸಾದಿಂದ ಬರುವ ಗಾಂಜಾವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ರೈಲಿನಲ್ಲಿ ತಿರುಪತಿಗೆ ತಂದಿದ್ದ ದೇವಮ್ಮ ಮತ್ತು ಗ್ಯಾಂಗ್ ಮುಳುಬಾಗಿಲು, ಶ್ರೀನಿವಾಸಪುರ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪ್ರವೇಶ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ನಗರ ಸೆನ್ ಠಾಣೆ ಪೊಲೀಸರು ಸುಮಾರು 17.5ಲಕ್ಷ ಮೌಲ್ಯದ 35.6ಕೆಜಿ ಗಾಂಜಾ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಗಾಂಜಾ ಸಾಗಾಣೆಗೆ ಬಳಸಿದ್ದ ಮಹಿಂದ್ರ ಕಾರು, ಮೊಬೈಲ್ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಸೊಕ್ಕು-ಸರ್ವಾಧಿಕಾರ-ಮೆದು ಹಿಂದುತ್ವದ ದಾರಿಯನ್ನು ತೊರೆಯುವರೇ ಕೇಜ್ರೀವಾಲ್?
ನಗರ ಸೆನ್ ಠಾಣೆಯ ಡಿವೈಎಸ್ಪಿ ರವಿಕುಮಾರ್, ಇನ್ಸ್ಪೆಕ್ಟರ್ ಸೂರ್ಯಪ್ರಕಾಶ್ ಸೇರಿದಂತೆ ಸಿಬ್ಬಂದಿವರ್ಗದವರು ದಾಳಿಯಲ್ಲಿ ಭಾಗವಹಿಸಿದ್ದು, ಎಸ್ಪಿ ಕುಶಾಲ್ ಚೌಕ್ಸೆ ತಂಡವನ್ನು ಅಭಿನಂದಿಸಿದ್ದಾರೆ.