ತಹಶೀಲ್ದಾರರ ಸಹಿಯನ್ನು ನಕಲು ಮಾಡಿರುವ ರೆವೆನ್ಯೂ ಇನ್ಸ್‌ಪೆಕ್ಟರ್ (ಆರ್‌ಐ) ಮುಜುರಾಯಿ ಇಲಾಖೆಯ 63 ಲಕ್ಷ ರೂ.ಗಳನ್ನು ಲೂಟಿ ಮಾಡಿರುವ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಆರ್‌ಐ ಹೇಮಂತ್ ಕುಮಾರ್ ಎಂಬಾತ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮತ್ತು ಕೇಸ್ ವರ್ಕರ್ ಸಹಿಯನ್ನು ನಕಲು ಮಾಡಿ, ಸೀಲ್‌ಗಳನ್ನು ಬಳಸಿಕೊಂಡು ಕಳೆದ 2 ವರ್ಷಗಳಲ್ಲಿ ಬರೋಬ್ಬರಿ 63 ಲಕ್ಷ ರೂ. ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮುಜರಾಯಿ ಇಲಾಖೆಯ ಅಢಿಯಲ್ಲಿರುವ ದೇವಾಲಯಗಳ ಹಣ ಸರ್ಕಾರಕ್ಕೆ ಸಂದಾಯವಾಗಿಲ್ಲ ಎಂದು ಇತ್ತೀಚೆಗೆ ತಹಶೀಲ್ದಾರ್ ವಿಭಾ ಅವರಿಗೆ ದೂರು ಬಂದಿತ್ತು. ಆ ಬಗ್ಗೆ ತನಿಖೆ ನಡೆಸಲಾಗಿದ್ದು, ಮುಜರಾಯಿ ಇಲಾಖೆಗೆ ಸಂಬಂಧಿಸಿದ ಖಾತೆಯಲ್ಲಿ ಹಣ ಇಲ್ಲದಿರುವುದು ಪತ್ತೆಯಾಗಿದೆ. ಬಳಿಕ, ವಿಭಾ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ, ಆರ್‌ಐ ಹೇಮಂತ್ ಕುಮಾರ್ ಅವರೇ ಹಣವನ್ನು ಲೂಟಿ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹೇಮಂತ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ.
ಹೇಮಂತ್ ಕುಮಾರ್ ಬೆಂಗಳೂರಿನ ಮಹಿಳೆಯೊಬ್ಬರ ಖಾತೆಗೆ ನಿರಂತರವಾಗಿ ಹಣ ವರ್ಗಾವಣೆ ಮಾಡಿದ್ದು, ಆ ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಆ ಹಣದಿಂದ ಆರೋಪಿ ಹೇಮಂತ್ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ವರದಿಯಾಗಿದೆ.