ಮಾ.3ರಿಂದ 21ರವರೆಗೆ ಪ್ರಸಕ್ತ ಸಾಲಿನ ಮೊದಲ ಅಧಿವೇಶನ ಆರಂಭವಾಗಲಿದು, ಮಾ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೆ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಸಿದ್ದರಾಮಯ್ಯ ಅವರ 16ನೇ ದಾಖಲೆ ಬಜೆಟ್ ಮಂಡನೆ ಇದಾಗಲಿದೆ.
ರಾಜ್ಯ ಬಜೆಟ್ 2025ನಲ್ಲಿ ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳ ಬಗ್ಗೆ ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸುಗಮಕಾರರು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ) ಸದಸ್ಯ ವಿ.ಪಿ. ನಿರಂಜನಾರಾಧ್ಯ ಅವರು ವಿವರಿಸಿದ್ದು, ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣದ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲವರ್ಧನೆ ಗೊಳಿಸಲು ಅಗತ್ಯ ಅನುದಾನಗಳನ್ನು ಒದಗಿಸುವ ಬಗ್ಗೆ ಆಗ್ರಹಿಸಿದ್ದಾರೆ.
ಫಾಫ್ರೆ ಆಗ್ರಹಗಳು
ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ಮುಖ್ಯಮಂತ್ರಿಯವರು, ಸೇವಾ ವಲಯವಾದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಹಾಯವಾಗುವ ರೀತಿಯಲ್ಲಿ ಅನುದಾನ ನೀಡಬೇಕು.
ಸರ್ಕಾರಿ ಸಾರ್ವಜನಿಕ ಶಾಲೆಗಳನ್ನು ಸಬಲೀಕರಣಗೊಳಿಸುವ ಮೂಲಕ ಪ್ರತಿಯೊಂದು ಶಾಲೆಯನ್ನು ನೆರೆಹೊರೆಯ ಸಮಾನ ಶಾಲೆಯನ್ನಾಗಿ ಪರಿವರ್ತಿಸಿ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಕೂಗು ರಾಜ್ಯದಲ್ಲಿ ಹಲವು ದಶಕಗಳಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ, ಮಾನ್ಯ ಮುಖ್ಯಮಂತ್ರಿಗಳು ಮತ್ತೊಮ್ಮೆ ಶಾಲಾ ಶಿಕ್ಷಣ ವಲಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ, ಮಂಡಿಸಲಿರುವ ಆಯವ್ಯದಲ್ಲಿ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಅನುದಾನಗಳನ್ನು ಬಿಡುಗಡೆ ಮಾಡಬೇಕು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸೊಕ್ಕು-ಸರ್ವಾಧಿಕಾರ-ಮೆದು ಹಿಂದುತ್ವದ ದಾರಿಯನ್ನು ತೊರೆಯುವರೇ ಕೇಜ್ರೀವಾಲ್?
- ಯಾವುದೇ ಕಾರಣದಿಂದ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲವೆಂದು ಬಜೆಟ್ ನಲ್ಲಿ ಅಧಿಕೃತವಾಗಿ ಘೋಷಿಸಬೇಕು.
- ರಾಜ್ಯದಲ್ಲಿ ಕಿರಿಯ ಪ್ರಾಥಮಿಕ ,ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬುವ ಬಗ್ಗೆ ಬಜೆಟ್ ನಲ್ಲಿ ಘೋಷಿಸಿ ಹಣ ಮೀಸಲಿಡಬೇಕು.
- ಕಳೆದ ನಾಲ್ಕು ವರ್ಷದಿಂದ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಿಸದ ಕಾರಣ ನೂರಾರು ಮಕ್ಕಳು,ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿದ್ದು ಈ ಶೈಕ್ಷಣಿಕ ವರ್ಷದಲ್ಲಿ ಉಚಿತ ಬೈಸಿಕಲ್ ವಿತರಣೆಗೆ ಆಯವ್ಯದಲ್ಲಿ ಅಗತ್ಯ ಅನುದಾನ ನೀಡಬೇಕು.
- ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಿರ್ಧಿಷ್ಟ ಮಧ್ಯ ಪ್ರವೇಶಿಕೆಗಳನ್ನು ರೂಪಿಸಲು ಬಜೆಟ್‌ನಲ್ಲಿ ವಿಶೇಷ ಅನುದಾನ ಒದಗಿಸಬೇಕು .
- ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಸ್ತೃತ ಸಂಶೋಧನೆಯ ಮೂಲಕ ’ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ‘ 2017 ರಲ್ಲಿ ಸಲ್ಲಿಸಿತ್ತು . ಆದರೆ, ಇಲ್ಲಿಯವರೆಗೆ ಈ ವರದಿಯನ್ನು ಜಾರಿಗೊಳಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ವರದಿಯನ್ನು ಸದನದಲ್ಲಿ ಅಂಗೀಕರಿಸಿ ಪೂರ್ಣವಾಗಿ ಜಾರಿಗೊಳಿಸಲು ಆಯವ್ಯಯದಲ್ಲಿ ಹಣ ಮೀಸಲಿಡಬೇಕು.
- ಶಿಕ್ಷಣ ಮೂಲಭೂತ ಹಕ್ಕಾಗಿ ಸಂವಿಧಾನದಲ್ಲಿ ಸೇರಿ 23 ವರ್ಷಗಳು ಮತ್ತು ಈ ಮೂಲಭೂತ ಹಕ್ಕನ್ನು ಸಾಕಾರಗೊಳಿಸಲು ಈ ಹಿಂದೆ ಕೇಂದ್ರಲ್ಲಿದ್ದ ಯುಪಿಎ ಸರ್ಕಾರ ರೂಪಿಸಿ ಜಾರಿಗೊಳಿಸಿದ ಶಿಕ್ಷಣ ಹಕ್ಕು ಕಾಯಿದೆ 2009 ಜಾರಿಗೆ ಬಂದು ಸುಮಾರು 15 ವರ್ಷಗಳು ಕಳೆಯುತ್ತಾ ಬಂದರು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಮೂಲಭೂತ ಸೌಕರ್ಯಗಳಾದ ಶಿಕ್ಷಕರು, ಕಲಿಕಾ ಕೊಠಡಿ, ಅಗತ್ಯ ಪಾಠೋಪಕರಣ, ಪೀಠೋಪಕರಣ ,ಕ್ರೀಡಾ ಸಾಮಗ್ರಿ ಕುಡಿಯುವ ನೀರು, ಶೌಚಾಲಯ, ಇತ್ಯಾದಿಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಆರ್ ಟಿ ಇ ಅನುಪಾಲನೆ ಕೇವಲ ಶೇಕದ.26.3. ಈ ಕಾರಣದಿಂದ , ಶಿಕ್ಷಣ ಹಕ್ಕು ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಯವ್ಯದಲ್ಲಿ ʼವಿಶೇಷ ಮೂಲಭೂತ ಸೌಕರ್ಯ ಅಭಿವೃದ್ಧಿ ಅನುದಾನʼ ವನ್ನು ಬಿಡುಗಡೆ ಮಾಡಬೇಕು .
- ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲು ಒಂದು ರೋಡ್ ಮ್ಯಾಪನ್ನು ರೂಪಿಸಿ ರಾಜ್ಯದಲ್ಲಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒಂದು ಉನ್ನತ ಮಟ್ಟದ ಸಮಿತಿ ರಚಿಸುವ ಬಗ್ಗೆ ಬಜೆಟ್ ನಲ್ಲಿ ಘೋಷಿಸಬೇಕು .
- ಕರ್ನಾಟಕ ಅಭಿವೃದ್ಧಿ ಮಾದರಿಯ ಭಾಗವಾಗಿ ಮತ್ತು ಸಾಮಾಜಿಕ ನ್ಯಾಯದ ಆಶಯವನ್ನು ವಿಸ್ತರಿಸಲು ಮತ್ತು ರಾಜ್ಯದಲ್ಲಿ ಬಾಲ ಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹವನ್ನು ತಡೆಗಟ್ಟಲು ʼಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪೂರ್ವ – ಪ್ರಾಥಮಿಕದಿಂದ 12ನೇ ತರಗತಿಯವರೆಗೆ ವಿಸ್ತರಿಸಬೇಕು.
- ಸಂವಿಧಾನದ ವಿಧಿ 45 ರ ಆಶಯದಂತೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸಲು ಅಗತ್ಯ ಮೂಲ ಸೌಕರ್ಯಕ್ಕೆ ಮತ್ತು ನರ್ಸರಿ ಶಿಕ್ಷಕರ ನೇಮಕಾತಿ/ತರಬೇತಿಗೆ ವಿಶೇಷ ಅನುದಾನ ಒದಗಿಸಬೇಕು
- ಗುಣಾತ್ಮಕ ಶಾಲಾ ಶಿಕ್ಷಣಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು , ಅಂಗನವಾಡಿ ಕಾರ್ಯಕರ್ತರು ಮತ್ತು ಬಿಸಿಯೂಟದ ನೌಕರಿಗೆ ಕನಿಷ್ಟ ವೇತನ ಜಾರಿಗೊಳಿಸಬೇಕು.
- ಬಡವರ ಹಾಗು ದಮನಿತರ ಪರವಾಗಿ ಕೆಲಸ ನಿರ್ವಹಿಸುವ ಭರವಷೆಯನ್ನು ಹೊಂದಿರುವ ಈ ಸರ್ಕಾರ ಬಡ ಜನರ ಮೂಲ ಆಶಯವಾಗಿರುವ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ಭಾಗವಾಗಿ ಮುಂಬರುವ ಆಯವ್ಯಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಬೇಕು.