ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮಠದ 75 ವರ್ಷದ ಅರ್ಚಕ ಮತ್ತು ಅವರ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಗರ್ಭಿಣಿಯಾದ ಬಳಿಕ ಈ ವಿಚಾರ ಬಹಿರಂಗವಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಬಾಲಕಿಯ ಸಂಬಂಧಿ ಮಹಿಳೆಯನ್ನು ಕೂಡಾ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ಸಂಜೆ ಅಮರಾವತಿಯ ಶಿರ್ಖೇಡ್ ಪೊಲೀಸ್ ಠಾಣೆಗೆ ಬಾಲಕಿ ತನ್ನ ಪೋಷಕರೊಂದಿಗೆ ಬಂದು ರಿದ್ಧಾಪುರ ಮಠದ ಮುಖ್ಯ ಅರ್ಚಕ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಸಂತ್ರಸ್ತರಿಗೆ ಗರ್ಭಪಾತ ಮಾಡಿಸುವ ಹಕ್ಕಿದೆ: ಅಲಹಾಬಾದ್ ಹೈಕೋರ್ಟ್
ವೈದ್ಯಕೀಯ ಪರೀಕ್ಷೆಯ ವೇಳೆ ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿರುವುದು ಎಂದು ತಿಳಿದುಬಂದಿದೆ. ಬಾಲಕಿಯು ಕಳೆದ ಒಂದು ವರ್ಷದಿಂದ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಮಠದಲ್ಲಿ ಸೇವೆ ಮಾಡಲು ಮಠದಲ್ಲಿ ವಾಸಿಸುತ್ತಿದ್ದಾಳೆ ಎಂದು ವರದಿಯಾಗಿದೆ.
2024ರ ಏಪ್ರಿಲ್ 2ರಂದು ಮುಖ್ಯ ಅರ್ಚಕರು ಬಾಲಕಿಯ ಚಿಕ್ಕಮ್ಮನನ್ನು ಕರೆದು ಬಾಲಕಿಯನ್ನು ತನ್ನೆಡೆಗೆ ಕಳುಹಿಸುವಂತೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಚಿಕ್ಕಮ್ಮ ಬಾಲಕಿಯನ್ನು ಅರ್ಚಕ ಸುರೇಂದ್ರಮುನಿ ತಲೆಗಾಂವ್ಕರ್ ಅವರ ಕೋಣೆಗೆ ಕಳುಹಿಸಿದ್ದು, ಅಲ್ಲಿ ಮಠದ ಅರ್ಚಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಗಳು ಹೇಳಿದರು.
ಮಠದಲ್ಲಿ ವಾಸಿಸುವ ಬಾಲಾಸಾಹೇಬ್ ದೇಸಾಯಿ (40) ಕೂಡ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಬ್ಬರೂ ಆರೋಪಿಗಳು ಹಲವು ತಿಂಗಳುಗಳ ಕಾಲ ಈ ಅಪರಾಧ ಮಾಡಿದ್ದಾರೆ. ಸಂತ್ರಸ್ತೆ ಬಾಲಕಿ ಆರಂಭದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ಚಿಕ್ಕಮ್ಮನಿಗೆ ತಿಳಿಸಿದ್ದಾಳೆ. ಆದರೆ ಚಿಕ್ಕಮ್ಮ ಬಾಲಕಿಯನ್ನು ಬೆದರಿಸಿ ಸುಮ್ಮನಿರುವಂತೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದಲ್ಲಿ ಮಕ್ಕಳ ಮೇಲೆ, ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣಗಳು ಅಧಿಕವಾಗುತ್ತಿದೆ. ಎನ್‌ಜಿಒ ಸಿಆರ್‌ವೈ ವರದಿಯ ಪ್ರಕಾರ ದೇಶದಲ್ಲಿ 2016ರಿಂದ 2022ರ ನಡುವೆ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಸುಮಾರು ಶೇಕಡ 96ರಷ್ಟು ಏರಿಕೆಯಾಗಿದೆ. ಇನ್ನೂ ಹಲವು ಪ್ರಕರಣಗಳು ವರದಿಯೇ ಆಗಿಲ್ಲ. 2020 ಹೊರತುಪಡಿಸಿ 2016ರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 2021ರಿಂದ 2022ರ ನಡುವೆ ಶೇಕಡ 6.9ರಷ್ಟು ಪ್ರಕರಣಗಳು ಅಧಿಕವಾಗಿದೆ.
