ಅಕ್ಕನಮನೆ ಪ್ರತಿಷ್ಠಾನ ಬೆಂಗಳೂರು ಹಮ್ಮಿಕೊಂಡಿರುವ “ಸಂಸ್ಕೃತಿ ಸಂಭ್ರಮ- 2025” ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಕೊಡ ಮಾಡುವ ಪ್ರತಿಷ್ಠಿತ “ಅಕ್ಕ ರಾಜ್ಯ ಪ್ರಶಸ್ತಿ” 2025 ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಡಾ.ಮಂಜುನಾಥ್ ಎಂ ವಿ ರವರಿಗೆ ಘೋಷಿಸಲಾಗಿದೆ.
2025 ಮಾರ್ಚ್ 7 ಶುಕ್ರವಾರದಂದು ಬೆಂಗಳೂರಿನ ಕನ್ನಡ ಭವನದ’ ನಯನ ರಂಗಮಂದಿರ’ದಲ್ಲಿ ಸಂಜೆ 4 ಗಂಟೆಗೆ ‘ಜಾನಪದ ಸಂಭ್ರಮ ಹಾಗೂ ಸುವರ್ಣ ಕರ್ನಾಟಕ ಸಂಭ್ರಮ’ದ ಸವಿನೆನಪಿಗಾಗಿ ಆಯೋಜಿಸಿರುವ “ಸಂಸ್ಕೃತಿ ಸಂಭ್ರಮ- 2025” ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅಕ್ಕನಮನೆ ಪ್ರತಿಷ್ಠಾನವು ವಿವೇಕದಿಂದ ವಿಕಾಸದೆಡೆಗೆ ಎಂಬ ಘೋಷ ವಾಕ್ಯ ದೊಂದಿಗೆ ಕಳೆದ ಹದಿನೈದು ವರ್ಷಗಳಿಂದಲೂ ಈ ನೆಲದ ತಾಯಿಬೇರಾದ ಜಾನಪದ, ಕನ್ನಡ ಸಾಹಿತ್ಯ ಹಾಗೂ ಮಹಿಳಾ ಸ್ವಾವಲಂಬನೆಗಾಗಿ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಜಾನಪದ ಕಲಾಪ್ರಕಾರಗಳನ್ನು ಈ ನಾಡಿನ ಯುವಜನತೆಗೆ ತಲುಪಿಸುವ ನಿಟ್ಟಿನಲ್ಲಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿ ಜಾನಪದ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ಹಿರಿಯ ಜನಪದ ಕಲಾವಿದರನ್ನು ಗುರುತಿಸಿ ಸತ್ಕರಿಸಿ, ಜಾನಪದ ಕಲಾವಿದರ ಬದುಕಿನ ಜೊತೆಗೆ ಅವರ ಕಲೆಗಳ ಉಳಿವಿಗಾಗಿ ಸೇವಾ ಕಾರ್ಯ ಕೈಗೊಂಡಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ| ಯುವಜನತೆ ದೇಶದ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ನೆಡೆದುಕೊಳ್ಳುವುದೇ ದೇಶಪ್ರೇಮ: ವಿಧಾನಸಭಾಧ್ಯಕ್ಷ ಯು ಟಿ ಖಾದರ್
ರಾಜ್ಯಮಟ್ಟದ ಸಾಹಿತ್ಯ ಕಮ್ಮಟಗಳು, ಕಾವ್ಯವಾಚನ ಗೋಷ್ಠಿ, ಸಾಹಿತ್ಯಕ ಸ್ಪರ್ಧೆಗಳನ್ನು ಆಯೋಜಿಸಿ ಅಕ್ಕನ ಮನೆ ಪುಸ್ತಕ ಪ್ರಕಾಶನದಿಂದ ಯುವ ಸಾಹಿತಿಗಳಿಗೆ ಉತ್ಸಾಹ ತುಂಬುವ ಕಾರ್ಯ ನಿರಂತರವಾಗಿದೆ. ವಚನ ಸಾಹಿತ್ಯದ ಕೃಷಿ ಕೂಡ ಪ್ರಾರಂಭಿಸುವ ನಿಟ್ಟಿನಲ್ಲಿ ಬಸವಾದಿ ಶರಣರ ಮಾನವತಾ ಸಂದೇಶವನ್ನು ಈಗಿನ ಯುವ ಸಮೂಹಕ್ಕೆ ಮುಟ್ಟಿಸುವ ಕಾರ್ಯ ನಿರ್ವಹಿಸುತ್ತಿದೆ. ಅಕ್ಕನ ಮನೆ ಕ್ರಿಯೇಶನ್ಸ್ ಅಡಿಯಲ್ಲಿ ಮಹಿಳಾ ಸ್ವಾವಲಂಬನೆಯನ್ನು ಗುರಿಯಾಗಿಸಿಕೊಂಡು ಗುಡಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ನೂರಾರು ಮಹಿಳೆಯರಿಗೆ ತರಬೇತಿ ಕೊಟ್ಟು ಉದ್ಯೋಗ ಕಟ್ಟಿಕೊಡುತ್ತಿದೆ.

ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಕ್ಕನ ಮನೆ ಪ್ರತಿಷ್ಠಾನ ‘ಸಂಸ್ಕೃತಿ ಸಂಭ್ರಮ- 2025″ ಕಾರ್ಯಕ್ರಮ ಆಯೋಜಿಸಿ ಜಾನಪದ ಸಂಭ್ರಮ ಹಾಗೂ ಸುವರ್ಣ ಕರ್ನಾಟಕ ಸಂಭ್ರಮದ ಸವಿನೆನಪಿಗಾಗಿ ‘ಕನ್ನಡ ಬೋಧಿಸುತ್ತಿರುವ 50 ಜನ ಶಿಕ್ಷಕರಿಗೆ ಗೌರವ ಸಮರ್ಪಣಾ ನೆಡೆಯಲಿದೆ. .ಈ ಕಾರ್ಯಕ್ರಮಕ್ಕೆ ಹಲವಾರು ಕ್ಷೇತ್ರದ ಗಣ್ಯರು ಆಗಮಿಸುತ್ತಿದ್ದು, ಕರ್ನಾಟಕದ 31 ಜಿಲ್ಲೆಯಿಂದಲೂ ಕನ್ನಡ ಶಿಕ್ಷಕರು ಆಯ್ಕೆಯಾಗಿದ್ದು, ಸತ್ಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.