ಕಲಬುರಗಿಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕನ ಮೃತ ದೇಹವನ್ನು ಪ್ರಾಣಿಯ ರೀತಿ ಅಮಾನವೀಯವಾಗಿ ಎಳೆದೊಯ್ದಿರುವುದು ಅತ್ಯಂತ ಖಂಡನೀಯ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ (ಸಿಪಿಐಎಂ) ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅಭಿಪ್ರಾಯಪಟ್ಟರು.
ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ಚಂದನಸಿಂಗ್ (34) ಎಂಬ ಕಾರ್ಮಿಕ ಲೋ ಬಿಪಿಯಾಗಿ ಹೃದಯಾಘಾತದಿಂದ ಮೃತಪಟ್ಟಿಟ್ಟಿದ್ದ. ಅವನ ದೇಹವನ್ನು ರಸ್ತೆಯ ಮೇಲಿನಿಂದ ಪ್ರಾಣಿಗಳ ದೇಹದಂತೆ ಎಳೆದೊಯ್ಯಲಾಗಿದೆ. ಮೃತ ದೇಹವನ್ನು ಗೌರವಯುತವಾಗಿ ಸಾಗಿಸಬೇಕಾದ ವ್ಯವಸ್ಥೆ ಮಾಡಬೇಕಾಗಿರುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ತನ್ನ ಜವಾಬ್ದಾರಿ ನಿಭಾಯಿಸದ ಆಡಳಿತ ಮಂಡಳಿಯು ಇಂತಹ ಅಮಾನವೀಯತೆಗೆ ಕಾರಣವಾಗಿದೆ. ಸಿಪಿಐಎಂ ಪಕ್ಷ ಈ ಅಮಾನವೀಯತೆಯನ್ನು ತೀವ್ರವಾಗಿ ಖಂಡಿಸುತ್ತದೆ. ಸಿಮೆಂಟ್ ಕಾರ್ಖಾನೆಯ ಮಾಲಿಕರ ಕಾರ್ಮಿಕ ವಿರೋಧಿ ನಡೆ ಕ್ರೌರ್ಯದ ಧೋರಣೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಕಾರ್ಮಿಕನ ಮೃತದೇಹವನ್ನು ಪ್ರಾಣಿ ರೀತಿ ಎಳೆದೊಯ್ದು ವಿಕೃತಿ ಮೆರೆದ ಸಿಮೆಂಟ್ ಕಂಪನಿ
ಕಾರ್ಮಿಕ ನೀತಿ ವಿರುದ್ಧವಾಗಿ ನಡೆದುಕೊಂಡಿರುವ ಶ್ರೀ ಸಿಮೆಂಟ್ ಕಾರ್ಖಾನೆಯ ಮಾಲಿಕರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಹಾಗೂ ಮೃತ ಕಾರ್ಮಿಕನ ಕುಟುಂಬಕ್ಕೆ ರೂ.50 ಲಕ್ಷ ಪರಿಹಾರಧನ ಒದಗಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾ ಆಡಳಿತ ಮತ್ತು ಕಾರ್ಮಿಕ ಇಲಾಖೆಯು ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
