ಬಹುವರ್ಷಗಳ ಬೇಡಿಕೆಯಾಗಿದ್ದ ಅನಧಿಕೃತ ಆಸ್ತಿಗಳಿಗೆ ಖಾತೆ ನೀಡುವ ಕಾನೂನಾತ್ಮಕ ಬಿ-ಖಾತೆ ಅಭಿಯಾನಕ್ಕೆ ಚಿಕ್ಕಬಳ್ಳಾಪುರ ನಗರ ಶಾಸಕ ಪ್ರದೀಪ್ ಈಶ್ವರ್ ನಗರದ 7ನೇ ವಾರ್ಡಿನಲ್ಲಿ ಗುರುವಾರ ಸಾರ್ವಜನಿಕರ ಅರ್ಜಿ ಸ್ವೀಕರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಅರ್ಜಿ ಸ್ವೀಕರಿಸಿ ಬಳಿಕ ಮಾತನಾಡಿದ ಶಾಸಕರು, ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬೇಕೆಂಬ ಸದುದ್ದೇಶದಿಂದ ನಗರದ ಪ್ರತಿ ವಾರ್ಡ್‌ಗಳಲ್ಲೂ ಕೌಂಟರ್ ತೆರೆಯಲಾಗಿದೆ. ನಾಗರಿಕರು ಯಾರಿಗೂ ಹಣ ನೀಡುವ ಅಗತ್ಯವಿಲ್ಲ. ನಾಗರಿಕರು ತಮ್ಮ ಬಳಿಯಿರುವ ಸ್ವತ್ತಿನ ದಾಖಲೆಗಳನ್ನು ಒದಗಿಸಿ ಕಾನೂನಾತ್ಮಕವಾದ ಬಿ-ಖಾತೆ ದಾಖಲೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ನಗರ ನಿವಾಸಿಗಳ ಹತ್ತಾರು ವರ್ಷಗಳ ಬೇಡಿಕೆಯಾಗಿದ್ದ ಖಾತೆ ಕನಸಿಗೆ ರಾಜ್ಯ ಸರಕಾರ ಹಸಿರು ನಿಶಾನೆ ತೋರಿದ್ದು, ಸಾರ್ವಜನಿಕರು ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಯಾರಾದರೂ ಬಡವರು ಕಂದಾಯ ಕಟ್ಟಲು ಸಾಧ್ಯವಾಗದಿದ್ದಲ್ಲಿ ಅಂತವರಿಗೆ ಆಯಾ ವಾರ್ಡಿನ ಸದಸ್ಯರೇ ಕಂದಾಯ ಕಟ್ಟುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಖಾತೆ ಅಭಿಯಾನಕ್ಕೆ ಮೂರು ಪಕ್ಷದವರು ಸಹಕರಿಸಿದ್ದು, ಎಲ್ಲರಿಗೂ ಅಭಿನಂದನೆಗಳು. ಅಭಿಯಾನ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ದಲ್ಲಾಳಿಗಳಿಗೆ ಬ್ರೇಕ್ ಹಾಕೋಣ ಎಂದರು.
ಡಿವೈನ್ ಸಿಟಿ ಬಡಾವಣೆ ಮುಖಂಡರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಅಲ್ಲಿನ ಅಧಿಕೃತ ಆಸ್ತಿಗಳಿಗೆ ಖಾತೆ ಮಾಡಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮೊದಲ ದಿನ 716 ಅರ್ಜಿಗಳು ಸ್ವೀಕಾರ :
ಬಿ-ಖಾತೆ ಅಭಿಯಾನದ ಮೊದಲ ದಿನವಾದ ಇಂದು ನಗರದ 31 ವಾರ್ಡ್‌ಗಳ ಪೈಕಿ ಒಟ್ಟು 716 ಅರ್ಜಿಗಳು ಸ್ವೀಕಾರವಾಗಿದ್ದು, ಫೆ.22ರವರೆಗೆ ಅಭಿಯಾನ ನಡೆಯಲಿದೆ. ಅವಶ್ಯಕತೆಗೆ ಅನುಗುಣವಾಗಿ ಅಭಿಯಾನವನ್ನು ಮುಂದುವರಿಸಲಾಗುವುದು ಎಂದು ನಗರಸಭೆ ಆಯುಕ್ತ ಮನ್ಸೂರ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ರೈಲಿನಲ್ಲಿ ಗಾಂಜಾ ತಂದಿದ್ದ ಕುಟುಂಬ ಬಂಧನ; 17.5ಲಕ್ಷ ಮೌಲ್ಯದ ಗಾಂಜಾ ವಶ
ಈ ವೇಳೆ ನಗರಸಭೆ ಆಯುಕ್ತ ಮನ್ಸೂರ್ ಅಲಿ ಹಾಗೂ ಇತರೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.