ಗದಗ ಜಿಲ್ಲೆಯಲ್ಲಿ ಜನಪರ ಹಾಗೂ ಪಾರದರ್ಶಕ ಆಡಳಿತ ನೀಡುವುದರ ಮೂಲಕ ಜನಪರ, ಬಡವರ ಪರ ಕೆಲಸ ನಿರ್ವಹಿಸಿ ಜಿಲ್ಲೆಯನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಒದಗಿಸಲಾಗುವದು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಜರುಗಿದ ಹಲವು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಮೊದಲು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಹೊಸ ಸರ್ಕಾರವು ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ ಸರ್ಕಾರ ಜಾರಿಗೊಳಿಸಲಿರುವ ಅನ್ನಭಾಗ್ಯ ಹಾಗೂ ಉಚಿತ ವಿದ್ಯುತ್ ವಿತರಣೆಗೆ ಈಗಿನಿಂದಲೇ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು” ಎಂದು ತಿಳಿಸಿದರು.
“ಸರ್ಕಾರದಿಂದ ಜಾರಿಯಾಗುವ ಯೋಜನೆಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ನಿಗಾವಹಿಸಬೇಕು. ಸರ್ಕಾರ ಜಾರಿಗೊಳಿಸುವ ಮಹತ್ವಾಕಾಂಕ್ಷೆ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿ ಯಶಸ್ವಿಯಾಗಬೇಕಾದರೆ ಅಧಿಕಾರಿಗಳ ಪಾತ್ರ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಬಡವರ ಶ್ರೇಯೋಭಿವೃದ್ಧಿಗಾಗಿ ಮುಂದಾಗಬೇಕು” ಎಂದರು.
“ಯೋಜನೆಗಳ ಜಾರಿ ಕುರಿತು ಸರ್ಕಾರದ ಆದೇಶ ಹೊರಡಿಸಿದ ನಾಲ್ಕೇ ದಿನಗಳಲ್ಲಿ ಯೋಜನೆಯ ಅನುಷ್ಠಾನ ಆರಂಭವಾಗಲೇ ಬೇಕು. ವಿನಾಕಾರಣ ವಿಳಂಬ ಧೋರಣೆ ತೋರುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವದು” ಎಂದು ಎಚ್ಚರಿಸಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಂಚಸೌಲಭ್ಯಗಳನ್ನು ಸೃಷ್ಠಿ ಮಾಡುವದರ ಜೊತೆಗೆ ಇವುಗಳ ನಿರ್ವಹಣೆಗಾಗಿ ಸಾಕಷ್ಟು ಅನುದಾನ ಒದಗಿಸಿದರೂ ಕೂಡ ಇಂದಿನ ಪರಿಸ್ಥಿತಿ ನೋಡಲಾಗದಂತಹ ಸ್ಥಿತಿಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಲ್ಲ ಶಾಲೆಗಳ ಶೌಚಾಲಯಗಳ ಪರಿಸ್ಥಿತಿ, ಶುದ್ಧ ಕುಡಿಯುವ ನೀರಿನ ಸೌಲಭ್ಯಗಳ ಕುರಿತು ಪರಿಶೀಲಿಸಲು ತಿಳಿಸಿದರು.
ಕೃಷಿ ಇಲಾಖೆಯಲ್ಲಿ ಮಂಜೂರಾದ 197 ಹುದ್ದೆಗಳ ಪೈಕಿ 101 ಹುದ್ದೆ ಖಾಲಿ ಇದ್ದು ಇವುಗಳಲ್ಲಿ ಪ್ರಮುಖವಾಗಿ 53 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಲ್ಲಿ 8 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಮಂಜೂರಾದ 497 ಹುದ್ದೆಗಳ ಪೈಕಿ 125 ಹುದ್ದೆಗಳು ಖಾಲಿ ಇದ್ದು ಉಪತಹಶೀಲ್ದಾರ 4, ದ್ವಿತೀಯ ದರ್ಜೆ ಸಹಾಯಕರು 13, ಗ್ರಾಮ ಲೆಕ್ಕಿಗ 15, ಬೆರಳಚ್ಚುಗಾರರು 12, ವಾಹನ ಚಾಲಕರು 11 ಹುದ್ದೆಗಳು ಖಾಲಿ ಇವೆ.
ರೇಷ್ಮೆ ಇಲಾಖೆಯಲ್ಲಿ ಮಂಜೂರಾದ 41 ಹುದ್ದೆಗಳ ಪೈಕಿ 11 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪಶು ಸಂಗೋಪನಾ ಇಲಾಖೆಯಲ್ಲಿ ಮಂಜೂರಾದ 384 ಹುದ್ದೆಗಳ ಪೈಕಿ 102 ಹುದ್ದೆಗಳು ಭರ್ತಿ ಇದ್ದು 242 ಹುದ್ದೆಗಳು ಖಾಲಿ ಇವೆ. ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಮಂಜೂರಾದ 37 ಹುದ್ದೆಗಳು 9 ಹುದ್ದೆಗಳು ಮಾತ್ರ ಖಾಲಿ ಇವೆ. ಅರಣ್ಯ ಇಲಾಖೆಯಲ್ಲಿ ಮಂಜೂರಾದ 106 ಹುದ್ದೆಗಳಲ್ಲಿ 34 ಹುದ್ದೆಗಳು ಖಾಲಿ ಇವೆ.
ಶಿಕ್ಷಣ ಇಲಾಖೆಯ ಪ್ರಾಥಮಿಕ ವಿಭಾಗದಲ್ಲಿ ಮಂಜೂರಾದ 3817 ಹುದ್ದೆಗಳ ಪೈಕಿ 2771 ಹುದ್ದೆಗಳು ಭರ್ತಿ ಇದ್ದು, 1046 ಹುದ್ದೆಗಳು ಖಾಲಿ ಇವೆ. ಈ ಪೈಕಿ 371 ಹುದ್ದೆಗಳಿಗೆ ಸರ್ಕಾರ ಈಗಾಗಲೇ ನೇಮಕಾತಿ ಮಾಡಿದ್ದು, ಸದ್ಯದಲ್ಲೇ ಅವರುಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಬಾಲಕಾರ್ಮಿಕರಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಬೇಕು: ಸತ್ರ ನ್ಯಾಯಾಧೀಶ ಬಸವಾರಾಜ
ಆರೋಗ್ಯ ಇಲಾಖೆಯಲ್ಲಿ ಮಂಜೂರಾದ 1146 ಹುದ್ದೆಗಳ ಪೈಕಿ 742 ಭರ್ತಿ ಇದ್ದು, 384 ಹುದ್ದೆಗಳು ಖಾಲಿ ಇವೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ 127 ಅಂಗನವಾಡಿ ಕಾರ್ಯಕರ್ತೆರಯರು 247 ಆಯಾ ಹುದ್ದೆ ಖಾಲಿ ಇದ್ದು ಸದ್ಯದಲ್ಲೇ ಭರ್ತಿಯಾಗಲಿವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಂಜೂರಾದ 328 ಹುದ್ದೆಗಳ ಪೈಕಿ 132 ಭರ್ತಿ ಇದ್ದು, 196 ಗ್ರೂಪ ಡಿ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು.
ಆಹಾರ ಇಲಾಖೆಯಲ್ಲಿ ಮಂಜೂರಾದ 39 ಹುದ್ದೆಗಳ ಪೈಕಿ 26 ಖಾಲಿ ಇವೆ. ಅದೇ ರೀತಿ ಹೆಸ್ಕಾಂನಲ್ಲಿ ಮಂಜೂರಾದ 789 ಹುದ್ದೆಗಳ ಪೈಕಿ 226 ಹುದ್ದೆಗಳು ಖಾಲಿ ಇವೆ ಎಂದು ಸಂಬಂಧಿಸಿದ ಆಯಾ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪೋಲಿಸ್ ಅಧೀಕ್ಷಕ ಬಿ ಎಸ್ ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ ಪಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳು ಇದ್ದರು.