ಇದುವರೆಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸುಸಜ್ಜಿತವಾದ ಸಿನೆಮಾ ಲೈಬ್ರರಿ ಬಂದಿಲ್ಲ. ಇದು ಆಗಿದ್ದರೆ ಸಿನೆಮಾಸಕ್ತರು ಆಳವಾದ ಅಧ್ಯಯನ ಮಾಡಲು ಅನುಕೂಲವಾಗುತ್ತಿತ್ತು. ಪ್ರೌಢ ಪ್ರಬಂಧಗಳನ್ನು ಸಲ್ಲಿಸಲು ಸಹ ನೆರವಾಗುತ್ತಿತ್ತು. ಲೈಬ್ರರಿಯೇ ಆಗಲಿಲ್ಲ ಎಂದ ಮೇಲೆ ಅದಕ್ಕಾಗಿ ಮೀಸಲಿಟ್ಟ ಹಣ ಏನಾಯಿತು?
ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಟಿ.ಎಸ್. ನಾಗಾಭರಣ ವ್ಯವಸ್ಥಿತ ಸ್ವರೂಪ ನೀಡಲು ಪ್ರಯತ್ನಿಸಿದರು. ಇದೇ ಪ್ರಯತ್ನವನ್ನು ನಂತರ ಬಂದ ಎಲ್ಲ ಅಧ್ಯಕ್ಷರು ಮುಂದುವರಿಸಿದ್ದರೆ ಪ್ರಸ್ತುತ ಇಡೀ ಭಾರತದಲ್ಲಿಯೇ ಸಿನೆಮಾ ಶಿಕ್ಷಣದ ಮಾದರಿ ಸಂಸ್ಥೆಯಾಗಿರುತ್ತಿತ್ತು. ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸಂಸ್ಥೆಯ ಸಾಂಸ್ಥಿಕ ಸ್ವರೂಪದ ಬೆಳವಣಿಗೆಯತ್ತ ಗಮನ ನೀಡದೇ ಅದ್ಧೂರಿತನಕ್ಕೆ ಒತ್ತು ನೀಡಿದರು. ಇವರ ಅವಧಿಯಲ್ಲಿಯೇ ವಿಧಾನಸೌಧದ ಆವರಣದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡುವ ಪರಿಪಾಠ ಶುರುವಾಯಿತು. ಇದು ಸಹ ಅನಗತ್ಯ ದುಂದುವೆಚ್ಚಕ್ಕೆ ಕಾರಣವಾಯಿತು ಎಂದು ಅಕಾಡೆಮಿ ಚಟುವಟಿಕೆಗಳನ್ನು ಗಮನಿಸುತ್ತಾ ಬಂದ ಅನೇಕರು ಹೇಳುತ್ತಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಅಧ್ಯಕ್ಷರಾದಾಗ ಭಾರೀ ನಿರೀಕ್ಷೆ ಇತ್ತು. ಆದರದು ಸಾಕಾರಗೊಳ್ಳಲಿಲ್ಲ!

“ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ವ್ಯವಸ್ಥಿತ ಸ್ವರೂಪ ನೀಡುವಲ್ಲಿ ರಾಜ್ಯ ಸರ್ಕಾರವೂ ವಿಫಲವಾಗಿದೆ. ಫಿಲ್ಮ್ ಫೆಸ್ಟಿವಲ್ ಗೆ ಹಣ ನೀಡಿದ ಮಾತ್ರಕ್ಕೆ ಅದರ ಜವಾಬ್ದಾರಿ ಮುಗಿಯುವುದಿಲ್ಲ. ಚಟುವಟಿಕೆಗಳು ಟೇಕಾಫ್ ಆಗಬೇಕಾದರೆ ಅಧ್ಯಕ್ಷರು ಮತ್ತು ಸದಸ್ಯರನ್ನು ಒಟ್ಟಿಗೆ ನೇಮಕ ಮಾಡಬೇಕು. ಈ ಅವಧಿಯ ಬಗ್ಗೆ ಗಮನಿಸುವುದಾದರೆ 2024ರ ಫೆಬ್ರವರಿಯಲ್ಲಿ ಸಾಧು ಕೋಕಿಲಾ ಅಧ್ಯಕ್ಷರಾಗಿ ನೇಮಕವಾದರು. ಇದಾದ ಒಂದು ವರ್ಷದ ಬಳಿಕ 2025ರ ಫೆಬ್ರವರಿಯಲ್ಲಿ ಏಳುಮಂದಿ ಸದಸ್ಯರ ನೇಮಕವಾಗಿದೆ. ಈ ಪ್ರಕ್ರಿಯೆ ತಡವಾಗುವುದು ಸಂಸ್ಥೆಯ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲವೇ ಎಂದು ಸಿನಿಮಾ ತಜ್ಞ, ಬರಹಗಾರ ಕೆ. ಫಣಿರಾಜ್ ಪ್ರಶ್ನಿಸುತ್ತಾರೆ.
“ಕರ್ನಾಟಕ ಚಲನಚಿತ್ರ ಅಕಾಡೆಮಿ ಬಗ್ಗೆ ನೀವು ಬರೆಯುತ್ತಿರುವುದು (ʼಈ ದಿನ.ಕಾಂʼ ಸರಣಿ) ಸೂಕ್ತವಾಗಿದೆ. ಇದು ಸರ್ಕಾರದ ಗಮನಕ್ಕೆ ಬರಬೇಕು. ಅಕಾಡೆಮಿ ಏಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಯೋಚಿಸಬೇಕು. ನೀವು ಸರಿಯಾದ ಪ್ರಶ್ನೆಗಳನ್ನು ಎತ್ತುತ್ತಿದ್ದೀರಿ. ಅಕಾಡೆಮಿ ಹೆಸರೇ ಅಕಾಡೆಮಿಕ್ ಚಟುವಟಿಕೆಗಳ ಅವಶ್ಯಕತೆಗಳನ್ನು ಹೇಳುತ್ತದೆ. ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಚಲನಚಿತ್ರ ಅಕಾಡೆಮಿ ತನ್ನ ಕ್ಷೇತ್ರದಲ್ಲಿ ಮಾಡುವ ಅವಕಾಶವಿದೆ. ಇದನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಾಧಿಸಬೇಕು ಎಂಬುದು ನಮ್ಮೆಲ್ಲರ ಆಸೆ” ಎನ್ನುತ್ತಾರೆ ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ.
“ಈ ನಿಟ್ಟಿನಲ್ಲಿ ಟಿ.ಎಸ್. ನಾಗಾಭರಣ ಸೂಕ್ತವಾದ ಮುನ್ನುಡಿ ಬರೆದಿದ್ದಾರೆ. ಅವರು ಮಾಡಿದ್ದರ ಜೊತೆಗೆ ನಂತರದ ಅಧ್ಯಕ್ಷರುಗಳು ಹೊಸಹೊಸ ಸಾಧ್ಯತೆಗಳನ್ನು ಮಾಡುತ್ತಾ ಹೋಗಬೇಕಿತ್ತು. ನಾಗಾಭರಣ ಅವರು ಇದ್ದಾಗ (ಫೆಬ್ರವರಿ 27, 2009 ರಿಂದ ಮಾರ್ಚ್ 13, 2012 ) ಇವತ್ತಿನ ಸ್ವರೂಪದ ಡಿಜಿಟಲ್ ಯುಗ ಬಂದಿರಲಿಲ್ಲ̤. ನಂತರ ಬಂದವರು ಡಿಜಿಟಲ್ ಯುಗಕ್ಕೆ ಹೊಂದುವಂಥ ಚಟುವಟಿಕೆಗಳನ್ನು ಮಾಡಬೇಕಿತ್ತು. ಈ ದಿಸೆಯಲ್ಲಿ ಚಿತ್ರೋದ್ಯಮದ ಜೊತೆ ಸಂಪರ್ಕವಿಟ್ಟುಕೊಂಡು ಅದರ ಏಳಿಗೆಗೆ ಶ್ರಮಿಸಬೇಕಿತ್ತು. ಇದಕ್ಕೆ ಉದಾಹರಣೆಯಾಗಿ ಕೇರಳ, ಪಶ್ಚಿಮ ಬಂಗಾಳ ಚಲನಚಿತ್ರ ಅಕಾಡೆಮಿಗಳು ಇವೆ, ಇವುಗಳನ್ನು ಅನುಸರಿಸಿಕೊಂಡು ಹೋದರು ಸಾಕು” ಎಂದು ಪಿ. ಶೇಷಾದ್ರಿ ಅಭಿಪ್ರಾಯಪಡುತ್ತಾರೆ.

“ಟಿ.ಎಸ್. ನಾಗಾಭರಣ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಸುಸಜ್ಜಿತವಾದ ಸಿನೆಮಾ ಲೈಬ್ರರಿ ಮಾಡಲು ಯೋಜನೆ ರೂಪಿಸಿದ್ದರು. ಇದರಲ್ಲಿ ಆರ್ಕೈವ್ ವಿಭಾಗವೂ ಸೇರಿತ್ತು. ಈ ಯೋಜನೆಗೆ ಹೆಚ್ಚಿನ ಹಣಕಾಸು ಬೇಕಿತ್ತು. ಇದರ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವನ್ನು ಸಂಪರ್ಕಿಸಿದ್ದರು. ನಾನಾಗ ಅಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ. ನಾಗಾಭರಣ ಅವರು ಮೊದಲು ನನ್ನೊಂದಿಗೆ ಮಾತನಾಡಿದ್ದರು. ಈ ವಿಚಾರವನ್ನು ಅಂದಿನ ಬಿಡಿಎ ಮುಖ್ಯಸ್ಥರಾಗಿದ್ದ ಹಿರಿಯ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ ಅವರೊಂದಿಗೆ ಪ್ರಸ್ತಾಪಿಸಿದೆ. ಅವರು ಸ್ಪಂದಿಸಿದರು. ಬಿಡಿಎ ಹಾಗೂ ಚಲನಚಿತ್ರ ಅಕಾಡೆಮಿ ಜಂಟಿ ಹೆಸರಿನಲ್ಲಿ ಲೈಬ್ರರಿ ಸ್ಥಾಪಿಸಿದರೆ ಹಣ ನೀಡೋಣ ಎಂದರು. ಆರಂಭದಲ್ಲಿ ಒಂದು ಕೋಟಿ ರೂಪಾಯಿ ನೀಡಿ ನಂತರ ನಾಲ್ಕು ಕೋಟಿ ರೂಪಾಯಿ ನೀಡಲು ಸಮ್ಮತಿಸಿದರು. ಮುಖ್ಯಮಂತ್ರಿ ಗೃಹಕಚೇರಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದಲೇ ಅಕಾಡೆಮಿ ಅಧ್ಯಕ್ಷ ನಾಗಾಭರಣ ಅವರಿಗೆ ಒಂದು ಕೋಟಿ ರೂಪಾಯಿ ಚೆಕ್ ಅನ್ನು ನೀಡಲಾಯಿತು” ಎಂದು ಸಿನೆಮಾ ಬರಹಗಾರರೂ, ವಿಮರ್ಶಕರು, ತಮ್ಮ ಸಿನೆಮಾಯಾನ ಕೃತಿಗೆ ರಾಷ್ಟ್ರದ ಪ್ರತಿಷ್ಠಿತ ಸ್ವರ್ಣಕಮಲ ಪ್ರಶಸ್ತಿ ಪಡೆದ ಕೆ. ಪುಟ್ಟಸ್ವಾಮಿ ನೆನಪು ಮಾಡಿಕೊಳ್ಳುತ್ತಾರೆ.
“ಅಕಾಡೆಮಿಗೆ ಸುಸಜ್ಜಿತ ಲೈಬ್ರರಿ ಮಾಡಬೇಕು ಎಂದು ನಾವು ಹೊರಟಾಗ ಇಂತಿಷ್ಟು ದುಡ್ಡು ಖರ್ಚಾಗಬಹುದು ಎಂದು ಅಂದಾಜು ಮಾಡಿದ್ದೆವು. ನಾಲ್ಕು ಕೋಟಿ ರೂಪಾಯಿಗೆ ಅಪ್ರೂವಲ್ ತೆಗೆದುಕೊಂಡೆವು. ನಾಲ್ಕು ಕೋಟಿ ರೂಪಾಯಿ ತಂದು ಇಟ್ಟೆವು. ಇದರ ಮುಂದಿನ ಹಂತ ಆ ಲೈಬ್ರರಿಯಲ್ಲಿ ಏನಿರಬೇಕು, ಹೇಗಿರಬೇಕು ಎಂಬುದನ್ನು ಯೋಜಿಸಿ ನೆರವೇರಿಸಬೇಕಿತ್ತು. ಆದರೆ, ಅದನ್ನು ಮುಂದಿನವರು ಮಾಡಲಿಲ್ಲ” ಎಂದು ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸುತ್ತಾರೆ.
ಇದುವರೆಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಸುಸಜ್ಜಿತವಾದ ಸಿನಿಮಾ ಲೈಬ್ರರಿ ಬಂದಿಲ್ಲ. ಇದು ಆಗಿದ್ದರೆ ಸಿನಿಮಾಸಕ್ತರು ಆಳವಾದ ಅಧ್ಯಯನ ಮಾಡಲು ಅನುಕೂಲವಾಗುತ್ತಿತ್ತು. ಪ್ರೌಢ ಪ್ರಬಂಧಗಳನ್ನು ಸಲ್ಲಿಸಲು ಸಹ ನೆರವಾಗುತ್ತಿತ್ತು. ಲೈಬ್ರರಿಯೇ ಆಗಲಿಲ್ಲ ಎಂದ ಮೇಲೆ ಅದಕ್ಕಾಗಿ ಮೀಸಲಿಟ್ಟ ಹಣ ಏನಾಯಿತು? ಅಕಾಡೆಮಿ, ವಾರ್ತಾ ಇಲಾಖೆ, ಸರ್ಕಾರ ಉತ್ತರಿಸಬೇಕಲ್ಲವೇ?
(ನಾಳಿನ ಸಂಚಿಕೆಯಲ್ಲಿ: ಚಲನಚಿತ್ರೋತ್ಸವದ ವೀಕೇಂದ್ರೀಕರಣ ಏಕೆ ಆಗುತ್ತಿಲ್ಲ?)
ಇದನ್ನೂ ಓದಿ ಫಿಲ್ಮ್ ಅಕಾಡೆಮಿ ಅವಾಂತರ ಭಾಗ-3 | ನಾಗಾಭರಣ ಅವಧಿಯಲ್ಲಿ ಫಿಲ್ಮ್ ಅಕಾಡೆಮಿಗೆ ಗಟ್ಟಿ ಅಡಿಪಾಯ ದೊರೆಯಿತೆ?

ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ