ಕವಿ ಚಕ್ರವರ್ತಿ ರನ್ನನ ಗತ ವೈಭವ ಸಾರುವ ನಾಡಿನ ಮಹಾ ಉತ್ಸವ ರನ್ನ ವೈಭವಕ್ಕೆ ದಿನಗಣನೆ ಶುರುವಾಗಿದೆ. ರನ್ನನ ನಾಡು ಮುಧೋಳ ಹಾಗೂ ರನ್ನ ಬೆಳಗಲಿಗಳು ಸಾಂಸ್ಕೃತಿಕ ಮಹಾ ಹಬ್ಬಕ್ಕೆ ಸಕಲ ತಯಾರಿಗಳೊಂದಿಗೆ ಸಜ್ಜಾಗಿ ನಿಂತಿವೆ.
ಮುಧೋಳದಲ್ಲಿ ರನ್ನ ವೈಭವ-2025 ನಾಳೆಯೇ, ಅಂದರೆ ಫೆ.22 ರಿಂದ ಶುರುವಾಗಿ ಮೂರು ದಿನ ಅದ್ದೂರಿಯಾಗಿ ನಡೆಯಲಿದೆ. 22ರಂದು ರನ್ನ ಬೆಳಗಲಿಯಲ್ಲಿ ಹಾಗೂ 23, 24ರಂದು ಮುಧೋಳದಲ್ಲಿ ಸಾಂಸ್ಕೃತಿಕ ವೈಭವವೇ ಧರೆಗಿಳಿಯಲಿದೆ.
ಸಿನಿ ತಾರೆಯರು, ಖ್ಯಾತ ಗಾಯಕರು, ಸಂಗೀತ ನಿರ್ದೇಶಕರ ತಂಡಗಳೇ ಮೇಳೈಸಲಿದ್ದು, ಉತ್ಸವವನ್ನು ಕಣ್ತುಂಬಿಕೊಳ್ಳಲು ಕನ್ನಡದ ಮನಸ್ಸುಗಳು, ಕನ್ನಡಾಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿವೆ.
ಈ ಕಾರ್ಯಕ್ರಮಕ್ಕೆ ಜನಪ್ರಿಯ ಚಿತ್ರ ನಟಿ ರಚಿತಾ ರಾಮ್, ಖ್ಯಾತ ನಿರೂಪಕಿ ಅನುಶ್ರೀ, ಗಾಯಕ ಗುರುಕಿರಣ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಆರ್ ಜಿ ರಶೀದ್, ಹಿರಿಯ ನಟ, ಗಾಯಕ ಗುರುರಾಜ ಹೊಸಕೋಟೆ, ಕಿರುತೆರೆ ತಾರೆ ಹನುಮಂತ ಲಮಾಣಿ, ಮಾಳು ನೀಪನಾಳ, ಗಾಯಕಿ ಅನುಪಮ ಭಟ್ ಸೇರಿದಂತೆ ಹಲವು ಸಹ ಕಲಾವಿದರು, ನಾಯಕರು ಆಗಮಿಸಲಿದ್ದಾರೆ.
ರನ್ನ ವೈಭವದ ಮೆರವಣಿಗೆ ಈ ಬಾರಿ ಆಕರ್ಷಣೀಯವಾಗಿರಲಿದೆ. ಕುದರೆ, ಸಾರೋಟು, ಛತ್ರ ಚಾಮರ, ಕೀರ್ತಿ ಧ್ವಜ, ಕೊಂಬು ಕಹಳೆ, ಜಾಗಟೆ, ಪೂರ್ಣ ಕುಂಭ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಕಳೆ ತುಂಬಲಿವೆ. ಇನ್ನು ಮುಧೋಳ್ ಸಾರಿಗೆ ಡಿಪೋದಿಂದ ಸ್ಥಬ್ಧಚಿತ್ರ, ವೈವಿಧ್ಯಮಯ ಕಲೆಗಳು, ಜಾನಪದ ಕಲಾತಂಡಗಳು ಭಾಗವಹಿಸಲಿದ್ದು, ಮತ್ತಷ್ಟು ಮೆರಗು ನೀಡಲಿವೆ.
ಈ ಸುದ್ದಿ ಓದಿದ್ದೀರಾ?: ಸೌಹಾರ್ದತೆಯ ಹೊಸ ಹೆಜ್ಜೆ; ನವನಗರ ಬಾಗಲಕೋಟೆಗೆ ವಿಸ್ತರಿಸಿದ ಸದ್ಭಾವನ ಮಂಚ್
ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ನೇತೃತ್ವದಲ್ಲಿ ರಾಜ್ಯದ 18ಕ್ಕೂ ಹೆಚ್ಚು ಸಚಿವರು, ಇಪ್ಪತ್ತಕ್ಕೂ ಹೆಚ್ಚು ಶಾಸಕರು, ನಿಗಮದ ಅಧ್ಯಕ್ಷರು, ಮೇಲ್ಮನೆ ಸದಸ್ಯರು ಈ ವೈಭವಕ್ಕೆ ಸಾಕ್ಷಿಯಾಗಲಿದ್ದಾರೆ.
