ವಿಜಯನಗರ ಜಿಲ್ಲೆ ಹೊಸದಾಗಿ ರಚನೆಯಾದ ಮೇಲೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ವಿವಿಧ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಆಗ್ರಹಿಸಿತು.
“ವಿಜಯನಗರ ಜಿಲ್ಲೆಯಲ್ಲಿ ಸುಮೂರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಅಗತ್ಯ ಕಾಲೇಜುಗಳು ಇಲ್ಲದೇ ಹೊರ ರಾಜ್ಯ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ವ್ಯಾಸಂಗಕ್ಕಾಗಿ ವಲಸೆ ಹೋಗುತಿದ್ದಾರೆ. ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಗಳು ಮೂಲ ಸೌಕರ್ಯದಿಂದ ಕುಂಠಿತಗೊಂಡಿವೆ. ವಿಷಯವಾರು ಶಿಕ್ಷಕರ ಕೊರತೆ, ಕುಡಿಯುವ ನೀರು, ಶೌಚಾಲಯ, ಆವರಣಗಳಿಲ್ಲ, ಕಟ್ಟಡಗಳ ತೀವ್ರ ದುರಸ್ಥಿ ಸೇರಿ ಹತ್ತಾರು ಸಮಸ್ಯೆಗಳನ್ನು ಜಿಲ್ಲೆ ಎದುರಿಸುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಾಲೆಗಳು ಎಲ್‌ಕೆಜಿ ಮತ್ತು ಪ್ರೌಢ ಶಿಕ್ಷಣದವರೆಗೆ ವಂತಿಕೆ ಹೆಸರಲ್ಲಿ ವಿದ್ಯಾರ್ಥಿ ಪೋಷಕರಿಂದ ಹಣ ವಸೂಲಿಗೆ ನಿಂತಿವೆ ಇದನ್ನು ಸರ್ಕಾರ ತಡೆಯುವುದು ಜರೂರಿದೆ” ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
“ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಬಡರೈತ, ದಲಿತ ಮಕ್ಕಳು ಶೇ.50ರಷ್ಟು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅತಿಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಇರುವುದರಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹೆಣಗಾಡುತ್ತಿದ್ದಾರೆ. ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗಾಗಿ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಈ ಹಿಂದೆ ಮುಖ್ಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದೇವೆ. ಅದರ ಭಾಗವಾಗಿ ಇಂದಿರಾ ಕ್ಯಾಂಟೀನ್ ಮತ್ತು ಸರ್ಕಾರಿ ಕಾನೂನು ಪದವಿ ಕಾಲೇಜು ಮುಂಜೂರು ಮಾಡಲಾಗಿದೆ. ಇದಕ್ಕೆ ಎಸ್‌ಎಫ್‌ಐ ಸಂಘಟನೆಯು ಸ್ವಾಗತಿಸುತ್ತಿದೆ. ಆದರೆ ಅದನ್ನು ಅತೀ ಬೇಗನೆ ಹೊಸಪೇಟೆ ನಗರದಲ್ಲಿ ಆರಂಭಿಸಬೇಕು ಮತ್ತು ಇನ್ನುಳಿದಂತ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವಂತ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಎಸ್ಎಫ್ಐ ಹೊಸಪೇಟೆ ತಾಲೂಕು ಸಮಿತಿ ಒತ್ತಾಯಿಸಿತು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಜನಸ್ನೇಹಿ ಕೇಂದ್ರಗಳ ಸೇವಾ ಶುಲ್ಕ ಇಳಿಸುವಂತೆ ಡಿವೈಎಫ್‌ಐ ಮನವಿ
“ಹೊಸಪೇಟೆ ನಗರದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುತ್ತಿದೆ ಹಾಗಾಗಿ ತಕ್ಷಣವೇ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಗರದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕಾಲೇಜು ಮತ್ತು ಕ್ರಿಡಾಂಗಣ ಪಕ್ಕ ಇಂದಿರಾ ಕ್ಯಾಂಟೀನ್ ಅರಂಭಿಸಬೇಕು. ಸರ್ಕಾರಿ ಪದವಿ ಕಾನೂನು ಕಾಲೇಜು, ಮೆಡಿಕಲ್, ಇಂಜಿನಿಯರಿಂಗ್, ಬಿ.ಎಡ್, ಬಿಪಿ.ಎಡ್, ಸ್ನಾತಕೋತ್ತರ ಪದವಿ ಕಾಲೇಜ್ ಶೀಘ್ರದಲ್ಲಿ ಪ್ರಾರಂಭಿಸಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
