ಫೆಬ್ರವರಿ 15ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದವರ ವಿಡಿಯೋಗಳನ್ನು ಒಳಗೊಂಡಂತೆ 285 ವಿಡಿಯೋ ಮತ್ತು ಲಿಂಕ್‌ಗಳನ್ನು ತೆಗೆದುಹಾಕುವಂತೆ ‘ಎಕ್ಸ್’ಗೆ (ಟ್ವಿಟರ್) ರೈಲ್ವೇ ಸಚಿವಾಲಯ ಆದೇಶ ನೀಡಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ಮಾಹಿತಿ ಮತ್ತು ಪ್ರಚಾರದ ಕಾರ್ಯನಿರ್ವಾಹಕ ನಿರ್ದೇಶಕರು (ರೈಲ್ವೇ ಮಂಡಳಿ) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರೈಲ್ವೇಗೆ ಸಂಬಂಧಿಸಿದ ವಿಚಾರಗಳನ್ನು ತೆಗೆದುಹಾಕುವಂತೆ ನೇರವಾಗಿ ಸೂಚನೆ ನೀಡಬಹುದಾದ ಅಧಿಕಾರವನ್ನು ರೈಲ್ವೇ ಸಚಿವಾಲಯ ನೀಡಿದೆ. ಇದನ್ನೂ ಮುಂಚೆ, ಐಟಿ ಸಚಿವಾಲಯದ ಸೆಕ್ಷನ್ 69ಎ ಬ್ಲಾಕ್ ಸಮಿತಿಯ ಮೂಲಕ ಇಂತಹ ಆದೇಶಗಳನ್ನು ನೀಡಲಾಗುತ್ತಿತ್ತು.
ಈಗ, ಐಟಿ ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ರೈಲ್ವೇ ಮಂಡಳಿಯೇ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ನೇರವಾಗಿ ಆದೇಶ ನೀಡಬಹುದಾಗಿದೆ. ಅದೇ ಅಧಿಕಾರವನ್ನು ಬಳಸಿಕೊಂಡು ರೈಲ್ವೇ ಸಚಿವಾಲಯವು ‘ಎಕ್ಸ್’ಗೆ ದೆಹಲಿ ರೈಲ್ವೇ ನಿಲ್ದಾಣ ದುರಂತದ ವಿಡಿಯೋಗಳನ್ನು ಅಳಿಸಿಹಾಕುವಂತೆ ಸೂಚನೆ ನೀಡಿದೆ.
“ಮೃತ ವ್ಯಕ್ತಿಗಳನ್ನು ಚಿತ್ರಿಸುವ ಸೂಕ್ಷ್ಮ ಅಥವಾ ಗೊಂದಲದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಇದು ಕಳವಳಕಾರಿಯಾಗಿದೆ. ಇಂತಹ ಚಿತ್ರಗಳು, ವಿಡಿಯೋಗಳನ್ನು ಹಲವಾರು ಖಾತೆಗಳಿಂದ ಹಂಚಿಕೊಳ್ಳಲಾಗಿದೆ. ಆ ವಿಡಿಯೋಗಳು, ಚಿತ್ರಗಳು, ಲಿಂಕ್‌ಗಳನ್ನು ಆದೇಶ ಜಾರಿಯಾದ 36 ಗಂಟೆಗಳ ಒಳಗೆ ಅಳಿಸಿಹಾಕಬೇಕು” ಎಂದು ‘ಎಕ್ಸ್’ಗೆ ರೈಲ್ವೇ ಸಚಿವಾಲಯ ಸೂಚಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ದೆಹಲಿ ರೈಲ್ವೇ ನಿಲ್ದಾಣದ ಭೀಕರ ಕಾಲ್ತುಳಿತದಲ್ಲಿ ಒಂಬತ್ತು ಮಹಿಳೆಯರು, ನಾಲ್ಕು ಪುರುಷರು ಮತ್ತು ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ದೆಹಲಿ | ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ; ರೈಲ್ವೇ ಇಲಾಖೆಯ ವೈಫಲ್ಯ
ಅಂದಾಜಿನ ಪ್ರಕಾರ, ಕುಂಭಮೇಳದಲ್ಲಿ ಭಾಗಿಯಾಗಲು ಪ್ರಯಾಗ್‌ರಾಜ್‌ಗೆ ರೈಲಿನಲ್ಲಿ ತೆರಳಲು ಸುಮಾರು 50,000 ಕ್ಕೂ ಹೆಚ್ಚು ಜನರು ನವದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಭಾರೀ ಸಂಖ್ಯೆಯ ಪ್ರಯಾಣಿಕರಿಂದ ರೈಲು ನಿಲ್ದಾಣ ತುಂಬಿಹೋಗಿತ್ತು. ಇಂತಹ ಸಮಯದಲ್ಲಿ ರೈಲು ನಿಲ್ಲುವ ಪ್ಲಾಟ್‌ಫಾರಂಅನ್ನು ಕೊನೆ ಕ್ಷಣದಲ್ಲಿ ಬದಲಿಸಲಾಯಿತು. ಪರಿಣಾಮ, ಜನರು ಮತ್ತೊಂದು ಪ್ಲಾಟ್‌ಫಾರಂಗೆ ಹೋಗಲು ಓಡಲಾರಂಭಿಸಿದರು. ಅದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ವರಿದಯಾಗಿದೆ.
ರೈಲು ನಿಲ್ಧಾಣದಲ್ಲಿ ಭಾರಿ ಸಂಖ್ಯೆಯ ಪ್ರಯಾಣಿಕರು ಧಾವಿಸುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅವುಗಳಲ್ಲಿ, ಹಲವರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು, ತಮ್ಮ ಸಾಮಾನುಗಳನ್ನು ಎಳೆದುಕೊಂಡು ಓಡುತ್ತಿರುವುದು, ಹೆಣಗಾಡುತ್ತಿರುವುದು ಕಂಡುಬಂದಿದೆ.
ಭವಿಷ್ಯದಲ್ಲಿ ಇಂತಹ ದುರಂತಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸುರಕ್ಷತಾ ಕ್ರಮಗಳನ್ನು ತಕ್ಷಣ ಜಾರಿಗೆ ತರುವಂತೆ ಕೇಂದ್ರ ಸರ್ಕಾರ, ಭಾರತೀಯ ರೈಲ್ವೇ ಹಾಗೂ ರೈಲ್ವೇ ಮಂಡಳಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.