ಇಂದು ಕೃಷಿಯಲ್ಲಿ ಅನೇಕ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು, ರೈತರಿಗೆ ಆದಾಯ ದ್ವಿಗುಣಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಸದಾ ಸನ್ನದ್ಧರಾಗಿರಬೇಕೆಂದು ನಬಾರ್ಡ್‌ನ ನಿವೃತ್ತ ಮಹಾಪ್ರಬಂಧಕ ಡಾ. ಆರ್ ಎಂ ಕಮ್ಮೂರ ಹೇಳಿದರು.
ವಿಜಯಪುರ ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ʼಇಂದಿನ ಭಾರತದಲ್ಲಿ ಕೃಷಿ ಹಾಗೂ ಕೃಷಿ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಅವಕಾಶಗಳುʼ ಕುರಿತ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಭಾರತವು ತನ್ನ ಕೃಷಿ ಕ್ಷೇತ್ರವನ್ನು ಆಧುನೀಕರಿಸುವಲ್ಲಿ ಗಮನಾರ್ಹ ಧಾಪುಗಾಲು ಹಾಕಿದೆ. ಕೃಷಿ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಸುಸ್ಥಿರ ಪದ್ಧತಿಗಳು ಮತ್ತು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಎಂದರು. ಸಣ್ಣ ಭೂ ಹಿಡುವಳಿಗಳು ಸೀಮಿತ ಭೂಮಿಯಿಂದಾಗಿ, ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಅನೇಕ ರೈತರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಕೆ, ನಿಖರ ಕೃಷಿ ತಂತ್ರಗಳು ಮತ್ತು ತಂತ್ರಜ್ಞಾನ ಹೆಚ್ಚಿಸುವುದು, ಸಾಂಪ್ರದಾಯಿಕ ಬೆಳೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಬೆಳೆ ವೈವಿಧ್ಯೀಕರಣ ಅಳವಡಿಸಿಕೊಳ್ಳುವತ್ತ ಮುಂದೆ ಸಾಗಬೇಕಾಗಿದೆ. ರೈತರು ಬೆಳೆದ ಬೆಳೆಗೆ ಯೋಗ್ಯ ಮಾರುಕಟ್ಟೆಯನ್ನು ಒದಗಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಇದಕ್ಕಾಗಿ ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ” ಎಂದು ಕಿವಿ ಮಾತು ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಜಿ ಸಿ ಮಾಟೊಳ್ಳಿ ಮಾತನಾಡಿ, “ಕೃಷಿ ವಿದ್ಯಾರ್ಥಿಗಳಿಗೆ ವಿವಿಧ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ತಯಾರಾಗಲು ಈಗಿನಿಂದಲೇ ಪ್ರಯತ್ನಿಸಬೇಕೆಂದರು.
ಡಾ ಅಶೋಕ ಕುಲಕರ್ಣಿ ಮಾತನಾಡಿ, “ನವ ಭಾರತದ ನಿರ್ಮಾತೃಗಳಾದ ನವ ಚೈತನ್ಯವುಳ್ಳ ಇಂದಿನ ಕೃಷಿ ವಿದ್ಯಾರ್ಥಿಗಳು ಕೃಷಿ ನವೋದ್ಯಮ ಬೆಳವಣಿಗೆಗೆ ಅನುಕೂಲವಾಗುವಂತೆ ಓದಿನ ಜೊತೆಗೆ, ಕೌಶಲ್ಯವನ್ನು ಅಳವಡಿಸಿಕೊಳ್ಳಬೇಕೆಂದರು”.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ದಲಿತ ನೌಕರರ ಮೇಲೆ ದೌರ್ಜನ್ಯ; ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿ ಧರಣಿ
ಕಾರ್ಯಕ್ರಮದಲ್ಲಿ ಪ್ರಭಾರ ಡೀನ್ ಡಾ. ಎಂ ಎಂ ಜಮಾದಾರ್, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ. ಎಸ್ ಬಿ ಜಗ್ಗಿನವರ, ಡಾ. ಏನ್ ಡಿ ಸುನಿತಾ, ಡಾ. ಎಸ್ ಜಿ ಅಸ್ಕಿ, ಡಾ. ಮಿಲಿಂದ್ ಪೋತದಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ವೀರೇಶ್ ಹವಾಲ್ದಾರ್, ಕಿಶೋರ್ ಹೆಗಡೆ, ಶಿವರಾಜ್ ಮೇಟಿ, ಅರುಣ್, ಅಮೂಲ್ಯ, ಸೃಷ್ಟಿ, ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.
