ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಇಂಗಳೇಶ್ವರ ವಿರಕ್ತಮಠದ ಹಿರಿಯ ಪೂಜ್ಯರಾದ ಶ್ರೀ ಚನ್ನಬಸವ ಸ್ವಾಮೀಜಿ ಅವರನ್ನು ಜಿಲ್ಲಾ ಹಾಗೂ ಬಸವನ ಬಾಗೇವಾಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸನ್ಮಾನ ಮಾಡಿ ಗೌರವ ಸಮರ್ಪಿಸಿದರು.
ಜಿಲ್ಲಾ ಕಸಾಪ ಗೌರವ ಸಲಹೆಗಾರ ಡಾ. ವಿ ಡಿ ಐಹೊಳ್ಳಿ ಮಾತನಾಡಿ, “ಬಹುಕಾಲದವರೆಗೆ ವಚನ ಸಾಹಿತ್ಯದ ಸೇವೆ ಮಾಡುತ್ತ ಅಪರೂಪದ ವಚನ ಶಿಲಾ ಮಂಟಪವನ್ನು ಸ್ಥಾಪಿಸಿ ನಾಡಿನ ಘನತೆ, ಗೌರವವನ್ನು ಹೆಚ್ಚಿಸಿದ ಶ್ರೀಗಳು ಸಮ್ಮೇಳನದ ಸವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಎಲ್ಲ ಶ್ರೀಗಳಿಗೂ ಹಾಗೂ ಸಾಹಿತಿಗಳಿಗೂ ವಿಶೇಷವಾಗಿ ಅನೇಕ ಕನ್ನಡಪರ ಸಂಘಟನೆಗಳಿಗೂ ಅತೀವ ಸಂತೋಷವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಶ್ರೀಗಳಿಂದ ಇನ್ನೂ ಹೆಚ್ಚಿನ ಮಾರ್ಗದರ್ಶನ ಸಿಗುವಂತಾಗಲಿ” ಎಂದರು.
ಬಸವನ ಬಾಗೇವಾಡಿ ತಾಲೂಕಿನ ಹಿರಿಯ ಸಾಹಿತಿ ವಿವೇಕಾನಂದ ಕಲ್ಯಾಣ ಶೆಟ್ಟಿ ಮಾತನಾಡಿ, “ಶ್ರೀಗಳು ಕನ್ನಡದ ಅಭಿಮಾನಿಗಳು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು, ಅದನ್ನು ಉಳಿಸಿ ಬೆಳೆಸಿದ ಕೀರ್ತಿ ಇಂಗಳೇಶ್ವರ ವಿರಕ್ತಮಠಕ್ಕೆ ಸಲ್ಲುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ರೈತರಿಗೆ ಸಹಕರಿಸಲು ವಿದ್ಯಾರ್ಥಿಗಳು ಸಿದ್ಧರಾಗಿ: ಮಹಾಪ್ರಬಂಧಕ ಕಮ್ಮೂರ
ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ಡಾ. ಮಾಧವಗುಡಿ, ಸುರೇಶ ಜತ್ತಿ, ಜಯಶ್ರೀ ಹಿರೇಮಠ, ಶಿವಾನಂದ ಡೋಣೂರ, ಬಸವರಾಜ ಮೇಟಿ, ಶಿವಪುತ್ರ ಅಂಕದ, ಅರವಿಂದ ಕುಲಕರ್ಣಿ, ಕುಮಾರಗೌಡ ಪಾಟೀಲ, ರಾಹುಲ್ ಜಾಧವ ಮುಂತಾದವರು ಉಪಸ್ಥಿತರಿದ್ದರು.
