ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಮತ್ತು ಅರಣ್ಯ ಇಲಾಖೆಯ ಕಿರುಕುಳ ತಡೆಗಟ್ಟಲು ಒತ್ತಾಯಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಶುಕ್ರವಾರ ಪ್ರತಿಭಟನೆ ನಡೆಸಿತು.

“ಬಯಲು ಸೀಮೆಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಯೋಜನೆಯ ದಿಸೆಯಿಂದ ಜಿಲ್ಲೆಯ ಸಾವಿರಾರು ಜನ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಬೇಲೂರು ತಾಲೂಕಿನ ಶಿವಪುರ ಕಾವಲು, ಹಾಸನ ತಾಲೂಕಿನ ಉದಳ್ಳ ಕಾವಲು, ಅರಸೀಕರೆ ತಾಲೂಕಿನ ನಾಯಕನಕೆರೆ ಕಾವಲಿನ ಸುತ್ತಮುತ್ತಲಿನ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು 2022ರಲ್ಲೇ ಆವಾಡ್ ನೋಟಿಸ್ ನೀಡಿದ್ದರೂ ಇದುವರೆಗೂ ಇವರುಗಳಿಗೆ ಸೂಕ್ತ ಪರಿಹಾರವನ್ನು ನೀಡಿಲ್ಲ” ಎಂದು ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಸಾಗುವಳಿ ಮಾಡಿ ಮಂಜೂರಾತಿ ಚೀಟಿ ಪಡೆದು, ಪಹಣಿಯಲ್ಲಿ ಹೆಸರು ಬರುತ್ತಿದ್ದ ಭೂಮಿಗೆ ವಿಶೇಷ ಭೂಸ್ವಾಧೀನಾಧಿಕಾರಿಯವರ ಕಾರ್ಯಾಲಯ ಆವಾಡ್ ನೋಟಿಸ್ ನೀಡಿದ ಮೇಲೆ, ಅರಣ್ಯ ಇಲಾಖೆಯವರು ಬೇಲೂರು ತಾಲೂಕಿನ ಶಿವಪುರ ಕಾವಲು ಗ್ರಾಮಗಳ ಸುತ್ತಮುತ್ತಲಿನ ಸುಮಾರು 30ಕ್ಕೂ ಹೆಚ್ಚು ಜನರಿಗೆ ಭೂ ಪರಿಹಾರ ನೀಡುವುದನ್ನು ತಡೆಹಿಡಿದಿದ್ದಾರೆ.

ಶಿವಪುರ ಕಾವಲಿನ ಸರ್ವೆ ನಂಬರ್ 80/2 ರಲ್ಲಿ 1.32 ಎಕರೆ ಭೂಮಿಯನ್ನು ಎತ್ತಿನಹೊಳೆ ಯೋಜನೆಗೆ ಕಳೆದುಕೊಂಡು ಇದುವರೆಗೂ ಪರಿಹಾರ ಸಿಗದ ಕಾರಣ ಬೇಸತ್ತು ವಡ್ಡರಹಳ್ಳಿ ಗ್ರಾಮದ ನಿವಾಸಿ 55 ವರ್ಷದ ರಂಗಸ್ವಾಮಿ ಬಿನ್ ಮೂಡಯ್ಯ ಎಂಬುವವರು 11 ಡಿಸೆಂಬರ್ 2024ರಂದು ಇದೇ ಎತ್ತಿನ ಹೊಳೆ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡು 5 ವರ್ಷಗಳಾದರೂ ಇದುವರೆಗೂ ಭೂ ಪರಿಹಾರ ಸಿಗದ ಕಾರಣ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ ಎಂದು ರೈತ ಮುಖಂಡ ತಿಳಿಸಿದರು.
ಹಕ್ಕೊತ್ತಾಯಗಳು:
1. ಎತ್ತಿನಹೊಳೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು.
2. 06.12.2022 ರಂದು ಪರಿಹಾರದ ಆವಾರ್ಡ್ ನೋಟಿಸ್ ನೀಡಿದ್ದು, ಪರಿಹಾರದ ಹಣ ಬಡ್ಡಿ ಸಮೇತ ಮರು ಪಾವತಿಯಗಬೇಕು.
3. ರೈತರ ಪರಿಹಾರಕ್ಕೆ ಅರಣ್ಯ ಇಲಾಖೆ ತಂದಿರುವ ತಡೆಯಾಜ್ಞೆಯನ್ನು ರದ್ದುಪಡಿಸಬೇಕು.
4. ಭೂಸ್ವಾಧೀನ ಮಾಡಿಕೊಳ್ಳದೇ ಕಳೆದ 4 ವರ್ಷಗಳಿಂದ ಉಳಿಕೆ ಕೃಷಿ ಭೂಮಿಯ ಮೇಲೆ ಕಾಲುವೆಯ ಮಣ್ಣು ಮತ್ತು ಕಲ್ಲಿನ ರಾಶಿ ಹಾಕಿ ವ್ಯವಸಾಯಕ್ಕೆ ಅಡ್ಡಿ ಪಡಿಸಲಾಗಿದೆ. ಇದಕ್ಕೆ ಸೂಕ್ತ ರೀತಿಯ ಬೆಳೆ ಪರಿಹಾರ ನೀಡಬೇಕು. ಮತ್ತು ಮಣ್ಣಿನ ಗುಡ್ಡೆಯನ್ನು ತೆರವುಗೊಳಿಸಬೇಕು.
ಇದನ್ನೂ ಓದಿದ್ದೀರಾ?ಹಾಸನ ವಿಶ್ವವಿದ್ಯಾಲಯದ ಉಳಿವಿಗೆ ಎಸ್‌ಎಫ್‌ಐ, ಡಿವೈಎಫ್‌ಐ ಹೋರಾಟ
ಹೋರಾಟದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ವಿವೇಕ ಬಂಟೇನಹಳ್ಳಿ ಗ್ರಾಮದ ವಿರುಪಾಕ್ಷ, ಜಯಣ್ಣ, ಮುತ್ತಣ್ಣ, ಶಿವೇಗೌಡ, ಗಂಗಾಧರ, ಶಿವಪುರ ಕಾವಲಿನ ಸಿದ್ದರಾಜು, ಗಂಗಾಧರ, ಉದಯ್ ಕುಮಾರ್, ಗೋವಿಂದರಾಜು, ರಂಗಸ್ವಾಮಿ, ಪುಟ್ಟರಾಜು, ರಾಜಾನಾಯಕ್ ಇನ್ನಿತರರಿದ್ದರು.
