ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಬಗೆದು ಬಿತ್ತಿದ ಬ್ರಹ್ಮಬೀಜ

ತನುವ ತೋಟವ ಮಾಡಿ,
ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ.
ಒಡೆದು ಸಂಸಾರದ ಹೆಂಟೆಯ,
ಬಗೆದು ಬಿತ್ತಿದೆನಯ್ಯಾ ಬ್ರಹ್ಮಬೀಜವ.

ಅಖಂಡಮಂಡಲವೆಂಬ ಬಾವಿ,
ಪವನವೆ ರಾಟಾಳ,
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ಆವಾಗಳೂ ಈ ತೋಟದಲ್ಲಿ ಜಾಗರವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.

Advertisements

ವಚನಾರ್ಥ:
ಒಬ್ಬ ಸಾಧಕನು ತನ್ನ ಜೀವನದಲ್ಲಿ ಯಾವುದೇ ತೆರನಾದ ಸಾಧನೆಯನ್ನು ಕೈಗೊಳ್ಳುವಾಗ ಅಂತಹಾ ಸಾಧನೆಯನ್ನು ಸಾಧಿಸುವ ಸಾಧನಾ ಮಾರ್ಗ ಹೇಗಿರಬೇಕು ಎಂಬುದರ ಮಾರ್ಗಸೂಚಿ ಈ ವಚನದಲ್ಲಿದೆ. ಸಾಧನೆಯನ್ನು ಸಾಧಿಸಬಯಸುವ ಸಾಧಕನ ತನುಮನಗಳು ಹೇಗೆ ಸಿದ್ಧಗೊಳ್ಳಬೇಕು ಎಂಬುದಕ್ಕೆ ಅಲ್ಲಮ ನೀಡುವ ಸಲಹೆಗಳು ಇಲ್ಲಿವೆ. ತೋಟದಲ್ಲಿ ಗುದ್ದಲಿ ಬಳಸಿ ಕಳೆ ಕಿತ್ತು ಮಣ್ಣ ಹೆಂಟೆಗಳ ಒಡೆದು ಮಡಿ ಮಾಡಿ ಬೀಜ ಬಿತ್ತಿ ಬಾವಿಯಿಂದ ನೀರು ಸೇದಿ ಹಣಿಸಿ ದನಗಳು ಬಂದು ತಿನ್ನಲಾಗದಂತೆ ಬೇಲಿ ಕಟ್ಟಿ ನೋಡಿಕೊಂಡು ಸಸಿಗಳನ್ನು ಸಲಹಿದರೆ ಸಮೃದ್ಧ ಫಲ ಸಿಗುತ್ತದೆ. ಹಾಗೆಯೇ ಸಾಧಕನು ತನ್ನ ದೇಹವೆಂಬ ತೋಟದಲ್ಲಿ ಮನಸ್ಸೆಂಬ ಗುದ್ದಲಿ ಬಳಸಿ ಭ್ರಮೆ ಭ್ರಾಂತಿಗಳನ್ನು ಕಿತ್ತೊಗೆದು ಸಾಂಸಾರಿಕ ಸಮಸ್ಯೆಗಳನ್ನು ಸಾವರಿಸಿಕೊಂಡು ಕ್ರಿಯಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಅವನ್ನು ಹಸನಾಗಿ ಪೋಷಿಸಿ ಕಣ್ಣು ಕಿವಿ ಮೂಗು ನಾಲಗೆ ಸ್ಪರ್ಶವೆಂಬ ಪಂಚೇಂದ್ರಿಯಗಳ ಪ್ರಲೋಭನೆಯಿಂದ ದೂರವಿದ್ದು ಸಮತೆ ತಾಳ್ಮೆಯಿಂದ ಸದಾ ಕಾಲ ಜಾಗೃತನಾಗಿದ್ದರೆ ಬಯಸಿದ ಸಾಧನೆ ಸಿದ್ದಿಸುತ್ತದೆ.

ಪದಪ್ರಯೋಗಾರ್ಥ:
ಬಗೆದು ಬಿತ್ತಿದೆನಯ್ಯಾ ಬ್ರಹ್ಮಬೀಜವ. ಬ್ರಹ್ಮಬೀಜ ಅಂದರೆ ಕ್ರಿಯಾತ್ಮಕ ಚಿಂತನೆಗಳು. ಸಕಾರಾತ್ಮಕ ಆಲೋಚನೆಗಳು. ಹೊಸದನ್ನು ಹುಡುಕುವ ಹಂಬಲಿಕೆ. ದಿನನಿತ್ಯದ ಜಗದ ತಂಟೆಗಳ ಹೆಂಟೆಗಳನ್ನು ಒಡೆದು ಮನಸ್ಸೆಂಬ ಮಣ್ಣನ್ನು ಬಗೆದು ಬ್ರಹ್ಮಬೀಜಗಳನ್ನು ಬಿತ್ತಬೇಕು. ಈ ಬಿತ್ತನೆಯು ಮುಂದೆ ಮೊಳಕೆಯೊಡೆದು ನಂತರ ಸಸಿಯಾಗುವ ಗಿಡ ಮರವಾಗುವ ಸಾಧನೆಗೆ ಕಾರಣವಾಗುತ್ತದೆ. ಇದನ್ನೇ ಬೇಂದ್ರೆಯವರು “ಎದೆಯ ಒಕ್ಕಲಿಗ” ಎಂಬ ಕವನದಲ್ಲಿ ಹೇಳಿದ್ದು.

ಬೆದೆಯರಿತು ಹದಮಾಡು ಹೃದಯದೀ ಹೊಲವನ್ನು!
ಹದ ಬೆದೆಯನರಿತಂಥ ಹೃದಯವಾಸೀ!
ಗರುವ ಗ್ರಹಿಕೆಗಳೆಂಬ ಹುಲ್ಲುಕರಿಕೆಗಳಿಂದ
ಸರುವವೂ ಕೆಟ್ಟಿಹುದು ನಟ್ಟು ಬೆಳೆದು
ಬರುವ ಸುಗ್ಗಿಯ ಬೆಳೆಯು ಭರದಿಂದ ಬರುವಂತೆ ಗುರುವೆ ಮಾಡೋ! ಕಲ್ಪತರುವೆ ಮಾಡೋ!

ಅಲ್ಲಮ ತನುವಿನಲ್ಲಿ ತೋಟವ ಮಾಡಿ ಅಂದದ್ದನ್ನು ಬೇಂದ್ರೆ ಎದೆಯ ಒಕ್ಕಲುತನ ಅಂದಿದ್ದಾರೆ. ಬೆದೆಯರಿತು ಹದಮಾಡು ಹೃದಯದೀ ಹೊಲವನ್ನು ಎಂದು ಬೇಂದ್ರೆ ಹೇಳಿದ್ದನ್ನು ಅಲ್ಲಮ ಬಗೆದು ಬಿತ್ತಿರಿ ಬ್ರಹ್ಮಬೀಜಗಳ ಎಂದಿರುವುದು ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಸಂದೇಶವಾಗಿದೆ. ಹಾಗಾಗಿ ಇದು ಅಲ್ಲಮನ ಅತ್ಯುತ್ತಮ ವಚನಗಳಲ್ಲೊಂದು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X