ಸಾಮಾಜಿಕ, ರಾಜಕೀಯ ಹೋರಾಟಗಾರ ಉಮರ್ ಖಾಲಿದ್ ಅವರನ್ನು ತಿಹಾರ ಜೈಲಿಗೆ ತಳ್ಳಿ ಸಾವಿರಕ್ಕೂ ಹೆಚ್ಚು ದಿನಗಳು ಉರುಳಿವೆ. ಕಪೋಲ ಕಲ್ಪಿತ ಆಪಾದನೆಗಳ ಹೊರಿಸಿ, ವಿಚಾರಣೆಯೇ ಇಲ್ಲದೆ ಸಾವಿರ ದಿನಗಳ ಕಾಲ ವ್ಯಕ್ತಿಯೊಬ್ಬನನ್ನು ಜೈಲಿನಲ್ಲಿ ಕೊಳೆಯಿಸುವ ಈ ಕ್ರೌರ್ಯ ಎಣೆಯಿಲ್ಲದ್ದು
ಬಹುತೇಕ ವಾಟ್ಸ್ಯಾಪ್ ಯೂನಿವರ್ಸಿಟಿ ಫ್ಯಾಕ್ಟರಿಗಳು ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳು ಆಕ್ರಮಣಕಾರಿ ಹಿಂದುತ್ವದ ಆಕ್ರೋಶವನ್ನು ಉತ್ಪಾದಿಸಿ ಮುಖ್ಯಧಾರೆಯ ಟೀವಿ ಸುದ್ದಿ ವಾಹಿನಿಗಳಿಗೆ ಉಣಬಡಿಸುತ್ತವೆ. ಸುದ್ದಿವಾಹಿನಿಗಳು ಉತ್ಪಾದಿಸಿ ಬಡಿಸಿದ ಆಕ್ರೋಶವನ್ನು ಸಾಮಾಜಿಕ ಜಾಲತಾಣ ಮಾಧ್ಯಮಗಳು ಮತ್ತೊಮ್ಮೆ ಉಂಡು ಘರ್ಜಿಸುತ್ತವೆ. ಈ ಎರಡೂ ಮಾಧ್ಯಮಗಳ ನಡುವೆ ನಿರಂತರ ನಡೆಯುತ್ತಿರುವ ಆಕ್ರೋಶದ ಭರ್ಜರಿ ವಿನಿಮಯವಿದು. ಆಕ್ರಮಣಕಾರಿ ಹಿಂದುತ್ವದ ಪ್ರಯೋಗಶಾಲೆಯಲ್ಲಿ ತಯಾರಿಸಿದ ದ್ವೇಷ-ಅಸಹನೆಯ ವಿಷಪಾಕ. ಆಳುವ ಪಕ್ಷದ ವಿಷಯಸೂಚಿಗೆ ನಾಲಗೆಗಳು ನೂರು ಸಾವಿರ ಆಗುವ, ಸಾವಿರಗಳು ಲಕ್ಷಗಳಾಗುವ, ಲಕ್ಷಗಳು ದಶಲಕ್ಷಗಳಾಗುವ ವಿನಿಮಯದ ಆಟವಿದು. ಈ ಅಪಾಯಕಾರಿ ಆಟದಿಂದ ದೂರ ಉಳಿವ ಮುಖ್ಯಧಾರೆಯ ಸುದ್ದಿ ವಾಹಿನಿಗಳನ್ನು ಬೆರಳಲ್ಲಿ ಎಣಿಸಬಹುದೇನೋ.
ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಅಲ್ಲಿನ ಶಿಕ್ಷಕ-ವಿದ್ಯಾರ್ಥಿ ಸಮೂಹಕ್ಕೆ ದೇಶದ್ರೋಹಿ ಪಟ್ಟ ಕಟ್ಟಿದ್ದು ಇಂತಹುದೇ ಒಂದು ನಿರ್ಮಿತಿ. ಉಮರ್ ಖಾಲಿದ್ ದೇಶದ್ರೋಹಿ ಎಂಬ ಮಿಥ್ಯೆ ಕೂಡ ಇದೇ ಸಾಲಿಗೆ ಸೇರಿದ್ದು. ಆಳುವವರ ಮಡಿಲಲ್ಲಿ ಆಡುವ ಜನವಿರೋಧಿ ಮೀಡಿಯಾ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಅಪಪ್ರಚಾರದ ಹೆದ್ದೆರೆಗಳನ್ನು ಎಬ್ಬಿಸುವ ಬಿಜೆಪಿಯ ಐ.ಟಿ.ಸೆಲ್ ಪಾತ್ರ ಈ ನಿರ್ಮಿತಿಯಲ್ಲಿ ಬಹು ದೊಡ್ಡದು.
ಸಾಮಾಜಿಕ ರಾಜಕೀಯ ಹೋರಾಟಗಾರ ಉಮರ್ ಖಾಲಿದ್ ಅವರನ್ನು ತಿಹಾರ ಜೈಲಿಗೆ ತಳ್ಳಿ ಸಾವಿರಕ್ಕೂ ಹೆಚ್ಚು ದಿನಗಳು ಉರುಳಿವೆ. ಕಪೋಲ ಕಲ್ಪಿತ ಆಪಾದನೆಗಳ ಹೊರಿಸಿ, ವಿಚಾರಣೆಯೇ ಇಲ್ಲದೆ ಸಾವಿರ ದಿನಗಳ ಕಾಲ ವ್ಯಕ್ತಿಯೊಬ್ಬನನ್ನು ಜೈಲಿನಲ್ಲಿ ಕೊಳೆಯಿಸುವ ಈ ಕ್ರೌರ್ಯ ಎಣೆಯಿಲ್ಲದ್ದು.
ಉಮರ್ ಖಾಲಿದ್ ಅವರನ್ನು ಬಂಧಿಸಿದ್ದು 2020ರ ಸೆಪ್ಟಂಬರ್ 13ರಂದು. 1967ರ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯಿದೆಯನ್ನು (ಯುಎಪಿಎ) ಅವರಿಗೆ ಅನ್ವಯಿಸಲಾಗಿತ್ತು. ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿಯಲ್ಲಿ ಜರುಗಿದ್ದ ಕೋಮುಗಲಭೆಗಳ ಸಂಚನ್ನು ಹೂಡಿದರೆಂಬುದು ಈತನ ಮೇಲೆ ಹೊರಿಸಲಾದ ಆಪಾದನೆ. ಮೂರು ವರ್ಷಗಳು ಉರುಳಿದ ನಂತರವೂ ಈತ ವಿಚಾರಣಾಧೀನ ಬಂದಿ. ಈತನ ಜಾಮೀನು ಅರ್ಜಿಯನ್ನು ಸತತವಾಗಿ ತಿರಸ್ಕರಿಸುತ್ತ ಬರಲಾಗಿದೆ.
ಉಮರ್ ಖಾಲಿದ್ ಮೇಲೆ ದೆಹಲಿ ಗಲಭೆಗಳನ್ನು ಬಡಿದೆಬ್ಬಿಸಲು ಹಿಂಸೆ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನೀಡಿರುವ ಆರೋಪ ಮಾಡಲಾಗಿದೆ. ದೆಹಲಿಯಲ್ಲಿ 2020ರ ಫೆಬ್ರುವರಿ 23ರಂದು ನಾಗರಿಕ ಕಾನೂನು ತಿದ್ದುಪಡಿ (ಸಿಎಎ) ವಿಧೇಯಕದ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಘರ್ಷಣೆಗಳು ನಡೆದವು. 53 ಮಂದಿ ಗಲಭೆಗಳಿಗೆ ಬಲಿಯಾದರು. 758 ಕೇಸುಗಳಲ್ಲಿ 1,300 ಮಂದಿಯನ್ನು ಬಂಧಿಸಲಾಯಿತು
ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರ ನೇತೃತ್ವದ ಸಮಿತಿ ಸಿದ್ಧಪಡಿಸಿದ ವರದಿಯ ಪ್ರಕಾರ ಸಿಎಎ ಮತ್ತು ಎನ್.ಆರ್.ಸಿ. ಕಾಯಿದೆಗಳು ಮುಸಲ್ಮಾನರಲ್ಲಿ ಪೌರತ್ವವನ್ನು ಕಳೆದುಕೊಳ್ಳುವ ಭೀತಿ ಹುಟ್ಟಿಸಿದ್ದ ದಿನಗಳು. 2019ರ ಡಿಸೆಂಬರ್ 15ರಂದು ದೆಹಲಿ ಪೊಲೀಸರು ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ್ದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ದೆಹಲಿ ವಿಧಾನಸಭೆ ಚುನಾವಣೆಗಳ ಹೊತ್ತು. ಸಿಎಎ ವಿರೋಧಿಗಳನ್ನು ಉದ್ದೇಶಿಸಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಾರ್ವಜನಿಕ ಸಭೆಯಲ್ಲಿ ಹಾಕಿದ್ದ ಘೋಷಣೆ- ದೇಶ್ ಕೇ ಗದ್ದಾರೋಂ ಕೋ, ಗೋಲೀ ಮಾರೋ ಸಾಲೋಂಕೋ…ಗೋಲೀ ಮಾರೋ ಸಾಲೋಂಕೋ ಎಂಬ ಮೂರು ಪದಗಳನ್ನು ಸಭಿಕರಿಂದಲೂ ಕೂಗಿಸಿದ್ದರು ಕೇಂದ್ರ ಸಚಿವರು.
ಇಂತಹ ಪ್ರಚೋದನಕಾರಿ ಭಾಷಣ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಮೋದಿ ಸಚಿವ ಸಂಪುಟದಲ್ಲಿ ರಾಜ್ಯ ಸಚಿವ ಪದವಿಯಿಂದ ಕ್ಯಾಬಿನೆಟ್ ದರ್ಜೆಗೆ ಬಡ್ತಿ ದೊರೆಯಿತು. ದೆಹಲಿ ಕೋಮು ಗಲಭೆಗಳನ್ನು ಪ್ರಚೋದಿಸಿದ ಮತ್ತೊಬ್ಬ ಬಿಜೆಪಿಗ ಕಪಿಲ್ ಮಿಶ್ರ ಅವರ ಕೂದಲೂ ಕೊಂಕಿಲ್ಲ. ಆದರೆ ಅಮಾಯಕ ಉಮರ್ ಖಾಲಿದ್ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ನೀತಿ ನಿರ್ಧಾರಗಳನ್ನು ಪ್ರಶ್ನಿಸಿದ್ದು, ಸಿ.ಎ.ಎ. ಮತ್ತು ಎನ್.ಆರ್.ಸಿ. ಕಾಯಿದೆಗಳನ್ನು ವಿರೋಧಿಸಿದ್ದು ಉಮರ್ ಖಾಲಿದ್ ಮಹಾಪರಾಧ. ಜೆ.ಎನ್.ಯು.ವಿನ ಮುಸ್ಲಿಮ್ ವಿದ್ಯಾರ್ಥಿಗಳ ವಾಟ್ಸ್ಯಾಪ್ ಗ್ರೂಪ್ ನ ಸದಸ್ಯ ಈತ, ಜಂತರ್ ಮಂತರ್, ಜಂಗಪುರ ಆಫೀಸು, ಶಾಹೀನ್ ಬಾಗ್, ಸೀಲಮ್ ಪುರ್, ಜಾಫರಾಬಾದ್ ಹಾಗೂ ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್ ನಲ್ಲಿ ಜರುಗಿದ ಸಭೆಗಳಲ್ಲಿ ಪಾಲ್ಗೊಂಡಿದ್ದ, ತನ್ನ ಭಾಷಣದಲ್ಲಿ ಅಮೆರಿಕೆಯ ಅಧ್ಯಕ್ಷರ ಆಗಮನ ಕುರಿತು ಪ್ರಸ್ತಾಪಿಸಿದ್ದ, ಗಲಭೆಯ ನಂತರ ಈತ ಮತ್ತು ಈತನ ಜೊತೆಗಾರ ಆಪಾದಿತರ ನಡುವೆ ಬಿಡುವಿಲ್ಲದ ಮೊಬೈಲ್ ಫೋನ್ ಸಂಭಾಷಣೆಗಳು ನಡೆದಿವೆ ಎಂಬ ಕಾರಣಗಳನ್ನು ಮುಂದೆ ಮಾಡಿ ಈತನಿಗೆ ಜಾಮೀನು ನಿರಾಕರಿಸಲಾಗಿದೆ.
ಜಾಮೀನೆಂಬುದು ಹಕ್ಕು ಮತ್ತು ಜೈಲೆಂಬುದು ಅಪವಾದ (Bail is the rule and jail is the exception), ಎಂಬ ದಿವಂಗತ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರ ನ್ಯಾಯನುಡಿ ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಬಲು ಮಾನ್ಯ. ಬಲವಾದ ಕಾರಣಗಳಿಲ್ಲದೆ ಯಾರನ್ನೂ ಜೈಲಿನಲ್ಲಿ ಬಂಧಿಸಿ ಇಡಕೂಡದು ಎಂಬುದು ಈ ಮಾತಿನ ಅರ್ಥ. ಆದರೆ ನ್ಯಾಯದೇವತೆಯ ಕಣ್ಣುಗಳಿಗೆ ಇತ್ತೀಚಿನ ವರ್ಷಗಳಲ್ಲಿ ಅನ್ಯಾಯದ ಮತ್ತೊಂದು ಬಟ್ಟೆಯನ್ನು ಕಟ್ಟಿರುವುದು ನಿಚ್ಚಳ ನಿಜ. ಹೀಗಾಗಿಯೇ ಉಮರ್ ನಂತಹ ಆಯ್ದ ಕೆಲವರ ಪಾಲಿಗೆ ‘ಜೈಲೆಂಬುದು ಹಕ್ಕು ಮತ್ತು ಜಾಮೀನೆಂಬುದು ಅಪವಾದ’ ಆಗಿ ಪರಿಣಮಿಸಿದೆ.
