ಯಾವುದೇ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯಾ ಸಮುದಾಯದ ಸ್ಥಿತಿಗತಿಗಳಿಗೆ ಅನುಗುಣವಾಗಿ ಸೂಕ್ತ ಯೋಜನೆ/ಕಾರ್ಯಕ್ರಮಗಳನ್ನು ರೂಪಿಸಬೇಕಿರುತ್ತದೆ ಮತ್ತು ಅದಕ್ಕೆ ಅಗತ್ಯ ಅನುದಾನ ನೀಡಬೇಕಾದುದು ಅತ್ಯಗತ್ಯ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಜೀವನ ಮಟ್ಟವನ್ನು ಸುಧಾರಿಸಲು ಹಾಗೂ ಸಾಮಾಜಿಕ ಪ್ರಗತಿ ಸಾಧಿಸಲು ಬಜೆಟ್ ಒಂದು ಸಾಧನ. ಆದರೆ ಬಜೆಟ್ ಅನ್ನುವುದು ರಾಜಕೀಯ ಪಕ್ಷಗಳಿಗೆ ಮಾತ್ರ ತನ್ನ ಮತದಾರರನ್ನು ಸಂತುಷ್ಟಗೊಳಿಸಲಿಕ್ಕೆ ಇರುವ ಅವಕಾಶ ಎಂಬಂತೆ ಬಿಂಬಿಸಲಾಗಿದೆ. ಆದರೆ ಬಜೆಟ್ ಮೂಲಕ ಸಾಮಾಜಿಕ ನ್ಯಾಯದ ಅನುಷ್ಠಾನ ಮತ್ತು ಸರ್ವರ ಅಭ್ಯುದಯಕ್ಕೆ ಪೂರಕ ಎಂಬುದನ್ನು ಯೋಚಿಸುವುದಿಲ್ಲ ಎನ್ನುವುದೇ ನಮ್ಮ ರಾಜಕೀಯ ವ್ಯವಸ್ಥೆಯ ದುರಂತ.
ಅಲ್ಪಸಂಖ್ಯಾತರ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅನೇಕ ಯೋಜನೆ/ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ವತಿಯಿಂದ ಜಾರಿಗೊಳಿಸಲಾಗುತ್ತಿದೆ. ಆದರೆ ಕಳೆದ 10 ವರ್ಷಕ್ಕಿಂತಲೂ ಹೆಚ್ಚು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಬಜೆಟ್ ಅನುದಾನದಲ್ಲಿ ಈ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ ಮತ್ತು ಬಿಡುಗಡೆಗೊಳಿಸಿದ ಹಾಗೂ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳ ಮೇಲೆ ಬಿಜೆಪಿಯ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಘೋಷಣೆಯನ್ನು ನಂಬಲಿಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ಸಮುದಾಯದ ಪ್ರಗತಿಯನ್ನು ಅಳೆಯುವುದು ಸೂಕ್ತ. ಇದರೊಂದಿಗೆ ಸರ್ಕಾರಿ ಸ್ವಾಮ್ಯದ ಶೈಕ್ಷಣಿಕ, ಆರ್ಥಿಕ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯಕ್ಕಾಗಿ ಸ್ಥಾಪಿಸಲಾದ ಸಂಸ್ಥೆಗಳಿಗೆ ನೀಡಿದ ಅನುದಾನ ಮತ್ತು ಚಾಲ್ತಿಯಲ್ಲಿದ್ದ ಸಂಸ್ಥೆಯ ಯೋಜನೆ/ಕಾರ್ಯಕ್ರಮಗಳಿಗೆ ನಿರ್ದಿಷ್ಟವಾಗಿ ಹೇಗೆ ಅನುದಾನ ಕಡಿತಗೊಳಿಸಿದೆ ಅಥವಾ ನಿಲ್ಲಿಸಿದೆ ಎಂಬುದರ ಕುರಿತು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ.
ಈ ಹಿಂದಿನ ಲೇಖನದಲ್ಲಿ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಚಾಲ್ತಿಯಲ್ಲಿದ್ದ ಪ್ರಸ್ತುತ ಯೋಜನೆಗಳು/ಕಾರ್ಯಕ್ರಮಗಳಿಗೆ ಒದಗಿಸಿರುವ ಅನುದಾನದ ಬಗ್ಗೆ ವಿವರಣೆ ನೀಡಿದ್ದೇನೆ. ಈ ಲೇಖನದಲ್ಲಿ ಹಿಂದಿನ ವರ್ಷಗಳಲ್ಲಿ ಚಾಲ್ತಿಯಲ್ಲಿದ್ದ ಮತ್ತು ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳ ಸ್ಥಿತಿಗತಿಯ ಕುರಿತು ಚರ್ಚಿಸಲಾಗುವುದು.
ಬಹಳ ಪ್ರಮುಖವಾಗಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ (NSP) ಅಡಿಯಲ್ಲಿ ಜಾರಿಯಲ್ಲಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ 2023-24ರ ಬಜೆಟ್ ನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ರೂ.433 ಕೋಟಿ ನೀಡಲಾಗಿತ್ತು. ಆದರೆ ಅದರಲ್ಲಿ ಬಳಕೆ ಮಾಡಿದ್ದು ಮಾತ್ರ ರೂ.95 ಕೋಟಿ, ಅದರಂತೆ 2024-25ರ ಬಜೆಟ್ ನಲ್ಲಿ ಯೋಜನೆಯ ಅನುದಾನವನ್ನು ರೂ.326 ಕೋಟಿಗೆ ಇಳಿಸಲಾಯಿತು. ತದನಂತರ ಅದರಲ್ಲಿ ಕೇವಲ ರೂ.90 ಕೋಟಿ ಅನುದಾನವನ್ನು ಮಾತ್ರ ಬಿಡುಗಡೆಗೊಳಿಸಿತ್ತು. ಇದೀಗ 2025-26ರ ಬಜೆಟ್ ನಲ್ಲಿ ಕೇವಲ ರೂ.195 ಕೋಟಿ ಅನುದಾನವನ್ನು ಮೀಸಲಿಟ್ಟಿರುವ ಕೇಂದ್ರ ಸರ್ಕಾರವು ಶಿಕ್ಷಣ ಸಂಬಂಧಿತ ಕಾರ್ಯಕ್ರಮಗಳಿಗೆ ಬಜೆಟ್ ನಲ್ಲಿ ನಿರಂತರವಾಗಿ ಅನುದಾನ ಕಡಿತಗೊಳಿಸುವ ಮೂಲಕ ಯೋಜನೆಗಳನ್ನು ದುರ್ಬಲಗೊಳಿಸುವ ದುರುದ್ದೇಶದ ನಡೆಯಾಗಿದೆ ಎಂಬುದು ಗೊತ್ತಾಗುತ್ತದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅಂದರೆ 60:40 ಪ್ರಮಾಣದಲ್ಲಿ ಅನುದಾನದ ಜವಾಬ್ದಾರಿಯನ್ನು ಹಂಚಿಕೆ ಮಾಡಿಕೊಂಡು ಜಾರಿಗೊಳಿಸುತ್ತಿವೆ. ಅದರಂತೆ ಕೇಂದ್ರವು ಶೇ.60%ರಷ್ಟು ಅನುದಾನ ನೀಡಿದರೆ, ರಾಜ್ಯವು ಶೇ.40%ರಷ್ಟು ಅನುದಾನವನ್ನು ನೀಡಬೇಕಾಗಿರುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೇಂದ್ರವು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಕೇವಲ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ನೀಡುವುದಾಗಿ ಮತ್ತು 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್‌ಶಿಪ್ ಅನ್ನು ನಿಲ್ಲಿಸುವುದಾಗಿ ಘೋಷಿಸಿದೆ.
ಅದಕ್ಕಾಗಿ ಆರ್.ಟಿ.ಇ. ಕಾಯ್ದೆಯನ್ನು ತಪ್ಪಾಗಿ ವ್ಯಾಖ್ಯಾನ ಮಾಡಿದೆ. ಅದೇನೆಂದರೆ ಆರ್.ಟಿ.ಇ (ಶಿಕ್ಷಣ ಹಕ್ಕು ಕಾಯ್ದೆ) ಪ್ರಕಾರ ಸರ್ಕಾರವು 6 ರಿಂದ 14 ವರ್ಷದ ಮಕ್ಕಳಿಗೆ ಅಂದರೆ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಲಾಗುತ್ತಿದ್ದು, ಆದ್ದರಿಂದ ಆ ತರಗತಿಯ ಮಕ್ಕಳಿಗೆ ಸ್ಕಾಲರ್‌ಶಿಪ್‌ನ ಅಗತ್ಯತೆ ಬೀಳುವುದಿಲ್ಲ ಎಂದು ಹೇಳಿದೆ. ಆದರೆ ಆರ್.ಟಿ.ಇ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮತ್ತು ಯಾವುದೇ ಮಗುವೂ ಆರ್ಥಿಕ ಕಾರಣಗಳಿಗಾಗಿ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸದಂತೆ ತಡೆಯಲು ಹಾಗೂ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸಲು ಉತ್ತೇಜನ ನೀಡಲಿಕ್ಕಾಗಿ ಸ್ಕಾಲರ್‌ಶಿಪ್ ಅನ್ನು ಕೊಡಲಾಗುತ್ತಿತ್ತು ಎಂಬುದು ಗಮನಾರ್ಹ. ಮೆಟ್ರಿಕ್ ಶಿಕ್ಷಣವನ್ನು ಪೊರೈಸಲು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವು ಸಹಕಾರಿಯಾಗಿತ್ತು ಎಂಬುದು ಹಲವು ಸಮೀಕ್ಷೆ/ವರದಿಗಳಿಂದ ಖಾತರಿಯಾಗಿದ್ದು, ಇದು ಪರೋಕ್ಷವಾಗಿ ಕಾಯ್ದೆಯ ಆಶಯವನ್ನು ಹೊಂದಿತ್ತು ಎಂಬ ಸಣ್ಣ ತಿಳಿವಳಿಕೆಯನ್ನು ಸಹ ಅರ್ಥಮಾಡಿಕೊಳ್ಳದೇ ಉದ್ದೇಶಪೂರ್ವಕವಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಕೇಂದ್ರ ಸರ್ಕಾರವು ಕಳೆದ ವರ್ಷದಿಂದಲೇ ನಿಲ್ಲಿಸಿರುವುದು ದುರಂತ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಕಳೆದ ಬಾರಿ ರೂ.413 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈ ಬಾರಿ ಶೇ 65%ರಷ್ಟು ಅನುದಾನವನ್ನು ಇಳಿಕೆ ಮಾಡಿದ್ದಾರೆ.
ಅದೇ ರೀತಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡುವ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಕಳೆದ ಬಾರಿ ರೂ.33.80 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಈ ಬಾರಿ ಅನುದಾನವನ್ನು ರೂ.7.34 ಕೋಟಿಗೆ ಇಳಿಕೆ ಮಾಡಿದ್ದಾರೆ.
ಇದರೊಂದಿಗೆ ವಿದೇಶಿ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನಕ್ಕೆ ನೀಡುತ್ತಿದ್ದ ಶೈಕ್ಷಣಿಕ ಸಾಲ ಸೌಲಭ್ಯಕ್ಕೂ ಅನುದಾನವನ್ನು ಕಡಿತಗೊಳಿಸಲಾಗಿದೆ. ಕಳೆದ ಬಾರಿ ರೂ.15.30 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಈ ಬಾರಿ ಅದನ್ನು ಕಡಿತಗೊಳಿಸಿ ರೂ.8.16 ಕೋಟಿ ಮಾತ್ರ ಅನುದಾನವನ್ನು ಮೀಸಲಿಟ್ಟಿದ್ದಾರೆ. ಇದರಿಂದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸಲು ಬಯಸುವ ಅಭ್ಯರ್ಥಿಗಳಿಗೆ ನಿರಾಶೆ ಮೂಡಿಸಿದೆ.
ಇದರೊಂದಿಗೆ ಅಲ್ಪಸಂಖ್ಯಾತರ ಸಮುದಾಯದ ಶೈಕ್ಷಣಿಕ, ಕೌಶಲ್ಯಾಭಿವೃದ್ಧಿ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ವಿಶೇಷ ಯೋಜನೆ/ಕಾರ್ಯಕ್ರಮಗಳಿಗಾಗಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯ ಅಡಿಯಲ್ಲಿ ಮೌಲಾನಾ ಆಜಾದ್ ಎಜುಕೇಶನಲ್ ಪೌಂಡೇಶನ್ (MAEF) ಎನ್ನುವ ಸರ್ಕಾರಿ ಪ್ರಾಯೋಜಕತ್ವದ ಸಂಸ್ಥೆಯನ್ನು 1989ರಲ್ಲಿ ಅಂದಿನ ಸರ್ಕಾರವು ಹುಟ್ಟುಹಾಕಿತು. ಈ ಸಂಸ್ಥೆಯ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಯುವತಿಯರಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ ಪ್ರಮುಖವಾಗಿ ಉನ್ನತ ಶಿಕ್ಷಣದ ಕಲಿಕೆಗಾಗಿ ಎಂ.ಫಿಲ್(M.Phil) ಮತ್ತು ಪಿ.ಎಚ್.ಡಿ(Ph.D) ಅಧ್ಯಯನಕ್ಕೆ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ ಅನ್ನು ನೀಡಲಾಗುತ್ತಿತ್ತು. ಅದೇ ರೀತಿ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ ಹೆಚ್ಚಿಸಲು ಬೇಗಂ ಹಜರತ್ ಮಹಲ್ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ಅನ್ನು ಸಹ ನೀಡಲಾಗುತ್ತಿತ್ತು. ಇದರೊಂದಿಗೆ ಸಿಕೋ ಔರ್ ಕಮಾವ್ ಎಂಬ ಕೌಶಲ್ಯಾಭಿವೃದ್ಧಿ ಮತ್ತು ಗರೀಬ್ ನವಾಜ್ ಔದ್ಯೋಗಿಕ ಯೋಜನೆಯಂತಹ ಅಭಿವೃದ್ಧಿ ಆಧಾರಿತ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ಮೂಲಕ ಜಾರಿಗೊಳಿಸಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದಲೇ ಮೌಲಾನಾ ಆಜಾದ್ ಎಜುಕೇಶನಲ್ ಫೌಂಡೇಶನ್ ಸಂಸ್ಥೆಗೆ ಅನುದಾನ ನೀಡದೆ, ಅದರ ಅಡಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನು ನಿಲ್ಲಿಸಲಾಗಿದೆ.
ಯು.ಜಿ.ಸಿ(UGC) ಮತ್ತು ಸಿ.ಎಸ್.ಐ.ಆರ್(CSIR) ನ ಜೆ.ಆರ್.ಎಫ್(JRF) ಫೆಲೋಶಿಪ್ ಯೋಜನೆಯೊಂದಿಗೆ ಹೊಂದಿಕೆಯಾಗುತ್ತಿದೆ ಎಂಬ ಆಧಾರ ರಹಿತ ಹೇಳಿಕೆ ನೀಡಿ, ಕೇಂದ್ರದ ಬಿಜೆಪಿ ಸರ್ಕಾರವು ಏಕಾಏಕಿ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ ಅನ್ನು 2022-23 ರಲ್ಲಿ ನಿಲ್ಲಿಸಿತು. ಉಳಿದ ಫೆಲೋಶಿಪ್ ಯೋಜನೆಗಳಲ್ಲಿ ಸ್ಪರ್ಧಾತ್ಮಕತೆ ಇರಲಿದ್ದು ಹಾಗೂ ಇಂತಿಷ್ಟು ನಿರ್ದಿಷ್ಟ ಸಮುದಾಯಕ್ಕೆ ಆರ್ಥಿಕ ನೆರವು ನೀಡುವ ವಾಗ್ದಾನ ಇರದೆ ಇರುವುದರಿಂದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಫೆಲೋಶಿಪ್ ಯೋಜನೆಗಳಲ್ಲಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ.
ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧವನ್ನು ಸುಗಮವಾಗಿ ನಿರ್ವಹಿಸಲು ಸಹಕಾರಿಯಾಗಿದ್ದ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ ಯೋಜನೆಯನ್ನು ನಿಲ್ಲಿಸಿದ್ದು ವಿದ್ಯಾರ್ಥಿಗಳಿಗೆ ಮಾಡಿದ ದ್ರೋಹವಾಗಿದೆ. ಮೌಲಾನಾ ಆಜಾದ್ ಎಜುಕೇಶನಲ್ ಪೌಂಡೇಶನ್ (MAEF) ಸಂಸ್ಥೆಯು 34ಕ್ಕೂ ಹೆಚ್ಚು ವರ್ಷಗಳಿಂದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಕೌಶಲ್ಯಾಭಿವೃದ್ಧಿ ಮತ್ತು ಔದ್ಯೋಗಿಕ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳನ್ನು ನೀಡಿದ ಹಿರಿಮೆ ಅದರದ್ದಾಗಿತ್ತು.
ಇದರೊಂದಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮ (NMDFC) ಅನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲು ಈ ಬಾರಿಯ ಬಜೆಟ್ ನಲ್ಲಿ ಯಾವುದೇ ರೀತಿಯ ಅಗತ್ಯ ಅನುದಾನವನ್ನು ನೀಡದೆ, ಈ ಹಿಂದಿನ ಬಜೆಟ್ ನಂತೆಯೇ ಪೂರಕ ಹಣಕಾಸಿನ ನೆರವು ಕಲ್ಪಿಸದೆ ಇರುವುದು ಪರೋಕ್ಷವಾಗಿ ಈ ಯೋಜನೆಯನ್ನು ನಿಲ್ಲಿಸುವ ಸೂಚನೆಯಾಗಿದೆ.

ಬಹಳ ಪ್ರಮುಖವಾಗಿ ಮುಸ್ಲಿಮ್ ಸಮುದಾಯದ ಮಕ್ಕಳು ಅಭ್ಯಸಿಸುವ ಮದ್ರಸಾ ಶಿಕ್ಷಣಕ್ಕೆ ನೀಡುತ್ತಿದ್ದ ಆರ್ಥಿಕ ಸಹಾಯವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಕಡಿತಗೊಳಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಮದ್ರಸಾ ಶಿಕ್ಷಣಕ್ಕೆ ಕೇವಲ ರೂ.0.01 ಕೋಟಿ ಅಂದರೆ ರೂ.10 ಲಕ್ಷ ಅನುದಾನವನ್ನು ಮಾತ್ರ ಮೀಸಲಿಟ್ಟಿದ್ದಾರೆ. ಮದ್ರಸಾ ಶಿಕ್ಷಣದ ಗುಣಮಟ್ಟ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಆಧುನಿಕ ಶಿಕ್ಷಣದ ಕಲಿಕೆಗಾಗಿ ಮದ್ರಸಾಗಳಲ್ಲಿ ವಿವಿಧ ವಿಷಯಗಳನ್ನು ಬೋಧಿಸಲು ಸರ್ಕಾರ ಆರ್ಥಿಕ ಸಹಾಯವನ್ನು ನೀಡಲಾಗುತ್ತಿತ್ತು. ಮದ್ರಸಾ ಶಿಕ್ಷಣವು ಸಂಯೋಜಿತ ಕಲಿಕೆಗಾಗಿ ಔಪಚಾರಿಕ ಶಿಕ್ಷಣಕ್ಕೆ ಹೊಂದಿಕೊಂಡು ಶೈಕ್ಷಣಿಕ ಪ್ರಗತಿಯತ್ತ ಸಾಗುತ್ತಿರುವಾಗ ಅದಕ್ಕೆ ತಕ್ಕುದಾದ ಸಹಕಾರ ಮತ್ತು ಆರ್ಥಿಕ ನೆರವು ನೀಡಬೇಕಾದುದು ಸರ್ಕಾರದ ಕರ್ತವ್ಯ. ಆದರೆ ಕೇಂದ್ರ ಸರ್ಕಾರವು ತನ್ನ ಮತೀಯ ರಾಜಕೀಯ ಸಿದ್ಧಾಂತದ ಭಾಗವಾಗಿ ಮದ್ರಸಾ ಶಿಕ್ಷಣಕ್ಕೆ ಸಂಪೂರ್ಣ ನೆರವನ್ನು ಹಿಂಪಡೆಯುವ ಮೂಲಕ ಸಮುದಾಯದ ಶೈಕ್ಷಣಿಕ ಪ್ರಗತಿಯನ್ನು ಹಿನ್ನಡೆಯಾಗುವಂತೆ ಮಾಡಿದೆ.
ಈ ಹಿಂದಿನ ಬಜೆಟ್ ಗಳಲ್ಲಿ ಮದ್ರಸಾ ಶಿಕ್ಷಣಕ್ಕೆ ಸರ್ಕಾರ ನೀಡಿದ ಅನುದಾನವು ವರ್ಷವಾರು ಕ್ರಮೇಣವಾಗಿ ಕಡಿತಗೊಳಿಸಿರುವುದು ಈ ಅಂಕಿ-ಅಂಶಗಳದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಅದರಂತೆ 2021-22 ರಲ್ಲಿ ರೂ.174 ಕೋಟಿ, 2022-23 ರಲ್ಲಿ ರೂ.160 ಕೋಟಿ ಹಾಗೂ 2023-24 ರಲ್ಲಿ ರೂ.10 ಕೋಟಿ, 2024-25 ರಲ್ಲಿ ರೂ.2 ಕೋಟಿ, ಈ ಬಾರಿಯ 2025-26ರ ವಾರ್ಷಿಕ ಬಜೆಟ್ ನಲ್ಲಿ ಕೇವಲ ರೂ.10 ಲಕ್ಷ ಮಾತ್ರ ಅನುದಾನ ನೀಡುವ ಮೂಲಕ ಕೇಂದ್ರ ಸರ್ಕಾರವು ಮದ್ರಸಾ ಶಿಕ್ಷಣವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಸಿರುವುದಲ್ಲದೇ ವ್ಯವಸ್ಥಿತವಾಗಿ ಅದನ್ನು ಮುಚ್ಚಲು ಪೂರಕ ವಾತಾವರಣವನ್ನು ನಿರ್ಮಿಸುತ್ತಿದೆ.
ಯುಪಿಎಸ್ಸಿ(UPSC) ಪೂರ್ವಭಾವಿ ಮತ್ತು ಎಸ್.ಎಸ್.ಸಿ(SSC) ಹಾಗೂ ರಾಜ್ಯದ ಲೋಕಸೇವಾ ಆಯೋಗಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ನೀಡುತ್ತಿದ್ದ ಉಚಿತ ಕೋಚಿಂಗ್ ಅನ್ನು 2022-23ರಿಂದಲೇ ನಿಲ್ಲಿಸಲಾಗಿದೆ. ಇದು ಸ್ಪಷ್ಟವಾಗಿ ಸಮುದಾಯದ ಪ್ರತಿಭಾವಂತ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗವನ್ನು ಪಡೆದು ಕಾರ್ಯಾಂಗದ ಭಾಗವಾಗಲು ಇರುವ ಅವಕಾಶವನ್ನು ನಿರ್ಬಂಧಿಸಲಾಗುತ್ತಿದೆ. ಬಡ ಮತ್ತು ಪ್ರತಿಭಾವಂತ ಅಭ್ಯರ್ಥಿಗಳು ಐಎಎಸ್(IAS) ನಂತಹ ಪ್ರತಿಷ್ಠಿತ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ತರಬೇತಿ ಮತ್ತು ಅಧ್ಯಯನಕ್ಕೆ ಪೂರಕವಾದ ಈ ಯೋಜನೆಯನ್ನು ನಿಲ್ಲಿಸುವುದು ಕಾರ್ಯಾಂಗದ ಉನ್ನತ ಸ್ಥಾನದಿಂದ ಇಡೀ ಸಮುದಾಯದ ಪ್ರಾತಿನಿಧ್ಯವನ್ನು ದೂರ ಇಡುವ ದುರುದ್ದೇಶದ ನಿರ್ಧಾರವನ್ನು ತೆಗೆದುಕೊಂಡಿರುವುದು ಕೇಂದ್ರ ಸರ್ಕಾರದ ಅತ್ಯಂತ ಕೀಳು ಮಟ್ಟದ ರಾಜಕೀಯ ನಡೆಯನ್ನು ಪ್ರದರ್ಶಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಮತ ನೀಡುವ ಮತ್ತು ನೀಡದಿರುವ ಜನ ಸಮುದಾಯಗಳನ್ನು ಅಥವಾ ವ್ಯಕ್ತಿಗಳನ್ನು ಸಮಾನವಾಗಿ ಕಾಣಬೇಕಾದುದು ಪ್ರಜಾಪ್ರಭುತ್ವದ ಸೌಂದರ್ಯ ಆದರೆ ಕೆಲವು ಮತಗಳನ್ನು ಸೆಳೆಯಲು ನಿರ್ದಿಷ್ಟ ಸಮುದಾಯಕ್ಕೆ ಸಂವಿಧಾನ ಒದಗಿಸಿದ ಹಕ್ಕುಗಳಿಂದ ವಂಚಿಸುವ ಮತ್ತು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಬಜೆಟ್‌ನಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಬಿಜೆಪಿ ಪಕ್ಷವು ಅಧಿಕಾರಕ್ಕಾಗಿ ಸಂವಿಧಾನದ ಆಶಯಗಳನ್ನು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಮನಬಂದಂತೆ ಅಧಿಕಾರ ನಡೆಸುತ್ತಿರುವುದು ಈ ಕಾಲಘಟ್ಟದ ದುರಂತ ರಾಜಕೀಯ ಸಿದ್ಧಾಂತವಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ ಅಲ್ಪಸಂಖ್ಯಾತರ ಶೈಕ್ಷಣಿಕ-ಸಾಮಾಜಿಕ-ಆರ್ಥಿಕ ಪ್ರಗತಿಗಾಗಿ ಸರ್ಕಾರದ ಕಾರ್ಯಕ್ರಮಗಳೇನು?

ಮಹಮ್ಮದ್ ಪೀರ್ ಲಟಗೇರಿ
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ನಿವಾಸಿಯಾಗಿದ್ದು, ಬಿ.ಇಡಿ ಪದವಿ ಮುಗಿಸಿ, ಎಂ.ಎಸ್ಸಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿ -ಯುವಜನ ಮುಖಂಡರಾಗಿ ಗುರುತಿಸಿಕೊಂಡಿರುವ ಇವರು ರಾಜ್ಯ ಮಟ್ಟದ ಅನೇಕ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.