ಪ್ರಚಲಿತ ವಿದ್ಯಮಾನ ಹಾಗೂ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಲೋಕಸಭೆ ಚುನಾವಣೆಯಲ್ಲಿ ಆರ್‌ಪಿಐ (ಅಂಬೇಡ್ಕರ್) ಪಕ್ಷವು ಎಲ್ಲ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಸಂಘಟನಾಕರರು ತಿಳಿಸಿದ್ದಾರೆ.
ಬೀದರ್‌ನಲ್ಲಿ ಆರ್‌ಪಿಐ (ಅಂಬೇಡ್ಕರ್) ಪಕ್ಷದ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. “ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಪ್ರತಿ ಹಳ್ಳಿಯಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಚಿತಭಸ್ಮ ಶೆಡ್ ನಿರ್ಮಾಣ, ಸುತ್ತುಗೋಡೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸಸಿಗಳನ್ನು ನೆಟ್ಟು ನೆರಳಿನ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.
“ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಎಲ್ಲ ಹಂತದ ಸರ್ಕಾರಿ ನೌಕರಸ್ಥರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಜೊತೆಗೆ ಸರ್ಕಾರಿ ಶಾಲೆಯಲ್ಲಿ ಕಲಿತವರಿಗೆ ಸರ್ಕಾರಿ ನೌಕರಿ ಎಂಬ ಆದೇಶವನ್ನು ಹೋರಡಿಸಬೇಕು” ಎಂದು ಆಗ್ರಹಿಸಿದರು.
“ಕರ್ನಾಟಕದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಪ್ರತಿ ಜಿಲ್ಲೆಗೊಂದು ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು. ಜಿಲ್ಲಾವಾರು ಐಎಎಸ್‌ಐಪಿಎಸ್ ಹಾಗೂ ಕೆಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಪದವಿ ಮುಗಿಸಿ ನೌಕರಿಗಾಗಿ ಕಾಯುತ್ತಿರುವ 21-40 ವರ್ಷದ ಎಲ್ಲ ನಿರುದ್ಯೋಗಿಗಳಿಗೆ ₹3000 ಧನ ಸಹಾಯ ನೀಡಬೇಕು” ಎಂದು ಒತ್ತಾಯಿಸಿದರು.
“ಕರ್ನಾಟಕದಲ್ಲಿ ಪ್ರತಿ ದಲಿತ ಕುಟುಂಬಕ್ಕೆ 2 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ 5 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕ್ರೀಡೆಗೆ ಉತ್ತೇಜನ ನೀಡಬೇಕು. ಪ್ರತಿ ಹಂತದಲ್ಲಿರುವ ಗ್ರಂಥಾಲಯಗಳಿಗೆ ಡಾ. ಬಿ ಆರ್ ಅಂಬೇಡ್ಕರ್ ಗ್ರಂಥಾಲಯ ಎಂದು ಹೆಸರಿಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಲಿಂಗತ್ವ ಅಲ್ಪಸಂಖ್ಯಾತರೂ ಮನುಷ್ಯರೆ, ನಾವು ಸಂವಿಧಾನದ ಅಡಿಯಲ್ಲಿ ಹೆಜ್ಜೆ ಹಾಕಬೇಕು: ಅಕ್ಷತಾ ಕೆ.ಸಿ
“ಪಠ್ಯಪುಸ್ತಕ ಪರಿಷ್ಕರಣೆ ತುರ್ತಾಗಿ ಮಾಡಬೇಕು. ಶಾದಿ ಭಾಗ್ಯ ಯೋಜನೆ ಜಾರಿ ಮಾಡಬೇಕು. ಅಸ್ಪೃಶ್ಯತೆ ನಿವಾರಣೆಗೆ ಜಾಗೃತಿ ಮೂಡಿಸಬೇಕು. ಜೀತ ಪದ್ದತಿ ನಿರ್ಮೂಲನೆ ಮಾಡಬೇಕು. ಜೀತದಾಳು ಎಂದು ಗುರುತಿಸಿದ ವ್ಯಕ್ತಿಗೆ ಬಿಡುಗಡೆಗೋಳಿಸಿ ಸರ್ಕಾರದ ಸೌಲಭ್ಯ ನೀಡಬೇಕು” ಎಂದು ಮನವಿ ಮಾಡಿದರು.
ಈ ವೇಳೆ ರಾಷ್ಟ್ರೀಯ ಉಪಾಧ್ಯಕ್ಷ ಜಲಾಲ್ ಶೇಕ್, ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್, ರಾಜ್ಯ ಕಾರ್ಯಾಧ್ಯಕ್ಷ ಜೀತೆಂದ್ರ ಕಾಂಬಳೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹೆಬ್ಬಾಳ ವೆಂಕಟೇಶ ಮತ್ತು ಡಾ.ಭಾನುಪ್ರಕಾಶ, ಅಲ್ಪಸಂಖ್ಯಾತರ ಘಟಕದ ಯುವ ಅಧ್ಯಕ್ಷ ಸೈಯದ್ ಇಸ್ಮಾಯಿಲ್ ಇದ್ದರು.