ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಪೈಪೋಟಿಯ ಬಗ್ಗೆ ಮಾತನಾಡುವುದಾದರೆ ಭಾರತ-ಪಾಕ್ ತಂಡಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ತದನಂತರ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಸರದಿ. ಅಂತಹ ಹೈವೋಲ್ಟೇಜ್ ಪಂದ್ಯ, ಇಂದು ಪಾಕಿಸ್ತಾನದ ಗಡಾಫಿ ಮೈದಾನದಲ್ಲಿ ನಡೆಯಿತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ, ಆಸ್ಟ್ರೇಲಿಯಾ ತಂಡ ಕೊನೆ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡಿದ್ದು ವಿಶೇಷವಾಗಿತ್ತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆಸ್ಟೇಲಿಯಾ ತಂಡದ ಬೌಲರ್‌ಗಳ ನೀರಿಳಿದ ಇಂಗ್ಲೆಂಡ್ ಬ್ಯಾಟರ್‌ಗಳು, 50
ಓವರ್‌ಗಳಲ್ಲಿ 352 ರನ್‌ಗಳನ್ನು ಪೇರಿಸಿ, ಆಸ್ಟ್ರೇಲಿಯಾಕ್ಕೆ ಸವಾಲುವೊಡ್ಡಿದರು. ಅದರಲ್ಲೂ ಬೆನ್ ಡಕೆಟ್, 3 ಸಿಕ್ಸರ್, 17 ಬೌಂಡರಿಗಳ್ಳುಳ್ಳ 165 ರನ್‌ಗಳ ಅತ್ಯುತ್ತಮ ಆಟ ಆಡಿದರು. ಜೊತೆಗೆ ರೂಟ್ 68, ಬಟ್ಲರ್ 23 ರನ್‌ಗಳ ನೆರವಿನಿಂದ 352 ರನ್‌ಗಳ ಬೃಹತ್ ಮೊತ್ತದ ಸವಾಲೊಡ್ಡಿತು.
ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಬೆನ್ ಡಕೆಟ್ ಅವರು ಅದ್ಭುತವಾದ 165 ರನ್‌ಗಳ ಇನ್ನಿಂಗ್ಸ್, ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ವೈಯಕ್ತಿಕ ರನ್‌ಗಳ ದಾಖಲೆಯಾಗಿದೆ. ಈ ಮೂಲಕ ಡಕೆಟ್, ಜೋ ರೂಟ್ ಅವರ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಇಲ್ಲಿಯವರೆಗಿನ ಬೃಹತ್ ಮೊತ್ತವೆಂದೇ ಪರಿಗಣಿಸಲಾದ 352 ರನ್‌ಗಳ ಬೆನ್ನಟ್ಟಿದ ಆಸ್ಟ್ರೇಲಿಯಾದ ಬ್ಯಾಟರ್‌ಗಳ ಪೈಕಿ, ಆರಂಭಿಕ ಆಟಗಾರ ಮ್ಯಾಥ್ಯೋ ಶಾರ್ಟ್ 63 ರನ್‌ಗಳನ್ನು ಗಳಿಸಿ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟರು. ಆದರೆ, ಆನಂತರ ಬಂದ ಟ್ರಾವಿಸ್ ಹೆಡ್ ಮತ್ತು ಸ್ಟೀವನ್ ಸ್ಮಿತ್, ಕ್ರಮವಾಗಿ 6 ಮತ್ತು 5 ರನ್‌ಗಳಿಗೆ ಔಟಾಗಿ ಭಾರೀ ನಿರಾಶೆ ಉಂಟುಮಾಡಿದರು.
ನಂತರ ಸ್ಕ್ರೀಸ್‌ಗೆ ಇಳಿದ ಲಾಬುಶ್ಯಾನ್(47), ಜೋಸ್ ಇಂಗ್ಲಿಷ್(120), ಅಲೆಕ್ಸ್ ಕ್ಯಾರಿ(69) ಮತ್ತು ಕೊನೆಯಲ್ಲಿ ಬಂದ ಮ್ಯಾಕ್ಸ್ ವೆಲ್(32) ಇಂಗ್ಲೆಂಡ್ ಬೌಲರ್‌ಗಳನ್ನು ಅಕ್ಷರಶಃ ಚೆಂಡಾಡಿಬಿಟ್ಟರು. ಇನ್ನೂ 16 ಬಾಲ್‌ಗಳಿರುವಾಗಲೇ ತಂಡಕ್ಕೆ ಜಯ ತಂದಿತ್ತರು. ಜೋಸ್ ಇಂಗ್ಲಿಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

ಇಂಗ್ಲೆಂಡ್ ಮಾಡಿದ್ದ 352 ರನ್‌ಗಳ ಮೊತ್ತ, ನಿಜಕ್ಕೂ ಉತ್ತಮ ಸ್ಕೋರ್ ಆಗಿತ್ತು. ತಂಡ ಕೂಡ ಗೆಲುವಿನ ಆತ್ಮವಿಶ್ವಾಸದಲ್ಲಿತ್ತು. ಆದರೆ ಜೋಸ್ ಇಂಗ್ಲಿಷ್, ಅಲೆಕ್ಸ್ ಕ್ಯಾರಿ ಮತ್ತು ಮ್ಯಾಕ್ಸ್ ವೆಲ್ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು. ಸೋಲಿನ ದವಡೆಯಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ಅಂಚಿಗೆ ಕೊಂಡೊಯ್ದರು. ಕ್ರಿಕೆಟ್ ಆಟದ ಸೊಗಸನ್ನು ವಿಸ್ತರಿಸಿದರು.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದ ಏಕದಿನ ಸರಣಿಯಲ್ಲಿ ಸೋಲು ಕಂಡಿವೆ. ಇಂಗ್ಲೆಂಡ್ 0-3ರಲ್ಲಿ ಭಾರತದ ವಿರುದ್ಧ, ಆಸ್ಟ್ರೇಲಿಯಾ 0-2ರಲ್ಲಿ ಶ್ರೀಲಂಕಾ ವಿರುದ್ಧ ಹೀನಾಯ ಸೋಲು ಕಂಡಿವೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ನೈಜ ಆಟ ಪ್ರದರ್ಶಿಸಿ, ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ.
ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ – ಆಸ್ಟ್ರೇಲಿಯಾ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 160 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 90ರಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ 65ರಲ್ಲಿ ಜಯ ಸಾಧಿಸಿದೆ. 3 ಪಂದ್ಯ ರದ್ದಾಗಿದ್ದರೆ, 2 ಟೈ ಆಗಿವೆ. ತಟಸ್ಥ ಸ್ಥಳಗಳಲ್ಲಿ ನಡೆದ 9 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 7ರಲ್ಲಿ, ಇಂಗ್ಲೆಂಡ್ ಕೇವಲ 2ರಲ್ಲಿ ಮಾತ್ರ ಜಯ ಸಾಧಿಸಿದೆ.
ಇದನ್ನು ಓದಿದ್ದೀರಾ:? Champions Trophy | ನಾಳೆ ಇಂಡಿಯಾ-ಪಾಕ್ ಹಣಾಹಣಿ; ಭಾರತಕ್ಕೆ ಸೇಡು ತೀರಿಸಿಕೊಳ್ಳುವ ತವಕ
ಏಕದಿನ ವಿಶ್ವಕಪ್‌ಗಳ 10 ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ತಂಡ 7-3ರಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಡ್-ಟು-ಹೆಡ್ ದಾಖಲೆಗಳಲ್ಲಿ ಇಂಗ್ಲೆಂಡ್ ತಂಡವು ಮುನ್ನಡೆ ಸಾಧಿಸಿದೆ. 2004ರ ಚಾಂಪಿಯನ್ಸ್ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾದವು, ಅಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ತಲುಪಿತ್ತು.