“ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿದ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚಲು ಪ್ರಸ್ತುತ ರಾಜ್ಯ ಸರಕಾರದ ಸಚಿವ ಸಂಪುಟ ಉಪಸಮಿತಿಯ ತೀರ್ಮಾನವನ್ನು ರದ್ದುಪಡಿಸಿ, ಯಥಾ ಸ್ಥಿತಿಯಲ್ಲಿ ವಿಶ್ವ ವಿದ್ಯಾಲಯವನ್ನು ಉಳಿಸಿ ಅಭಿವೃದ್ಧಿಪಡಿಸಲು” ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದರು.
ಹಾವೇರಿ ಪಟ್ಟಣದ ಶಾಸಕರ ಗೃಹ ಕಛೇರಿಯಲ್ಲಿ ಶನಿವಾರ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯರು ಶಾಸಕ ಬಸವರಾಜ ಶಿವಣ್ಣನವರಿಗೆ
ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಹಾವೇರಿ ವಿವಿ ರಕ್ಷಣಾ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಮಾತನಾಡಿ, “ಯಾವುದೇ ಅನುದಾನ ಬರದಿರುವ ಸಂದರ್ಭದಲ್ಲಿಯೂ ವಿಶ್ವ ವಿದ್ಯಾಲಯವು ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಗತ್ಯ ಅನುದಾನ ನೀಡಿ ಬಲಪಡಿಸುವ ಬದಲು ವಿಶ್ವವಿದ್ಯಾಲಯವನ್ನು ಮುಚ್ಚುವುದು ಸರಿಯಲ್ಲ. ಹಾಗಾಗಿ ರಾಜ್ಯ ಸರಕಾರ ಈ ವಿಶ್ವ ವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಪಡಿಸಿ, ವಿ.ವಿ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು” ಎಂದು ಹೇಳಿದರು.
ಶಾಸಕರಾದ ಬಸವರಾಜ ಶಿವಣ್ಣನವರ ಮನವಿ ಸ್ವೀಕರಿಸಿ ಮಾತನಾಡಿ, ಹಾವೇರಿ ವಿ.ವಿ ಉಳಿಸಲು ಸರಕಾರದ ಮಟ್ಟದಲ್ಲಿ ಅಗತ್ಯ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ನಂತರ ಹಾವೇರಿ ನಗರಸಭೆ ಅಧ್ಯಕ್ಷ ಶಶಿಕಲಾ ರಾ. ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತಣ್ಣವರ, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯ ಸಂಜೀವ ನೀರಲಗಿ ಅವರಿಗೆ ಹಾವೇರಿ ವಿಶ್ವವಿದ್ಯಾಲಯ ಉಳಿಸುವ ಭಾಗವಾಗಿ ನಗರ ಸಭೆಯಿಂದ ಠರಾವು ಪಾಸ್ ಮಾಡಲು ವಿನಂತಿಸಲಾಯ್ತು.
ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಅವರು ಠರಾವ್ ಪಾಸು ಮಾಡಲಾಗುವುದು ಎಂದರಲ್ಲದೇ, ಹಾವೇರಿ ವಿಶ್ವ ವಿದ್ಯಾಲಯದ ಉಳಿವಿಗಾಗಿ ನಡೆಯುವ ಹೋರಾಟಕ್ಕೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹೃದಯಘಾತ : ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕರು ಹಾಗೂ ಸದಸ್ಯರಾದ ಬಸವರಾಜ ಪೂಜಾರ, ಸತೀಶ ಕುಲಕರ್ಣಿ, ಪರಿಮಳ ಜೈನ, ಸತೀಶ ಎಂ.ಬಿ, ನೇತ್ರಾ ಅಂಗಡಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ಬಸವರಾಜ ಎಸ್, ಉಡಚಪ್ಪ ಮಾಳಗಿ, ಫೃಥ್ವಿರಾಜ ಬೆಟಗೇರಿ, ಎಂ. ಆಂಜನೇಯ, ರಾಜೇಂದ್ರ ಹೆಗಡೆ, ಮಾಲತೇಶ ಕರ್ಜಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.