ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಂಚಾಯತಿ ಅಧ್ಯಕ್ಷ ಮತ್ತು ಪಿಡಿಒ ನಡುವೆ ಗಲಾಟೆ ನಡೆದಿದ್ದು, ಪಂಚಾಯತಿಯ ಪಿಡಿಒ ಡಾ. ಅನಿತಾ ಅವರು ಚಪ್ಪಲಿಯಿಂದ ಹೊಡೆದುಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಗ್ರಾಮ ಪಂಚಾಯತಿಯಲ್ಲಿ ಘಟನೆ ನಡೆದಿದೆ. ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಅಧ್ಯಕ್ಷರು ಮತ್ತು ಪಿಡಿಒ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ, ಪಿಡಿಒ ಅನಿತಾ ಅವರು ತಮ್ಮ ಚಪ್ಪಲಿಯನ್ನು ಎತ್ತಿಕೊಂಡು ತಾವೇ ಹೊಡೆದುಕೊಂಡಿದ್ದಾರೆ.
ಹಲವು ದಿನಗಳ ಹಿಂದೆಯೇ ಘಟನೆ ನಡೆದಿದ್ದು, ಇತ್ತೀಚೆಗೆ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತಿಯಿಂದ ಸರ್ಕಾರಕ್ಕೆ ಜಮಾ ಮಾಡಬೇಕಿದ್ದ ಹಣದಲ್ಲಿ ಸುಮಾರು 50,000 ರೂ. ವ್ಯತ್ಯಾಸ ಕಂಡುಬಂದಿತ್ತು. ಈ ವಿಚಾರ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಸಭೆಯಲ್ಲಿ ಪಿಡಿಒ ಅನಿತಾ ಮತ್ತು ಸಿಬ್ಬಂದಿಗಳೊಂದಿಗೆ ಅಧ್ಯಕ್ಷ ಚನ್ನಯ್ಯ ಚರ್ಚಿಸಿ, ಹಣವನ್ನು ಬ್ಯಾಂಕ್ ಪಾವತಿಸುವಂತೆ ತೀರ್ಮಾನಿಸಲಾಗಿತ್ತು ಎಂದು ವರದಿಯಾಗಿದೆ.
ಸಭೆಯ ತೀರ್ಮಾನದಂತೆ, ಪಿಡಿಒ ಅನಿತಾ ತಮ್ಮ ಪಾಲಿನ ಹಣವನ್ನು ಪಾವತಿಸಿದ್ದರು. ಆದರೆ, ಉಳಿದ ಸಿಬ್ಬಂದಿಗಳು ಹಣ ಕೊಟ್ಟಿರಲಿಲ್ಲ. ಎಲ್ಲರ ಬಳಿಯೂ ಹಣ ಪಡೆಯುವಂತೆ ಪಿಡಿಒ ಅನಿತಾ ಅವರು ಅಧ್ಯಕ್ಷ ಚನ್ನಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಗಲಾಟೆಯ ನಡುವೆ ಸಿಟ್ಟಾದ ಅನಿತಾ ಅವರು ತಮ್ಮ ಚಪ್ಪಲಿಯಿಂದ ತಾವೇ ಹೊಡೆದುಕೊಂಡಿದ್ದಾರೆ.