ಮಗುವನ್ನು ಮನುಕುಲದ ಆಸ್ತಿಯನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಮೇಘಾಲಯ ರಾಜ್ಯಪಾಲ ಚಂದ್ರಶೇಖರ ಹೆಚ್. ವಿಜಯಶಂಕರ್ ಹೇಳಿದರು.
ನಿನ್ನೆ ಕರ್ನಾಟಕಕ್ಕೆ ಭೇಟಿ ನೀಡಿದ ವೇಳೆ ದಿವ್ಯಾಂಗ ಮಕ್ಕಳ ಶಾಲೆ, ಹಿಂದು ಸೇವಾ ಪ್ರತಿಷ್ಠಾನ ಮತ್ತು ಮಹಾತ್ಮಗಾಂಧಿ ಅನಾಥ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕೊಪ್ಪಳ ನಗರದಲ್ಲಿ ನಡೆಸುತ್ತಿರುವ ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಗೆ ಭೇಟಿ ನೀಡಿದ್ದರು.
“ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಪೌಷ್ಟಿಕ ಆಹಾರ ಸಿಗಬೇಕು. 4 ರಿಂದ 14 ವರ್ಷದಲ್ಲಿ ಮಕ್ಕಳ ಶಾರೀರಿಕ ಬೆಳೆವಣಿಗೆ ಜೊತೆಗೆ ಅವರ ಮಾನಸಿಕ ಬೆಳವಣಿಗೆ ಸಹ ಆಗುತ್ತದೆ. ಕೆಲವೊಂದು ಮಕ್ಕಳ ಶಾರೀರಿಕ ಅಂಗವೈಕಲ್ಯ ಅನಿವಂಶೀಯವಾಗಿ ಬರುತ್ತದೆ. ಅವರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸುವ ಕೆಲಸ ಮಾಡಬೇಕು” ಎಂದರು.

“ಸಂಬಂಧಿಸಿದ ಇಲಾಖೆಯ ಮೂಲಕ ದಿವ್ಯಾಂಗ ಮಕ್ಕಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕು. ಮೈಸೂರಿನಲ್ಲಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಸಂಸ್ಥೆ ಇದೆ. ಇದು ಮೈಸೂರು ಮಹಾರಾಜರು ಪ್ರಾರಂಭಿಸಿದ್ದರು. ಈ ಸಂಸ್ಥೆ ಇಂತಹ ವಿಶೇಷ ಚೇತನ ಮಕ್ಕಳ ಸರ್ವೆಯನ್ನು ಆಗಾಗ ನಡೆಸುತ್ತದೆ. ನಮ್ಮ ಮಕ್ಕಳು ಆರೋಗ್ಯ ಪೂರ್ಣವಾಗಿ ಬದುಕಬೇಕು. ಸತ್ಯಸಾಯಿ ಟ್ರಸ್ಟಿನ ಮಧುಸೂಧನ್ ಬಾಬಾ ಅವರು ಇಂತಹ ವಿಶೇಷ ಚೇತನ ಮಕ್ಕಳಿಗೆ ಉಚಿತ ಸೇವೆ ನೀಡುತ್ತಾರೆ. ಅವರಿಗೆ ಇಲ್ಲಿಗೆ ಬರಲು ತಿಳಿಸುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಪದ್ಮಶ್ರೀ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಮನೆಗೆ ಮೇಘಾಲಯ ರಾಜ್ಯಪಾಲ ಭೇಟಿ: ಸನ್ಮಾನ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಹಿಂದೂ ಸೇವಾ ಪ್ರತಿಷ್ಠಾನ ಸಂಸ್ಥೆಯ ಎಂ.ಡಿ ಮಿಲಿಂದ್, ಸಂಚಾಲಕ ಸುಧಾಕರ್, ಮಹೇಶ ನಾಲ್ವಾಡ್, ರಾಜೇಂದ್ರ ಜೈನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.
