ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ಮುಂದುವರೆಸಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಂಗಳವಾರ ನಗರದ ಪ್ರಮುಖ ಸಂಚಾರ ದಟ್ಟಣೆಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ಪ್ರದಕ್ಷಿಣೆ ಹಾಕುವ ವೇಳೆ ಡಿಕೆಶಿ ಅವರು ಮೊದಲು ಹೆಬ್ಬಾಳ ಜಂಕ್ಷನ್‌ಗೆ ಭೇಟಿ ನೀಡಿ ಮೇಲ್ಸೇತುವೆ ನಿರ್ಮಾಣ, ಸುತ್ತಮುತ್ತಲ ಪ್ರದೇಶದ ಪರಿಶೀಲನೆ ನಡೆಸಿದರು.
ಈ ವೇಳೆ, ಹೆಬ್ಬಾಳದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ, ಮೇಲ್ಸೇತುವೆ ಅಗಲೀಕರಣ ಹಾಗೂ ಹೆಬ್ಬಾಳ ಕೆರೆಯ ಸೌಂದರ್ಯಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
2047ರ ವೇಳೆಗೆ ಹೆಚ್ಚಾಗುವ ವಾಹನ ದಟ್ಟಣೆಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ವಿವರಣೆ ನೀಡಿದ ಡಿಸಿಎಂ ಅವರು 63 ಕಿ.ಮೀ. ಅವಳಿ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಸಲಹೆ ನೀಡಿದರು.
ಹೊರ ವರ್ತುಲ ರಸ್ತೆ, ನಾಗವಾರ ಮೇಲ್ಸೇತುವೆ, ಟೆಲಿಕಾಂ ಲೇಔಟ್ ಗೆ ಭೇಟಿ ಮಾಡಿ ಅಲ್ಲಿ ನಡೆಯುತ್ತಿರುವ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ವಿಟ್ಟಸಂದ್ರದ ಕಸದ ರಾಶಿ ತೆರವುಗೊಳಿಸದ ಬಿಬಿಎಂಪಿ; ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿದ ಲೋಕಾಯುಕ್ತ
ಮಳೆ ಬಂದಾಗ ಜಲಾವೃತವಾಗುತ್ತಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ರಾಜಕಾಲುವೆ, ತಡೆಗೋಡೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಪರಿಶೀಲನೆ ನಡೆಸಿದರು. ಹೊರ ವರ್ತುಲ ರಸ್ತೆ, ಕಲ್ಯಾಣನಗರ, ಹೆಚ್.ಆರ್.ಬಿ.ಆರ್. ಬಡಾವಣೆಗೆ ಭೇಟಿ ನೀಡಿ ಕೊಳಚೆ ನೀರು ಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಕೆ.ಆರ್. ಪುರಂಗೆ ಭೇಟಿ ನೀಡಿ ಬಿ.ಎಂ.ಆರ್.ಸಿ.ಎಲ್. ನಡೆಸುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲನೆ ನಡೆಸಿದರು.