ಹತತ್ರ ಮೂರು ವರ್ಷಗಳ ಕಾಲ ದಾವಣಗೆರೆ ವೃತ್ತಿರಂಗಾಯಣದಲ್ಲಿ ಯಾವೊಂದು ಸಕಾರಾತ್ಮಕ ಚಟುವಟಿಕೆಗಳು ಕಾಣಲಿಲ್ಲ. ಆದರೆ, ವೃಥಾ ಕಾಲಹರಣ ಮಾಡಲು ನಿರ್ದೇಶಕರಿಗೆ ಸರ್ಕಾರ ಲಕ್ಷ, ಲಕ್ಷ ಹಣ ಖರ್ಚು ಮಾಡಿದಂತಾಯಿತು
ಕನ್ನಡ ರಂಗಭೂಮಿಗೆ ನೂರೈವತ್ತು ವರುಷಗಳ ರಂಗೇತಿಹಾಸವಿದೆ. ಬಹುತೇಕ ಅಷ್ಟೂ ವರುಷಗಳ ಸುದೀರ್ಘ ಇತಿಹಾಸದ ಉದ್ದಕ್ಕೂ ವೃತ್ತಿರಂಗಭೂಮಿಯ ಸಕ್ರಿಯ ಪ್ರಾತಿನಿಧ್ಯ ಹಾಸು ಹೊಕ್ಕಾಗಿದೆ. ರಾಷ್ಟ್ರೀಯ ನಾಟಕ ಸಂಸ್ಕೃತಿಯ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದೇ ಪಾರ್ಸಿ ಮೂಲದ ವೃತ್ತಿರಂಗಭೂಮಿ. ಅಂತೆಯೇ ದೇಶಭಕ್ತಿ , ಖಾದಿ ಮತ್ತು ಸ್ವಾತಂತ್ರ್ಯ ಚಳವಳಿಗೆ ವೃತ್ತಿರಂಗಭೂಮಿಯ ಉಡುಗೊರೆ ಅನನ್ಯವಾದುದು. ದುರಂತದ ಸಂಗತಿಯೆಂದರೆ ಸಾಹಿತ್ಯ ಚರಿತ್ರೆಕಾರರು ವೃತ್ತಿರಂಗಭೂಮಿ ಸಾಹಿತ್ಯ ಮತ್ತು ಸಾಹಿತ್ಯಕಾರರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿಸಿದ್ದು ‘ಇಲ್ಲವೇಇಲ್ಲ’ ಎನ್ನುವಷ್ಟು ಅಪರೂಪ. ನೆನಪಿರಲಿ ವೃತ್ತಿ ನಾಟಕಕಾರರೆಂದರೆ ರಸಜ್ಞರು, ಕವಿಗಳೆಂದೇ ಪ್ರಸಿದ್ಧರು. ಅಷ್ಟಕ್ಕೂ ನಾಟಕವೆಂಬುದೇ ರಮ್ಯಕಾವ್ಯ. ಅದೊಂದು ಉತ್ಕಟ ಅನುಭೂತಿ ಸ್ಥಿತಿ.
ಆಧುನಿಕ ರಂಗಭೂಮಿಯ ನಾಟಕ ಮತ್ತು ನಾಟಕಕಾರರ ಚರಿತ್ರೆಯನ್ನೇ ಸಮಗ್ರ ಕನ್ನಡ ರಂಗಭೂಮಿ ಚರಿತ್ರೆ ಎಂಬಂತೆ ಸಾಹಿತ್ಯ ಚರಿತ್ರೆಯಲ್ಲಿ ಬಿಂಬಿಸಲಾಗಿದೆ. ತತ್ವಪದ ಸಾಹಿತ್ಯಕ್ಕೂ ಅವರು ಇಂತಹದೇ ಮಾನದಂಡ ಲಾಗೂ ಮಾಡಿ ತತ್ವಪದಕಾರರ ಕಾಲಘಟ್ಟವನ್ನು ನಿರ್ಲಕ್ಷಿಸಿ ಅದನ್ನು ಕತ್ತಲೆಯುಗವೆಂದು ಕರೆದರು. ಕಾವ್ಯಮೀಮಾಂಸಕರು ಅಲಕ್ಷ್ಯ ಮಾಡಿದರೇನಂತೆ ಲೋಕಮೀಮಾಂಸೆಯ ಹೈವೋಲ್ಟೇಜ್ ಪ್ರೀತಿಗೇನು ಕೊರತೆಯಿಲ್ಲ. ವರ್ತಮಾನದಲ್ಲೂ ವೃತ್ತಿ ರಂಗಭೂಮಿಯನ್ನು ಕಡೆಗಣ್ಣಿನಿಂದ ಕಾಣುವವರಿದ್ದಾರೆ.
ಹಾಗೆಂದು ಆಳುವ ಸರಕಾರಗಳು ವೃತ್ತಿ ರಂಗಭೂಮಿ ಕುರಿತು ನಿರ್ಲಕ್ಷ್ಯ ತೋರಿ ಯಾವುದೇ ಬಗೆಯ ನೆರವು ನೀಡಿಲ್ಲವೆಂದು ಹೇಳಲಾಗದು. ವೃತ್ತಿರಂಗಭೂಮಿಗೆ ಏನಾದರೂ ಒಳ್ಳೆಯದನ್ನು ಮಾಡುವ ಸಹೃದಯತೆ ಎಲ್ಲ ಸರಕಾರಗಳಿಗೂ ಇದ್ದೇಇದೆ. ಪ್ರಾಯಶಃ ಆ ‘ಒಳ್ಳೆಯದು’ ಏನೆಂಬುದರ ಖಚಿತ ಮಾಹಿತಿ ಆಯಾ ಸರಕಾರಗಳಿಗೆ ಇದ್ದಂತಿಲ್ಲ. ಆದರೆ ವೃತ್ತಿ ರಂಗಭೂಮಿ ಕುರಿತು ಎಲ್ಲಾ ಸರಕಾರಗಳ ‘ಕಳಕಳಿ’ ಮಾತ್ರ ಸ್ವಾಗತಾರ್ಹ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆದಾಗಿನಿಂದ ಹಿಡಿದು ಎರಡನೇ ಬಾರಿಗೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಆಗಿರುವ ಈವರೆಗೂ ಕಾಳಜಿ ನಿರಂತರ ಎಂಬಂತಿದೆ.
ಪ್ರಸ್ತುತ ಉಲ್ಲೇಖಿಸಲೇಬೇಕಾದ ಸಂಗತಿಯೆಂದರೆ ಸಿದ್ಧರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಅವರು ತಮ್ಮ ಅವಧಿಯ ಕಡೆಯ (18/02/2018) ಆಯವ್ಯಯ ಮಂಡಿಸಿ ದಾವಣಗೆರೆ ಜಿಲ್ಲೆಯಲ್ಲಿ ‘ವೃತ್ತಿ ರಂಗಭೂಮಿ ಕೇಂದ್ರ’ ಸ್ಥಾಪನೆಯ ಮುಂಗಡಪತ್ರದ ವಿಷಯ ಗಟ್ಟಿಯಾಗಿ ಓದಿ ಹೇಳಿದರು. ಅವತ್ತು ಅದಕ್ಕಾಗಿ ಐದುಕೋಟಿಯಷ್ಟು ಹಣವನ್ನು ಸಹಿತ ಆರಂಭಿಕ ಇಡಿಗಂಟು ಎಂಬಂತೆ ಘೋಷಿಸಿದ್ದರು. ಪ್ರಾಯಶಃ ಸಿದ್ಧರಾಮಯ್ಯನವರಿಗೆ ವೃತ್ತಿ ರಂಗಭೂಮಿ ಕುರಿತು ಪ್ರೀತಿ ಮತ್ತು ಯುಕ್ತ ಮಾಹಿತಿ ಇದ್ದಿರಬೇಕು. ಒಂದು ಉಪಕೃತಿಯ ಸಂಗತಿಯೆಂದರೆ ಆಗ ಎಂಎಲ್‌ಸಿ ಕೊಂಡಜ್ಜಿ ಮೋಹನ್ ಅವರು ನೀಡಿದ ನೆರವು ಸಹಕಾರ ಮರೆಯಲಾಗದು.
ಅದರಿಂದ ಜಿಲ್ಲೆ ಮಾತ್ರವಲ್ಲ ರಾಜ್ಯದ ವೃತ್ತಿ ರಂಗಭೂಮಿ ಪ್ರೇಮಿಗಳಿಗೆ ಸಂತಸವೋ ಸಂತಸ. ಆದರೆ ತದನಂತರ ಬಂದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಹಣಕಾಸು ಕೊರತೆಯೆಂಬ ಕಾರಣ ಹೇಳಿ ಪ್ರಕಟಿತ ಅನುದಾನವನ್ನು ಕಡಿತಗೊಳಿಸಿ ಒಂದು ಕೋಟಿ ರೂ.ಗೆ ಇಳಿಸಿ ಬಿಟ್ಟರು. ಈ ಇಳಿಕೆಯಿಂದಾಗಿ ಸಮಗ್ರ ಕರ್ನಾಟಕ ವ್ಯಾಪ್ತಿಯ ವೃತ್ತಿರಂಗಭೂಮಿಯ ಸಾರೋದ್ಧಾರಕ್ಕೆ ಮಂಜೂರಾದ ವೃತ್ತಿ ರಂಗಭೂಮಿ ಕೇಂದ್ರದ ಸ್ವರೂಪವೇ ಬದಲಾಗ ತೊಡಗಿತು. ಅಂದಿನ ಸರಕಾರ ಅದನ್ನು ‘ವೃತ್ತಿರಂಗ ಶಾಲೆ’ ಎಂದು ಮಿತಿಯ ಮಾನದಂಡದೊಂದಿಗೆ ಕರೆಯಿತು. ಅದಕ್ಕೊಬ್ಬ ವಿಶೇಷ ಅಧಿಕಾರಿಯನ್ನು ನೇಮಿಸಿತು.
ಸಮ್ಮಿಶ್ರ ಸರಕಾರ ಬಿದ್ದುಹೋಗಿ ಬಿಜೆಪಿ ಸರಕಾರ ಬಂದು ರಂಗಶಾಲೆಯ ಹೆಸರು ನೇಪಥ್ಯಕ್ಕೆ ಸರಿಸಿ ಅದನ್ನು ‘ವೃತ್ತಿ ರಂಗಾಯಣ’ ಎಂದು ಹೊಸದಾಗಿ ಹೆಸರಿಸಿತು. ಆಗ ಅಸ್ತಿತ್ವದಲ್ಲಿದ್ದ ಇತರೆ ನಾಲ್ಕು ರಂಗಾಯಣಗಳ ಸಾಲಿನಲ್ಲಿ ಇದೊಂದನ್ನು ಹೆಚ್ಚುವರಿಯಾಗಿ ಸೇರಿಸಿತು. ರಂಗಾಯಣದ ಎಲ್ಲ ನಿಯಮಗಳು ಇದಕ್ಕೂ ಲಾಗೂ ಆಗಿ ಇದಕ್ಕೊಬ್ಬ ನಿರ್ದೇಶಕರನ್ನು ನೇಮಿಸಲಾಯಿತು. ವೃತ್ತಿ ರಂಗಭೂಮಿ ಕೇಂದ್ರದ ಆಶಯಗಳಾಗಲಿ, ಇಲ್ಲವೇ ರಂಗಶಾಲೆಯ ಶೈಕ್ಷಣಿಕ ಶಿಸ್ತಾಗಲಿ, ವೃತ್ತಿ ರಂಗಾಯಣದ ಸ್ವತಂತ್ರ ನಿಲುವುಗಳಾಗಲಿ ಇರಲಿಲ್ಲ. ಹೀಗೆ ಯಾವುದೇ ನೀಲನಕ್ಷೆ, ರೂಪ ಸ್ವರೂಪಗಳಿಲ್ಲದೇ ದಾವಣಗೆರೆಯ ವೃತ್ತಿ ರಂಗಾಯಣ ನರಳಿ ಹೋಯಿತು.
ಹತತ್ರ ಮೂರು ವರ್ಷಗಳ ಕಾಲ ದಾವಣಗೆರೆ ವೃತ್ತಿರಂಗಾಯಣದಲ್ಲಿ ಯಾವೊಂದು ಸಕಾರಾತ್ಮಕ ಚಟುವಟಿಕೆಗಳು ಕಾಣಲಿಲ್ಲ. ಅದಕ್ಕೆ ಬದಲು ವೃಥಾ ಕಾಲಹರಣ ಮಾಡಲು ನಿರ್ದೇಶಕರಿಗೆ ಸರ್ಕಾರ ಲಕ್ಷ, ಲಕ್ಷ ಹಣ ಖರ್ಚು ಮಾಡಿದಂತಾಯಿತು. ಇದೀಗ ಸಿದ್ಧರಾಮಯ್ಯನವರ ನೂತನ ಸರಕಾರ ಸಾಂಸ್ಕೃತಿಕ ಪ್ರತಿಷ್ಠಾನ, ಅಕಾಡೆಮಿ, ರಂಗಾಯಣಗಳನ್ನೆಲ್ಲ ಸಹಜವಾಗಿ ಬರಖಾಸ್ತುಗೊಳಿಸಿದೆ. ಅದರಿಂದಾಗಿ ದಾವಣಗೆರೆಯ ವೃತ್ತಿ ರಂಗಾಯಣದ ನಿರ್ದೇಶಕರ ಜಾಗೆ ಖಾಲಿಯಾಗಿದೆ.
ವೃತ್ತಿರಂಗಭೂಮಿ ಎಂದೊಡನೆ ಧುತ್ತನೆ ಕಂಪನಿ ನಾಟಕಗಳ ಸಮೃದ್ಧ ನೆನಪು ಸಹಜ. ಇವತ್ತಿನಂತಲ್ಲ ಅವತ್ತಿನ ವೃತ್ತಿರಂಗದ ನಾಟಕ ಕಂಪನಿಗಳೆಂದರೆ ಸಹೃದಯತೆಯೇ ತುಂಬಿ ತುಳುಕುವ ಭಾವ ಸಂಪನ್ನತೆಯ ಆಡುಂಬೊಲ. ಆಗ ಒಂದೊಂದು ಕಂಪನಿಯೂ ಒಂದೊಂದು ರೆಪರ್ಟರಿಯೇ ಆಗಿದ್ದವು. ಗೋಕಾಕ ಬಸವಣ್ಣೆಪ್ಪನಂಥವರ ನಾಟಕ ಕಂಪನಿಗಳನ್ನು ರಂಗಭೂಮಿಯ ವಿಶ್ವವಿದ್ಯಾಲಯಗಳೆಂದು ಜನ ಕರೆದರು.
ಕಂಪನಿ ಶೈಲಿಯ ವೃತ್ತಿ ನಾಟಕಗಳೆಂದರೆ ಅವಿಭಜಿತ ಕುಟುಂಬ ಪ್ರೀತಿಯ ಆಪ್ತ ಸಲಹೆ, ಸಮಾಲೋಚನೆಗಳ ಕೇಂದ್ರಗಳಾಗಿದ್ದವು. ಅಂತೆಯೇ ಅಜ್ಜ ಅಜ್ಜಿ, ಅಪ್ಪ ಅಮ್ಮ, ಅಕ್ಕ ತಂಗಿ, ಅಣ್ಣ ತಮ್ಮ, ಗಂಡ ಹೆಂಡತಿ, ಮಕ್ಕಳು ಹೀಗೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕೂಡಿ ಕಂಪನಿ ನಾಟಕಗಳನ್ನು ನೋಡುವುದು ಸಾಂಸ್ಕೃತಿಕ ಸ್ವಾಸ್ಥ್ಯದ ಪ್ರತೀಕವಾಗಿತ್ತು. ನಾಟಕ ಕಂಪನಿಗಳೆಂದರೆ ಕೇವಲ ಮನರಂಜನೆಯ ಕೇಂದ್ರವಾಗಿರದೆ ಸದಭಿರುಚಿಯ ಸಂಕೇತ ಆಗಿದ್ದವು. ರಂಗಶಿಕ್ಷಣ, ಸಾಮಾಜಿಕ ಚಿಂತನೆಗಳ ನೀತಿಬೋಧಕ ಗರಡಿಮನೆಗಳೇ ಹೌದು.
ಒಂದುಕಾಲಕ್ಕೆ ಅರಮನೆ, ಗುರುಮನೆಗಳಿಗೆ ಸೀಮಿತವಾಗಿದ್ದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತವನ್ನು ತಮ್ಮ ನಾಟಕಗಳ ಮೂಲಕ ಜನಸಾಮಾನ್ಯರಿಗೆ ಮುಟ್ಟಿಸಿದ್ದು ನಾಟಕ ಕಂಪನಿಗಳು. ಉತ್ತರಾದಿ ದಕ್ಷಿಣಾದಿ ಸಂಗೀತ ಶೈಲಿಯಲ್ಲಿ ಕಂದ, ಸೀಸ, ವೃತ್ತ ಪದ್ಯಗಳ ರಂಗಸಂಗೀತದ ಸವಿ ಉಣಿಸಲು ಕಲಿಸಿದ್ದು ವೃತ್ತಿರಂಗಭೂಮಿಯ ಕಂಪನಿ ನಾಟಕಗಳು. ಹಾಗೆಯೇ ನಟ ಮತ್ತು ನಟಿ ಪರಂಪರೆಯ ಹಿರಿಮೆ ಮೆರೆದದ್ದು ವೃತ್ತಿರಂಗಭೂಮಿ. ವರನಟ ಡಾ. ರಾಜಕುಮಾರ ಅವರಂತಹ ಮೇರುಪುರುಷ ಬಂದುದು ವೃತ್ತಿರಂಗ ಪರಂಪರೆಯಿಂದ ಎಂಬ ಹೆಮ್ಮೆ, ಹೆಗ್ಗಳಿಕೆ. ಇನ್ನೊಂದು ಅಪರೂಪದ ಸಂಗತಿಯೆಂದರೆ ರಂಗಸಜ್ಜಿಕೆ ಪರಂಪರೆ. ಇಂತಹ ಹತ್ತಾರು ಸಾಂಸ್ಕೃತಿಕ ಪರಂಪರೆಗಳನ್ನು ಮೆರೆದ ನೂರಕ್ಕೂ ಹೆಚ್ಚು ನಾಟಕ ಕಂಪನಿಗಳು ಕರ್ನಾಟಕದ ತುಂಬಾ ಇದ್ದವು.
ಈ ಎಲ್ಲ ಕಂಪನಿಗಳು ದಾವಣಗೆರೆ ಎಂಬ ರಂಗಸಂಸ್ಕೃತಿಯ ನಡುನಾಡಲ್ಲಿ ವರುಷಗಟ್ಟಲೇ ಕ್ಯಾಂಪ್ ಮಾಡಿವೆ. ಸಾಮಾಜಿಕ ವೃತ್ತಿ ನಾಟಕಗಳ ಪಿತಾಮಹ ಕೋಲ ಶಾಂತಪ್ಪ, ಕಂಚಿಕೇರಿ ಕೊಟ್ರಬಸಪ್ಪ, ಚಿಂದೋಡಿ ವೀರಪ್ಪ ಅವರ ರಂಗಕಾಯಕದ ನೆಲ ದಾವಣಗೆರೆ. ಏಕಕಾಲದಲ್ಲಿ ಮುರ್ನಾಲ್ಕು ಕಂಪನಿಗಳು ಈ ಊರಲ್ಲಿ ಠಿಕಾಣಿ ಹೂಡಿ ಹಣ ಮತ್ತು ಕೀರ್ತಿ ಸಂಪಾದಿಸಿವೆ. ಖರೇವಂದ್ರ ಇದೆಲ್ಲ ಐದಾರು ದಶಕಗಳ ಹಿಂದಿನ ಹಕೀಕತ್ತು ಎಂದು ಉದಾಸೀನ ಮಾಡಲಾಗದು. ತೀರ ಇತ್ತೀಚಿಗೆ ೨೦೦೮ ರಲ್ಲಿ ಜೇವರ್ಗಿ ರಾಜಣ್ಣನವರ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯಸಂಘವು ಈ ಊರಲ್ಲಿ ತಿಂಗಳಾನುಗಟ್ಟಲೇ ಒಂದೇ ನಾಟಕದ ನಿರಂತರ ನಾಲ್ಕು ನೂರಕ್ಕೂ ಅಧಿಕ ಪ್ರದರ್ಶನಗಳ ದಾಖಲೆ ಮಾಡಿದ ನಿದರ್ಶನ ಗಮನಾರ್ಹ. ಸಂಖ್ಯಾಬಲದ ರಂಗ ಪ್ರಯೋಗಗಳೇ ಸಾಧನೆಯೆಂದು ಪರಿಗಣಿಸಲಾಗದು. ಪ್ರದರ್ಶನಗಳು ಮತ್ತು ರಂಗತಂಡಗಳು ಪ್ರಮುಖ ಅಂಶಗಳಾಗಿದ್ದು ಅವೇ ಸಮಗ್ರ ವೃತ್ತಿರಂಗಭೂಮಿಯಲ್ಲ. ಸೋಪಜ್ಞಶೀಲ ಗುಣಮಟ್ಟ ಮತ್ತು ವರ್ತಮಾನದ ಸವಾಲುಗಳಿಗೆ ಮುಖಾಮುಖಿಯಾಗಿ ವೃತ್ತಿ ರಂಗಾಯಣವನ್ನು ಕಟ್ಟಬೇಕಿದೆ.
ವೃತ್ತಿರಂಗಭೂಮಿ ಕೇಂದ್ರಕ್ಕೆ ಫಲವತ್ತಾದ ನೆಲ ದಾವಣಗೆರೆ. ಈ ಊರು ಮಾತ್ರವಲ್ಲ ಜನಸಾಮಾನ್ಯರು ಇರುವ ಎಲ್ಲ ಊರುಗಳಲ್ಲಿ ವೃತ್ತಿರಂಗಭೂಮಿ ನಾಟಕಗಳದ್ದೇ ಮೇಲೋಗರ. ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲೂ ವರುಷಕ್ಕೆ ಒಂದೆರಡು ನಾಟಕಗಳು ಪ್ರದರ್ಶನ ಕಾಣುತ್ತವೆ. ಇರುವ ಮುರ್ನಾಲ್ಕು ಕೈ ಬೆರಳೆಣಿಕೆಯಷ್ಟು ಕಂಪನಿಗಳಿಗೆ ಸರಕಾರದ ಲಕ್ಷ ಲಕ್ಷ ಅನುದಾನ ಬರುತ್ತದೆ. ಆದರೆ ಸರಕಾರದಿಂದ ನಯಾಪೈಸೆಯಷ್ಟು ಅನುದಾನ ಪಡೆಯದೇ ನಮ್ಮ ಗ್ರಾಮೀಣರು ತಾವೇ ಲಕ್ಷಗಟ್ಟಲೆ ಹಣ ಖರ್ಚುಮಾಡಿ ತಾವೇ ನಾಟಕ ರಚಿಸಿ, ತಾವೇ ನಟಿಸಿ ಜವಾರಿತನದಿಂದ ಸಂಭ್ರಮಿಸುತ್ತಾರೆ. ಕೆಲವರಂತು ಕಂಪನಿ ಕಲಾವಿದರಿಗಿಂತ ಸಮರ್ಥ ಅಭಿನಯ ಮೆರೆಯುತ್ತಾರೆ. ಗ್ರಾಮೀಣ ಕಲಾವಿದರು ಹವ್ಯಾಸಕ್ಕಾಗಿ ಆಡುವ ಇಂತಹ ವೃತ್ತಿಪರ ರಂಗನಾಟಕಗಳೇ ಜನಸಂಸ್ಕೃತಿ ಬೆಳವಣಿಗೆಯ ದ್ಯೋತಕ.
ಈ ಲೇಖನ ಓದಿದ್ದೀರಾ?: ಇಲ್ಲಿ ಕ್ರಿಮಿನಲ್‌ಗಳು, ಅಲ್ಲಿ ಉದ್ಯಮಿಗಳು: ಗುಜರಾತ್‌ನ ಸಂದೇಸರ ಸಹೋದರರ ಕಥೆ
ಕರ್ನಾಟಕದಲ್ಲಿ ಅಜಮಾಸು ಆರು ಸಾವಿರದಷ್ಟು ಗ್ರಾಮಪಂಚಾಯತಿಗಳಿವೆ. ಕನಿಷ್ಠವೆಂದರೂ ಒಂದು ಪಂಚಾಯತಿಗೆ ಎರಡು ಮೂರು ನಾಟಕ ಪ್ರದರ್ಶನಗಳು ಕಾಣುತ್ತವೆ. ಕರ್ನಾಟಕದ ತುಂಬೆಲ್ಲಾ ವರ್ಷಕ್ಕೆ ಹದಿನೈದು ಸಾವಿರದಷ್ಟು ವೃತ್ತಿ ರಂಗಭೂಮಿಯ ನಾಟಕಗಳು ಜನರ ಸಹಭಾಗಿತ್ವದಲ್ಲಿ ಜರುಗುತ್ತವೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಜನರೇ ಹಣಹಾಕುವ ಮೂಲಕ ರಂಗಸಂಸ್ಕೃತಿಯ ಬಾಹುಳ್ಯ ಗಳಿಸಿದ್ದು ವೃತ್ತಿರಂಗಭೂಮಿ. ತನ್ಮೂಲಕ ಗ್ರಾಮೀಣ ಬದುಕಿನ ಸಹಬಾಳ್ವೆಯೊಂದಿಗೆ ನಾಡಿನ ಸಂಸ್ಕೃತಿಗೆ ಸಲ್ಲಿಕೆಯಾಗುವ ಕೊಡುಗೆಯೂ ಅಪಾರ.
ಜವಾರಿ ಖುಷಿಗಾಗಿ ವೃತ್ತಿರಂಗಭೂಮಿಯ ನಾಟಕಗಳನ್ನೇ ಆಡುವ ಬಹುಪಾಲು ಅವಿದ್ಯಾಂತರಾದ ನಮ್ಮ ಗ್ರಾಮೀಣರಿಗೆ ಕಂಪನಿ ಶೈಲಿಯ ನಾಟಕಗಳೇ ಮಾದರಿ. ವಿಪರ್ಯಾಸವೆಂದರೆ ಪ್ರಸ್ತುತ ಕಂಪನಿ ನಾಟಕಗಳು “ಫುಲ್ ಕಾಮೆಡಿ” ಶೀರ್ಷಿಕೆ ಧರಿಸಿ ಸಿನೆಮಾದ ಅನುಕರಣೆಯಾಗುತ್ತಿವೆ. ಹೀಗಾಗಿ ಇವರು ಸಹಿತ ಅದನ್ನೇ ಅನುಕರಿಸುತ್ತಾರೆ. ಇಪ್ಪತ್ತು ನಿಮಿಷದ ಒಂದು ಸೀನಲ್ಲಿ ಹತ್ತು ಸಿನೆಮಾ ಹಾಡುಗಳದ್ದೇ ಮೇಲುಗೈ. ಇಂತಹ ಹತ್ತಾರು ಅಪಸವ್ಯಗಳ ಆಗರ. ಸೋಪಜ್ಞಶೀಲ ವೃತ್ತಿರಂಗಭೂಮಿಯ ಪರಂಪರೆ ಸೇರಿದಂತೆ ದಾವಣಗೆರೆಯ ವೃತ್ತಿ ರಂಗಾಯಣ ‘ವೃತ್ತಿರಂಗಭೂಮಿ ಕೇಂದ್ರವಾಗಿ’ ಅದು ತನ್ನ ಸೃಜನಶೀಲತೆ ಬೆಳೆಸಿಕೊಳ್ಳಬೇಕಿದೆ. ಗುಣಮಟ್ಟದ ರಂಗಶಿಕ್ಷಣ ನೀಡಬೇಕಿದೆ. ಅದಕ್ಕಾಗಿ ಪರಿಣಿತರು, ರಂಗವಿದ್ವಾಂಸರ ನೇತೃತ್ವದಲ್ಲಿ ಪಠ್ಯಕ್ರಮ ಜಾರಿಗೆ ತರಬೇಕು. ವೃತ್ತಿರಂಗಭೂಮಿ ಕುರಿತಾಗಿ ಬೃಹತ್ತಾದ ವಸ್ತುಸಂಗ್ರಹಾಲಯ ಸ್ಥಾಪನೆಯಾಗಬೇಕು.
ಭಾರತ ಮತ್ತು ಕರ್ನಾಟಕದ ವೃತ್ತಿರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನಾ ಕಾರ್ಯ ಕೈಗೆತ್ತಿಕೊಳ್ಳಬೇಕು. ರಂಗಸಜ್ಜಿಕೆ, ರಂಗಸಂಗೀತ, ಅಭಿನಯ ಸೇರಿದಂತೆ ಕೆಲವಾದರೂ ನಿಕಾಯಗಳನ್ನು ಅಭಿವೃದ್ಧಿ ಪಡಿಸಬೇಕು. ವೃತ್ತಿಪರರಿಗೆ ಒಂದು ವರ್ಷದ ಡಿಪ್ಲೊಮಾ ಕೋರ್ಸುಗಳು, ಹವ್ಯಾಸಕ್ಕಾಗಿ ವೃತ್ತಿಪರ ರಂಗಪ್ರಯೋಗ ಕ್ರಿಯೆಗಳಲ್ಲಿ ತೊಡಗಿರುವವರಿಗೆ ಮೂರು ತಿಂಗಳ ಅಡಹಾಕ್ ಕೋರ್ಸುಗಳನ್ನು ಆರಂಭಿಸಬೇಕು. ಅನ್ಯಜ್ಞಾನ ಶಿಸ್ತುಗಳ ನೆಲೆಯಲ್ಲಿ ವೃತ್ತಿರಂಗ ಪ್ರಕಾರದ ಸಾಧ್ಯತೆ ಮತ್ತು ಆಧುನಿಕತೆ ಕುರಿತು ವಿಚಾರ ಕಮ್ಮಟಗಳು ಹೀಗೆ ಇಂತಹ ಇನ್ನೂ ಅನೇಕ ಅಗತ್ಯಗಳು ಬಹುಶಃ ಪ್ರಸ್ತುತ ರೆಪರ್ಟರಿಯಿಂದ ದುಃಸಾಧ್ಯ. ಅದಕ್ಕಾಗಿ ದಾವಣಗೆರೆ ವೃತ್ತಿ ರಂಗಾಯಣ ಸ್ವತಂತ್ರ ವೃತ್ತಿರಂಗಭೂಮಿ ಕೇಂದ್ರವಾಗಿ ಪರಿವರ್ತನೆಗೊಂಡು ಕಾರ್ಯ ಪ್ರವೃತ್ತವಾಗಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರು ಇತ್ತ ಗಮನ ಹರಿಸಲಿ. ದಾವಣಗೆರೆ ವೃತ್ತಿರಂಗಭೂಮಿ ಕೇಂದ್ರ ಸ್ಥಾಪನೆಯ ರೂವಾರಿಗಳಾದ ಸಿದ್ಧರಾಮಯ್ಯನವರೇ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದು ಸದರಿ ವೃತ್ತಿರಂಗಭೂಮಿ ಕೇಂದ್ರದ ಕನಸುಗಳು ಸಾಕಾರಗೊಳ್ಳಲಿ.
Realy a good writings on rangabhoomi growing and down falls, hope ur thoughts Will reach upto government level and intiations taken for Upliftment of drama theatres and save the heritage of indian Samskruthi