ಇಲ್ಲಿ ಕ್ರಿಮಿನಲ್‌ಗಳು, ಅಲ್ಲಿ ಉದ್ಯಮಿಗಳು: ಗುಜರಾತ್‌ನ ಸಂದೇಸರ ಸಹೋದರರ ಕಥೆ

Date:

ಸಂದೇಸರ ಸಹೋದರರನ್ನು 5,383 ಕೋಟಿ ರೂಪಾಯಿಗಳ ಆಂಧ್ರ ಬ್ಯಾಂಕ್ ವಂಚನೆಯ ಪ್ರಕರಣದ ಪ್ರಮುಖ ಆರೋಪಿಗಳು ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚುವ ಮೊದಲೇ ಇವರು 2017 ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಈಗ ಅವರು ನೈಜೀರಿಯಾದ ದೊಡ್ಡ ತೈಲ ಕಂಪನಿಯ ಮಾಲೀಕರಾಗಿದ್ದಾರೆ.

ನೈಜೀರಿಯಾದಲ್ಲಿ ಇತ್ತೀಚೆಗೆ ನೂರು ಕೋಟಿ ಬ್ಯಾರೆಲ್‌ ಸಾಮರ್ಥ್ಯದ ತೈಲ ನಿಕ್ಷೇಪವೊಂದು ಪತ್ತೆಯಾಯಿತು. ಆ ಯೋಜನೆಯಲ್ಲಿ ಸರ್ಕಾರದೊಂದಿಗೆ ಸಹಭಾಗಿಯಾದವರು ಭಾರತ ಮೂಲದ ಸಹೋದರರು. ಆಫ್ರಿಕಾದ ಬಹುದೊಡ್ಡ ತೈಲ ಉತ್ಪಾದನೆಯ ದೇಶದಲ್ಲಿ ದೊಡ್ಡ ತೈಲ ಕಂಪನಿಯ ಒಡೆಯರಾಗಿ ಮಿಂಚುತ್ತಿರುವ ಸಹೋದರರು ಭಾರತದ ಮಟ್ಟಿಗೆ ಕ್ರಿಮಿನಲ್‌ಗಳು; ದೇಶದ ಅತಿ ದೊಡ್ಡ ಆರ್ಥಿಕ ವಂಚನೆಯ ಹಗರಣಕ್ಕೆ ಕಾರಣರಾದವರು. ಅವರೇ ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ.

ಸಂದೇಸರ ಸಹೋದರರು ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವಾರು ವ್ಯವಹಾರಗಳನ್ನು ಹೊಂದಿದ್ದಾರೆ, ಔಷಧ ಉದ್ಯಮದಿಂದ ಪ್ರಾರಂಭಿಸಿ ನೈಜೀರಿಯಾ ದೇಶದಲ್ಲಿ ತೈಲ ಬಾವಿಗಳನ್ನು ಸಹಾ ಹೊಂದಿದ್ದಾರೆ.

ನಿತಿನ್‌ ಸಂದೇಸರ ಮತ್ತು ಆತನ ಸಹೋದರ ಚೇತನ್ ನೈಜೀರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬ್ರಿಟನ್, ಅಮೆರಿಕ, ಸೀಶೆಲ್ಸ್ ಮತ್ತು ಮಾರಿಷಸ್‌ ಸೇರಿದಂತೆ ಹಲವು ದೇಶಗಳಲ್ಲಿ ಉದ್ದಿಮೆಗಳನ್ನು ಹೊಂದಿದ್ದಾರೆ. ಇವರು ಸ್ಟರ್ಲಿಂಗ್‌ ಬಯೋಟೆಕ್‌ ಲಿಮಿಟೆಡ್‌ ಎಂಬ ಫಾರ್ಮಾಸ್ಯುಟಿಕಲ್‌ ತಯಾರಿಕಾ ಕಂಪನಿಯ ಮಾಲೀಕರು, ಅಧ್ಯಕ್ಷರು ಮತ್ತು ನಿರ್ದೇಶಕರಾಗಿದ್ದಾರೆ.

ಇದನ್ನು ಓದಿದ್ದೀರಾ?: ರೈಲು ದುರಂತ | ಉದ್ಯಮಿ ಹರ್ಷ್‌ ಗೋಯೆಂಕಾಗೆ ರೈಲ್ವೆ ಸಚಿವರ ಮೇಲೆ ಯಾಕಿಷ್ಟು ಕಾಳಜಿ? ಏನಿದು ಕವಚದ ಕತೆ?

ಈ ಸಂಸ್ಥೆಯು ಮುಖ್ಯವಾಗಿ ಜಿಲೆಟಿನ್ (ಜೆಲ್ಲಿಂಗ್‌ ಏಜೆಂಟ್), ರಾಸಾಯನಿಕಗಳು ಮತ್ತು ಇತರ ಔಷಧಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತದೆ. ಅಮೆರಿಕ ಸ್ಟರ್ಲಿಂಗ್‌ ಬಯೋಟೆಕ್‌ ಲಿಮಿಟೆಡ್‌ನಿಂದ ಅತೀ ಹೆಚ್ಚು ಜಿಲೆಟಿನ್ ಅನ್ನು ಆಮದು ಮಾಡಿಕೊಳ್ಳುತ್ತದೆ.

ಹೀಗೆ ದೇಶವಿದೇಶಗಳಲ್ಲಿ ದೊಡ್ಡ ಉದ್ದಿಮೆಗಳನ್ನು ನಡೆಸುತ್ತಾ, ಶತಕೋಟಿ ಮೌಲ್ಯದ ವಹಿವಾಟು ನಡೆಸುತ್ತಿರುವ ಈ ಸೋದರರು ಭಾರತದ ಮಟ್ಟಿಗೆ ಕ್ರಿಮಿನಲ್‌ಗಳಾಗಿದ್ದಾರೆ. ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್‌ನ ಮಾಲೀಕರಾದ ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ, ದೀಪ್ತಿ ಸಂದೇಸರ (ಚೇತನ್ ಸಂದೇಸರ ಅವರ ಪತ್ನಿ) ಮತ್ತು ಹಿತೇಶ್ ಪಟೇಲ್ (ಸಂದೇಶರ ಕುಟುಂಬದ ಸದಸ್ಯ) ಇವರುಗಳನ್ನು ಮುಂಬೈನ PMLA (ಅಕ್ರಮ ಹಣ ವರ್ಗಾವಣೆ) ವಿಶೇಷ ನ್ಯಾಯಾಲಯವು ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ತಪ್ಪಿತಸ್ಥರೆಂದು ಘೋಷಿಸಿದ್ದು, ಅವರು ದೇಶದಿಂದ ಪರಾರಿಯಾಗಿದ್ದಾರೆ ಎಂದು ಘೋಷಿಸಿದೆ. ಹೀಗೆ ದೇಶಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿ ಹೊರದೇಶಕ್ಕೆ ಓಡಿಹೋದವರಲ್ಲಿ ಹೆಚ್ಚಿನವರು ಗುಜರಾತ್‌ನವರೇ ಇರುವುದು ವಿಶೇಷವಾಗಿದೆ.

ಕೋಟ್ಯಂತರ ರೂಪಾಯಿ ಸಾಲ ಮಾಡಿ ದೇಶದಿಂದ ಓಡಿಹೋದ ಬಹುತೇಕ ಉದ್ಯಮಿಗಳಂತೆ ಇವರೂ ಕೂಡ ಗುಜರಾತ್‌ನವರೇ. ನಿತಿನ್‌ ಜಯಂತಿಲಾಲ್‌ ಸಂದೇಸರ ವಡೋದರಾದಲ್ಲಿ ಜನಿಸಿದವರು; ಮುಂಬೈ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದು, ಚಾರ್ಟರ್ಡ್‌ ಅಕೌಂಟೆಂಟ್‌ ಆಗಿದ್ದರು. ಈತ 80ರ ದಶಕದ ಆರಂಭದಲ್ಲಿ ಚಹಾ ವ್ಯಾಪಾರದಿಂದ ಪ್ರಾರಂಭಿಸಿ ಮುಂದೆ ದೊಡ್ಡ ಉದ್ದಿಮೆದಾರನಾಗಿ ಬೆಳೆದ.

ನಿತಿನ್‌ ಸಂದೇಸರಾ ಒಡೆತನದ ಸ್ಟರ್ಲಿಂಗ್‌ ಬಯೋಟೆಕ್‌ ಲಿಮಿಟೆಡ್‌ ಕಂಪನಿಯು ಆಂಧ್ರ ಬ್ಯಾಂಕ್‌ನ ವಿವಿಧ ಶಾಖೆಗಳಿಂದ ಸುಮಾರು 5000 ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ಪಡೆದು ವಂಚಿಸಿದೆ. ಸಾಲವನ್ನು ಬ್ಯಾಂಕಿಗೆ ಮರಳಿಸದೆ ಅದು NPA ಆಗಿ ಮಾರ್ಪಟ್ಟಿದೆ. ಈ ಸಂಬಂಧ ಜಾರಿ ನಿರ್ದೇಶನಾಲಯವು ಕಂಪನಿ ವಿರುದ್ಧ ಎಫ್‌ ಐ ಆರ್‌ ದಾಖಲಿಸಿದೆ.
ಈ ಫಾರ್ಮಾಸ್ಯುಟಿಕಲ್‌ ಕಂಪನಿಯಿಂದ ಬ್ಯಾಂಕುಗಳಿಗೆ ಬರಬೇಕಿರುವ ಒಟ್ಟು ಮೊತ್ತ 5,383 ಕೋಟಿ ರೂಪಾಯಿ. ಈ ವಂಚನೆ ಪ್ರಕರಣದಲ್ಲಿ ಪೊಲೀಸರು ಹಲವರನ್ನು ಈಗಾಗಲೇ ಬಂಧಿಸಿದ್ದಾರೆ. ಆಂಧ್ರ ಬ್ಯಾಂಕ್‌ನ ಮಾಜಿ ನಿರ್ದೇಶಕ ಅನೂಪ್‌ ಗಾರ್ಗ್‌, ಸ್ಟರ್ಲಿಂಗ್‌ ಬಯೋಟೆಕ್‌ ನಿರ್ದೇಶಕ ರಾಜಭೂಷನ್‌ ದೀಕ್ಷಿತ್‌ ಮತ್ತು ದೆಹಲಿ ಮೂಲದ ಹೂಡಿಕೆದಾರ ಮತ್ತು ವ್ಯಾಪಾರಿ ಬಂಧಿತರು. ಆದರೆ ಮುಖ್ಯ ಆರೋಪಿಗಳಾದ ನಿತಿನ್‌ ಸಂದೇಸರ, ಚೇತನ್‌ ಸಂದೇಸರ, ಚೇತನ್‌ ಸಂದೇಸರಾ ಪತ್ನಿ ದೀಪ್ತಿ, ವಿಲಾಸ್‌ ಜೋಷಿ ಮತ್ತು ಹೇಮಂತ್‌ ಹಥಿ ಅವರು ಪರಾರಿಯಾಗಿದ್ದು, ಅವರಿಗಾಗಿ CBI ಈಗಲೂ ಹುಡುಕಾಟ ನಡೆಸುತ್ತಿದೆ.

ಸಂದೇಸರ ಸಹೋದರರನ್ನು ಆಂಧ್ರ ಬ್ಯಾಂಕ್ ವಂಚನೆಯ ಪ್ರಕರಣದ ಪ್ರಮುಖ ಆರೋಪಿಗಳು ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚುವ ಮೊದಲೇ ಇವರುಗಳು 2017 ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ನಂತರ ಅವರು ಇದೀಗ ನೈಜೀರಿಯಾದಲ್ಲಿ ಉದ್ದಿಮೆದಾರರಾಗಿದ್ದಾರೆ.

ಇವರುಗಳ ಮೇಲೆ ಮತ್ತೊಂದು ಗಂಭೀರವಾದ ಆರೋಪವೂ ಇದೆ. ಅದೇನೆಂದರೆ ಸಂದೇಸರ ಮತ್ತು ಇತರ ಆರೋಪಿಗಳು ಭಾರತ ಮತ್ತು ವಿದೇಶಗಳಲ್ಲಿ 300 ಕ್ಕೂ ಹೆಚ್ಚು ಶೆಲ್ ಮತ್ತು ಬೇನಾಮಿ ಕಂಪನಿಗಳನ್ನು ಸ್ಥಾಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಸಾಲವಾಗಿ ಪಡೆದ ಹಣವನ್ನು ಈ ಶೆಲ್ ಕಂಪನಿಗಳ ಮೂಲಕ ಸಾಗಿಸಿದ್ದಾರೆ ಎಂದು ವರದಿಯಾಗಿದೆ. ಹೀಗೆ ಭಾರತದಲ್ಲಿ ಹಲವು ರೀತಿಯ ವಂಚನೆ ಪ್ರಕರಣ ನಡೆಸಿ ನಾಪತ್ತೆಯಾಗಿರುವ ಇವರು ಈಗ ನೈಜೀರಿಯಾದಲ್ಲಿ ದೊಡ್ಡ ಉದ್ದಿಮೆದಾರರಾಗಿ ಬೆಳೆದಿದ್ದಾರೆ.

ನೈಜೀರಿಯಾದ ಹೊಸ ಅಧ್ಯಕ್ಷ ಬೋಲಾ ಟಿನುಬು ಹೈಡ್ರೋಕಾರ್ಬನ್ ವಲಯದಲ್ಲಿ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿರುವುದು ನಿತಿನ್ ಮತ್ತು ಚೇತನ್ ಸಂದೇಸರ ಸಹೋದರರಿಗೆ ವರವಾಗಿ ಪರಿಣಮಿಸಿದ್ದು, ಇವರ ಕಂಪನಿಗಳು ಅಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಸಜ್ಜಾಗಿವೆ.

ತಮಾಷೆಯೆಂದರೆ, “Success is Natural” ಎನ್ನುವುದು ಸಂದೇಸರ ಕುಟುಂಬದ ನೈಜೀರಿಯನ್ ತೈಲ ಮತ್ತು ಅನಿಲ ವ್ಯಾಪಾರದ ಕಂಪನಿಯ ಘೋಷವಾಕ್ಯ. ಇವರ ಕಂಪನಿಗಳ ಅಂಗಸಂಸ್ಥೆಗಳು – ಸ್ಟರ್ಲಿಂಗ್ ಆಯಿಲ್ ಎಕ್ಸ್‌ಪ್ಲೋರೇಶನ್ & ಪ್ರೊಡಕ್ಷನ್ ಕಂ. ಮತ್ತು ಸ್ಟರ್ಲಿಂಗ್ ಗ್ಲೋಬಲ್ ಆಯಿಲ್ ರಿಸೋರ್ಸಸ್ ಲಿಮಿಟೆಡ್ – ಡೆಲ್ಟಾದಲ್ಲಿ ದಿನಕ್ಕೆ ಸುಮಾರು 50,000 ಬ್ಯಾರೆಲ್‌ಗಳ ಕಚ್ಚಾ ತೈಲವನ್ನು ಸರ್ಕಾರಿ ಸ್ವಾಮ್ಯದ ನೈಜೀರಿಯನ್ ನ್ಯಾಷನಲ್ ಪೆಟ್ರೋಲಿಯಂ ಕಂಪನಿಯೊಂದಿಗಿನ ಒಪ್ಪಂದದ ಮೂಲಕ ಪಂಪ್ ಮಾಡುತ್ತಿದೆ. ಈ ವರ್ಷ ಉತ್ಪಾದನೆಗೆ ಅದು ಅಂತಿಮವಾಗಿ ಒಟ್ಟು ದೈನಂದಿನ ಉತ್ಪಾದನೆಯನ್ನು 1,00,000 ಬ್ಯಾರೆಲ್‌ಗಳಿಗೆ ಹೆಚ್ಚಿಸುತ್ತದೆ. ಶೆಲ್ ಮತ್ತು ಚೆವ್ರಾನ್ ಕಾರ್ಪೊರೇಷನ್‌ನಂತಹ ಅಂತಾರಾಷ್ಟ್ರೀಯ ತೈಲ ಕಂಪನಿಗಳನ್ನು ಹೊರತುಪಡಿಸಿ, ಸಂದೇಸರ ಕುಟುಂಬವು ನೈಜೀರಿಯಾ ದೇಶದ ತೈಲದ ಅಗ್ರ ರಫ್ತುದಾರರಾಗಿದ್ದಾರೆ. ಸಂದೇಸರ ಒಡೆತನದ ಕಂಪನಿಗಳು ನೈಜೀರಿಯಾ ಸರ್ಕಾರದ ಒಟ್ಟು ಆದಾಯಕ್ಕೆ 2% ಕೊಡುಗೆಯನ್ನು ನೀಡುತ್ತಿವೆ.

ಭಾರತದಲ್ಲಿ ಕ್ರಿಮಿನಲ್‌ಗಳಾಗಿದ್ದರೂ ಸಂದೇಸರ ಸೋದರರನ್ನು ನೈಜೀರಿಯಾ ದೇಶವು ಬಂಧಿಸಲು ನಿರಾಕರಿಸಿದೆ. ಭಾರತ ದೇಶಕ್ಕೆ ಅವರುಗಳನ್ನು ಹಸ್ತಾಂತರಿಸುವುದಿಲ್ಲ ಎಂದೂ ಸಹ ತಿಳಿಸಿದೆ. ಹೀಗೆ, ಭಾರತದಲ್ಲಿ ವಂಚನೆ ಆರೋಪಗಳನ್ನು ಎದುರಿಸಿ ಅವುಗಳ ವಿರುದ್ಧ ಪ್ರಕರಣಗಳನ್ನು ಎದುರಿಸುತ್ತಿರುವ ಸಂದೇಸರ ಸಹೋದರರು ನೈಜೀರಿಯಾದಲ್ಲಿ ಬೃಹತ್ ಉದ್ದಿಮೆದಾರರಾಗಿ ಬೆಳೆಯುತ್ತಿದ್ದಾರೆ.

ಬ್ಯಾಂಕ್‌ಗಳಿಗೆ, ಸರ್ಕಾರಕ್ಕೆ ಹಾಗೂ ಜನರಿಗೆ ನೂರಾರು, ಸಾವಿರಾರು ಕೋಟಿ ವಂಚನೆ ಮಾಡಿರುವ ಗುಜರಾತ್ ಉದ್ಯಮಿಗಳ ದೊಡ್ಡ ಲಿಸ್ಟೇ ಇದೆ. ಹರ್ಷದ್ ಮೆಹ್ತಾನಿಂದ ಹಿಡಿದು ಕೇತನ್ ಪಾರೇಖ್, ಜತಿನ್ ಮೆಹ್ತಾ, ಹಿತೇನ್ ದಲಾಲ್‌ರಂಥ ಹತ್ತಾರು ಉದ್ಯಮಿಗಳು ವಂಚನೆ ಮಾಡಿದ್ದಾರೆ. ಇನ್ನು ನೀರವ್ ಮೋದಿ, ಮುಕುಲ್ ಚೋಸ್ಕಿ, ಸಂದೇಸರ ಸಹೋದರರಂಥ ವಂಚಕರು ಸಾವಿರಾರು ಕೋಟಿ ಬ್ಯಾಂಕ್ ಸಾಲ ಪಡೆದು ವಾಪಸ್ ಕಟ್ಟದೇ ದೇಶ ತೊರೆದು ಓಡಿಹೋಗಿ ನಿಜವಾದ ದೇಶದ್ರೋಹಿಗಳೆನ್ನಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ.4ರಿಂದ ಮತ್ತೆ ಚುನಾವಣಾ ಬಾಂಡ್: ‘ಬಿಜೆಪಿಗೆ ಚಿನ್ನದ ಫಸಲು’ ಎಂದ ಪಿ ಚಿದಂಬರಂ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ವಿತರಣೆ...

ಬ್ರಿಟನ್‌ | ಗುರುದ್ವಾರ ಪ್ರವೇಶಿಸದಂತೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ತಡೆದ ಖಲಿಸ್ತಾನಿ ಬೆಂಬಲಿಗರು

ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಖಲಿಸ್ತಾನಿ ಬೆಂಬಲಿಗರು ಸ್ಕಾಟ್ಲೆಂಡ್‌ನ...

ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಬಿಜೆಪಿ ಸಂಸದ ಸತೀಶ್ ಗೌತಮ್

ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲೇ...

ದೆಹಲಿ | ಆಝಾದ್‌ಪುರ ಮಂಡಿಯಲ್ಲಿ ಭೀಕರ ಬೆಂಕಿ ಅವಘಡ

ಟೊಮ್ಯಾಟೋ ಬೆಲೆ ಏರಿಕೆ ಸಂದರ್ಭದಲ್ಲಿ ತರಕಾರಿ ಕೊಂಡುಕೊಳ್ಳಲಾಗದೆ ವ್ಯಾಪಾರಿ ರಾಮೇಶ್ವರ್‌ ಅವರ...