ವೈದ್ಯಕೀಯ ಪದವೀಧರನಾದರೂ ಚೇ ಗುವೆರಾ ವೈದ್ಯ ವೃತ್ತಿಗಿಳಿಯಲಿಲ್ಲ. ವೈಯಕ್ತಿಕ ಬದುಕಿನ ಬಗ್ಗೆ ಯಾವತ್ತೂ ಚಿಂತಿಸಲಿಲ್ಲ. ನ್ಯಾಯ ಸಮ್ಮತವಲ್ಲದ ಸಾಮಾಜಿಕ ವ್ಯವಸ್ಥೆ ವಿರುದ್ಧ ಹೋರಾಡಿ ಶೋಷಿತರಿಗೆ ನ್ಯಾಯ ಒದಗಿಸಿ ಸ್ವಾಸ್ಥ್ಯ ಬದುಕು ರೂಪಿಸುವುದು ಆತನ ಆಶಯವಾಗಿತ್ತು.
“ಜಗತ್ತಿನ ಎಲ್ಲೆ ಆಗಲಿ ಅನ್ಯಾಯದ ವಿರುದ್ದ ನೀನು ಸಿಡಿದು ನಿಂತರೆ ಆಗ ನೀನು ನನ್ನ ಸಂಗಾತಿ” ಎಂದು ಸಾರಿದ ಕ್ರಾಂತಿಕಾರಿ ಯಾರು ಗೊತ್ತಾ? ಅವರೇ ಚೇ ಗುವೆರಾ…! ‘ಚೆ’ ಎನ್ನುವ ಹೆಸರು ಜಗತ್ತಿನ ಅಪಾರ ಯುವ ಸಮೂಹವನ್ನು ಹುಚ್ಚೆದ್ದು ಕುಣಿಯುವಂತೆ ಆಕರ್ಷಿಸಲು ಆತನ ಸಾಹಸಮಯ ಹೋರಾಟವೇ ಕಾರಣ ಎನ್ನಬಹುದು.
ಆ ಕಣ್ಣುಗಳಲ್ಲಿ ಕ್ರಾಂತಿಯ ಆಕರ್ಷಣೆ ಇದೆ. ಮಿಂಚು ನೋಟದ ಆ ಕಣ್ಣುಗಳ ಮೂಲಕ ಸಾಮಾಜಿಕ ಅರಿವು
ದಾಟುತ್ತದೆ. ಉದ್ದನೆಯ ಕೂದಲು, ನಿಷ್ಠುರ ಕಣ್ಣಿನ ರೆಪ್ಪೆಗಳನ್ನು ತೆರೆದಿದ್ದು ಏನೋ ಗಂಭೀರತೆ, ಒಮ್ಮೆಲೇ ಗಡ್ಡ ಬಿಟ್ಟ ಫಕೀರನಂತೆ ಕಂಡರೂ ಆತ ಫಕೀರನಲ್ಲ. ಬಂಡೆಯ ಮೇಲೆ ನೀರು ಚಿಮ್ಮಿಸುವ ಎದೆಗಾರಿಕೆಯುಳ್ಳ ಬಂಡಾಯಗಾರ. ಆ ಕಣ್ಣುಗಳ ದೃಷ್ಟಿಗೆ ಇಲ್ಲಿಯ ತನಕ ಸಾವು ಬಂದಿಲ್ಲ. ಮುಂದೆಯೂ ಬರುವುದಿಲ್ಲ.
ಅರ್ಜೆಂಟೀನಾದ ರೊಸಾರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 1928, ಜೂನ್ 14 ರಂದು ಜನಿಸಿದ ಚೆ ಗುವೆರಾ ಪೂರ್ಣ ಹೆಸರು ಅರ್ನೆಸ್ಟೋ ಚೆ ಗುವೆರಾ ಡಿ ಲಾ ಸೆರ್ನಾ. ಐರಿಷ್ ಮೂಲದವರಾದ ಚೇ ಕುಟುಂಬ ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ನಲ್ಲಿ ಬಂದು ನೆಲೆಸಿದರು. ಚೆ ಗುವೆರಾ ತಂದೆ ಅರ್ನೆಸ್ಟೋ ಗುವೆರಾ ಲಿಂಕ್ ತಾಯಿ ಸೆಲಿಯಾ ಇ ಲಾ ಸೆರ್ನಾ. ಚೆ ಗುವೆರಾ ಜೂನ್ 1953 ರಲ್ಲಿ ಬ್ಯೂನಸ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದ. ವೈದ್ಯಕೀಯ ಪದವೀಧರನಾದರೂ ಆತ ವೈದ್ಯ ವೃತ್ತಿಗಿಳಿಯಲಿಲ್ಲ. ಹಣ ಗಳಿಕೆಗೆ ಮನಸ್ಸು ಮಾಡಲಿಲ್ಲ, ವೈಯಕ್ತಿಕ ಬದುಕಿನ ಬಗ್ಗೆ ಯಾವತ್ತೂ ಚಿಂತಿಸಲಿಲ್ಲ, ಅಧಿಕಾರದ ಹಂಬಲ ಆತನಿಗೆ ಇರಲಿಲ್ಲ. ನ್ಯಾಯ ಸಮ್ಮತವಲ್ಲದ ಸಾಮಾಜಿಕ ವ್ಯವಸ್ಥೆ ವಿರುದ್ಧ ಹೋರಾಡಿ ಶೋಷಿತರಿಗೆ ನ್ಯಾಯ ಒದಗಿಸಿ ಸ್ವಾಸ್ಥ್ಯ ಬದುಕು ರೂಪಿಸುವುದು ಆತನ ಆಶಯವಾಗಿತ್ತು.
ವರ್ಗ ವ್ಯವಸ್ಥೆಯಿಂದ ಶೋಷಣೆ, ದೌರ್ಜನ್ಯ, ತುಳಿತಕ್ಕೊಳಗಾದ ಜನರ ದಾರುಣ ಪರಿಸ್ಥಿತಿಯನ್ನು ಕಂಡು ಆತನ ಮನ ಮಿಡಿಯುತ್ತಿತ್ತು. ಭೀಕರ ಹಸಿವು ರೋಗಗಳಿಗೆ ಬಲಿಯಾಗಿ ಸಾಯುತ್ತಿರುವ ಸಾವಿರಾರು ಮಕ್ಕಳ ಅಸಹಾಯಕತೆಯ ಬದುಕು ಮತ್ತು ಸಾಮಾಜಿಕ ಅಸಮಾನತೆ ವ್ಯವಸ್ಥೆ ಚೆ ಗುವೆರಾ ಹೋರಾಟದ ಬದುಕಿಗೆ ಮುನ್ನುಡಿ ಬರೆಯಿತು. “A promise to fight for a better world, for a better life for all the poor and exploited” ಎಂಬುದು ಚೆ ಗುವೆರಾ ಮೂಲ ತತ್ವವಾಗಿತ್ತು. ಅದಕ್ಕಾಗಿ ಕ್ರಾಂತಿಯ ಕಹಳೆ ಊದಲು ವೈದ್ಯ ವೃತ್ತಿಗೆ ಗುಡ್ ಬೈ ಹೇಳಿ ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಸಮರಕ್ಕಿಳಿದನು.

1954ರಲ್ಲಿ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ಜೊತೆಗೂಡಿ ಕಮ್ಯುನಿಸಮ್ ಸಿದ್ಧಾಂತದಿಂದ ಪ್ರೇರಿತಗೊಂಡು ಕ್ಯೂಬಾದ ಸರ್ವಾಧಿಕಾರಿ ಫಲೆಗ್ಗೆನ್ಸಿಯೋ ಬ್ರಾಟಿಸ್ಟಾ ವಿರುದ್ಧ ಬಂಡಾಯಕ್ಕೆ ಸಿದ್ಧನಾಗಿ ಕ್ರಾಂತಿಯ ಕಿಡಿಯಾಗಿ ಹೊರಹೊಮ್ಮಿದನು. ವೈದ್ಯ ವಿದ್ಯಾರ್ಥಿಯಾದ ಚೆ ಗುವೆರಾನಿಗೆ ಅಸ್ತಮಾ ಅಂಟಿಕೊಂಡು ಆರೋಗ್ಯದ ಸಮಸ್ಯೆ ಎದುರಾಗಿತ್ತು. ಆದರೆ ಆತನ ಆತ್ಮವಿಶ್ವಾಸ, ಧೈರ್ಯ, ಸಾಮಾಜಿಕ ತುಡಿತದ ಇಚ್ಛಾಶಕ್ತಿ ಮಾತ್ರ ಒಂದಿಷ್ಟು ಕುಗ್ಗಲಿಲ್ಲ. ನಂತರ ಎರಡನೇ ಬಾರಿಗೆ ಕ್ಯಾಸ್ಟ್ರೊ ಜೊತೆಗೆ ಸೇರಿ ಅಮೇರಿಕ ವಿರುದ್ಧ ಹೋರಾಡಿ ಕ್ಯೂಬಾವನ್ನು ಅಮೆರಿಕದಿಂದ ಬಿಡುಗಡೆಗೊಳಿಸಿ ಕಮ್ಯುನಿಸ್ಟ್ ಭೂಮಿಯಾಗಿ ಪರಿವರ್ತಿಸಲು ಪ್ರಮುಖ ಪಾತ್ರವಹಿಸಿದ್ದು ಚೆ ಗುವೆರಾ ಎಂಬ ಯುವ ಕ್ರಾಂತಿಕಾರ. ಅಂದು ಅಮೆರಿಕ ಅಷ್ಟೇ ಅಲ್ಲದೇ ಇಡೀ ಜಗತ್ತಿನಲ್ಲಿ ಕ್ಯಾಸ್ಟ್ರೊಗಿಂತಲೂ ಹೆಚ್ಚು ಖ್ಯಾತಿ ಹೊಂದಿದ ಯುವಕ ‘ಚೇ’.
ಕೊನೆಗೂ ಕ್ಯೂಬಾದಲ್ಲಿ ಫಿಡೆಲ್ ಕ್ಯಾಸ್ಟ್ರೊ ನೇತೃತ್ವದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂತು. ಚೆ ಗುವೆರಾ ಅಲ್ಲಿನ ನ್ಯಾಷನಲ್ ಬ್ಯಾಂಕ್ ನ ಅಧ್ಯಕ್ಷನಾದ, ನಂತರ ಕೈಗಾರಿಕಾ ಸಚಿವನಾಗಿ ಅತ್ಯಂತ ಕ್ರಿಯಾಶೀಲನಾಗಿ ಅಧಿಕಾರ ಚಲಾಯಿಸಿದನು. ಆದರೆ ಆತ ಎಂದೂ ಆಸ್ತಿ, ಅಧಿಕಾರಕ್ಕಾಗಿ ಕೆಲಸ ಮಾಡಲಿಲ್ಲ. ತನ್ನ ಕ್ರಾಂತಿಯ ತುಡಿತದಿಂದಲೇ ಎಲ್ಲವೂ ಬದಲಾವಣೆ ಮಾಡುವುದರೊಂದಿಗೆ ಇತರೆ ಕಮ್ಯುನಿಸ್ಟ್ ರಾಷ್ಟ್ರಗಳ ಜೊತೆ ಬಾಂಧವ್ಯ ಬೆಳೆಸಲು ಸತತವಾಗಿ ಪ್ರಯತ್ನಿಸಿದನು. ಆದರೆ ಆತನ ಕ್ರಾಂತಿಕಾರಿ ವಿಚಾರಧಾರೆಯ ಸಿದ್ಧಾಂತ ಚೆ ಗುವೆರಾನ ಮಂತ್ರಿ ಪದವಿ ತ್ಯಾಗಕ್ಕೆ ಕಾರಣವಾಯಿತು.
ಈ ಅಂಕಣ ಓದಿದ್ದೀರಾ?: ದಲಿತರ ಹತ್ಯಾಕಾಂಡ | 42 ವರ್ಷಗಳ ಬಳಿಕ ತೀರ್ಪಿತ್ತ ಕೋರ್ಟ್; ನ್ಯಾಯ ದಕ್ಕಿದ್ದು ಯಾರಿಗೆ?
ಮೊದಲಿನಿಂದಲೂ ಚೆ ಗುವೆರಾ ಎಂಬ ಕೆಚ್ಚೆದೆಯ ಯುವ ನಾಯಕನ ಮೇಲೆ ಕತ್ತಿ ಮಸಿಯುತ್ತಿದ್ದ ಅಮೇರಿಕ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿತ್ತು. ಅಮೇರಿಕ ಚೆ ಗುವೆರಾನನ್ನು ಮುಗಿಸಲು ವಿಶೇಷ ತುಕಡಿಯೊಂದನ್ನು ರವಾನಿಸಿತ್ತು. ಅಕ್ಟೋಬರ್ 9, 1967 ರಂದು ತೀವ್ರವಾಗಿ ಗಾಯಗೊಂಡಿದ್ದ ಚೆ ಗುವೆರನು ದೈಹಿಕ ಸಾಮರ್ಥ್ಯ ಕಳೆದುಕೊಂಡಿದನು. ಅಸಹಾಯಕನಾದ ಚೆ ಗುವೆರಾ ಎದುರಿಗೆ ಸಂಚುಗಾರರ ಗುಂಪು, ನೋಡು ನೋಡುತ್ತಲೇ ಗುಂಡುಗಳು ಚೆ ಗುವೆರಾ ಎದೆಗೆ ಹೊಕ್ಕಿದವು. ಇಡೀ ಜಗತ್ತಿಗೆ ಬೆಳಕಾದ ಚೆ ಗುವೆರಾ ಎಂಬ ಕೆಂಪು ದೀಪ ಆರಿತು. ‘ನಾವು ಕೊಲ್ಲುವುದು ಕೇವಲ ಮನುಷ್ಯನನ್ನು ಮಾತ್ರ, ಆದರೆ ಆತನ ಬದುಕು, ಚಿಂತನೆ, ಹೋರಾಟಗಳು ಕೊಲ್ಲಲು ಸಾಧ್ಯವಿಲ್ಲ’ ಎನ್ನುವ ಹಾಗೇ ಚೆ ಗುವೆರಾ ಎಂಬ ಅದಮ್ಯ ಚೇತನ ಸದಾ ಯುವ ಜನಾಂಗಕ್ಕೆ ಪ್ರೇರಕ ಶಕ್ತಿ, ಹೀಗಾಗಿಯೇ ಆತ ಇಂದು ಜಗತ್ತಿನ ಕೋಟ್ಯಂತರ ಯುವಕರಿಗೆ ‘ಯೂತ್ ಐಕಾನ್’.

ಕೋಟಿಗಟ್ಟಲೆ ಯುವಕರನ್ನು ಸೆಳೆಯುವ ಚೆ ಗುವಾರನ ಫೋಟೋ ಇಂದಿಗೂ ಅಧಿಕ ಸಂಖ್ಯೆಯಲ್ಲಿ ಮುದ್ರಿತವಾಗುತ್ತವೆ. ಆತ ಮರೆಯಾಗಿ 57 ವರ್ಷಗಳೇ ಉರುಳಿವೆ. ಆದರೂ ಇಂದಿಗೂ ಜೀವಂತವಾಗಿ ಯುವಕರ ಟೀ-ಸರ್ಟ್ ಮೇಲೆ ಅಚ್ಚಳಿಯಾಗಿ ಮಿಂಚುತ್ತಿದ್ದಾನೆ, ಸ್ಫೂರ್ತಿಯಾಗಿದ್ದಾನೆ.
ಕ್ರಾಂತಿಯ ಸಿದ್ಧಾಂತದ ಅರಿವೇ ಇಲ್ಲದ ಅದೆಷ್ಟೋ ಯುವಕರ ಎದೆಯೊಳಗೂ ‘ಚೆ‘ ಶಾಶ್ವತವಾಗಿ ನೆಲೆಸಿದ್ದಾನೆ. ನಮ್ಮ ಕಣ್ಣಿಗೆ ಆತ ಕೇವಲ ‘Fashion Icon’ ಅಷ್ಟೇ ಆಗದೇ ‘Thinking Icon’ ಕೂಡ ಆಗಬೇಕಾಗಿದೆ. ಆತನ ಫೋಟೋ ನೋಡಿದರೆ ಮೈ ರೋಮಾಂಚನ ಆಗದೇ ಇರದು. ಆತನಲ್ಲೊಂದು ಛಲ, ಆತ್ಮನಂಬಿಕೆ, ಸಾಮಾಜಿಕ ಕಳಕಳಿ ಮಾತ್ರವೇ ಕಾಣಿಸುತ್ತದೆ. ‘ಬದುಕು ಕೇವಲ ನಮಗಾಗಿ ಅಷ್ಟೇ ಅಲ್ಲ, ಬದುಕಿಗೆ ಒಂದು ಉದ್ದೇಶವಿದೆ, ಅದನ್ನು ಹೋರಾಡಿ ದಕ್ಕಿಸಿಕೋ, ಸಮಾಜಕ್ಕೆ ಅರ್ಪಿಸಿಕೋ’ ಎನ್ನುವುದು ಆತನ ಫೋಟೋ ಹೇಳುತ್ತದೆ.
ಅಂದ ಹಾಗೇ ಇಂದು ‘ಚೆ ಗುವೆರಾ’ ಹುಟ್ಟಿದ ದಿನ, ಆತ ಬದುಕಿದ್ದರೆ ತನ್ನ 97ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ, ದುರಾದೃಷ್ಟ ಸಂಗತಿ ಏನೆಂದರೆ ಸಮಾಜಕ್ಕೆ ಪ್ರೇರಕ ಶಕ್ತಿಯಾದ ಹಲವು ಚೇತನರು ಗುಂಡಿಗೆ ಬಲಿಯಾಗಿರುವುದು ಕಣ್ಣ ಮುಂದಿರುವ ಇತಿಹಾಸ. ಕೇವಲ 39 ವರ್ಷಗಳ ಮಾತ್ರ ಬದುಕಿದ್ದ ಚೆ ಗುವೆರಾ ಯುವಜನತೆಯ ರಿಯಲ್ ಹೀರೋ! ಕ್ರಾಂತಿಕಾರಿ ಚೆ ಗುವೆರಾ ಚಿಂತನೆ ಮತ್ತೆ ಮುನ್ನೆಲೆಗೆ ಬರಲಿ…
ಕ್ರಾಂತಿ ಪುರುಷನ ಬಗ್ಗೆ ಅಲ್ಪಸ್ವಲ್ಪ ತಿಳಿದಿತ್ತು. ಈ ಲೇಖನ ಓದಿದ ಮೇಲೆ ತುಂಬಾ ಖುಷಿಯಾಯಿತು. ಬಾಲಾಜಿ ಕುಂಬಾರ ಕಿರು ಲೇಖನದಲ್ಲಿ ಹೋರಾಟಗಾರನ ಬದುಕನ್ನು ತಿಳಿಸಿದ್ದಾರೆ. ಧನ್ಯವಾದಗಳು 🙏
👌👌👌👌👌
ಲೇಖನ ಚೆನ್ನಾಗಿದೆ ಧನ್ಯವಾದಗಳು ❤️