ದಲಿತರ ಹತ್ಯಾಕಾಂಡ | 42 ವರ್ಷಗಳ ಬಳಿಕ ತೀರ್ಪಿತ್ತ ಕೋರ್ಟ್‌; ನ್ಯಾಯ ದಕ್ಕಿದ್ದು ಯಾರಿಗೆ?

Date:

ಇಲ್ಲಿ ನ್ಯಾಯ ತೋರುತ್ತಿದೆಯೇ? ನಾನು ನನ್ನ ಇಡೀ ಜೀವನವನ್ನು ನ್ಯಾಯಕ್ಕಾಗಿ ಕಾಯುವುದರಲ್ಲೇ ಕಳೆದಿದ್ದೇನೆ. ನನಗೆ ಈಗ ಸಿಕ್ಕಿರುವುದು ನ್ಯಾಯವೇ? - ಇದು ಹತ್ಯಾಕಾಂಡದಲ್ಲಿ ಬದುಕುಳಿದ ತಾಯಿಯ ಅಳಲು. ಪ್ರಬಲ ಜಾತಿಗರು ತಮ್ಮ ಪ್ರಾಬಲ್ಯ ತೋರಿಸಿಕೊಳ್ಳಲು ನಡೆಸಿದ ರಕ್ತದೋಕುಳಿಯ ಕಥನವಿದು.

‘ವಿಳಂಬ ನ್ಯಾಯವೆಂದರೆ ನ್ಯಾಯದ ನಿರಾಕರಣೆ’ ಇದು ಇಂಗ್ಲೆಂಡ್‌ನ ಮಾಜಿ ಪ್ರಧಾನಿ ವಿಲಿಯಂ ಎಡ್ವರ್ಡ್ ಗ್ಲಾಡ್‌ಸ್ಟೋನ್ ಅವರ ಹೇಳಿಕೆ. ‘ನ್ಯಾಯದಾನವು ವಿಳಂಬವಾದರೆ ಅದೂ ಕೂಡ ಅನ್ಯಾಯವೇ’ ಎಂಬುದು ಅದರ ಅರ್ಥ. ಇದು ಭಾರತದ ನ್ಯಾಯ ವ್ಯವಸ್ಥೆಗೆ ಚೆನ್ನಾಗಿ ಅನ್ವಯಿಸುತ್ತದೆ. ಏಕೆಂದರೆ, ಭಾರತದಲ್ಲಿಯೂ ಹಲವಾರು ಪ್ರಮುಖ ಪ್ರಕರಣಗಳಲ್ಲಿ ನ್ಯಾಯ ದೊರೆಯುವಷ್ಟರಲ್ಲಿ ನ್ಯಾಯ ಪಡೆಯಬೇಕಾದವರು ಹಾಗೂ ಶಿಕ್ಷೆಗೆ ಗುರಿಯಾಗಬೇಕಾದವರು ಜೀವ ಬಿಟ್ಟಿರುತ್ತಾರೆ. ಅಳಿದುಳಿದವರಿಗೆ ನ್ಯಾಯ ಸಿಗದೇ ಇದ್ದರೂ ಪರವಾಗಿಲ್ಲ, ಪ್ರಕರಣ ಮುಗಿದರೆ ಸಾಕು ಎನ್ನಿಸಿಬಿಟ್ಟಿರುತ್ತದೆ.

ವಿಲಿಯಂ ಎಡ್ವರ್ಡ್‌ ಅವರ ಹೇಳಿಕೆಯನ್ನು ಉತ್ತರ ಪ್ರದೇಶದ ಫಿರೋಜಾಬಾದ್‌ನ ಪ್ರಕರಣವೊಂದು ಸಾಕ್ಷೀಕರಿಸುತ್ತದೆ. 10 ಮಂದಿ ದಲಿತರ ಹತ್ಯೆಗೈದಿದ್ದ ಪ್ರಕರಣವೊಂದರಲ್ಲಿ 42 ವರ್ಷಗಳ ಬಳಿಕ ತೀರ್ಪು ಬಂದಿದೆ. ನ್ಯಾಯಾಲಯವು ಒಬ್ಬ ಅರೋಪಿಯನ್ನು ಅಪರಾಧಿಯೆಂದು ಘೋಷಿಸಿದೆ.

ಆ ದಿನ 1982ರ ಡಿಸೆಂಬರ್ 30. ಸಂಜೆ ಆರು ಗಂಟೆಯ ಸಮಯ. ಫಿರೋಜಾಬಾದ್‌ನ ಸಾಧುಪುರ್ ಗ್ರಾಮದಲ್ಲಿ ತಂಪಾದ ಗಾಳಿ ಬೀಸುತ್ತಿತ್ತು. ಮಂದ ಬೆಳಕಿನಲ್ಲಿ 30 ವರ್ಷದ ಪ್ರೇಮಾವತಿ ತನ್ನ ಮಕ್ಕಳಾದ 14 ವರ್ಷದ ಸುಖದೇವಿ, 12 ವರ್ಷದ ಹರಿಶಂಕರ್ ಮತ್ತು 8 ವರ್ಷದ ಕೈಲಾಶ್ ಜೊತೆ ಅಡುಗೆ ಮನೆಯಲ್ಲಿ ರೊಟ್ಟಿ ಮಾಡುತ್ತಿದ್ದಳು.

ಇದ್ದಕ್ಕಿದ್ದಂತೆ, ಅವರಿದ್ದ ಅಡುಗೆ ಮನೆಗೆ ಇಬ್ಬರು ಪುರುಷರು ನುಗ್ಗಿದರು. ಪೊಲೀಸ್‌ ಸಮವಸ್ತ್ರದಲ್ಲಿದ್ದ ಮೂರನೇ ವ್ಯಕ್ತಿ ಮನೆಯ ಮುಖ್ಯ ಬಾಗಿಲಿನಲ್ಲಿ ಕಾವಲು ಕಾಯುತ್ತಿದ್ದ. ಒಳ ನುಗ್ಗಿದ್ದ ಇಬ್ಬರು ದುರುಳರು ಐದು ನಿಮಿಷಗಳ ಕಾಲ ಮನಬಂದಂತೆ ಗುಂಡು ಹಾರಿಸಿದರು. ಸುಖದೇವಿ ಹೊಟ್ಟೆಗೆ, ಹರಿಶಂಕರ್ ಕುತ್ತಿಗೆಗೆ ಮತ್ತು ಕೈಲಾಶ್ ಎದೆ ಮತ್ತು ಹೊಟ್ಟೆಗೆ ಗುಂಡು ಹೊಕ್ಕವು, ಮೂವರೂ ಸ್ಥಳದಲ್ಲೇ ಉಸಿರು ಚೆಲ್ಲಿದರು.

ಹೇಗೋ ಪ್ರೇಮಾವತಿ ಬದುಕುಳಿದಿದ್ದರು. ಕಾಲಿಗೆ ಗುಂಡು ತಗುಲಿದ್ದರಿಂದ ವಾಕಿಂಗ್ ಸ್ಟಿಕ್ ಆಕೆಯ ಕಾಯಂ ಸಂಗಾತಿಯಾಗಿತ್ತು. ಆಕೆಯ ಗಂಡ ಹೊರಹೋಗಿದ್ದ ಕಾರಣ, ಆತನೂ ಬದುಕುಳಿದಿದ್ದರು. ಆಕೆಯ ಮೂವರು ಮಕ್ಕಳು, ಆರು ಮಹಿಳೆಯರು ಸೇರಿದಂತೆ 10 ಮಂದಿ ದಲಿತರನ್ನು ಡಕಾಯಿತ ಅನಾರ್ ಸಿಂಗ್ ಯಾದವ್ ಗ್ಯಾಂಗ್‌ ಬರ್ಬರವಾಗಿ ಹತ್ಯೆಗೈದಿತ್ತು. ಆ ಘಟನೆಯನ್ನು ನೆನೆದರೆ ಇಂದಿಗೂ ಆ ಗ್ರಾಮದ, ಆ ಸಮುದಾಯದ ಜನರು ನಿದ್ರೆಯಲ್ಲೂ ಎದ್ದು ಕೂರುತ್ತಾರೆ. ಬೆಚ್ಚಿ ಬೀಳುತ್ತಾರೆ.  

ಹತ್ಯಾಕಾಂಡ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಸುಮಾರು 42 ವರ್ಷಗಳ ನಂತರ ಫಿರೋಜಾಬಾದ್ ನ್ಯಾಯಾಲಯವು 2023ರ ಮೇ 31 ರಂದು ಸಾಧುಪುರ ಹತ್ಯಾಕಾಂಡ ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದೆ. ಆದರೆ, ಈ ವೇಳೆಗಾಗಲೇ ಪ್ರಕರಣದ ಇಬ್ಬರು ಆರೋಪಿಗಳಾದ ಅನಾರ್ ಮತ್ತು ಜಪಾನ್ ಸಿಂಗ್ ಸಾವನ್ನಪ್ಪಿದ್ದರು. ಇನ್ನು ಆರೋಪಿಗಳಲ್ಲಿ ಬದುಕುಳಿದಿರುವ 90 ವರ್ಷದ ಆರೋಪಿ ಗಂಗಾ ದಯಾಳ್‌ ಅನ್ನು ಅಪರಾಧಿಯೆಂದು ನ್ಯಾಯಾಲಯ ಘೋಷಿಸಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 307 (ಕೊಲೆಗೆ ಯತ್ನ) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿದೆ.

“ಇಲ್ಲಿ ನ್ಯಾಯ ತೋರುತ್ತಿದೆಯೇ? ನಾನು ನನ್ನ ಇಡೀ ಜೀವನವನ್ನು ನ್ಯಾಯಕ್ಕಾಗಿ ಕಾಯುವುದರಲ್ಲೇ ಕಳೆದಿದ್ದೇನೆ. ನನಗೆ ಈಗ ಸಿಕ್ಕಿರುವುದು ನ್ಯಾಯವೇ?” ಎಂದು ಮಕ್ಕಳನ್ನು ಕಳೆದುಕೊಂಡಿದ್ದ 72 ವರ್ಷದ ಪ್ರೇಮಾವತಿ ಕಣ್ಣೀರು ಹಾಕುತ್ತಾ ಕೇಳುತ್ತಾರೆ.

ಹೊಸ ಜಿಲ್ಲೆಯಾಗಿದ್ದು ನ್ಯಾಯ ವಿಳಂಬಕ್ಕೆ ಕಾರಣ!

1989ರಲ್ಲಿ ಫಿರೋಜಾಬಾದ್ ಹೊಸ ಜಿಲ್ಲೆಯಾಗಿ ರಚನೆಯಾಯಿತು. ಸಾಧುಪುರ ಹತ್ಯಾಕಾಂಡ ನಡೆದಾಗ ಆ ಗ್ರಾಮ ಮತ್ತು ಶಿಕೋಹಾಬಾದ್‌ ಪೊಲೀಸ್‌ ಠಾಣೆಯು ಮೈನ್‌ಪುರಿ ಜಿಲ್ಲೆಯಲ್ಲಿತ್ತು. ಹೊಸ ಜಿಲ್ಲೆ ರಚನೆಯಾದ ಬಳಿಕ ಠಾಣೆ ಮತ್ತು ಗ್ರಾಮ ಫಿರೋಜಾಬಾದ್ ಜಿಲ್ಲೆಗೆ ಸೇರಿದವು. ಆದರೆ, ಪ್ರಕರಣವು ಮೈನ್‌ಪುರಿ ಜಿಲ್ಲೆಯಲ್ಲಿದ್ದಾಗ ನಡೆದಿದ್ದ ಕಾರಣ, ಯಾವ ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಬೇಕು ಎಂಬುದರ ಕುರಿತು ವಿವಾದಗಳು ಇದ್ದವು.

ಇದನ್ನು ನಿರ್ಧರಿಸಲು ಅಲಹಾಬಾದ್‌ ಹೈಕೋರ್ಟ್‌ ಸಾಕಷ್ಟು ಸಮಯ ತೆಗೆದುಕೊಂಡಿತು. ಅಂತಿಮವಾಗಿ ಫಿರೋಜಾಬಾದ್ ನ್ಯಾಯಾಲಯ ವಿಚಾರಣೆ ನಡೆಸಬೇಕು ಎಂದು ಹೇಳಿತು. ಆ ನಂತರ ಆರೋಪಿಗಳು ಕಾಲಾವಕಾಶ ಕೋರುತ್ತಲೇ ಇದ್ದರು. ಇದೆಲ್ಲವೂ ಪ್ರಕರಣದ ತೀರ್ಪಿನ ವಿಳಂಬಕ್ಕೆ ಕಾರಣವಾಯಿತು ಎನ್ನುತ್ತಾರೆ ಸಂತ್ರಸ್ತರ ಪರ ವಾದ ಮಂಡಿಸಿದ ಫಿರೋಜಾಬಾದ್ ಜಿಲ್ಲಾ ಪ್ರಧಾನ ವಕೀಲ ರಾಜೀವ್ ಉಪಾಧ್ಯಾಯ.

ಹತ್ಯಾಕಾಂಡ ನಡೆಸಿ ಪ್ರಾಬಲ್ಯ ಮೆರೆದಿದ್ದ ಕೊಲೆಗಡುಕರು

ಹತ್ಯಾಕಾಂಡದ ಹಿಂದಿನ ದಿನ ರಾತ್ರಿ ಆರೋಪಿ ಅನಾರ್ ಮತ್ತು ಆತನ ತಂಡವು ರಾತ್ರಿ ಆಶ್ರಯ ನೀಡುವಂತೆ ತಮಗೆ ಬೆದರಿಕೆ ಹಾಕಿದರು. ಭಯದಿಂದಲೇ ನಾನು ಅವರಿಗೆ ಉಳಿದುಕೊಳ್ಳಲು ಅವಕಾಶ ಕೊಟ್ಟೆ ಎಂದು ಸಮೀಪದ ಶಿವರಾಮ ಗಧಿ ಗ್ರಾಮದ ನಿವಾಸಿ, ಪ್ರಕರಣದ ಸಾಕ್ಷಿ ರಮೇಶ್ ಚಂದ್ರ ಹೇಳಿದ್ದಾರೆ.

ಘಟನೆ ನಡೆಯಬೇಕಿದ್ದ ದಿನದ ಬೆಳಗ್ಗೆ, ಖಾಲಿ ಕಾಗದ ಮತ್ತು ಪೆನ್ನು ನೀಡುವಂತೆ ಅನಾರ್ ಸಿಂಗ್ ಕೇಳಿದರು. ಅವರು ಸರ್ಕಾರವನ್ನು ಉರುಳಿಸುತ್ತೇವೆ. ಅಂತಹ ಹತ್ಯಾಕಾಂಡವನ್ನು ನಡೆಸುತ್ತೇವೆ. ಈ ಘಟನೆಯಿಂದ ಶಿಕೋಹಾಬಾದ್‌ ಸರ್ಕಲ್‌ ಆಫೀಸರ್‌ (ಸಿಒ) ರಾಮಶರಣ್‌ ತ್ಯಾಗಿ ಪಾಠ ಕಲಿಯುತ್ತಾರೆ ಎಂದು ಆರೋಪಿಗಳು ಹೇಳಿದ್ದರು. ಅವರು ಹೇಳಿದ್ದೆಲ್ಲವನ್ನೂ ನಾನು ಪತ್ರದಲ್ಲಿ ಬರೆದಿದ್ದಾಗಿ ರಮೇಶ್ ಚಂದ್ರ ವಿವರಿಸಿದ್ದಾರೆ.

“ಪತ್ರದೊಂದಿಗೆ ನೀವು ಏನು ಮಾಡಲು ಯೋಜಿಸುತ್ತೀರಿ ಎಂದು ನಾನು ಅವರನ್ನು ಕೇಳಿದಾಗ, ‘ಈ ಪತ್ರದ ನಂತರ (ಯುಪಿ ಸಿಎಂ) ವಿ ಪಿ ಸಿಂಗ್ ಮತ್ತು ಸಿಒ ತ್ಯಾಗಿ ಅವರು ತಮ್ಮ ಹುದ್ದೆಗಳಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ನಾನು ನೋಡುತ್ತೇನೆ’ ಎಂದು ಅನಾರ್‌ ಸಿಂಗ್ ಹೇಳಿದರು ಮತ್ತು ಪತ್ರದ ಮೇಲೆ ಸಹಿ ಹಾಕಿದರು” ಎಂದು ರಮೇಶ್‌ ಚಂದ್ರ ತಿಳಿಸಿದ್ದಾರೆ.

ಆ ಪತ್ರದ ಮೊದಲ ಪ್ಯಾರಾದಲ್ಲಿ, “ತನ್ನ ಸಂಬಂಧಿಕರಾದ ಮುಗ್ಧ ಜನರನ್ನು ಬಂಧಿಸಿ 20 ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ಪೊಲೀಸರು ಹಿಂಸೆ ನೀಡಿದ್ದಕ್ಕೆ ಪ್ರತಿಕಾರವಾಗಿ ಈ ಅಪರಾಧ ಎಸಗುತ್ತಿರುವುದಾಗಿ ಉಲ್ಲೇಖಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.

ಪತ್ರವನ್ನು ಕೈಬರಹ ತಜ್ಞ ಶಿವಪ್ರಸಾದ್ ಮಿಶ್ರಾ ಅವರು ಪರಿಶೀಲಿಸಿದ್ದು, ಪತ್ರವು ಅಸಲಿ ಎಂದು ಸಾಬೀತಾಗಿದೆ. ಪತ್ರವನ್ನು ದಾಖಲೆಯಾಗಿ ತೆಗೆದುಕೊಂಡ ನ್ಯಾಯಾಲಯ, “ಆರೋಪಿ ಅನಾರ್ ಸಿಂಗ್ (ಮೃತ) ಶಿಕೋಹಾಬಾದ್ ಸಿಒ ತ್ಯಾಗಿ ಅವರೊಂದಿಗೆ ದ್ವೇಷವನ್ನು ಹೊಂದಿದ್ದ. ಬಡ ಜನರನ್ನು ಸರ್ಕಾರವು ಹಿಂಸಿಸುತ್ತಿದೆ ಎಂಬ ಭಾವದಿಂದ ಸರ್ಕಾರದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಈ ಹತ್ಯಾಕಾಂಡ ಎಸಗಿದ್ದಾರೆ. ಕೃತ್ಯದಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಇಡೀ ಪ್ರಕರಣದಲ್ಲಿ ಸತ್ತವರ ತಪ್ಪೇನೂ ಇಲ್ಲ. ಕೇವಲ ತಮ್ಮ ಪ್ರಾಬಲ್ಯ ತೋರಿಸಲು ಅನಾರ್ ಸಿಂಗ್ ಮತ್ತು ಇತರರು ಅಸಹಾಯಕ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ” ಎಂದು ಹೇಳಿದೆ.

ತಾಯಿಯ ಆಕ್ರಂದನ – ಸರ್ಕಾರದ ಹುಸಿ ಅನುಕಂಪ 

ಮೂವರು ಮಕ್ಕಳನ್ನು ಕಳೆದುಕೊಂಡ ಹತ್ಯಾಕಾಂಡವನ್ನು ನೆನೆಯುತ್ತಿದ್ದಂತೆ ಪ್ರೇಮಾವತಿ ಕಣ್ಣೀರಾದರು. ಅವರ ಗಂಟಲು ಕಟ್ಟಿತು. ತುಟಿಗಳು ನಡುಗಿದವು. “ಎಲ್ಲವೂ ಕ್ಷಣಾರ್ಧದಲ್ಲಿ ನಡೆದುಹೋಯಿತು. ಏನಾಗುತ್ತಿದೆ ಎಂದು ಅರಿಯುವುದರಲ್ಲಿ ಮಕ್ಕಳ ಉಸಿರಾಟ ನಿಂತುಹೋಗಿತ್ತು. ಕಾಲಿಗೆ ಗುಂಡು ತಗುಲಿದ್ದರೂ ನನಗೆ ಅರಿವಾಗದಂತೆ ನಿಶ್ಚೇಷ್ಟಿತಳಾಗಿದ್ದೆ. ಅವರು ನಮ್ಮನ್ನು ಏನನ್ನೂ ಕೇಳಲಿಲ್ಲ. ಅವರು ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ಗುಂಡು ಹಾರಿಸಿ ಹೋದರು” ಎಂದು ಪ್ರೇಮಾವತಿ ವಿವರಿಸುತ್ತಾರೆ.

ಘಟನೆ ನಡೆದಾಗ ಪ್ರೇಮಾವತಿ ಅವರ ನಾಲ್ಕನೇ ಪುತ್ರ, 2 ವರ್ಷದ ಮಗುವಾಗಿದ್ದ ಮಹೇಂದ್ರ ಬದುಕುಳಿದಿದ್ದ. ಈಗ ಪ್ರೇಮಾವತಿ ಪತಿ ದೃಷ್ಟಿ ಕಳೆದುಕೊಂಡಿರುವುದರಿಂದ ಆತನೇ ಕುಟುಂಬಕ್ಕೆ ಆಸರೆ. ಸರ್ಕಾರವು ಹತ್ಯಾಕಾಂಡದಲ್ಲಿ ಬಲಿಯಾದವರ ಪ್ರತಿ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಮಹೇಂದ್ರ 18ನೇ ವಯಸ್ಸಿಗೆ ಕಾಲಿಟ್ಟಾಗಿನಿಂದ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈಗ ಅವರಿಗೆ 44 ವರ್ಷ, ಆದರೂ, ಉದ್ಯೋಗ ಪಡೆಯಲು ಸಾಧ್ಯವೇ ಆಗಿಲ್ಲ. ಅಲ್ಲದೆ, ಘಟನೆಯ ಬಳಿಕ ಹುಟ್ಟಿದ ಮಹೇಂದ್ರ ಅವರ ಸೋದರ – ಸೋದರಿಯೂ ಭರವಸೆಯ ಉದ್ಯೋಗ ಪಡೆಯಲು ಸಾಧ್ಯವಾಗಿಲ್ಲ.

ಅನುಕಂಪದ ಆಧಾರದ ಮೇಲೆ ಗ್ರಾಮದ ನಾಲ್ವರಿಗೆ ಉದ್ಯೋಗ ನೀಡಲಾಗಿತ್ತು. ಆದರೆ, ಇಬ್ಬರು ಮಾತ್ರವೇ ಈಗಲೂ ಸೇವೆಯಲ್ಲಿದ್ದಾರೆ. ಇನ್ನಿಬ್ಬರನ್ನು ಯಾವುದೇ ಕಾರಣ ನೀಡದೆ ಸೇವೆಯಿಂದ ವಜಾಗೊಳಿಸಲಾಗಿದೆ. ಹತ್ಯಾಕಾಂಡದಲ್ಲಿ ತನ್ನ ಅಜ್ಜಿಯನ್ನು ಕಳೆದುಕೊಂಡ ಗ್ರಾಮದ ರಾಮ್‌ ನರೇಶ್‌ 1982ರಲ್ಲಿ ಆಗ್ರಾದಲ್ಲಿ (ಗ್ರಾಮದಿಂದ 80 ಕಿ.ಮೀ ದೂರದಲ್ಲಿ) ಪ್ರಾದೇಶಿಕ ಉದ್ಯೋಗ ಕಚೇರಿಯಲ್ಲಿ ಜವಾನ ಹುದ್ದೆಗೆ ನೇಮಕಗೊಂಡರು. ಆದರೆ, ಒಂದು ವರ್ಷದ ನಂತರ ವಜಾಗೊಳಿಸಲಾಯಿತು. ಅವರ ಪದಚ್ಯುತಿಗೆ ಯಾವುದೇ ವಿವರಣೆಯನ್ನು ಕಚೇರಿಯಾಗಲೀ, ಸರ್ಕಾರವಾಗಲೀ ನೀಡಲಿಲ್ಲ ಎಂದು ರಾಮ್‌ ನರೇಶ್‌ ಹೇಳುತ್ತಾರೆ.

ರಾಮ್‌ ನರೇಶ್‌ ಕೂಡ ಕೋರ್ಟ್‌ ಮೆಟ್ಟಿಲೇರಿದ್ದರು. ಆಗ್ರಾ ವಿಭಾಗದ ಪ್ರಾದೇಶಿಕ ಉದ್ಯೋಗ ಕಚೇರಿಯಿಂದ ಫಿರೋಜಾಬಾದ್ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ 2009ರ ಜುಲೈ 6ರಂದು ಸ್ಪಷ್ಟೀಕರಣ ಕೇಳಿತ್ತು. ಉತ್ತರ ನೀಡಿದ್ದ ಕಚೇರಿ, ‘ರಾಮ್‌ ನರೇಶ್‌ ಅವರನ್ನು ವಜಾಗೊಳಿಸುವಂತೆ 1983 ಫೆಬ್ರವರಿ 28ರಂದು ಸರ್ಕಾರ ಆದೇಶ ಕಳಿಸಿತ್ತು. ಅದರಂತೆ ವಜಾಗೊಳಿಸಲಾಗಿತ್ತು’ ಎಂದು ಹೇಳಿದೆ.

ಕೃತ್ಯಕ್ಕೆ ಕತ್ತಲೆಯ ನೆರವು

ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರು ಗ್ರಾಮದ ಸ್ವರೂಪ್. “ನನ್ನ ಬೀದಿಯಲ್ಲಿ ನಾನು ಗುಂಡಿನ ಸದ್ದು ಕೇಳಿದೆ. ನಾನು ಮನೆಯೊಳಗೆ ಓಡಿ ಬಂದು ಮಂಚದ ಕೆಳಗೆ ಅಡಗಿಕೊಂಡೆ. ಒಳಗೆ ಸೀಮೆಎಣ್ಣೆ ದೀಪ ಉರಿಯುತ್ತಿತ್ತು. ಅಡಗಿಕೊಂಡೇ ಕೊಲೆಗಡುಕರನ್ನು ನೋಡಿದೆ. ಮೂವರು ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಅವರು ನನ್ನ ಸಹೋದರ ಸುರೇಶ್ (18), ನನ್ನ ತಾಯಿ ಪಾರ್ವತಿ (60) ಮತ್ತು ಸೊಸೆ ಶೀಲಾದೇವಿ (28) ಅವರನ್ನು ಬರ್ಬರವಾಗಿ ಕೊಂದರು” ಎಂದು ಸ್ವರೂಪ್‌ ಹೇಳುತ್ತಾರೆ.

“ಹತ್ಯಾಕಾಂಡ ನಡೆದಾಗ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕವೇ ಇರಲಿಲ್ಲ. ಕತ್ತಲೆಯ ಲಾಭ ಪಡೆದು ಕೊಲೆಗಡುಕರು ನಮ್ಮ ಮೇಲೆ ದಾಳಿ ನಡೆಸಿದರು. ಘಟನೆಯ ಬಳಿಕ ಗ್ರಾಮಕ್ಕೆ ಉಚಿತ ವಿದ್ಯುತ್‌ ನೀಡುವುದಾಗಿ ಸರ್ಕಾರ ಭರವಸೆ ನಿಡಿತು. ಸ್ವಲ್ಪ ಕಾಲ ಉಚಿತವಾಗಿ ವಿದ್ಯುತ್‌ ಅನ್ನೂ ನೀಡಿತು. ಆದರೆ, ಈಗ ವಿದ್ಯುತ್‌ ಬಿಲ್‌ ನೀಡುತ್ತಿದ್ದಾರೆ. ಶುಲ್ಕ ಪಾವತಿ ಮಾಡದಿದ್ದರೆ, ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ನಮ್ಮ ಗಾಯದ ಮೇಲೆ ಬರೆ ಹಾಕಿದಂತಾಗಿದೆ” ಎಂದು ಸ್ವರೂಪ್‌ ಅಳಲು ತೋಡಿಕೊಂಡಿದ್ದಾರೆ.

ಯಾದವರ ಜನಾಂಗೀಯ ದ್ವೇಷ

ಯಾದವ ಜನಾಂಗದವರು ದಲಿತ ಸಮುದಾಯದ ಮೇಲಿನ ದ್ವೇಷದಿಂದ ನಡೆಸಿದ ಹತ್ಯಾಕಾಂಡವಿದು ಎಂದು ಗ್ರಾಮದ ಸಂತ್ರಸ್ತ ಕುಟುಂಬಗಳಲ್ಲಿ ಒಬ್ಬರಾದ ಭಗವಾನ್ ಸಿಂಗ್ ಹೇಳುತ್ತಾರೆ. ಅವರು ಹತ್ಯಾಕಾಂಡದಲ್ಲಿ ತಮ್ಮ ಅಜ್ಜಿ ಸಗುಣಾ ದೇವಿ, ಚಿಕ್ಕಮ್ಮ ಶೀಲಾ ದೇವಿ ಮತ್ತು ಚಿಕ್ಕಪ್ಪ ಸುರೇಶ್‌ರನ್ನು ಕಳೆದುಕೊಂಡಿದ್ದಾರೆ. “ಉತ್ತರ ಪ್ರದೇಶದ ಪ್ರಬಲ ಜಾತಿಗಳಲ್ಲಿ ಯಾದವ ಸಮುದಾಯ ಕೂಡ ಒಂದು. ಅವರು, ಪ್ರತ್ಯೇಕ ಸ್ಮಶಾನವನ್ನು ಹೊಂದಿದ್ದಾರೆ. ಅಲ್ಲಿ, ನಾವು ನಮ್ಮ ಸಮುದಾಯದಲ್ಲಿ ಸತ್ತವರ ಮೃತದೇಹವನ್ನು ಸುಡುವಂತಿಲ್ಲ. ಈ ಹತ್ಯಾಕಾಂಡಕ್ಕೆ ಅದೂ ಕೂಡ ಒಂದು ಕಾರಣ. ದೇಶದ ಅತಿದೊಡ್ಡ ಜಾತಿ ದ್ವೇಷದ ಅಪರಾಧಗಳಿಗೆ ಬಲಿಯಾದ ಸಂತ್ರಸ್ತರಲ್ಲಿ ನಾವು ಒಬ್ಬರಾಗಿದ್ದೇವೆ” ಎಂದು ಭಗವಾನ್‌ ವಿವರಿಸಿದ್ದಾರೆ.

ಅಪರಾಧಿ ದಯಾಳ್‌ ಸಿಂಗ್ ಕುಟುಂಬ ಹೇಳುವುದೇನು?

ಹತ್ಯಾಕಾಂಡ ನಡೆದ ಸಾಧುಪುರದಿಂದ ಸುಮಾರ್ 50 ಕಿ.ಮೀ ದೂರದಲ್ಲಿರುವ ನಂಗ್ಲಾ ಖಾರ್ ಗ್ರಾಮದಲ್ಲಿ ಅಪರಾಧಿ ದಯಾಳ್‌ ಸಿಂಗ್‌ ಕುಟುಂಬ ಈಗ ನೆಲೆಸಿದೆ. ಆತನ ಹಿರಿಯ ಮಗ ಜೈ ಪ್ರಕಾಶ್, “ಎಲ್ಲೆಡೆ ಜಾತಿಪದ್ಧತಿ ಇರಬಹುದು. ಆದರೆ ನಾವು ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ನನ್ನ ತಂದೆಗೆ ಶಿಕ್ಷೆ ನೀಡಿರಬಹುದು. ಆದರೆ, ಅವರು ನಿರಪರಾಧಿ. ಘಟನೆ ನಡೆದ ದಿನ, ನನ್ನ ತಂದೆ ಸಾಧುಪುರದಲ್ಲಿ ಇರಲಿಲ್ಲ. ವೈಯಕ್ತಿಕ ದ್ವೇಷದ ಕಾರಣದಿಂದ ಯಾರೋ ಪೋಲೀಸ್ ದೂರಿನಲ್ಲಿ ಅವರ ಹೆಸರನ್ನು ಸೇರಿಸಿದ್ದಾರೆ. ಮೇ 31ರಂದು ವೃದ್ಧ ತಂದೆಯನ್ನು ಜೈಲಿಗೆ ಹಾಕಲಾಗಿದೆ. ನಾವು ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.

ಅಪರಾಧಿ ಗಂಗಾ ದಯಾಳ್

ಮೇ 31ರಂದು ತೀರ್ಪು ನೀಡಿದ ಫಿರೋಜಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸೆಷನ್ ನ್ಯಾಯಾಧೀಶ ಹರ್ವಿರ್ ಸಿಂಗ್, “ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯವು ಘಟನೆಯ ಸ್ಥಳದಲ್ಲಿ ಆರೋಪಿ (ಗಂಗಾ ದಯಾಳ್) ಇದ್ದರು ಎಂಬುದನ್ನು ಸಾಬೀತುಪಡಿಸಿದೆ. ಕೊಲೆಗಡುಕರು ತಮ್ಮ ಮನೆಗೆ ಬಂದಾಗ, ಗಂಗಾ ದಯಾಳ್‌ ಕೂಡ ಅವರೊಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರಾಸಿಕ್ಯೂಷನ್ ಪ್ರಸ್ತುತಪಡಿಸಿದ ಸಾಕ್ಷ್ಯವು ಆರೋಪಿ ಗಂಗಾ ದಯಾಳ್ ಅವರು ಅಪರಾಧಿ ಎಂದು ಒತ್ತಿಹೇಳುತ್ತಿವೆ” ಎಂದು ಹೇಳಿದ್ದರು.

ಜಿಲ್ಲೆಯಲ್ಲಿ ಎರಡನೇ ಘಟನೆ

ಫಿರೋಜಾಬಾದ್ ಜಿಲ್ಲೆಯಲ್ಲಿ ಆ ವರ್ಷ ದಲಿತರ ಮೇಲೆ ನಡೆದ ಎರಡನೇ ಹತ್ಯಾಕಾಂಡ ಸಾಧುಪುರ ಘಟನೆ. ಈ ಹತ್ಯಾಕಾಂಡಕ್ಕೂ ಒಂದು ವರ್ಷ ಮುಂಚೆ, 1981ರ ನವೆಂಬರ್ 18ರಂದು ಜಿಲ್ಲೆಯ ಡಿಯೋಲಿ ಗ್ರಾಮದಲ್ಲಿ ಜಾಟ್ ಸಮುದಾಯಕ್ಕೆ ಸೇರಿದ 24 ಜನರನ್ನು ನಕಲಿ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದ 16 ಶಸ್ತ್ರಸಜ್ಜಿತ ಠಾಕೂರ್ ಕೊಲೆಗಡುಕರ ಗುಂಪು ಹತ್ಯಗೈದಿತ್ತು.

ಸಾಧುಪುರ ಸಾವುಗಳು ಮತ್ತು ತೀರ್ಪಿನ ಹೊರತಾಗಿಯೂ, ಇಂದಿಗೂ ಹಳ್ಳಿಯಲ್ಲಿ ಆತಂಕ, ಭೀತಿ, ನೋವು, ಹತಾಶೆ ಹಾಗೆಯೇ ಉಳಿದಿದೆ. ಇಲ್ಲಿ ಈಗಲೂ ಜಾತಿ ತಾರತಮ್ಯ ಮುನ್ನೆಲೆಯಲ್ಲಿದೆ. ಇಂದಿಗೂ ಯಾದವರೊಡನೆ ಯಾವುದಾದರು ವಿಚಾರದಲ್ಲಿ ವಿವಾದ ಉಂಟಾದಾಗ, ‘ಭುಲ್ ಗಯೇ ಕ್ಯಾ ವೋ ದಿನ್ (ನೀವು ಆ ದಿನವನ್ನು ಮರೆತಿದ್ದೀರಾ)’ ಎಂದು ನಮ್ಮನ್ನು ಹೀಯಾಳಿಸುತ್ತಾರೆ ಎಂದು ಜಾಟ್ ಸಮುದಾಯದ ಜನರು ಹೇಳುತ್ತಾರೆ.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಆತ ನನ್ನ ಮಗನೇ ಇರಬಹುದು, ಆತನನ್ನು ಗಲ್ಲಿಗೇರಿಸಿ’: ಅತ್ಯಾಚಾರ ಆರೋಪಿಯ ತಂದೆ

ಆತ ನನ್ನ ಮಗನಾಗಿರಬಹುದು. ಆದರೆ, ಆತ ಅಪರಾಧಿ. ಆತನನ್ನು ಗಲ್ಲಿಗೇರಿಸಿ ಎಂದು...

ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿದ್ದರಾಮಯ್ಯ

ಕಾವೇರಿ ನೀರು ಬಿಡುವ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ...

‘ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ಧಿ ಬಂತಂತೆ’ ಇದು ರಾಜ್ಯ ಸರ್ಕಾರದ ಪರಿಸ್ಥಿತಿ: ಈಶ್ವರಪ್ಪ ಲೇವಡಿ

ಡಿಕೆ ಶಿವಕುಮಾರ್‌ ಅವರ ಕುತಂತ್ರದಿಂದ ರಾಜ್ಯದ ಜನರಿಗೆ ಸಮಸ್ಯೆ ನೀರು ಬಿಡುವುದಕ್ಕಿಂತ ಮೊದಲೇ...

ವಿಶೇಷಚೇತನ ಯೋಧರ ಹೊಸ ಪಿಂಚಣಿ ಯೋಜನೆ; ಮೋದಿ ಸರ್ಕಾರದ ನಕಲಿ ರಾಷ್ಟ್ರೀಯತೆ ಮತ್ತೊಮ್ಮೆ ಬಯಲು: ಖರ್ಗೆ

ಸಶಸ್ತ್ರ ಪಡೆ ಸಿಬ್ಬಂದಿಗೆ ಹೊಸ ವಿಶೇಷಚೇತನ ಪಿಂಚಣಿ ನಿಯಮಗಳ ಕುರಿತು ಶನಿವಾರ...