- ಬಿಟ್ ಕಾಯಿನ್ ಪ್ರಕರಣವನ್ನೂ ಮರು ತನಿಖೆ ಮಾಡುತ್ತೇವೆ
- ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ಆಗ್ರಹಿಸಿದ್ದ ಪ್ರತಾಪ್ ಸಿಂಹ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪರಮೇಶ್ವರ್, ಬಿಟ್ ಕಾಯಿನ್ ಪ್ರಕರಣವನ್ನೂ ಮರು ತನಿಖೆ ಮಾಡುತ್ತೇವೆ. ಬಿಜೆಪಿಯವರು ಈಗಾಗಲೇ ಈ ವಿಚಾರವಾಗಿ ಕುಣಿದಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದು 20 ದಿನ ಆಗಿದೆ ಅಷ್ಟೇ. ಅವರು ಸ್ವಲ್ಪ ಸಮಾಧಾನದಿಂದ ಇರುವುದು ಒಳ್ಳೆಯದು. ಈ ಪ್ರಕರಣದ ಮರು ಪರಿಶೀಲನೆ ಮಾಡ್ತೇವೆ ಎಂದು ಹೇಳಿದರು.
ಮಂಗಳವಾರ ಮೈಸೂರಿನಲ್ಲಿ ಬಿಟ್ ಕಾಯಿನ್ ತನಿಖೆ ವಿಚಾರವಾಗಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದಿದ್ದ ಬಿಟ್ ಕಾಯಿನ್ ಹಗರಣದ ವಿಷಯವನ್ನು ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಬಳಸಿಕೊಂಡರು. ಆದರೆ ಇವತ್ತು ಯಾಕೆ ಆ ಪ್ರಕರಣದ ಬಗ್ಗೆ ತನಿಖೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ್ದರು.
ಬಿಟ್ ಕಾಯಿನ್ ಹಗರಣ ಹಿನ್ನೆಲೆ
ಬೆಂಗಳೂರು ಸಿಸಿಬಿ ಪೊಲೀಸರು 2020ರ ನವೆಂಬರ್ ನಲ್ಲಿ ಶ್ರೀಕೃಷ್ಣ(ಶ್ರೀಕಿ) ಮತ್ತು ಆತನ ಸಹಚರರನ್ನು ಡ್ರಗ್ ಕೇಸ್ ಒಂದರಲ್ಲಿ ಬಂಧಿಸಿದ್ದರು. ಈ ವೇಳೆ ಶ್ರೀಕಿ ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್ ಬಳಸಿಕೊಂಡು ಡ್ರಗ್ ಸಂಗ್ರಹಿಸಿದ್ದ. ಜೊತೆಗೆ ಇದನ್ನು ತಮ್ಮ ಹೈ-ಪ್ರೊಫೈಲ್ ಕ್ಲೈಂಟ್‌ಗಳಿಗೆ ಮಾರಾಟ ಮಾಡುತ್ತಿದ್ದ ಎನ್ನುವ ದೂರು ಈತನ ಮೇಲೆ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ?:ರಾಜ್ಯದಲ್ಲಿರುವುದು ಸಿದ್ದರಾಮಯ್ಯ ಸರ್ಕಾರವೋ ಅಥವಾ ದಿಲ್ಲಿ ಜನಪಥದ ಸರ್ಕಾರವೋ: ಎಚ್‌ಡಿಕೆ
ವಿಚಾರಣೆ ವೇಳೆ ಶ್ರೀ ಕೃಷ್ಣ, ರಾನ್ಸಮ್ವೇರ್ ದಾಳಿ, ಕ್ರಿಪ್ಟೋ ಕರೆನ್ಸಿ ಲೂಟಿ, ಮನಿ ಲಾಂಡರಿಂಗ್ ಮತ್ತು ಸೈಬರ್ ವಂಚನೆಗಳಂತಹ ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೆ ನೀಡಿದ್ದ.
2019 ರಲ್ಲಿ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್‌ನ ಹ್ಯಾಕಿಂಗ್‌ನಲ್ಲೂ ಈತ ಭಾಗಿಯಾಗಿರುವ ಸಂಶಯ ಪೊಲೀಸ್ ಇಲಾಖೆಗಿತ್ತು. ಜುಲೈ 2019 ರಲ್ಲಿ ಹಣಕಾಸು ಇಲಾಖೆ ಸಲಹೆಗಾರರಾದ ಎಸ್ ಕೆ ಶೈಲಜಾ. ಅರ್ನೆಸ್ಟ್ ಮನಿ ಡೆಪಾಸಿಟ್ಸ್ ಮರುಪಾವತಿಯನ್ನು ಪರಿಶೀಲಿಸುವಾಗ, 7.37 ಕೋಟಿ ಅನಧಿಕೃತ ನಿಧಿ ವರ್ಗಾವಣೆ ಆಗಿರೋದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿಗೆ ದೂರು ಸಲ್ಲಿಸಿ ಪ್ರಕರಣ ದಾಖಲಿಸಲಾಯ್ತು.