ಹೊಸದಾಗಿ ರಚನೆಯಾದ ದೆಹಲಿ ವಿಧಾನಸಭೆಯಲ್ಲಿ ಮೊದಲ ಅಧಿವೇಶನ ಆರಂಭವಾಗಿದೆ. ಶಾಸಕರುಗಳು ಒಟ್ಟು ಆರು ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿಂದಿ, ಇಂಗ್ಲೀಷ್, ಸಂಸ್ಕೃತ, ಉರ್ದು, ಮೈತಿಲಿ ಮತ್ತು ಪಂಜಾಬಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸುಮಾರು 26 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ. 70 ವಿಧಾನಸಭೆ ಕ್ಷೇತ್ರಗಳ ಪೈಕಿ 48ರಲ್ಲಿ ಬಿಜೆಪಿ, 22ರಲ್ಲಿ ಎಎಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಕೂಡಾ ಗೆದ್ದಿಲ್ಲ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಮಾಜಿ ಸಿಎಂ ಆತಿಶಿ ಆಯ್ಕೆ
ಬಿಜೆಪಿ ಶಾಸಕ ಅರವಿಂದರ್ ಸಿಂಗ್ ಲವ್ಲಿ ಅವರು ಎಂಟನೇ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಅಧಿವೇಶನ ಪ್ರಾರಂಭವಾಗುವ ಮೊದಲು ರಾಜ್ ನಿವಾಸದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಪ್ರಮಾಣ ವಚನ ಭೋದಿಸಿದರು.
ಅತ್ಯಂತ ಹಿರಿಯ ಶಾಸಕಿಯಾಗಿ ಲವ್ಲಿ ಅವರು ಹೊಸದಾಗಿ ಆಯ್ಕೆಯಾದ ಎಲ್ಲಾ ಶಾಸಕರಿಗೆ ಪ್ರಮಾಣ ವಚನ ಭೋದಿಸಿದರು. ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮೊದಲು ಪ್ರಮಾಣ ವಚನ ಸ್ವೀಕರಿಸಿದ್ದು ಅದಾದ ಬಳಿಕ ಆರು ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ದೆಹಲಿ ಲೋಕೋಪಯೋಗಿ ಸಚಿವ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತು ಗೃಹ ಸಚಿವ ಆಶಿಶ್ ಸೂದ್ ಕೂಡಾ ಪ್ರಮಾಣ ವಚನ ಸ್ವೀಕರಿಸಿದರು. ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಪಂಜಾಬಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕಾನೂನು ಮತ್ತು ನ್ಯಾಯ ಸಚಿವ ಕಪಿಲ್ ಮಿಶ್ರಾ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇತರ ಹಲವು ಶಾಸಕರು ವಿವಿಧ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನೈಲ್ ಸಿಂಗ್ ಪಂಜಾಬಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಪ್ರದ್ಯುಮ್ನ ರಜಪೂತ್ ಮತ್ತು ನೀಲಂ ಪಹಲ್ವಾನ್ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಬಿಜೆಪಿಗೆ ಬಹುಮತ ಎನ್ನುತ್ತೆ ಚುನಾವಣೋತ್ತರ ಸಮೀಕ್ಷೆ
ಬಿಜೆಪಿಯ ತರ್ವಿಂದರ್ ಮಾರ್ವಾ ಅವರು ಮುದ್ರಿತ ಪ್ರಮಾಣ ವಚನ ಓದಿದ ಬಳಿಕ ಧಾರ್ಮಿಕ ಘೋಷಣೆಗಳನ್ನು ಪಠಿಸಿದರು. ಆದರೆ ಅದಕ್ಕೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಗುರುದ್ವಾರವಲ್ಲ ಎಂದು ಹೇಳಿದರು.
ಅಮಾನತುಲ್ಲಾ ಖಾನ್ (ಉರ್ದು), ಚಂದನ್ ಚೌಧರಿ (ಮೈಥಿಲಿ), ಅಜಯ್ ದತ್ (ಇಂಗ್ಲಿಷ್), ಮತ್ತು ಗಜೇಂದ್ರ ಯಾದವ್ (ಸಂಸ್ಕೃತ) ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಸ್ಪೀಕರ್ ಸದಸ್ಯರಿಗೆ ಅಧಿಕೃತ ಪ್ರಮಾಣ ವಚನ ಸ್ವರೂಪದಲ್ಲೇ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು.
ಸಂಜಯ್ ಗೋಯೆಲ್, ಜಿತೇಂದ್ರ ಮಹಾಜನ್, ಅಜಯ್ ಮಹಾವರ್ ಮತ್ತು ಬಿಜೆಪಿಯ ಕರ್ನೈಲ್ ಸಿಂಗ್ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ನಡುವೆ ಚೌಧರಿ ಜುಬೈರ್ ಮತ್ತು ಅಮನತುಲ್ಲಾ ಖಾನ್ ಉರ್ದು ಭಾಷೆಯನ್ನು ಆರಿಸಿಕೊಂಡರು.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಶೇ.46ರಷ್ಟು ಅಭ್ಯರ್ಥಿಗಳು 5-12ನೇ ತರಗತಿ ಶಿಕ್ಷಣ ಪಡೆದವರು
ವಿರೋಧ ಪಕ್ಷದ ನಾಯಕಿ ಮತ್ತು ಕಲ್ಕಾಜಿ ಕ್ಷೇತ್ರದ ಶಾಸಕಿ ಆತಿಶಿ ಕೂಡಾ ಪ್ರಮಾಣ ವಚನ ಸ್ವೀಕರಿಸಿದರು. ನಡೆಯಲು ತೊಂದರೆಯಾದ ಕಾರಣ ಗೋಪಾಲ್ ರೈ ತಮ್ಮ ಸ್ಥಾನದಲ್ಲೇ ನಿಂತು ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ಆತಿಶಿ ಸಹಾಯ ಮಾಡಿದರು. ಕೊನೆಯದಾಗಿ ಮೋಹನ್ ಸಿಂಗ್ ಬಿಶ್ತ್ ಪ್ರಮಾಣ ವಚನ ಸ್ವೀಕರಿಸಿದರು. ಅನಿಲ್ ಝಾ ಮೈಥಿಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು ಹೊಸ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಈ ಸ್ಥಾನವನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ. ಎಪಿ ಶಾಸಕರು ಮಾಜಿ ದೆಹಲಿ ಮುಖ್ಯಮಂತ್ರಿ ಆತಿಶಿ ಅವರನ್ನು ವಿಧಾನಸಭೆತಯ ವಿರೋಧ ಪಕ್ಷದ ನಾಯಕಿಯಾಗಿ ಸರ್ವಾನುಮತದಲ್ಲಿ ಆಯ್ಕೆ ಮಾಡಿಕೊಂಡರು.
