ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯಿಂದ ಫೆಬ್ರವರಿ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸ್ಲಂ ಜನರ ಮೇಲಿನ ಸಾಮಾಜಿಕ ಮತ್ತು ಅಭಿವೃದ್ಧಿ ತಾರತಮ್ಯ ವಿರೋಧಿಸಿ ಹಾಗೂ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳ ಘೋಷಣೆಗೆ ತೊಡಕಾಗಿರುವ ಸಂವಿಧಾನ ವಿರೋಧಿ ವಸತಿ ಇಲಾಖೆ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
2025-26ನೇ ಸಾಲಿನ ಬಜೆಟ್‌ನಲ್ಲಿ ಸ್ಲಂ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಪಾಲು ನೀಡಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಬೇಕು ಹಾಗೂ ಸ್ಲಂ ಜನರಿಗೆ ಪ್ರತ್ಯೇಕ ಸಚಿವಾಲಯ ಮತ್ತು ನಗರ ಉದ್ಯೋಗ ಖಾತ್ರಿ ಯೋಜನೆ ಘೋಷಣೆ ಸೇರಿದಂತೆ ನಿವೇಶನ ರಹಿತರಿಗೆ ವಸತಿ ಕಲ್ಪಿಸುವ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಕಾರ್ಯಕರ್ತರು ಫ್ರೀಡಂ ಪಾರ್ಕ್‌ನಲ್ಲಿ ಸೇರಿದ್ದರು. ಆದರೆ, ಸಚಿವರು ಬರದಿದ್ದ ಕಾರಣ, ಕರ್ನಾಟಕ ಸ್ಲಂ ಡೆವಲಪ್ಮೆಂಟ್ ಬೋರ್ಡ್‌ನ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರು ಮತ್ತು ಆಯುಕ್ತರಾದ ಡಾ. ಅಶೋಕ್ ಅವರು ಮನವಿಯನ್ನು ಸ್ವೀಕರಿಸಿದರು.
ಕರ್ನಾಟಕ ರಾಜ್ಯದ ನಗರ ಜನಸಂಖ್ಯೆಯಲ್ಲಿ ಶೇ.40% ರಷ್ಟು ಸ್ಲಂ ನಿವಾಸಿಗಳಾಗಿ ಪರಿಶಿಷ್ಟ ಜಾತಿ/ಪಂಗಡ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಅಲೆಮಾರಿ ಸಮುದಾಯಗಳನ್ನೊಳಗೊಂಡ ನಗರವಂಚಿತ ಸಮುದಾಯಗಳು ಸಾಮಾಜಿಕ ಅಸಮಾನತೆಯ ಭಾಗವಾಗಿ ಬದುಕು ಕಟ್ಟಿಕೊಡುತ್ತಿದ್ದು ಕೊಳಗೇರಿಗಳಲ್ಲಿರುವ ಜನರನ್ನು ನಾಗರಿಕರನ್ನಾಗಿ ಪರಿಗಣಿಸದೇ ತಾರತಮ್ಯವೆಸಗಲಾಗುತ್ತಿದೆ. ಅಂದರೆ ಭೂಮಿ ವಸತಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಬೀದಿ ದೀಪ ಶೌಚಾಲಯ ಜೀವನೋಪಾಯದಂತಹ ಕನಿಷ್ಠ ಸೌಲಭ್ಯಗಳನ್ನು ನೀಡದೇ ಅಭಿವೃದ್ಧಿಯಿಂದ ದೂರ ಇಡುವ ಮೂಲಕ ಸಂವಿಧಾನದ ಖಾತ್ರಿಗಳನ್ನು ದೊರಕದಂತೆ ಮಾಡಲಾಗಿದೆ. ಹಾಗಾಗಿ ಸಂವಿಧಾನದ ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ಸರ್ಕಾರ ನಮ್ಮ ಪರವಾದ ನಿಲುವಿಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಸಲಾಯಿತು.
ಪ್ರಮುಖ ಹಕ್ಕೊತ್ತಾಯಗಳು :
1. 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ಹಣ ಮೀಸಲಿಡಬೇಕು.
2. ಖಾಸಗಿ ಸ್ಲಂಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆದು ಭೂಸ್ವಾಧೀನಕ್ಕೆ ಸರ್ಕಾರ ಹಣ ನೀಡಬೇಕು.
3. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ 50ನೇ ವರ್ಷದ ಸುವರ್ಣ ಸಂಭ್ರಮದ ನೆನಪಿಗಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯಿದೆಯನ್ನು ತಿದ್ದುಪಡಿ ಮಾಡಬೇಕು.
4. ಸ್ಲಂ ನಿವಾಸಿಗಳ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು.
5. ನಗರಗಳಲ್ಲಿ ಸಾಮಾಜಿಕ ಅಸಮಾನತೆಯ ಭಾಗವಾಗಿರುವ ಸ್ಲಂ ಜನರ ಆರ್ಥಿಕ ಅಭಿವೃದ್ಧಿ ಮತ್ತು ಜೀವನೋಪಾಯಕ್ಕಾಗಿ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಬೇಕು.
6. ನಿವೇಶನ ರಹಿತರಿಗೆ ಚಿತ್ರದುರ್ಗ ಘೋಷಣೆಯಂತೆ ವಸತಿ ಕಲ್ಪಿಸಲು 2017-18ರ ಬಜೆಟ್ ಘೋಷಣೆಯಂತೆ ನಗರ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸಬೇಕು.
7. ಪ್ರಧಾನಮಂತ್ರಿ ಆವಾಸ್ ಯೋಜನೆ ಫಲಾನುಭವಿ ಶುಲ್ಕವನ್ನು ಎಸ್‌ಸಿ/ಎಸ್‌ಟಿಗಳಿಗೆ ಉಚಿತ ಇತರೆ ಸಮುದಾಯಗಳಿಗೆ 25 ಸಾವಿರ ಪಾವತಿಸಲು ಅವಕಾಶ ಕಲ್ಪಿಸಬೇಕು.
8. ಬೆಂಗಳೂರು ಸ್ಲಂ ನಿವಾಸಿಗಳ ಪುನರ್‌ವಸತಿಗಾಗಿ ಭೂ ಮಂಜೂರಾತಿ ನೀಡಬೇಕು ಹಾಗೂ ನೆಲಬಾಡಿಗೆ ಸ್ಲಂಗಳಿಗೆ ನೀತಿಯನ್ನು ರೂಪಿಸಬೇಕು.
ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆಯ ಸಂಚಾಲಕಿ ಚಂದ್ರಮ್ಮ, ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರ ಎ.ನರಸಿಂಹಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.