ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದ ಮೈಸೂರಿನ ಘಟನೆ ಮಾಸುವ ಮುನ್ನವೇ ಇದೀಗ ಇಂತಹದ್ದೇ ಘಟನೆ ಮಂಡ್ಯದಲ್ಲಿ ನಡೆದಿದೆ.
ಸಾಲಭಾದೆಯಿಂದ ಬೇಸತ್ತು ಒಂದೇ ಕುಟುಂಬದ ಮೂವರು ವಿಷ ಸೇವಿಸಿ, ನಂತರ ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀರಂಗಪಟ್ಟಣದ ಗಂಜಾಂ ನಿವಾಸಿಗಳಾದ ಮಾಸ್ತಪ್ಪ, ರತ್ನಮ್ಮ ದಂಪತಿ ಹಾಗೂ ಮಗಳು ಲಕ್ಷ್ಮೀ ಮೃತ ದುರ್ದೈವಿಗಳು.
ದಂಪತಿಯ ಮೃತದೇಹಗಳು ಪತ್ತೆ ಆಗಿದ್ದು, ಲಕ್ಷ್ಮೀ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಮಾಸ್ತಪ್ಪ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದರು ಎನ್ನಲಾಗಿದೆ. ಸುಮಾರು 3 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದ ಮಾಸ್ತಪ್ಪ, ಸಾಲಕೊಟ್ಟವರು ಇಂದು ಮನೆ ಬಳಿ ಗಲಾಟೆ ಮಾಡಿದ್ದಕ್ಕೆ ತೀವ್ರ ನೊಂದಿದ್ದರು. ಮರ್ಯಾದೆಗೆ ಅಂಜಿ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾಸ್ತಪ್ಪ ಸುಮಾರು 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟದಿಂದ ಮನೆ ಮಾರಾಟ ಮಾಡಲೂ ಮುಂದಾಗಿದ್ದರು. ಜಮೀನು ಇನ್ನು ಅವರ ಹೆಸರಿಗೆ ನೊಂದಣಿಯಾಗದ ಕಾರನ ಜಮೀನು ಮಾರಾಟವೂ ಸಾಧ್ಯವಾಗಿರಲಿಲ್ಲ ಎಂದು ಮಾಸ್ತಪ್ಪರ ಸಹೋದರ ಶಂಕರ್ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮಂಡ್ಯ | ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ; ಗೃಹಿಣಿ ವಿಜಯಲಕ್ಷ್ಮಿ ಕಾರ್ಯಕ್ಕೆ ಮೆಚ್ಚುಗೆ
ಗಂಜಾಂನಿಂದ ಬಂದು ಚಂದಗಾಲು ಬಳಿ ಏರಿ ಮೇಲೆ ಆಟೋ ನಿಲ್ಲಿಸಿ, ಮೂವರು ವಿಷ ಸೇವಿಸಿದ್ದಾರೆ. ಬಳಿಕ ನಾಲೆಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

