ದಾವಣಗೆರೆ ನಗರದ್ಯಾಂತ ಸಂಚಾರ ಪೊಲೀಸ್ ಇಲಾಖೆಯು ದ್ವಿಚಕ್ರ ವಾಹನ ಸವಾರರಿಗೆ ಸಂಪೂರ್ಣ ಸುರಕ್ಷತೆಯ ಹೆಲ್ಮೆಟ್ ಧರಿಸುವಂತೆ ಜಾಗೃತಿ ನೀಡುವ ಅಭಿಯಾನವನ್ನು ಕಳೆದ ಮೂರು ದಿನಗಳಿಂದ ಕೈಗೊಂಡಿದ್ದು, ಮಂಗಳವಾರದವರೆಗೆ ನಡೆಯಲಿದೆ.

ಬೆಳಗಿನಿಂದಲೂ ನಗರದಲ್ಲಿ ಸಂಚಾರ ಪೊಲೀಸ್ ವಿಭಾಗದ ಹಲವು ಅಧಿಕಾರಿಗಳು, ಪೇದೆಗಳು ವಿವಿಧ ವೃತ್ತಗಳಲ್ಲಿ ಬೆಳಗಿನಿಂದಲೂ ವಾಹನ ಸವಾರರಿಗೆ ಸುರಕ್ಷತೆ ಸಂಚಾರಕ್ಕಾಗಿ ಜಾಗೃತಿ ಅಭಿಯಾನವನ್ನು ನಡೆಸಿ ವಿಶೇಷವಾಗಿ ದ್ವಿಚಕ್ರ ಸವಾರರಿಗೆ ಸಂಪೂರ್ಣ ಸುರಕ್ಷತೆ ನೀಡುವ ಶಿರಸ್ತ್ರಾಣವನ್ನು ಧರಿಸುವಂತೆ ಮನವಿ ಮಾಡುತ್ತಿದ್ದರು ಕಂಡುಬಂದಿತು. ಹಾಗೂ ಅವರ ಬಳಿಯಿದ್ದ ಕಳಪೆ ಗುಣಮಟ್ಟದ ಅರ್ಧ ಶಿರಸ್ತ್ರಾಣವನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡುವುದು ಕಂಡುಬಂದಿತು.
ನಗರದ ಲಕ್ಷ್ಮಿ ಫ್ಲೋರ್ ಮಿಲ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಜಯದೇವ ವೃತ್ತ ಸೇರಿದಂತೆ ಹಲವಡೆಗಳಲ್ಲಿ ಕಳಪೆಗುಣಮಟ್ಟದ ಹೆಲ್ಮೆಟ್ ಅನ್ನು ವಶಕ್ಕೆ ತೆಗೆದುಕೊಂಡು ಸೂಚನೆ, ಜಾಗೃತಿ ಮೂಡಿಸುವ ಕೆಲಸದಲ್ಲಿ ಸಂಚಾರ ವಿಭಾಗದ ಪೊಲೀಸರು ಕಾರ್ಯನಿರತರಾಗಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ಉಪನಿರೀಕ್ಷಕ ಮಹಿಳಾ ಅಧಿಕಾರಿ ಶೈಲಜಾ “ಕಳೆದ ಮೂರು ದಿನಗಳಿಂದಲೂ ಈ ಜಾಗೃತಿ ಅಭಿಯಾನ ನಡೆಸುತ್ತಿದ್ದು, ಕಳಪೆ ಗುಣಮಟ್ಟದ ಶಿರಸ್ಥ್ರಾಣವನ್ನು ವಶಕ್ಕೆ ಪಡೆದು ಸಂಪೂರ್ಣ ಸುರಕ್ಷತೆಯ ಶಿರಸ್ಥ್ರಾಣ ಧರಿಸಲು ಎಚ್ಚರಿಕೆ ಮತ್ತು ಸೂಚನೆ ನೀಡುತ್ತಿದ್ದೇವೆ. ಈ ಜಾಗೃತಿ ಅಭಿಯಾನವು ನಾಳೆಯವರೆಗೂ ನಡೆಯಲಿದ್ದು, ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದ ನಂತರ ಅರ್ಧ ಹೆಲ್ಮೆಟ್ ಧರಿಸುವ ಸವಾರರಿಗೆ ದಂಡ ವಿಧಿಸಲು ಪ್ರಾರಂಭಿಸುತ್ತೇವೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮದುವೆ ಸಂಭ್ರಮ, ಹತ್ತಕ್ಕೂ ಹೆಚ್ಚು ಮನೆಗಳ ಸರಣಿಗಳ್ಳತನ.
ಈ ಬಗ್ಗೆ ಪೊಲೀಸರೊಂದಿಗೆ ಕೆಲ ವಾಹನ ಸವಾರರು ಚರ್ಚೆ, ವಾಗ್ವಾದಕ್ಕೆ ಇಳಿದಿದ್ದುದು ಕಂಡು ಬಂತು. ಈ ಬಗ್ಗೆ ವಾಹನಸವಾರರೊಬ್ಬರು “ಇವರು ಜಾಗೃತಿ ಮೂಡಿಸುವ ಸಲುವಾಗಿ ಧರಿಸಿರುವ ಅರ್ಧ ಹೆಲ್ಮೆಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಮುಂದಿನ ವೃತ್ತಗಳಲ್ಲಿ ಬೇರೆ ಸಂಚಾರ ಪೊಲೀಸರು ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದರೆ ಏನು ಹೇಳಲಿ. ಜಾಗೃತಿ ಮೂಡಿಸುವುದೆಂದರೆ ಇರುವ ಹೆಲ್ಮೆಟ್ ಅನ್ನು ಕಸಿದುಕೊಳ್ಳುವುದಲ್ಲ. ಸಮಯ ಕೊಟ್ಟು ನಂತರ ದಂಡ ಪ್ರಯೋಗಿಸಬೇಕು. ಆದರೆ ಇಲ್ಲಿ ಪೊಲೀಸರು ಸರಿಯಾದ ಸೂಚನೆ ಮತ್ತು ನಿಯಮಗಳನ್ನು ಪಾಲಿಸುತ್ತಿಲ್ಲ” ಎಂದು ಅಳಲನ್ನು ತೋಡಿಕೊಂಡರು.