ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರ ಮೇಲೆ ಶಿವಸೇನೆ, ಎಂಇಎಸ್ ಮತ್ತು ಮರಾಠಿಗರು ನಿರಂತರವಾಗಿ ದೌರ್ಜನ್ಯ ಮಾಡುತ್ತಲೇ ಬಂದಿದ್ದಾರೆ. ರಾಜ್ಯ ಸರ್ಕಾರ ಶೀಘ್ರವೇ ಕನ್ನಡಿಗರ ರಕ್ಷಣೆಗೆ ಮುಂದಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಪ್ರತಿಮೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, “ಗಡಿ ಜಿಲ್ಲೆಯಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸುವ ಬದಲು ಸರ್ಕಾರ ಕನ್ನಡಿಗರ ಮೇಲೆಯೇ ಪ್ರಕರಣ ದಾಖಲು ಮಾಡುತ್ತಿದ್ದು, ನಾವು ಮರಾಠಿಗರ ಪಕ್ಷಪಾತಿಗಳು ಎಂಬ ಸಂದೇಶವನ್ನು ಕನ್ನಡಿಗರಿಗೆ ನೀಡುತ್ತ ಕನ್ನಡಿಗರ ತಾಳ್ಮೆಯನ್ನು ಕೆಣಕುತ್ತಿದೆ. ಇದು ಕನ್ನಡಿಗರಿಗೆ ಮಾಡುವ ಅಪಮಾನವಾಗಿದ್ದು, ಕನ್ನಡ ನಾಡಿನ ಸಂಪನ್ಮೂಲದಿಂದ ತಿಂದು ತೇಗುತ್ತಿರುವ ಇಂತಹ ನಾಡದ್ರೋಹಿಗಳ ಪರ ನಿಂತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರವು ಕನ್ನಡಿಗರ ಮೇಲಿನ ಪ್ರಕರಣವನ್ನು ಹಿಂಪಡೆದು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಮಾಡುತ್ತಿರುವ ನಾಡ ದ್ರೋಹಿಗಳ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ನಾವು ಬಾಯಿಗೆ ಕಟ್ಟಿರುವ ಕಪ್ಪು ಪಟ್ಟಿಯು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದು, ಕನ್ನಡಿಗರ ಧ್ವನಿಯನ್ನು ಕರ್ನಾಟಕ ಸರ್ಕಾರವೇ ಆಡಗಿಸುತ್ತಿದೆ ಎಂಬ ಸಂದೇಶವನ್ನು ನೀಡುತ್ತದೆ” ಎಂದರು.
“ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಗಡಿಭಾಗದ ಕನ್ನಡಿಗರ ಮೇಲೆ ಮರಾಠಿಗರು ನಿರಂತರವಾಗಿ ದೌರ್ಜನ್ಯ ಮಾಡುತ್ತಿದ್ದಾರೆ. ನೌಕರರ ಮೇಲೆ ಸುಳ್ಳು ದೂರು ನೀಡುವ ಮೂಲಕ ಪೋಕ್ಸೊ ಪ್ರಕರಣವನ್ನು ದಾಖಲು ಮಾಡುವಂತೆ ಮರಾಠಿಗ ಸಂಘಗಳು ನೋಡಿಕೊಳ್ಳುತ್ತಿದ್ದು, ಪ್ರಕರಣ ಕುರಿತು ಸಮಗ್ರ ತನಿಖೆಯನ್ನು ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು, ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದರೆ ರಾಜ್ಯದ ಕನ್ನಡಿಗರು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಬುದ್ಧಿ ಕಲಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾನಪದ ಜಾಗೃತಿ ಪರಿಷತ್ ಕಾರ್ಯಕ್ರಮದಲ್ಲಿ ಕಾಯಕಯೋಗಿ ಪ್ರಶಸ್ತಿ ಪ್ರದಾನ.
ಬಸ್ ಚಾಲನೆ ಮಾಡುವ ಚಾಲಕ ಮತ್ತು ಟಿಕೆಟ್ ನೀಡುವ ನಿರ್ವಾಹಕ ಸಾರ್ವಜನಿಕವಾಗಿ ಓರ್ವ ಹೆಣ್ಣುಮಗುವಿನ ಮೇಲೆ ಹೇಗೆ ದೌರ್ಜನ್ಯ ಮಾಡಲು ಸಾಧ್ಯ. ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಮರಾಠಿ ಸಂಘಗಳು ಕನ್ನಡಿಗರ ಧ್ವನಿಯನ್ನು ಮತ್ತು ಕನ್ನಡ ನೌಕರರನ್ನು ಬಲಿಪಶು ಮಾಡುವ ಹುನ್ನಾರದಿಂದ ಇಂತಹ ಪ್ರಕರಣವನ್ನು ದಾಖಲು ಮಾಡುತ್ತಿದ್ದಾರೆ. ಕನ್ನಡ ನೌಕರರಿಗೆ ತಲೆ ಎತ್ತಿ ಗೌರವಯುತ ಜೀವನ ನಡೆಸಲು ಬಿಡುತ್ತಿಲ್ಲ. ಇಂತಹ ಪ್ರಕರಣಗಳ ಸತ್ಯಾಸತ್ಯತೆಯನ್ನು ತಿಳಿದು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
