ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡು ಒಳಗೊಂಡಂತೆ 4 ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಸೋಮವಾರ ಸಂಜೆ ಸಾಧಾರಣ ಮಳೆಯಾಗಿದೆ. ಆದಾಗ್ಯೂ, ರಾಜ್ಯದಲ್ಲಿ ಒಣ ಹವೆ ಹೆಚ್ಚಾಗಿದ್ದು, ಬಿಸಿಲು ಹೆಚ್ಚುತ್ತಿದೆ. ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.
ಇನ್ನು, ತಮಿಳುನಾಡು, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಮಳೆಯಾಗಿದೆ. ತಮಿಳುನಾಡಿನಲ್ಲಿ ಅಲ್ಲಿಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಫೆಬ್ರವರಿ 28 ಮತ್ತು ಮಾರ್ಚ್ 1ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆ ಎರಡೂ ದಿನ 10 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ತಂಜಾವೂರು, ತಿರುವರೂರು, ನಾಗಪಟ್ಟಣಂ, ಮೈಲಾಡುತುರೈ, ಪುದುಕೊಟ್ಟೈ, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ, ತೆಂಕಶಿ ಮತ್ತು ಕನ್ನಿಯಾಕುಮಾರಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಹಿಮಾಚಲ ಪ್ರದೇಶದಲ್ಲಿಯೂ ಭಾರಿ ಮಳೆ ಮತ್ತು ಹಿಮಪಾತವಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಫೆಬ್ರವರಿ 26ರಿಂದ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುವ ನಿರೀಕ್ಷೆಯಿದೆ. ಗುಡ್ಡಗಾಡು ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ.