ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೋಲ ಪಟ್ಟಣದಲ್ಲಿ ಜೂನ್ 15 ರಂದು ನಡೆಸಲು ಉದ್ದೇಶಿಸಿರುವ ‘ಮಹಾಪಂಚಾಯತ್’ಗೆ ತಡೆ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್, ಬುಧವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ರಜಾಕಾಲದ ಪೀಠವು, ಅರ್ಜಿಯ ವಿಚಾರಣೆಗೆ ನಿರಾಕರಿಸಿದೆ. ಅದಾಗಿಯೂ, ಈ ವಿಚಾರದಲ್ಲಿ ಅರ್ಜಿದಾರರು ಉತ್ತರಾಖಂಡ ಹೈಕೋರ್ಟ್ ಅಥವಾ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪೀಠ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ‘ಮಹಾಪಂಚಾಯತ್’ಗಿಂತ ಮೊದಲು ಪುರೋಲ ಪಟ್ಟಣವನ್ನು ತೊರೆಯುವಂತೆ ನಿರ್ದಿಷ್ಟ ಸಮುದಾಯಕ್ಕೆ ಕೆಲವು ಗುಂಪುಗಳು ಬೆದರಿಕೆ ಹಾಕಿವೆ. ಈ ಹಿನ್ನಲೆಯಲ್ಲಿ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕುʼ ಎಂದು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ʼಕಾನೂನು ಸುವ್ಯವಸ್ಥೆ ಕಾಪಾಡುವುದು ಆಡಳಿತಯಂತ್ರದ ಜವಾಬ್ದಾರಿಯಾಗಿದೆ. ನೀವು ಹೈಕೋರ್ಟ್ಗೆ ಹೋಗುವ ಬದಲು ಇಲ್ಲಿಗೆ ಏಕೆ ಬಂದಿದ್ದೀರಿ? ಹೈಕೋರ್ಟ್ ಮೇಲೆ ಯಾಕೆ ಅಪನಂಬಿಕೆ ಇಟ್ಟಿದ್ದೀರಿ? ಹೈಕೋರ್ಟ್ ಸೂಕ್ತವಾದ ಆದೇಶಗಳನ್ನು ನೀಡುತ್ತದೆ. ಹೈಕೋರ್ಟ್ ಮತ್ತು ಜಿಲ್ಲಾಡಳಿತದ ಮೇಲೆ ವಿಶ್ವಾಸವಿಡಿʼ ಎಂದು ಸಲಹೆ ನೀಡಿದೆ.
ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಲವು ತೋರದ ಕಾರಣ ಅರ್ಜಿದಾರರು ಅರ್ಜಿಯನ್ನು ಹಿಂಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉತ್ತರಾಖಂಡ | ಪುರೋಲ ಪಟ್ಟಣ ತೊರೆಯುತ್ತಿರುವ ಮುಸ್ಲಿಮ್ ವರ್ತಕರು
‘ಮಹಾಪಂಚಾಯತ್’ಗೆ ಅನುಮತಿ ನಿರಾಕರಣೆ
ಪುರೋಲ ಪಟ್ಟಣದಲ್ಲಿ ಜೂನ್ 15 ರಂದು ನಡೆಸಲು ಉದ್ದೇಶಿಸಿರುವ ‘ಮಹಾಪಂಚಾಯತ್’ಗೆ ಉತ್ತರಕಾಶಿ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದೆ.
‘ಲವ್-ಜಿಹಾದ್’ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೂನ್ 15 ರಂದು ಪುರೋಲಾದಲ್ಲಿ ನಡೆಸಲು ಉದ್ದೇಶಿಸಲಾದ ‘ಮಹಾಪಂಚಾಯತ್’ಗೆ ಅನುಮತಿ ನಿರಾಕರಿಸಿತು. ಕೋಮು ಉದ್ವಿಗ್ನತೆಯು ಇನ್ನೂ ಶಮನವಾಗದ ಹಿನ್ನಲೆಯಲ್ಲಿ ಪುರೋಲ ಪಟ್ಟಣದಲ್ಲಿ ಸಿಆರ್ಪಿಸಿ ಸೆಕ್ಷನ್ 144 ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿರುವ ಪುರೋಲ ಪಟ್ಟಣವನ್ನು ತೊರೆಯುವಂತೆ ಮುಸ್ಲಿಮ್ ವರ್ತಕರಿಗೆ ಬಲಪಂಥೀಯ ಸಂಘಟನೆಗಳು ಬೆದರಿಕೆ ಒಡ್ಡಿವೆ.
ಪುರೋಲ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿರುವ ಮುಸ್ಲಿಮ್ ವರ್ತಕರ ಅಂಗಡಿಗಳು ಮತ್ತು ಮನೆಗಳ ಮೇಲೆ ಬಲಪಂಥೀಯ ಸಂಘಟನೆಗಳ ಸದಸ್ಯರು ದಾಳಿ ಮಾಡಿ ಧ್ವಂಸಗೊಳಿಸಿದ್ದರು. ಬಳಿಕ ‘ಜೂನ್ 15ರ ಮಹಪಂಚಾಯತ್ʼಗೆ ಮುನ್ನ ಅಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಲು ಸಿದ್ಧರಾಗಿʼ ಎಂದು ಬರೆಯಲಾಗಿರುವ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು.