ಮುಡಾ ಹಗರಣ | ಸಂಸದ ಕುಮಾರ ನಾಯಕ್, ಅಧಿಕಾರಿಗಳ ತಪ್ಪಿಗೆ ಸರ್ಕಾರದ ಮುಂದಿನ ಕ್ರಮವೇನು?

Date:

Advertisements

ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ, ಸಂಸದ ಕುಮಾರ ನಾಯಕ ಅವರು ಲೋಪವೆಸಗಿರುವುದಾಗಿ ತಿಳಿಸಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಇಂತಹ ಪ್ರಕರಣಗಳಿಗೆ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಂಡು ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತದೆ ಎಂಬುದು ನಾಗರಿಕರ ಕುತೂಹಲವಾಗಿದೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಹಾಗೂ ವಿವಾದದ ಭೂಮಿಯ ಮಾಲೀಕ ಜೆ ದೇವರಾಜು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಮೈಸೂರು ಲೋಕಾಯುಕ್ತ ಪೊಲೀಸರು ಆರೋಪ ಮುಕ್ತಗೊಳಿಸಿದ್ದಾರೆ. ಆದರೆ ನಿವೇಶನ ಹಂಚಿಕೆ ಹಗರಣ ಈಗ ಹೊಸ ತಿರುವು ಪಡೆದಿದೆ. ನಿವೃತ್ತ ಐಎಎಸ್ ಅಧಿಕಾರಿ, ರಾಯಚೂರಿನ ಹಾಲಿ ಕಾಂಗ್ರೆಸ್ ಸಂಸದ ಕುಮಾರ ನಾಯಕ್ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ ಎಂದು ಲೋಕಾಯುಕ್ತ ವರದಿ ತಿಳಿಸಿದೆ.  

ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ, ಸಂಸದ ಕುಮಾರ ನಾಯಕ ಅವರು ಲೋಪವೆಸಗಿರುವುದಾಗಿ ತಿಳಿಸಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನ ಸ್ವಾಮಿ, ಜಮೀನಿನ ಮಾಲೀಕ ದೇವರಾಜು ಮತ್ತು ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರ ವಿರುದ್ಧದ ಯಾವ ಆರೋಪಗಳೂ ಸಾಬೀತಾಗಿಲ್ಲ ಎಂದಿರುವ ಲೋಕಾಯುಕ್ತವು ಅಧಿಕಾರಿಗಳಿಂದಲೇ ಎಲ್ಲ ತಪ್ಪುಗಳಾಗಿವೆ ಎಂದು ಆರೋಪಿಸಿದೆ.

Advertisements

ಸಂಸದ ಕುಮಾರ್ ನಾಯಕ್, ಮೈಸೂರು ತಾಲೂಕು ಹಿಂದಿನ ನಿವೃತ್ತ ತಹಸೀಲ್ದಾರ್ ಮಾಳಿಗೆ ಶಂಕರ್, ನಿವೃತ್ತ ರೆವಿನ್ಯೂ ಇನ್‌ಸ್ಪೆಕ್ಟರ್ ಸಿದ್ದಪ್ಪಾಜಿ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಭೂಮಾಪಕ ಶಂಕರಪ್ಪ ವಿರುದ್ಧ ಇಲಾಖಾ ವಿಚಾರಣೆ/ಶಿಸ್ತು ಕ್ರಮಕ್ಕೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ ಜೆ ಉದೇಶ್ ಶಿಫಾರಸ್ಸು ಮಾಡಿದ್ದಾರೆ.

ಕೆಸರೆ ಗ್ರಾಮ ವಿವಾದಿತ ಸರ್ವೆ ಸಂಖ್ಯೆ 464ರ 3 ಎಕರೆ 16 ಗುಂಟೆ ಜಮೀನಿನ ಭೂಬಳಕೆ ಪರಿವರ್ತನೆಗೆ 2004–05ರಲ್ಲಿ ಮಲ್ಲಿಕಾರ್ಜುನಸ್ವಾಮಿ ಅವರು ಅರ್ಜಿ ಸಲ್ಲಿಸಿದಾಗ, ಕುಮಾರ ನಾಯಕ ಅವರು ಮೈಸೂರು ಜಿಲ್ಲಾಧಿಕಾರಿ ಆಗಿದ್ದರು. ಆ ಅವಧಿಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆಯೇ ವರದಿ ಸಲ್ಲಿಸಿದ್ದಾರೆ. ನಿಯಮದ ಪ್ರಕಾರ ಜಮೀನಿನ ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಬದಲಿಗೆ ಅಧಿಕಾರಿಗಳು ಕೆಸರೆ ಗ್ರಾಮದ ನಕ್ಷೆ, ಭೂಸ್ವಾಧೀನ ಸಂಬಂಧಿ ನಕ್ಷೆ, ಬಡಾವಣೆ ಅಭಿವೃದ್ಧಿ ನಕ್ಷೆಗಳನ್ನು ಬಳಸಿಕೊಂಡು ಸ್ಥಳ ಪರಿಶೀಲನೆ ವರದಿ ಸಿದ್ಧಪಡಿಸಿದ್ದಾರೆ. ಈ ನಕ್ಷೆಗಳಲ್ಲಿ ಸರ್ವೆ ಸಂಖ್ಯೆ 464ರ ಜಮೀನು ಖಾಲಿ ಎಂದೇ ನಮೂದಾಗಿದೆ. ಹೀಗಾಗಿ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಲೋಕಾಯುಕ್ತ ವರದಿ ಉಲ್ಲೇಖಿಸಿದೆ.

‘ಅಧೀನ ಅಧಿಕಾರಿಗಳು ನೀಡಿದ ಸ್ಥಳ ಪರಿಶೀಲನಾ ವರದಿಯನ್ನು ಕುಮಾರ ನಾಯಕ ಅವರು ಅನುಮೋದಿಸಿದ್ದಾರೆ. ವರದಿ ಖಾತರಿಪಡಿಸಿಕೊಳ್ಳದೇ ಭೂ ಪರಿವರ್ತನೆಗೆ ಆದೇಶಿಸಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪದಿಂದ ಉಂಟಾಗಿದೆ. ಆದರೆ, ಅವರು ಭೂಮಾಲೀಕರ ಜತೆ ಸೇರಿಕೊಂಡು ಅಕ್ರಮ ಎಸಗಿದ್ದಾರೆ, ಉದ್ದೇಶಪೂರ್ವಕವಾಗಿ ಸುಳ್ಳು ವರದಿ ನೀಡಿದ್ದಾರೆ ಎಂಬುದು ಸಾಬೀತಾಗುವುದಿಲ್ಲ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಮತ್ತು ಇಲಾಖಾ ಶಿಸ್ತುಕ್ರಮ ತೆಗೆದುಕೊಳ್ಳಬೇಕು’ ಎಂದು ಶಿಫಾರಸು ಮಾಡಿದೆ.

ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ | ನ್ಯಾಯಾಲಯಕ್ಕೆ ‘ಬಿ-ರಿಪೋರ್ಟ್‌’ ಸಲ್ಲಿಕೆ, ಸಿದ್ದರಾಮಯ್ಯ ಕುಟುಂಬ ಆರೋಪ ಮುಕ್ತ

ಜಿ ಕುಮಾರ ನಾಯಕ ಅವರು ಐಎಎಸ್‌ ಅಧಿಕಾರಿಯಾಗಿ ನಿವೃತ್ತಿಯಾಗಿದ್ದು, ಅವರಿಗೆ ಅಖಿಲ ಭಾರತ (ಶಿಸ್ತು ನಡಾವಳಿಗಳು) ಮತ್ತು ಸೇವಾ (ಶಿಸ್ತುಪಾಲನಾ ನಡಾವಳಿಗಳು) ನಿಯಮಗಳು ಅನ್ವಯಿಸುತ್ತವೆ. ಕರ್ತವ್ಯಲೋಪ ನಡೆದು 19 ವರ್ಷಗಳಾಗಿವೆ. ಹೀಗಾಗಿ ಶಿಸ್ತುಕ್ರಮದ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಬಹುದಾಗಿರುತ್ತದೆ. ಉಳಿದ ಅಧಿಕಾರಿಗಳ ವಿರುದ್ಧ ಸಂಬಂಧಿತ ಇಲಾಖೆಗಳ ನಿಯಮಾವಳಿಗಳ ಅನ್ವಯ ತನಿಖೆ ಮತ್ತು ಶಿಸ್ತು ಕ್ರಮ ತೆಗೆದುಕೊಳ್ಳಬಹುದು ಎಂದು ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿದೆ.

ಹೈಕೋರ್ಟ್‌ ಸೂಚನೆಯ ಮೇರೆಗೆ ಮುಡಾ ಸೈಟ್ ಅಕ್ರಮ ಹಂಚಿಕೆ ಪ್ರಕರಣ ಸಂಬಂಧ ಮೈಸೂರು ಲೋಕಾಯುಕ್ತ ಎಸ್‌ಪಿ ಟಿ ಜೆ ಉದೇಶ್ ನೇತೃತ್ವದ ತಂಡ ತನಿಖೆ ನಡೆಸಿತ್ತು. ಫೆ.20ರಂದು 82ನೇ ಸಿಸಿಎಚ್ ಜನಪ್ರತಿನಿಧಿಗಳ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಪೀಠಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. 27 ಸಂಪುಟಗಳ 11 ಸಾವಿರ ಪುಟಗಳ ಈ ಸುದೀರ್ಘ ವರದಿಯಲ್ಲಿ 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಎಫ್ಐಆರ್‌ನಲ್ಲಿ ಉಲ್ಲೇ ಖಿಸಿದ್ದ ಆರೋಪಿಗಳಾದ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ಜೆ ದೇವರಾಜು ಇತರರ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವುದಾಗಿ ಲೋಕಾಯುಕ್ತ ಅಧಿಕಾರಿಗಳು ವರದಿ ಸಲ್ಲಿಸಿದ್ದರು.

700 ಕೋಟಿ ರೂ.ಗೂ ಹೆಚ್ಚು ನಷ್ಟ

ಭೂಸ್ವಾಧೀನಪಡಿಸಿಕೊಳ್ಳದೇ ರೈತರ ಜಮೀನನ್ನು ಮುಡಾ ಬಳಕೆ ಮಾಡಿಕೊಂಡ ಪ್ರಕರಣಗಳಲ್ಲಿ, ಸರ್ಕಾರಕ್ಕೆ 700 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಮುಡಾವು 2016–2022ರ ಅವಧಿಯಲ್ಲಿ 50:50ರ ಅನುಪಾತದಲ್ಲಿ ಅಕ್ರಮವಾಗಿ 1,095 ನಿವೇಶನಗಳನ್ನು ಪರಿಹಾರವಾಗಿ ನೀಡಿದೆ. ಆದರೆ ಇವು ಭೂಮಾಲೀಕರು ಅಥವಾ ವಾರಸುದಾರರಿಗೆ ಸಿಗದೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಪ್ರಭಾವಿಗಳ ಪಾಲಾಗಿವೆ ಎಂದು ಹೇಳಿದೆ.

ಮುಡಾ ಆಯುಕ್ತರಾಗಿದ್ದ ದಿನೇಶ್‌ ಕುಮಾರ್ ಅವರು ಇದರಲ್ಲಿ ಭಾಗಿಯಾಗಿದ್ದಾರೆ. 50:50ರ ಅನುಪಾತದ ಪರಿಹಾರ ನಿಯಮವನ್ನು ಸರ್ಕಾರ ರದ್ದುಪಡಿಸಿದ ನಂತರವೂ ದಿನೇಶ್‌ ಕುಮಾರ್‌ ಮತ್ತು ಮುಡಾದ ಹಿಂದಿನ ಅಧ್ಯಕ್ಷ ಕೆ ಮರೀಗೌಡ ಅವರ ಮೌಖಿಕ ಆದೇಶದಂತೆ 252 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಲೋಕಾಯುಕ್ತವು ಹೇಳಿದೆ.

ಸರ್ಕಾರದ ಮುಂದಿನ ಕ್ರಮವೇನು?

ಸಂಸದ ಕುಮಾರ್ ನಾಯಕ್ ಅವರು ಐಎಎಸ್ ಅಧಿಕಾರಿಯಾಗಿದ್ದು, 2023ರಲ್ಲಿ ಸೇವೆಯಿಂದ ನಿವೃತ್ತಿ ಆಗಿದ್ದರಿಂದ ಅಖಿಲ ಭಾರತ (ಶಿಸ್ತು ನಡಾವಳಿಗಳು) ಸೇವಾ (ಶಿಸ್ತು ಪಾಲನಾ ನಡಾವಳಿಗಳು) ನಿಮಯ 1965ರ ಅನ್ವಯ ಕ್ರಮಕ್ಕೆ ಅವಕಾಶವಿದೆ. ಅಲ್ಲದೆ ಅವರು 2002ರಿಂದ 2005ರ ವರೆಗೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದರು. ಅದೇ ಅವಧಿಯಲ್ಲಿ ಭೂಪರಿವರ್ತನೆ ಮಾಡಲಾಗಿತ್ತು. ಆಗ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಇತ್ತೀಚೆಗೆ ಕುಮಾರ್ ನಾಯ್ಕ್ ಅವರನ್ನು ವಿಚಾರಣೆ ನಡೆಸಿದ್ದರು‌. ಅಲ್ಲದೆ, ಕೃತ್ಯ ನಡೆದು 19 ವರ್ಷ ಕಳೆದಿರುವುದರಿಂದ ಇವರ ವಿರುದ್ಧ ಶಿಸ್ತುಕ್ರಮದ ಬಗ್ಗೆ ಸರ್ಕಾರ ತೀರ್ಮಾನಿಸಬೇಕಾಗಿದೆ. ಇವರಲ್ಲದೆ, ಸರ್ವೆಯರ್ ಶಂಕರಪ್ಪ, ಪ್ರಸ್ತುತ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಿವಿಲ್ ಸೇವಾ (ನಿಯಂತ್ರಣ, ವರ್ಗೀಕರಣ ಮತ್ತು ಅಪೀಲು ನಿಯಮಗಳು) ಅನ್ವಯ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಲೋಕಾಯುಕ್ತ ತನಿಖಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಉಳಿದಂತೆ ಹೆಸರಿಸಲಾಗಿರುವ ಅಧಿಕಾರಿಗಳ ಪೈಕಿ ಮಾಳಿಗೆ ಶಂಕರ್ ಮತ್ತು ಸಿದ್ದಪ್ಪಾಜಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಿ 4 ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಆದ್ದರಿಂದ ಕರ್ನಾಟಕ ಸರಕಾರಿ ಸೇವಾ ನಿಯಮಗಳು, ನಿಯಮ 214 (ಬಿ)ರ ಅನ್ವಯ ಇಲಾಖಾ ವ್ಯವಹರಣೆಗಳನ್ನು ಸರ್ಕಾರಿ ನಿವೃತ್ತಿಗೆ ಮುಂಚೆಯಾಗಲೀ ಅಥವಾ ಅವರು ಮರು ನೇಮಕಗೊಂಡ ಅವಧಿಯಲ್ಲಿ ಆಗಲಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಅವಕಾಶವಿಲ್ಲ. ಶಿಸ್ತುಕ್ರಮ ಅಥವಾ ಕೈಬಿಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ವಿಚಾರಣೆ ನಡೆಸಿದ ಲೋಕಾಯುಕ್ತ ತನಿಖಾಧಿಕಾರಿಗಳು ಪ್ರಕರಣದ ನಾಲ್ವರು ಆರೋಪಿಗಳಾದ ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜು ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಂತಹ ಸಾಕ್ಷ್ಯಗಳು ತನಿಖೆ ವೇಳೆ ಪತ್ತೆಯಾಗಿಲ್ಲ. ಇದು ಸಿವಿಲ್ ಸ್ವರೂಪದ ಪ್ರಕರಣವಾಗಿದೆ. ಕಾನೂನಿನ ತಪ್ಪು ತಿಳಿವಳಿಕೆಯಿಂದ ಆಗಿರುವಂತಹದ್ದಾಗಿದೆ. ತನಿಖೆ ನಡೆಸಲು ಮತ್ತು ಕ್ರಮ ತೆಗೆದುಕೊಳ್ಳಲು ತಕ್ಕುದಾದ ಪ್ರಕರಣವಾಗಿರುವುದಿಲ್ಲ. ಇದರಡಿಯಲ್ಲಿ ತನಿಖೆ ನಡೆಸದೆ ವಜಾ ಮಾಡಿದ ಮೊಕದ್ದಮೆಗಳು ಬರುತ್ತವೆ ಎಂಬ ಐದು ಕಾರಣಗಳನ್ನು ನೀಡಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡಿದ್ದರು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X